ಸ್ಥಗಿತಗೊಂಡಿದ್ದ 32 ಏರ್ಪೋರ್ಟ್ ರೀ ಓಪನ್, ಆದ್ರೆ ಪ್ರಯಾಣಿಕರು ಈ ನಿಯಮ ಪಾಲಿಸಲೇಬೇಕು
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಡಿಮೆಯಾದ ನಂತರ ಉತ್ತರ ಮತ್ತು ವಾಯುವ್ಯ ಭಾರತದಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ 32 ವಿಮಾನ ನಿಲ್ದಾಣಗಳನ್ನು ಪುನಃ ತೆರೆಯಲಾಗಿದೆ. ಪ್ರಯಾಣಿಕರು ತಮ್ಮ ವಿಮಾನಗಳ ಸ್ಥಿತಿಯನ್ನು ಏರ್‌ಲೈನ್‌ಗಳೊಂದಿಗೆ ಪರಿಶೀಲಿಸಬೇಕು.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ, ಸರ್ಕಾರವು ಮೇ 7 ರಂದು ಉತ್ತರ ಮತ್ತು ವಾಯುವ್ಯ ಭಾರತದ ಹಲವಾರು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿತ್ತು. ಆದರೆ, ಈ ಮಧ್ಯೆ ಭಾರತ–ಪಾಕಿಸ್ತಾನ ಕದನ ವಿರಾಮ ಘೋಷಣೆ ಆದ ನಂತರ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಬಿಡುಗಡೆ ಮಾಡಿದ ಹೊಸ ಮಾಹಿತಿ ಪ್ರಕಾರ, ಮೇ 15, 2025ರ ಮುಂಜಾನೆ 5:29 ಗಂಟೆವರೆಗೆ ಮಚ್ಚಲುದ್ದೇಶಿಸಿದ್ಧ 32 ವಿಮಾನ ನಿಲ್ದಾಣಗಳನ್ನು ಈಗಾಗಲೇ ಮತ್ತೆ ತೆರೆಯಲಾಗಿದೆ. ಪ್ರಮುಖವಾಗಿ ಚಂಡೀಗಢ, ಶ್ರೀನಗರ, ಅಮೃತಸರ, ಲುಧಿಯಾನ, ಧರ್ಮಶಾಲಾ, ಶಿಮ್ಲಾ, ಪಟಿಯಾಲ, ಬಟಿಂಡಾ, ಲೇಹ್, ಜೈಸಲ್ಮೇರ್, ಜೋಧ್‌ಪುರ್, ಬಿಕಾನೇರ್, ಪಠಾಣ್‌ಕೋಟ್, ಜಮ್ಮು, ಭುಜ್, ಜಾಮ್‌ನಗರ ಮುಂತಾದವು ಉತ್ತರದ ಎಲ್ಲಾ ನಿಲ್ದಾಣಗಳನ್ನು ಮುಚ್ಚಲಾಗಿತ್ತು.
ಪ್ರಯಾಣಿಕರಿಗೆ ಸೂಚನೆ:
ವಿಮಾನ ನಿಲ್ದಾಣಗಳು ಪುನಃ ತೆರೆಯಲ್ಪಟ್ಟಿದ್ದರೂ, ವಿಮಾನಯಾನ ಸಂಸ್ಥೆಗಳು (airlines) ತಮ್ಮ ವಿಮಾನಗಳ ಕಾರ್ಯಾಚರಣೆಯನ್ನು ಇನ್ನೂ ಆರಂಭಿಸಿಲ್ಲ. ಆದ್ದರಿಂದ, ಪ್ರಯಾಣಿಕರು ತಮ್ಮ ವಿಮಾನಗಳ ಸ್ಥಿತಿಯನ್ನು ತನಿಖೆ ಮಾಡಿ ತಮ್ಮ ಏರ್‌ಲೈನ್‌ಗಳ ವೆಬ್‌ಸೈಟ್ ಅಥವಾ ಗ್ರಾಹಕ ಸೇವೆಯೊಂದಿಗೆ ಸಂಪರ್ಕಿಸಿ ಪರಿಶೀಲಿಸಬೇಕು ಎಂದು ಸೂಚನೆ ಹೊರಡಿಸಿದೆ. ವಿಮಾನ ನಿಲ್ದಾಣ ಮುಚ್ಚಿದ ಕಾರಣ ಸುಮಾರು 500 ಕ್ಕೂ ಹೆಚ್ಚು ವಿಮಾನಗಳು ರದ್ದಾದವು, ಮತ್ತು ಪ್ರಯಾಣಿಕರಿಗೆ ಮರುಪಾವತಿ ಅಥವಾ ಮತ್ತೊಂದು ವಿಮಾನದಲ್ಲಿ ಬುಕ್ಕಿಂಗ್ ಮಾಡಿಕೊಳ್ಳುವ ಅವಕಾಶವನ್ನು ಏರ್‌ಲೈನ್‌ಗಳು ಒದಗಿಸಿದೆ.
ಪುನಃ ತೆರೆಯಲಾದ 32 ವಿಮಾನ ನಿಲ್ದಾಣಗಳ ಪಟ್ಟಿ ಇಂತಿದೆ
ಅಧಂಪುರ್, ಅಂಬಾಲ, ಅಮೃತಸರ, ಅವಂತಿಪುರ, ಬಟಿಂಡಾ, ಭುಜ್, ಬಿಕಾನೆರ್, ಚಂಡೀಗಢ, ಹಲ್ವಾರಾ, ಹಿಂದನ್, ಜೈಸಲ್ಮೇರ್, ಜಮ್ಮು, ಜಾಮ್‌ನಗರ್, ಜೋಧಪುರ, ಕಾಂಡ್ಲಾ, ಕಾಂಗ್ರಾ (ಗಗ್ಗಲ್), ಕೆಶೋಡ್, ಕಿಶನ್‌ಗಢ, ಕುಲ್ಲು ಮನಾಲಿ (ಭುಂತರ್), ಲೆಹ್, ಲುಧಿಯಾನ, ಮುಂದ್ರಾ, ನಲಿಯಾ, ಪಠಾಣ್‌ಕೋಟ್, ಪಟಿಯಾಲ, ಪೋರಬಂದರ್, ರಾಜ್‌ಕೋಟ್ (ಹಿರಾಸರ್), ಸರ್ಸಾವಾ, ಶಿಮ್ಲಾ, ಶ್ರೀನಗರ, ಥೋಯಿಸ್, ಉತ್ತರಲೈ.
ಭಾರತ–ಪಾಕಿಸ್ತಾನ ನಡುವಿನ ಯುದ್ಧದ ಉದ್ವಿಗ್ನತೆ ಶಮನವಾದ ನಂತರ, ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮತ್ತೆ ಕಾರ್ಯಾರಂಭಕ್ಕೆ ಸಿದ್ಧವಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ವಿಮಾನ ನಿಲ್ದಾಣ ಮುಚ್ಚುವಿಕೆ ಕುರಿತ ಸೂಚನೆ (NOTAM-Notice to Air Missions) ರದ್ದಾಗಿದೆ. ಈಗ ಶ್ರೀನಗರ ವಿಮಾನ ನಿಲ್ದಾಣ ಎಲ್ಲ ವಿಮಾನಗಳಿಗೆ ಸಿದ್ಧವಾಗಿದೆ ಎಂದರು. ಆದರೆ, ವಿಮಾನಯಾನ ಸಂಸ್ಥೆಗಳು (ಏರ್‌ಲೈನ್ಸ್) ಇನ್ನೂ ತಮ್ಮ ವೇಳಾಪಟ್ಟಿಯನ್ನು ಘೋಷಿಸಿಲ್ಲ.
ಇನ್ನು ಚಂಡೀಗಢದ ಶಹೀದ್ ಭಗತ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಮೇ 12, 2025ರ ಬೆಳಿಗ್ಗೆ 10:30 ರಿಂದ ಮತ್ತೆ ವಿಮಾನ ಸಂಚಾರ ಆರಂಭಿಸಿದೆ. ಈ ಪುನಾರಂಭವನ್ನು ಚಂಡೀಗಢ ವಿಮಾನ ನಿಲ್ದಾಣ ಕಂಪನಿ (CHIAL) ಮತ್ತು ಮೊಹಾಲಿಯ ಉಪ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನು ವಿಮಾನ ನಿಲ್ದಾಣಗಳ ಪುನರಾರಂಭ ಕುರಿತು ಅಧಿಸೂಚನೆ ಬಂದಿದ್ದು, ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ನ ವಿಮಾನಗಳು ಹಂತ ಹಂತವಾಗಿ ಮತ್ತೆ ಪ್ರಾರಂಭಗೊಳ್ಳಲಿವೆ. ತಮಗೆ ವಿಮಾನ ಇದ್ದರೆ ಅಥವಾ ಬುಕಿಂಗ್ ಮಾಡಿಕೊಂಡಿದ್ದರೆ, ತಕ್ಷಣವೇ ತಮ್ಮ ವಿಮಾನ ಸಂಸ್ಥೆಯ ವೆಬ್‌ಸೈಟ್ ಅಥವಾ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ಸಮಯ, ದಿನಾಂಕ ಪರಿಶೀಲಿಸಿಕೊಳ್ಳಿ ಎಂದು ಏರ್ ಇಂಡಿಯಾ ಟ್ವೀಟ್ ಮಾಡಿದೆ.
ಇಂಡಿಗೋ ವಿಮಾನ ಸಂಸ್ಥೆ ತಮ್ಮ X (ಹಿಂದೆ ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸರ್ಕಾರದ ಇತ್ತೀಚಿನ ಸೂಚನೆಗಳಿಗೆ ಅನುಸಾರವಾಗಿ, ಮುಚ್ಚಲಾಗಿದ್ದ ವಿಮಾನ ನಿಲ್ದಾಣಗಳು ಮತ್ತೆ ತೆರೆಯಲ್ಪಟ್ಟಿವೆ. ಈಗಿನಿಂದ ನಾವು ಹಂತ ಹಂತವಾಗಿ ವಿಮಾನ ಸೇವೆಗಳನ್ನು ಪುನರಾರಂಭಿಸುತ್ತಿದ್ದೇವೆ ಎಂದಿದೆ. ಸ್ಪೈಸ್‌ಜೆಟ್ ವಿಮಾನ ಸಂಸ್ಥೆ ಕೂಡಾ X ನಲ್ಲಿ ಈ ಹಿಂದೆ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ವಿಮಾನ ನಿಲ್ದಾಣಗಳು ಈಗ ಕಾರ್ಯಾಚರಣೆಗೆ ಮುಕ್ತವಾಗಿವೆ ಎಂಬ ಸುದ್ದಿ ನೀಡಲು ನಾವು ಸಂತೋಷಪಡುತ್ತೇವೆ. ಸರ್ಕಾರದ ಹೊಸ ಸೂಚನೆಗಳ ಆಧಾರದ ಮೇಲೆ, ನಮ್ಮ ತಂಡಗಳು ಈಗ ಮಾರ್ನ ವಿಮಾನ ಸಂಚಾರ ಪುನರಾರಂಭಿಸಲು ತಕ್ಷಣ ಕೆಲಸ ಮಾಡುತ್ತಿವೆ. ಈ ಸಮಯದಲ್ಲಿ ನೀವು ತೋರಿಸುತ್ತಿರುವ ಸಹನೆ ಮತ್ತು ಸಹಕಾರಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದೆ.
ಕಟ್ಟುನಿಟ್ಟಿನ ಭದ್ರತಾ ತಪಾಸಣೆಗಳು
ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನ ಕಂಪನಿಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಲಪಡಿಸಲಾಗಿದೆ. ಈ ಸಂಬಂಧ BCAS (ಬ್ಯೂರೊ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ) ಹೊಸ ಸೂಚನೆಗಳನ್ನು ನೀಡಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಹೇಳಿರುವಂತೆ:
ಎಲ್ಲ ಪ್ರಯಾಣಿಕರು ಸೆಕೆಂಡರಿ ಲ್ಯಾಡರ್ ಪಾಯಿಂಟ್ ಚೆಕ್ (SLPC) ಎಂಬ ಹೆಚ್ಚುವರಿ ತಪಾಸಣೆಗೆ ಒಳಪಡಬೇಕು.
ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡಗಳಿಗೆ ಸಾಮಾನ್ಯ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ.
ಏರ್ ಮಾರ್ಷಲ್ (ವಿಮಾನದಲ್ಲಿ ಭದ್ರತಾಧಿಕಾರಿ) ಒಬ್ಬರನ್ನು ಹತ್ತಿರದ ವಿಮಾನಗಳಿಗೆ ನಿಯೋಜಿಸಲಾಗುತ್ತದೆ.
ಬುಧವಾರದಿಂದ ಈ ಹೊಸ ನಿಯಮಗಳು ಜಾರಿಗೆ ಬಂದಿದ್ದು, ಪ್ರಮುಖ ಬದಲಾವಣೆಗಳು ಹೀಗಿವೆ:
ಎಲ್ಲ ವಿಮಾನಗಳಿಗೆ SLPC ತಪಾಸಣೆ ಕಡ್ಡಾಯವಾಗಿದೆ.
ಟರ್ಮಿನಲ್ ಕಟ್ಟಡಗಳಲ್ಲಿ ಸಂದರ್ಶಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ (ಟಿಕೆಟ್ ಹೊಂದಿದ್ದರೂ ಪ್ರವೇಶ ಸಿಗದು).
ವಿಮಾನ ನಿಲ್ದಾಣದ CCTV ಕ್ಯಾಮೆರಾಗಳು ಎಲ್ಲ ಕಾಲದಲ್ಲೂ ಕಾರ್ಯನಿರ್ವಹಿಸಬೇಕು.
ವಿಮಾನಗಳ ಭದ್ರತೆಗಾಗಿ ನಿಯೋಜನೆಯಾಗುವ ಸಿಬ್ಬಂದಿಯನ್ನು ಆವಶ್ಯಕತೆ ಮತ್ತು ಯಾದೃಚ್ಛಿಕ ಆಯ್ಕೆ ಆಧಾರಿತವಾಗಿ ಆಯ್ಕೆ ಮಾಡಲಾಗುತ್ತದೆ.