ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ಹೈದರಾಬಾದ್‌ನ ಕರಾಚಿ ಬೇಕರಿ ಹೆಸರು ಬದಲಿಸಲು ಒತ್ತಡ ಕೇಳಿ ಬಂದಿದೆ.

ಹೈದರಾಬಾದ್: ಭಾರತ- ಪಾಕಿಸ್ತಾನ ಉದ್ವಿಗ್ನತೆ ನಡುವೆ ಹೈದರಾಬಾದ್‌ನಲ್ಲಿ 'ಕರಾಚಿ ಬೇಕರಿ' ಸಂಕಷ್ಟಕ್ಕೊಳಗಾಗಿದ್ದು, ಬೇಕರಿ ಹೆಸರಿನ ಬದಲಾವಣೆಗೆ ಆಗ್ರಹ ಕೇಳಿ ಬಂದಿದೆ. ಈ ಬೆನ್ನಲ್ಲೇ ಮಾಲೀಕರು ಸ್ಪಷ್ಟನೆ ನೀಡಿದ್ದು, 'ಇದು ನೂರಕ್ಕೆ ನೂರರಷ್ಟು ಭಾರತದ ಉತ್ಪನ್ನ. ನಾವು ಭಾರತೀಯರು' ಎಂದಿದ್ದಾರೆ. ಎರಡು ದೇಶಗಳ ನಡುವೆ ಉದ್ವಿಗ್ನತೆ ಬೆನ್ನಲ್ಲೇ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಸಂಘಟನೆಗಳು ಬೇಕರಿ ಹೆಸರಿನ ಬದಲಾವಣೆಗೆ ಆಗ್ರಹಿಸಿ ಪ್ರತಿಭಟಿಸಿದ್ದರು. ಈ ಬೆನ್ನಲ್ಲೇ ಮಾಲೀಕರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಜನರು ಪಾಕಿಸ್ತಾನದ ಸ್ಥಳದ ಹೆಸರು ಇರುವ ಕಾರಣಕ್ಕೆ ಪ್ರತಿಭಟನೆಯನ್ನು ನಡೆಸಿದ್ದಾರೆ.

ಆದರೆ ವಾಸ್ತವದಲ್ಲಿ ಇದು ಭಾರತದ ಹೈದರಾಬಾದ್‌ನ ಕಂಪನಿ. ವಿಭಜನೆಯ ನಂತರ ನಮ್ಮ ಅಜ್ಜ ಭಾರತಕ್ಕೆ ಬಂದ ನಂತರ ಈ ಬ್ಯಾಂಡ್‌ಗೆ ಕರಾಚಿ ಬೇಕರಿ ಎಂದು ಹೆಸರಿಟ್ಟರು. ಇದು ಶೇ.100ರಷ್ಟು ಭಾರತದ ಉತ್ಪನ್ನ. 1953ರಲ್ಲಿ ಸ್ಥಾಪನೆಯಾಯಿತು. ನಮ್ಮ ಹೆಸರು ನಮ್ಮ ಇತಿಹಾಸದ ಸಂಕೇತ ಹೊರತು ರಾಷ್ಟ್ರೀಯತೆ ಅಲ್ಲ. ದಯವಿಟ್ಟು ನಮಗೆ ಸಹಕರಿಸಿ' ಎಂದಿದ್ದಾರೆ. ಜೊತೆಗೆ ಹೆಸರಿನಲ್ಲಿ ಯಾವುದೇ ಬದಲಾವಣೆ ಆಗದಂತೆ ತಡೆಯಲು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಪೊಲೀಸರಿಗೆ ಮನವಿ ಮಾಡಿದ್ದಾರೆ. ಭಾರತದಲ್ಲಿನ ಕರಾಚಿ ಬೇಕರಿ. ಯನ್ನು ರಾಜೇಶ್ ರಾಮ್ನಾನಿ ಮತ್ತು ಹರೀಶ್ ರಾಮ್ನಾನಿ ಎನ್ನುವವರು ನಡೆಸುತ್ತಿದ್ದಾರೆ. 1953ರಲ್ಲಿ ಅವರ ಅಜ್ಜ ಖಾನ್‌ಚಂದ್ ರಾಮ್ನಾನಿ ಎನ್ನುವವರು ಬೇಕರಿ ಸ್ಥಾಪಿಸಿದ್ದರು. ಭಾರತ ಪಾಕ್ ವಿಭಜನೆಯ ಸಂದರ್ಭದಲ್ಲಿ ಖಾನ್ ಚಂದ್ ಭಾರತಕ್ಕೆ ಬಂದಿದ್ದರು.

ಬಿಎಸ್‌ಎಫ್ ಮುಖ್ಯಸ್ಥರ ಜತೆ ಅಮಿತ್ ಶಾ ಮಾತು 
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭ ಬೆನ್ನಲ್ಲೇ ಕೇಂದ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ರಾತ್ರಿ ಪಾಕ್ ಗಡಿಯಲ್ಲಿನ ಬಿಎಸ್‌ಎಫ್‌ ಸೇರಿದಂತೆ ದೇಶದ ಗಡಿ ಕಾವಲುಪಡೆಗಳ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಿದರು. ಆಪರೇಷನ್ ಸಿಂದೂರ ಮತ್ತು ಪಾಕ್ ಕಾರ್ಯಾಚರಣೆ ಭಾರತೀಯ ಮಿಲಿಟರಿ ನೆಲೆಗಳ ಮೇಲೆ ದಾಳಿ ಯತ್ನ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿರುವುದರಿಂದ ಅಂತಾರಾಷ್ಟ್ರೀಯ ಗಡಿಗಳಲ್ಲಿ ಪರಿಸ್ಥಿತಿಯನ್ನು ಶಾ ಅವಲೋಕಿಸಿದರು. ಈ ವೇಳೆ ಗಡಿ ಕಾವಲು ಪಡೆಗಳ ಮಹಾನಿರ್ದೇಶಕರು ಗೃಹ ಸಚಿವರಿಗೆ ಪ್ರಸ್ತುತ ಪರಿಸ್ಥಿತಿ ಮತ್ತು ಭದ್ರತೆಯನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಇನ್ನು ಸಿಐಎಸ್‌ಎಫ್ ಮುಖ್ಯಸ್ಥರೊಂದಿಗೆ ಶಾ ಮಾತನಾಡಿ ದೇಶದ ವಿಮಾನ ನಿಲ್ದಾಣಗಳಲ್ಲಿನ ಭದ್ರತೆಯ ಬಗ್ಗೆ ಮಾಹಿತಿ ಪಡೆದರು.

ಭಾರತದ ದಾಳಿಗೆ ಬೆಚ್ಚಿ ಪಾಕ್ ಪ್ರಧಾನಿ ಶೆಹಬಾಜ್ ಬಂಕರ್‌ಗೆ 'ಪಲಾಯನ' 
 ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಷರೀಫ್ ಅವರ ಅಧಿಕೃತ ನಿವಾಸದಿಂದ 20 ಕಿಲೋ ಮೀಟರ್‌ ದೂರದಲ್ಲಿ ಸ್ಫೋಟ ಸಂಭವಿಸಿದೆ. ಅಲ್ಲದೆ, ಭಾರತವು ಇಸ್ಲಾಮಾಬಾದ್ ಮೇಲೆ ವಾಯು ದಾಳಿ ನಡೆಸಿದೆ. ಹೀಗಾಗಿ ಷರೀಫ್ ಅವರನ್ನು ಸುರಕ್ಷಿತವಾಗಿ ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ಹೇಳಿವೆ. ಇಸ್ಲಾಮಾಬಾ‌ದ್‌ನ ಹೈ-ಸೆಕ್ಯುರಿಟಿ ವಲಯಗಳ ಬಳಿ ಸ್ಫೋಟಗಳು ವರದಿಯಾದ ನಂತರ ಪ್ರಧಾನಿ ಷರೀಫ್, ಸೇನಾ ಮುಖ್ಯಸ್ಥ ಅಸೀಂ ಮುನೀರ್, ಸಚಿವರು ಹಾಗೂ ಪ್ರಮುಖ ಸೇನಾಧಿಕಾರಿಗಳು ಸೇರಿದಂತೆ ಪ್ರಮುಖ ಸರ್ಕಾರಿ ವ್ಯಕ್ತಿಗಳ ಸುತ್ತ ಭದ್ರತೆಯನ್ನು ಗಮನಾರ್ಹವಾಗಿ ತೀವ್ರಗೊಳಿಸಲಾಗಿದೆ. ಪ್ರಧಾನಿಯವರ ಪ್ರಸ್ತುತ ಸ್ಥಳದ ಬಗ್ಗೆ ಪಾಕಿಸ್ತಾನ ಸರ್ಕಾರದಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲವಾದರೂ, ಸಂಭವನೀಯ ಪ್ರತೀಕಾರದ ಕ್ರಮಗಳು ಬಿಗಡಾಯಿಸುವ ಭೀತಿಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ.