Fever: ಜ್ವರ ಬಂದಾಗ ಬಾಯಿ ಕಹಿಯಾಗುತ್ತೆ, ಆಹಾರ ರುಚಿಸಲ್ಲ; ಹೀಗಾಗಲು ಕಾರಣವೇನು? ಇದು ಸೀಕ್ರೆಟ್..!
ಜ್ವರ ಅನ್ನೋದು ತುಂಬಾನೇ ಸಾಮಾನ್ಯ ಆರೋಗ್ಯ ಸಮಸ್ಯೆ. ವೈರಲ್ ಇನ್‌ಫೆಕ್ಷನ್, ನೆಗಡಿ, ಶೀತ ಹೀಗೆ ಹಲವು ಕಾರಣಗಳಿಂದ ಜ್ವರ ಬರುತ್ತೆ. ಆದರೆ ಜ್ವರ ಕಡಿಮೆಯಾದ ಮೇಲೂ ಹಲವರ ಬಾಯಿ ಕಹಿಯಾಗಿರುತ್ತದೆ. ಹೀಗೆ ಯಾಕಾಗುತ್ತದೆ? ಇದನ್ನು ಸರಿಪಡಿಸುವುದು ಹೇಗೆ? ಇಲ್ಲಿದೆ ಮುಖ್ಯ ಮಾಹಿತಿ.

ಜ್ವರ ಕೇವಲ ಒಂದು ಕಾಯಿಲೆಯಲ್ಲ, ನಮ್ಮ ದೇಹ ಸೋಂಕಿನ ವಿರುದ್ಧ ಹೋರಾಡುತ್ತಿದೆ ಅನ್ನೋದರ ಸಂಕೇತ. ವೈರಸ್ ಅಥವಾ ಬ್ಯಾಕ್ಟೀರಿಯಾ ದೇಹಕ್ಕೆ ಬಂದಾಗ, ರೋಗನಿರೋಧಕ ವ್ಯವಸ್ಥೆಯು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಸುಸ್ತು, ಹಸಿವಾಗದಿರುವುದು, ಬಾಯಿ ಕಹಿ ಆಗುವಂತಹ ಲಕ್ಷಣಗಳು ಕಾಣಿಸುತ್ತವೆ. ಜ್ವರ ಕಡಿಮೆಯಾದ ಮೇಲೂ ಕೆಲವರಿಗೆ ಈ ಕಹಿ ರುಚಿ ಒಂದೆರಡು ದಿನ ಇರುತ್ತದೆ.
ವೈದ್ಯರ ಪ್ರಕಾರ, ಜ್ವರದ ನಂತರ ಬಾಯಿ ಕಹಿಯಾಗಲು 'ಡಿಸ್ಗ್ಯೂಸಿಯಾ' (Dysgeusia) ಎಂಬ ಸಮಸ್ಯೆ ಕಾರಣ. ಅಂದರೆ ರುಚಿಯಲ್ಲಿ ಬದಲಾವಣೆ. ಜ್ವರ ಬಂದಾಗ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ (ಡಿಹೈಡ್ರೇಷನ್). ಇದರಿಂದ ಬಾಯಿಯಲ್ಲಿ ಜೊಲ್ಲು ಉತ್ಪತ್ತಿ ಕಡಿಮೆಯಾಗಿ, ಬಾಯಿ ಒಣಗುತ್ತದೆ ಮತ್ತು ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಈ ಕಾರಣಗಳಿಂದ ಬಾಯಿ ಕಹಿಯಾದಂತೆ ಭಾಸವಾಗುತ್ತದೆ.
ಜ್ವರ ಬಂದಾಗ ಅನೇಕರು ಆ್ಯಂಟಿಬಯೋಟಿಕ್ ಅಥವಾ ಬೇರೆ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಈ ಔಷಧಿಗಳು ಕೆಲವೊಮ್ಮೆ ಬಾಯಿಯಲ್ಲಿ ಕಹಿ ರುಚಿಗೆ ಕಾರಣವಾಗಬಹುದು. ಹಾಗೆಯೇ, ನೆಗಡಿ ಅಥವಾ ಸೈನಸ್ ಸೋಂಕಿನಿಂದ ಮೂಗು ಕಟ್ಟಿಕೊಂಡರೆ, ಗಂಟಲಲ್ಲಿ ಕಫ ಸೇರಿ ವಾಸನೆ ಮತ್ತು ರುಚಿ ಗ್ರಹಿಕೆ ಕಡಿಮೆಯಾಗುತ್ತದೆ. ಮೂಗು ಕಟ್ಟಿದಾಗ ಬಾಯಿಯಿಂದ ಉಸಿರಾಡುವುದರಿಂದ ಬಾಯಿ ಬೇಗ ಒಣಗಿ, ಬ್ಯಾಕ್ಟೀರಿಯಾ ಬೆಳೆದು ಕಹಿ ರುಚಿ ಹೆಚ್ಚಾಗುತ್ತದೆ.
ಕೆಲವು ಸಂದರ್ಭಗಳಲ್ಲಿ, ಬಾಯಿ ಕಹಿಯಾಗಲು ಬೇರೆ ಕಾರಣಗಳೂ ಇರಬಹುದು. ಬಾಯಿಯಲ್ಲಿ ಯೀಸ್ಟ್ ಸೋಂಕು, ನಾಲಿಗೆ ಮೇಲೆ ಬಿಳಿ ಪದರ, ಲಿವರ್ ಸಮಸ್ಯೆಗಳು ಅಥವಾ ಜೀರ್ಣಕಾರಿ ಸಮಸ್ಯೆಗಳಂತಹ ಕಾರಣಗಳಿಂದಲೂ ಬಾಯಿ ಕಹಿಯಾಗಬಹುದು.
ಜ್ವರದ ನಂತರ ಬಾಯಿ ಕಹಿ ಕಡಿಮೆ ಮಾಡಲು ಕೆಲವು ಸುಲಭ ಮಾರ್ಗಗಳಿವೆ. ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ. ಸಕ್ಕರೆ ರಹಿತ ಚೂಯಿಂಗ್ ಗಮ್ ಅಗಿಯಬಹುದು. ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಅರ್ಧ ಟೀಸ್ಪೂನ್ ಅಡುಗೆ ಸೋಡಾ ಬೆರೆಸಿ ಬಾಯಿ ಮುಕ್ಕಳಿಸಿ. ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ. ಜ್ವರವಿದ್ದಾಗ ಹೆಚ್ಚು ಮಸಾಲೆಯುಕ್ತ ಮತ್ತು ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸಬೇಡಿ.
ಗಮನಿಸಿ:-
ಈ ಮಾಹಿತಿಯನ್ನು ಕೇವಲ ಪ್ರಾಥಮಿಕ ತಿಳುವಳಿಕೆಗಾಗಿ ನೀಡಲಾಗಿದೆ. ಆರೋಗ್ಯದ ವಿಷಯದಲ್ಲಿ ವೈದ್ಯರ ಸಲಹೆ ಪಾಲಿಸುವುದೇ ಉತ್ತಮ. ಬಾಯಿ ಕಹಿ ಒಂದು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದರೆ, ಖಂಡಿತ ವೈದ್ಯರನ್ನು ಸಂಪರ್ಕಿಸಿ. ಇದು ಬೇರೆ ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

