ಭಾರತ ಬಿಟ್ಟು ತೊಲಗಲು ಪಾಕಿಸ್ತಾನಿಗಳಿಗೆ 48 ಗಂಟೆ ಅವಕಾಶ: ಸೀಮಾ ಹೈದರ್ ಕತೆ ಏನು?
ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದೊಂದಿಗಿನ ಸಂಬಂಧ ಕಡಿದುಕೊಂಡಿದ್ದು, ಪಾಕಿಸ್ತಾನಿ ಪ್ರಜೆಗಳನ್ನು ದೇಶ ಬಿಡುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನದ ಸೀಮಾ ಹೈದರ್ ಭವಿಷ್ಯ ಏನು ಎಂಬ ಪ್ರಶ್ನೆ ಮೂಡಿದೆ. ಸೀಮಾ ಹೈದರ್ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಬಂದು ಸಚಿನ್ ಮೀನಾ ಎಂಬಾತನನ್ನು ವಿವಾಹವಾಗಿದ್ದಾರೆ.

26 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಭಾರತ ಈಗಾಗಲೇ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಸ್ಥಗಿತವೂ ಸೇರಿದಂತೆ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಗಳಿಗೆ 7 ದಿನಗಳೊಳಗೆ ಭಾರತ ಬಿಟ್ಟು ಹೊರಡುವಂತೆ ಸೂಚಿಸಲಾಗಿದೆ. ಜೊತೆಗೆ ಭಾರತದಲ್ಲಿರುವ ಪಾಕಿಸ್ತಾನಿ ಪ್ರವಾಸಿಗರಿಗೂ 48 ಗಂಟೆಗಳಲ್ಲಿ ದೇಶ ಬಿಡುವಂತೆ ಆದೇಶಿಸಲಾಗಿದೆ. ಇದರ ಜೊತೆ ಅಟ್ಟರಿ ವಾಘಾ ಗಡಿಯನ್ನು ಬಂದ್ ಮಾಡಲಾಗಿದ್ದು, ಭಾರತದ ಜೊತೆ ಇನ್ನು ಮುಂದೆ ಪಾಕಿಸ್ತಾನಕ್ಕೆ ಯಾವುದೇ ಒಳ್ಳೆಯ ಸಂಬಂಧಗಳು ಇರುವುದಿಲ್ಲ. ಹೀಗಿರುವಾಗ ಕಳೆದವರ್ಷ ದೇಶ ಬಿಟ್ಟು ಬಂದು ಭಾರತದಲ್ಲಿ ನೆಲೆಸಿರುವ ಸೀಮಾ ಹೈದರ್ ಕತೆ ಏನು ಎಂಬುದು ಅನೇಕರ ಪ್ರಶ್ನೆಯಾಗಿದೆ.
2023ರಲ್ಲಿ ಸೀಮಾ ಹೈದರ್ ತನ್ನ ನಾಲ್ಕು ಮಕ್ಕಳ ಜೊತೆ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಆಗಮಿಸಿದ್ದಳು. ಆನ್‌ಲೈನ್‌ನಲ್ಲಿ ಪಬ್ಜಿ ಆಡುತ್ತಿದ್ದಾಗ ಆಕೆಗೆ ಉತ್ತರ ಪ್ರದೇಶ ಮೂಲದ ಸಚಿನ್ ಮೀನಾ ಎಂಬಾತನ ಪರಿಚಯವಾಗಿತ್ತು. ಇದಾದ ನಂತರ ಆತನನ್ನು ಭೇಟಿಯಾಗುವುದಕ್ಕಾಗಿ ಆಕೆ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳಕ್ಕೆ ಬಂದು ಅಲ್ಲಿಂದ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಳು. ಹೀಗೆ ಭಾರತಕ್ಕೆ ಬಂದ ಸೀಮಾ ಸಚಿನ್‌ನನ್ನು ಮದುವೆಯಾಗಿದ್ದು, ಅವರಿಗೀಗ ಇಲ್ಲಿ ಒಂದು ಹೆಣ್ಣು ಮಗುವೂ ಆಗಿದೆ. ಆಕೆ ತನ್ನ ಮಗಳಿಗೆ ಭಾರತಿ ಮೀನಾ ಎಂದು ಹೆಸರನ್ನು ಇಟ್ಟಿದ್ದಾರೆ. ಹೀಗಿರುವಾಗ ಈಗ ಪಾಕಿಸ್ತಾನ ಪ್ರಜೆಗಳು ಭಾರತ ಬಿಟ್ಟು ಹೊರಡುವಂತೆ ಭಾರತ ಸರ್ಕಾರ ಆದೇಶ ಮಾಡಲಾಗಿದ್ದು, ಸೀಮಾ ಕತೆ ಏನು ಎಂಬುದು ಅನೇಕರ ಪ್ರಶ್ನೆಯಾಗಿದೆ.
ಪಹಲ್ಗಾಮ್ ಘಟನೆಯ ನಂತರ ವಿದೇಶಾಂಗ ಇಲಾಖೆ ಕಾರ್ಯದರ್ಶಿವಿಕ್ರಮ್ ಮಿಸ್ರಿ ಅವರು ಸುದ್ದಿಗೋಷ್ಠಿಯಲ್ಲಿ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ಕ್ರಮಗಳ ಬಗ್ಗೆ ವಿವರ ನೀಡುತ್ತಿದ್ದಂತೆ ಅನೇಕರಲ್ಲಿ ಮೂಡಿದ ಪ್ರಶ್ನೆ ಸೀಮಾ ಹೈದರ್ ಅವರನ್ನು ವಾಪಸ್ ಪಾಕಿಸ್ತಾನಕ್ಕೆ ಕಳುಹಿಸುತ್ತಾರಾ ಎಂಬುದು. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‌ನ 32 ವರ್ಷದ ಸೀಮಾ ಹೈದರ್, ಮೇ 2023 ರಲ್ಲಿ ಕರಾಚಿಯಲ್ಲಿರುವ ತನ್ನ ಮನೆಯನ್ನು ತೊರೆದು ತನ್ನ ಮಕ್ಕಳೊಂದಿಗೆ ನೇಪಾಳ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದರು. ಪಬ್ಜಿ ಆಡುತ್ತಾ ಆನ್‌ಲೈನ್‌ನಲ್ಲಿ ಭೇಟಿಯಾದ ತನ್ನ ಪ್ರೇಮಿ ಸಚಿನ್ ಮೀನಾ ಜೊತೆ ಇರುವುದಕ್ಕಾಗಿ ಆಕೆ ಹಾಗೆ ಮಾಡಿದ್ದಳು. ಈಗ, ವಿದೇಶಾಂಗ ಸಚಿವಾಲಯದ (MEA)ನಿರ್ದೇಶನದ ನಂತರ ಅವರು ಪಾಕಿಸ್ತಾನಕ್ಕೆ ಮರಳಬೇಕೆ ಬೇಡವೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.
ಒಬ್ಬರು ಸೀಮಾ ಹೈದರ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿ. ಆಕೆ ಕನಿಷ್ಠ 3 ರಾಷ್ಟ್ರೀಯ ಗಡಿಗಳನ್ನು ದಾಟಿ ಉತ್ತರ ಪ್ರದೇಶ ತಲುಪಲು ಅವಕಾಶ ನೀಡಿದ ಪ್ರತಿಯೊಂದು ಭದ್ರತಾ ಸಂಸ್ಥೆಯನ್ನು ಸಹ ತನಿಖೆ ಮಾಡಿ ಎಂದು ಬರೆದಿದ್ದರೆ, ಮತ್ತೊಬ್ಬರು, ಸರ್ಕಾರ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಭಾರತದಿಂದ ಹೊರಹೋಗುವಂತೆ ಕೇಳಿದಾಗ, ಸೀಮಾ ಹೈದರ್ ಅವರಿಗೆ ಏಕೆ ಉಳಿಯಲು ಅವಕಾಶ ನೀಡಲಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು, ಇಸ್ಮೇ ಸೀಮಾ ಹೈದರ್ ಭಿ ಜಾಯೇಗಿ ಯಾ ಉಸ್ಕೋ ವಿಶೇಷ ವೀಸಾ ಹೈ? ಅಂದರೆ ಸೀಮಾ ಹೈದರ್ ಕೂಡ ಹೋಗ್ತಾರಾ ಅಥವಾ ಅವರಿಗೇನಾದರು ವಿಶೇಷ ವೀಸಾ ಇದೆಯಾ ಎಂದು ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಸೀಮಾ ಹೈದರ್ ಕೂಡ ಸೇರಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಒಬ್ಬರು ಪ್ರಧಾನಿಯನ್ನು ಟ್ಯಾಗ್ ಮಾಡಿದ್ದು, ಗೌರವಾನ್ವಿತ @narendramodiji ನನ್ನ ವಿನಮ್ರ ವಿನಂತಿ ದಯವಿಟ್ಟು ಸೀಮಾ ಹೈದರ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿ ಎಂದು ಮತ್ತೊಬ್ಬರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಇನಿಯನ ಅರಸಿ ಪಾಕ್‌ನಿಂದ ಭಾರತಕ್ಕೆ ಬಂದ ಸೀಮಾ ಹೈದರ್‌ಗೆ ಹೆಣ್ಣು ಮಗು
ಇದನ್ನೂ ಓದಿ:ಸೀಮಾ ಹೈದರ್ ಮಹತ್ವದ ನಿರ್ಧಾರ, ಕುಂಭಮೇಳಕ್ಕೆ 51 ಲೀಟರ್ ಹಾಲು ಕೊಡೋದಾಗಿ ಘೋಷಣೆ!
ಪ್ರಸ್ತುತ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿರುವ ಸೀಮಾಗೆ ಈಗ ಐವರು ಮಕ್ಕಳು ಸಚಿನ್ ಹಾಗೂ ಸೀಮಾ ಕೆಲ ತಿಂಗಳ ಹಿಂದಷ್ಟೇ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಈ ನಡುವೆ ಭಾರತವು ಪಾಕಿಸ್ತಾನದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿದೆ ಮತ್ತು ಪಾಕಿಸ್ತಾನದ ಜೊತೆ ಮಿಲಿಟರಿ ಸಂಬಂಧಗಳನ್ನು ಕಡಿತಗೊಳಿಸುವುದು, ಆರು ದಶಕಗಳಷ್ಟು ಹಳೆಯದಾದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಗಡಿಯಾಚೆಗಿನ ಸಂಪರ್ಕಗಳು ಇರುವ ಹಿನ್ನೆಲೆ ಅಟ್ಟಾರಿ ವಾಘಾ ಭೂ ಸಾರಿಗೆ ಮಾರ್ಗವನ್ನು ತಕ್ಷಣ ಮುಚ್ಚುವುದು ಸೇರಿದಂತೆ ಹಲವಾರು ಕ್ರಮಗಳನ್ನು ಘೋಷಿಸಿದೆ. ಪಾಕಿಸ್ತಾನ ಮತ್ತು ಭಾರತೀಯ ಹೈಕಮಿಷನ್‌ಗಳ ಒಟ್ಟಾರೆ ಬಲವನ್ನು ಮೇ 1 ರ ವೇಳೆಗೆ 55 ರಿಂದ 30 ಕ್ಕೆ ಇಳಿಸಲಾಗುವುದು ಎಂದು ಮಿಶ್ರಿ ಘೋಷಿಸಿದ್ದಾರೆ. ಹೀಗಿರುವಾಗ ಸೀಮಾ ಹೈದರ್ ಕತೆ ಏನು ಎಂಬ ಬಗ್ಗೆ ಇನ್ನೂ ಯಾವುದೇ ವಿಚಾರಗಳು ಖಚಿತವಾಗಿಲ್ಲ.
ಇದನ್ನೂ ಓದಿ: ಪಾಕ್ ಮಹಿಳೆ ಭಾರತದಲ್ಲಿ ಫೇಮಸ್, ಯೂಟ್ಯೂಬ್ ನಲ್ಲಿ ಸೀಮಾ ಹೈದರ್ ಲಕ್ಷ ಸಂಪಾದನೆ
ಇದನ್ನೂ ಓದಿ: ಹಿಂದೂ ಸಂಪ್ರದಾಯದಂತೆ ನಾಮಕರಣ: ಮಗುವಿಗೆ ವಿಶೇಷ ಹೆಸರಿಟ್ಟ ಸೀಮಾ ಹೈದರ್