ಬದರೀನಾಥ ದೇಗುಲದಲ್ಲೂ ಹುಂಡಿ ಕಳವು ನಿಜ: ಎಸ್‌ಐಟಿ
ಉತ್ತರಾಖಂಡದ ಬದರೀನಾಥ ದೇವಾಲಯದಲ್ಲಿ ನಡೆದಿದೆ ಎನ್ನಲಾದ ಹುಂಡಿ ಕಳವು ಪ್ರಕರಣವನ್ನು ವಿಶೇಷ ತನಿಖಾ ತಂಡ (SIT) ದೃಢಪಡಿಸಿದೆ. ತನಿಖಾ ವರದಿಯನ್ನು ದೇವಾಲಯ ಸಮಿತಿಗೆ ಸಲ್ಲಿಸಲಾಗಿದ್ದು, ಆರೋಪಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚಿಸಿದೆ.

ಉತ್ತರಾಖಂಡದ ಪ್ರಸಿದ್ಧ ಬದರೀನಾಥ ದೇವಾಲಯದಲ್ಲೂ ಹುಂಡಿ ಕಳವು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಅಕ್ರಮ ನಡೆದಿರುವುದು ನಿಜ ಎಂದು ಬಹಿರಂಗಪಡಿಸಿದೆ.
ಇದಕ್ಕೆ ಸಂಬಂಧಿಸಿದ 18 ಪುಟಗಳ ವರದಿಯನ್ನು ಬದರೀನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಸಿಇಒಗೆ ಸಲ್ಲಿಸಿದೆ. ಉತ್ತರಾಖಂಡ ಸರ್ಕಾರವು ಬಿಕೆಟಿಸಿಯ ಸಿಇಒಗೆ ತನಿಖಾ ವರದಿಯಲ್ಲಿ ಹೆಸರಿಸಲಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ.
ಬದರೀನಾಥ ಮಂದಿರದ ದೇಣಿಗೆಯನ್ನು ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ, ದೇವಾಲಯ ಸಮಿತಿ 4 ಸದಸ್ಯರನ್ನುಳ್ಳ ತನಿಖಾ ತಂಡವನ್ನು ರಚನೆ ಮಾಡಿತ್ತು. ಪ್ರಮುಖ ಆರೋಪಿಯಾದ, ಸಮಿತಿ ಅಧ್ಯಕ್ಷರ ಕಚೇರಿಯ ವೈಯಕ್ತಿಕ ಸಹಾಯಕ ಪ್ರಮೋದ್ ನೌಟಿಯಾಲ್‌ನನ್ನು ಜು.7ರಂದು ತಕ್ಷಣ ಅಮಾನತುಗೊಳಿಸಲಾಗಿತ್ತು.
ಇದೀಗ ಎಸ್ಐಟಿ ತನಿಖೆ ಪೂರ್ಣಗೊಳಿಸಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಆರೋಪಿಯು ಹಣವನ್ನು ಅನುಮಾನಾಸ್ಪದವಾಗಿ ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಭಕ್ತರ ಕಾಣಿಕೆ ಹಣ ಮತ್ತು ಇತರ ವಸ್ತುಗಳ ಕಳ್ಳತನ ಒಂದು ಬಾರಿ ಅಲ್ಲ, ಹಲವು ಬಾರಿ ನಡೆದಿದೆ ಎಂದು ಆರೋಪಿಸಿದೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಎಸ್‌ಐಟಿ ಹಲವು ಸಲಹೆಗಳನ್ನು ನೀಡಿದೆ. ಕಾಣಿಕೆ ಎಣಿಕೆ ಕೊಠಡಿಯಲ್ಲಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ದೇವಾಲಯದ ಪ್ರದಕ್ಷಿಣಾ ಮಾರ್ಗದಲ್ಲಿನ ಎಲ್ಲಾ ಮರೆಯ ಜಾಗಗಳನ್ನು ಸಿಸಿಟಿವಿ ವ್ಯಾಪ್ತಿಯಲ್ಲಿ ತರಬೇಕು ಎಂದು ಶಿಫಾರಸು ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

