ಬಹುನಿರೀಕ್ಷಿತ ಹಾಗೂ ಭಾರತದ ಮೊದಲ ಬುಲೆಟ್ ರೈಲು ಓಡಾಟಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. ಇದರ ನಡುವೆ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಬುಲೆಟ್ ರೈಲು ಓಡಾಟ ಯಾವಾಗ ಸೇರಿದಂತೆ ಹಲವು ಮಾಹಿತಿ ನೀಡಿದ್ದಾರೆ.
ಹೈದರಾಬಾದ್ (ಜು.12) ಭಾರತದ ಬಹುನಿರೀಕ್ಷಿತ ಬುಲೆಟ್ ರೈಲು ಸದ್ದು ಮಾಡುತ್ತಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇದೀಗ ಭಾರತದ ಮೊದಲ ಬುಲೆಟ್ ರೈಲಿನ ಕುರಿತು ಹಲವು ಮಾಹಿತಿ ನೀಡಿದ್ದಾರೆ. ಬುಲೆಟ್ ರೈಲು ಓಡಾಟಕ್ಕೆ ಕಾಮಗಾರಿಗಳು ಭರದಿಂದ ಸಾಗಿದೆ. ಹಂತ ಹಂತವಾಗಿ ಬುಲೆಟ್ ರೈಲು ಕಾರ್ಯಾರಂಭಗೊಳ್ಳಲಿದೆ. ವಿಶೇಷ ಅಂದರೆ ಮುಂದಿನ ವರ್ಷವೇ ಅಂದರೆ 2027ರಲ್ಲಿ ಬುಲೆಟ್ ರೈಲು ಭಾರತದಲ್ಲಿ ಓಡಾಟ ಆರಂಭಿಸಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮೊದಲ ಹಂತದಲ್ಲಿ ಸೂರತ್ ಬಿಲ್ಮೋರ ಬುಲೆಟ್ ರೈಲು
ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರೈಲ್ವೇ ಸಚಿವ, ಮುಂಬೈ-ಅಹಮ್ಮದಾಬಾದ್ ನಡುವಿನ ದೇಶದ ಮೊದಲ ಬುಲೆಟ್ ರೈಲಿನ ಕಾಮಗಾರಿ ನಡೆಯುತ್ತಿದೆ. ರೈಲ್ವೇ ಟ್ರಾಕ್, ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿದೆ. ಕೆಲ ಹಂತದಲ್ಲಿ ಬುಲೆಟ್ ರೈಲಿನ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ವರ್ಷದ ವೇಳೆ ಸೂರತ್-ಬಿಲ್ಮೋರ್ ಸೆಕ್ಷನ್ ಕಾಮಗಾರಿ ಪೂರ್ಣಗೊಂಡು ಬುಲೆಟ್ ರೈಲು ಓಡಾಟ ಆರಂಭಿಸಲಿದೆ. ಹಂತ ಹಂತದ ಕಾಮಾಗಾರಿ ಪೂರ್ಣಗೊಂಡಂತೆ ಬುಲೆಟ್ ರೈಲು ಸೇವೆ ವಿಸ್ತರಣೆಯಾಗುತ್ತಾ ಸಾಗಲಿದೆ. ಈ ಮೂಲಕ ಮುಂಬೈ-ಅಹಮ್ಮಬಾದ್ ಬುಲೆಟ್ ರೈಲು ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ ಎಂದಿದ್ದಾರೆ.
ಹಲವು ಭಾಗದಲ್ಲಿ ಬುಲೆಟ್ ರೈಲು
ದೇಶದಲ್ಲಿ ಬುಲೆಟ್ ರೈಲು ಕೇವಲ ಮುಂಬೈ-ಅಹಮ್ಮದಾಬಾದ್ ಮಾತ್ರವಲ್ಲ, ಇತರ ಭಾಗಗಳಿಗೂ ವಿಸ್ತರಣೆಯಾಗಲಿದೆ ಎಂದಿದ್ದಾರೆ. ಮೊದಲ ಬುಲೆಟ್ ರೈಲು ಯೋಜನೆಯ ಮೊದಲ ಹಂತ ಉದ್ಘಾಟನೆಗೊಳ್ಳುತ್ತಿದ್ದಂತೆ ಹೈದರಾಬಾದ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಬುಲೆಟ್ ರೈಲು ಹಾಗೂ ರೈಲು ಸಂಪರ್ಕ ಯೋಜನೆಗಳು ವೇಗ ಪಡೆದುಕೊಳ್ಳಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ರೈಲ್ವೇ ಸೇವೆಗಳನ್ನು ನಿರಂತರವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ರೈಲು ನಿಲ್ದಾಣ, ರೈಲು ಕೋಚ್, ಟಿಕೆಟ್ ಬುಕಿಂಗ್, ಪ್ರಯಾಣ ಸೇರಿದಂತೆ ಪ್ರಯಾಣಿಕರಿಗೆ ನೀಡುವ ಒಟ್ಟಾರೆ ಸೇವೆಗಳ ಉನ್ನತೀಕರಣ ನಡೆಯುತ್ತಿದೆ. ಕೆಲವೇ ವರ್ಷಗಳಲ್ಲಿ ಭಾರತೀಯ ರೈಲು ಮಹತ್ತರ ಬದಲಾವಣೆಯಾಗಲಿದೆ. ಈಗಾಗಲೇ ಗಣನೀಯ ಪ್ರಮಾಣದ ಬದಲಾವಣೆಗಳು ಆಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮೂರು ಬುಲೆಟ್ ರೈಲು ಯೋಜನೆ
ಇದೇ ವೇಳೆ ಮೂರು ಬುಲೆಟ್ ರೈಲು ಯೋಜನೆ ಕುರಿತು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಹೈದರಾಬಾದ್ ಬೆಂಗಳೂರು, ಪುಣೆ-ಹೈದರಾಬಾದ್ ಹಾಗೂ ಹೈದರಾಬಾದ್ ಚೆನ್ನೈ ಬುಲೆಟ್ ರೈಲು ಯೋಜನೆ ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದಿದ್ದಾರೆ.


