ಪಾಕ್ ನಗರದ ಹೆಸರಿಟ್ಟಿದ್ದಕ್ಕೆ ಕರಾಚಿ ಬೇಕರಿಗೆ ದಾಳಿ: ಹೈದರಾಬಾದ್‌ನಲ್ಲಿ ಉದ್ವಿಗ್ನತೆ
ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಕರಾಚಿ ಬೇಕರಿಯ ಶಾಖೆಗೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಬೇಕರಿಯ ಹೆಸರು ಪಾಕಿಸ್ತಾನದ ನಗರದ ಹೆಸರಿನಿಂದ ಬಂದಿದ್ದರೂ, ಇದು ಭಾರತೀಯ ಸಿಂಧಿ ಹಿಂದೂ ಕುಟುಂಬವು ಸ್ಥಾಪಿಸಿದ ಸಂಸ್ಥೆಯಾಗಿದೆ.

ಭಾರತ ಪಾಕಿಸ್ತಾನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿರುವ ಕರಾಚಿ ಬೇಕರಿಯನ್ನು ಬಿಜೆಪಿ ಕಾರ್ಯಕರ್ತರು ಛಿದ್ರಗೊಳಿಸಿದ್ದಾರೆ. ಕರಾಚಿ ಪಾಕಿಸ್ತಾನದ ನಗರ ಎನ್ನುವ ಕಾರಣಕ್ಕೆ ಅದೇ ಹೆಸರಿನ ಬೇಕರಿಯನ್ನು ಹೊಂದಿರುವುದಕ್ಕೆ ಆಕ್ರೋಶಗೊಂಡ ಹೈದರಾಬಾದ್ ಬಿಜೆಪಿ ಕಾರ್ಯಕರ್ತರು ಈ ದಾಳಿ ಮಾಡಿ ಧ್ವಂಸ ಮಾಡಿದ್ದಾರೆ. ಭಾರತದ ಭಾವುಟ, ಕೇಸರಿ ಬಾವುಟ ಹಿಡಿದು ಭಾರತ್ ಮಾತಾ ಕೀ ಜೈ ಎನ್ನುತ್ತಾ ಬೇಕರಿ ವಸ್ತುಗಳನ್ನ ಒಡೆದು ಹಾಕಲಾಗಿದೆ. ಬೇಕರಿಯ ಹೆಸರನ್ನು ಬದಲಾಯಿಸಿ ಎಂದು ಒತ್ತಾಯಿಸಿದರ ಜೊತೆಗೆ ಪಾಕಿಸ್ತಾನಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್‌ನ ಶಂಶಾಬಾದ್ ಪ್ರದೇಶದಲ್ಲಿರುವ ಕರಾಚಿ ಬೇಕರಿಯ ಶಾಖೆಗೆ ಬಿಜೆಪಿ ಕಾರ್ಯಕರ್ತರು ಶನಿವಾರ ಮಧ್ಯಾಹ್ನ 3 ಗಂಟೆಗೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್‌ಜಿಐ ವಿಮಾನ ನಿಲ್ದಾಣ ಠಾಣೆಯ ಇನ್ಸ್‌ಪೆಕ್ಟರ್ ಕೆ. ಬಾಲರಾಜು ಅವರು, "ಯಾವುದೇ ಉದ್ಯೋಗಿಗಳಿಗೆ ಗಾಯವಾಗಿಲ್ಲ. ಗಂಭೀರ ಹಾನಿಯೂ ಆಗಿಲ್ಲ. ನಾವು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದೇವೆ" ಎಂದು ಹೇಳಿದರು. ಈ ಘಟನೆ ಮೊದಲಲ್ಲ, ಕಳೆದ ವಾರವೂ ಬಂಜಾರಾ ಹಿಲ್ಸ್‌ನ ಬೇಕರಿಯಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆಗ ಕೆಲವರು ತ್ರಿವರ್ಣ ಧ್ವಜಗಳನ್ನು ಬೇಕರಿಗೆ ಅಂಟಿಸಿದ್ದರು.
ಕರಾಚಿ ಬೇಕರಿಯ ಹಿನ್ನೆಲೆ
ಈ ಬೇಕರಿಯ ಹೆಸರು ಪಾಕಿಸ್ತಾನದ ಕರಾಚಿ ನಗರದಿಂದ ಬಂದರೂ, ಇದು ಭಾರತೀಯ ಸಿಂಧಿ ಹಿಂದೂ ಕುಟುಂಬ ರಾಮನಾನಿ ಸ್ಥಾಪಿಸಿದ ಸಂಸ್ಥೆ. ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಹೈದರಾಬಾದ್‌ಗೆ ವಲಸೆ ಬಂದರು. ಈ ಬೇಕರಿಯು 1953 ರಲ್ಲಿ ಮೊಜಂ ಜಾಹಿ ಮಾರುಕಟ್ಟೆಯಲ್ಲಿ ಆರಂಭವಾಯಿತು. ತಮ್ಮ ತವರುನಾಡು ಕರಾಚಿ ಎಂಬ ಕಾರಣಕ್ಕೆ ಬೇಕರಿಗೆ ಈ ಹೆಸರನ್ನು ಇಟ್ಟರು.
ಬೇಕರಿ ಮುಖ್ಯಸ್ಥರ ಪ್ರತಿಕ್ರಿಯೆ
"ನಾವು ಸಂಪೂರ್ಣ ಭಾರತೀಯ ಸಂಸ್ಥೆ. ನಮಗೆ ಪಾಕಿಸ್ತಾನಕ್ಕೆ ಸಂಬಂಧವಿಲ್ಲ," ಎಂದು ಬೇಕರಿಯ ವ್ಯವಸ್ಥಾಪಕರು ತಿಳಿಸಿದರು.
ಕರಾಚಿ ಬೇಕರಿಗೆ ಹೈದರಾಬಾದ್‌ನಲ್ಲಿಯೇ 24 ಶಾಖೆಗಳಿವೆ. ದೆಹಲಿ, ಬೆಂಗಳೂರು, ಚೆನ್ನೈ ಸೇರಿ ಹಲವಾರು ನಗರಗಳಲ್ಲಿಯೂ ಶಾಖೆಗಳಿವೆ. ಅವರ ಫ್ರೂಟ್ ಬಿಸ್ಕತ್ ಮತ್ತು ಉಸ್ಮಾನಿಯಾ ಬಿಸ್ಕತ್ ಬಹಳ ಜನಪ್ರಿಯವಾಗಿದೆ. ಇಷ್ಟೇ ಅಲ್ಲ ಯುರೋಪ್, ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ಇತರ ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.
ಹಿಂದೆಯೂ ದಾಳಿ ನಡೆದಿತ್ತು
2019 ರಲ್ಲಿ ಪುಲ್ವಾಮಾ ದಾಳಿಯ ವೇಳೆ ಬೇಕರಿಗೆ ಹಾನಿಯಾದ ಘಟನೆ ನಡೆದಿತ್ತು. ಆ ಸಮಯದಲ್ಲಿಯೂ ಮಾಲೀಕರು ರಕ್ಷಣೆಯ ಕೋರಿ ಮನವಿ ಮಾಡಿದ್ದರು. ಇದಕ್ಕೂ ಮೊದಲು, ಬೇಕರಿ ಮಾಲೀಕರಾದ ರಾಜೇಶ್ ರಾಮನಾನಿ ಮತ್ತು ಹರೀಶ್ ರಾಮನಾನಿ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಬಳಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಶನಿವಾರದ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಬಿಎನ್‌ಎಸ್ ಸೆಕ್ಷನ್ 126(2) ಮತ್ತು 324(4) ಅಡಿಯಲ್ಲಿ — ಅಕ್ರಮವಾಗಿ ತಡೆಹಿಡಿಯುವುದು ಮತ್ತು ಆಸ್ತಿಗೆ ಹಾನಿ ಮಾಡುವ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಘಟನೆ ಸಂಬಂಧ ಯಾವುದೇ ಬಂಧನ ನಡೆದಿಲ್ಲ.