ಶ್ವಾಸಕೋಶದ ಕ್ಯಾನರ್ ಎಂಬ ಸೈಲೆಂಟ್ ಕಿಲ್ಲರ್ ಬಗ್ಗೆ ಇರಲಿ ಎಚ್ಚರ !
ಇತ್ತೀಚೆಗೆ ದೇಹದಲ್ಲಿ ಎಲ್ಲಿಬೇಕಾದರೂ ಗೆಡ್ಡೆ ಆಗೋದು ಸಾಮಾನ್ಯವಾಗಿದೆ. ದೇಹದಲ್ಲಿ ಎರಡು ರೀತಿಯ ಗೆಡ್ಡೆಗಳಾಗುತ್ತವೆ. ಒಂದು ಕ್ಯಾನ್ಸರ್ ಮತ್ತು ಇನ್ನೊಂದು ನಾನ್ ಕ್ಯಾನ್ಸರ್. ಸೆಲ್ಸ್ ಅನಿಯಂತ್ರಿತವಾಗಿ ಬೆಳೆದು ಗೆಡ್ಡೆ ರೂಪವಾಗುತ್ತೆ. ಅದರ ಬಯಾಪ್ಸಿ ನಂತರವೇ ಅದು ಕ್ಯಾನ್ಸರ್ ಗಡ್ಡೆಯೇ ಅಥವಾ ಕ್ಯಾನ್ಸರ್ ಅಲ್ಲದ ಗಡ್ಡೆಯೇ ಎಂದು ಗುರುತಿಸಲಾಗುತ್ತೆ. ಇದು ದೇಹದಲ್ಲಿ ಎಲ್ಲಿ ಬೇಕಾದರೂ ಆಗಬಹುದು.
ಕ್ಯಾನ್ಸರ್ (Cancer) ಬಗ್ಗೆ ವಿಶೇಷವೆಂದ್ರೆ ಆರಂಭದಲ್ಲಿ ಗುರುತಿಸೋದು ತುಂಬಾ ಕಷ್ಟ. ಇದು ಇತರ ಅಂಗಗಳನ್ನು ತಲುಪಿದಾಗ ಮತ್ತು ಕ್ಯಾನ್ಸರ್ ರೋಗಲಕ್ಷಣಗಳು ಗಂಭೀರವಾದಾಗ ಮಾತ್ರ ಗೊತ್ತಾಗುತ್ತೆ. ಅಂತಹ ಒಂದು ಕ್ಯಾನ್ಸರ್ ಇದು, ಇದನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತೆ. ಈ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ
ಶ್ವಾಸಕೋಶದ ಕ್ಯಾನ್ಸರ್ (Lung cancer) ಒಂದು ಸೈಲೆಂಟ್ ಕಿಲ್ಲರ್
ವೈದ್ಯರ ಪ್ರಕಾರ, ಇದು ಶ್ವಾಸಕೋಶದ ಜೀವಕೋಶಗಳಲ್ಲಿ ಪ್ರಾರಂಭವಾದಾಗ, ಇದನ್ನು ಶ್ವಾಸಕೋಶದ ಕ್ಯಾನ್ಸರ್ ಎಂದು ಕರೆಯಲಾಗುತ್ತೆ. ಈ ಕ್ಯಾನ್ಸರ್ ಕ್ರಮೇಣ ವ್ಯಕ್ತಿಯ ಜೀವವನ್ನು ತೆಗೆದುಕೊಳ್ಳುತ್ತೆ, ಆದ್ದರಿಂದ ಇದನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತೆ. ಇದು ಸಂಭವಿಸಲು ಮುಖ್ಯ ಕಾರಣವೆಂದರೆ ಧೂಮಪಾನ. ಮುಂಚಿತವಾಗಿ ಟೆಸ್ಟ್ ಮಾಡಿದರೆ, ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಬಹುದು.
ಒಂದು ವರದಿಯ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ಗಳಲ್ಲಿ ಕೇವಲ 15% ಮಾತ್ರ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಬಹುದು. ಇಲ್ಲಿಯೂ ಸಹ, 5 ವರ್ಷಗಳ ಬದುಕುಳಿಯುವ ಪ್ರಮಾಣವು ಸುಮಾರು 54% ರಷ್ಟಿದೆ. ಸುಮಾರು 70% ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ಆರಂಭಿಕ ಹಂತದಲ್ಲಿ ಚಿಕಿತ್ಸೆಯ ನಂತರ ಸ್ವಲ್ಪ ಹೆಚ್ಚು ಜೀವಿಸುತ್ತಾರೆ.
ಗಡ್ಡೆಯು ಇತರ ಅಂಗಗಳಿಗೆ ಹರಡಿದಾಗ, ಅಂದರೆ ನಾಲ್ಕನೇ ಹಂತದಲ್ಲಿ, ಐದು ವರ್ಷ ಬದುಕುಳಿಯುವ ದರವು ಕೇವಲ 4 ಪ್ರತಿಶತಕ್ಕೆ ಇಳಿಯುತ್ತೆ. ಆದುದರಿಂದ ಕೆಲವೊಂದು ರೋಗ ಲಕ್ಷಣಗಳು (Symptoms) ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ಪರೀಕ್ಷೆ ಮಾಡಿಸೋದು ಉತ್ತಮ. ಇಲ್ಲವಾದರೆ ಸಾವಿನ ಕದ ಶೀಘ್ರವೇ ತಟ್ಟಬೇಕಾದ ಪರಿಸ್ಥಿತಿ ಬರುತ್ತೆ ಎಚ್ಚರವಾಗಿರಿ.
ನೀವು ಸಿಗರೇಟೇ ಸೇದಬೇಕಾಗಿಲ್ಲ.
ಹೆಚ್ಚಿನ ಸಂದರ್ಭಗಳಲ್ಲಿ, ಸಿಗರೇಟಿನ ಸ್ಮೋಕ್(Smoke) ಶ್ವಾಸಕೋಶದ ಕ್ಯಾನ್ಸರ್ ಗೆ ಮುಖ್ಯ ಕಾರಣವೆಂದು ಕಂಡುಬಂದಿದೆ ಮತ್ತು ಇತರ ರೀತಿಯ ಧೂಮಪಾನವು ಕ್ಯಾನ್ಸರ್ ಗೆ ಒಂದು ಪ್ರಮುಖ ಅಂಶವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಎಂದಿಗೂ ಧೂಮಪಾನ ಮಾಡದ ಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಹ ಕಂಡುಬರುತ್ತಿದೆ. ಶ್ವಾಸಕೋಶದ ಕ್ಯಾನ್ಸರ್ ನ ಯಾವುದೇ ನಿರ್ದಿಷ್ಟ ಆರಂಭಿಕ ರೋಗಲಕ್ಷಣಗಳಿಲ್ಲ.
ರೋಗಲಕ್ಷಣಗಳು ಮತ್ತು ಚಿಕಿತ್ಸೆ
ಶ್ವಾಸಕೋಶದ ಕ್ಯಾನ್ಸರ್ ನ ಅತ್ಯಂತ ಸಾಮಾನ್ಯ ಲಕ್ಷಣವೆಂದರೆ ಕೆಮ್ಮು(Cough), ಇದು ಕ್ರಮೇಣ ತೀವ್ರವಾಗುತ್ತೆ ಮತ್ತು ಎಂದಿಗೂ ವಾಸಿಯಾಗೋದಿಲ್ಲ. ಔಷಧಿಯನ್ನು ತಿನ್ನುವಾಗ ಸ್ವಲ್ಪ ಕಮ್ಮಿಯಾಗುತ್ತೆ. ನಂತರ ಅದು ಪುನಃ ಪ್ರಾರಂಭವಾಗುತ್ತೆ. ಸ್ವಲ್ಪ ಸಮಯದ ನಂತರ, ಶ್ವಾಸಕೋಶದ ಮೇಲೆ ಊತ, ಕೆಮ್ಮುವಾಗ ರಕ್ತಸ್ರಾವ, ಉಸಿರಾಟದ ತೊಂದರೆ ಮತ್ತು ನೋವು ಸಹ ಇದರ ಲಕ್ಷಣಗಳಾಗಿವೆ.
ಚಿಕಿತ್ಸೆಯ ಬಗ್ಗೆ ಹೇಳೋದಾದ್ರೆ, ಸರ್ಜರಿ, ಕೀಮೋಥೆರಪಿ(Chemotherapy) ಮತ್ತು ರೇಡಿಯೇಶನ್ ಚಿಕಿತ್ಸೆ ಪಡೆಯಬಹುದು. ಶ್ವಾಸಕೋಶದ ಕ್ಯಾನ್ಸರ್ ನ ವಿಧ, ಹಂತ ಮತ್ತು ಇತರ ಅಂಶಗಳ ಆಧಾರದ ಮೇಲೆ ವೈದ್ಯರು ಸರಿಯಾದ ಚಿಕಿತ್ಸೆ ನಿರ್ಧರಿಸುತ್ತಾರೆ. ಇದು ಪ್ರಾಥಮಿಕ ಹಂತದಲ್ಲಿದ್ದರೆ, ಚೇತರಿಕೆಯ ಸಾಧ್ಯತೆಗಳು ಹೆಚ್ಚು. ಕೊನೆಯ ಹಂತದ ಮೆಟಾಸ್ಟಾಸಿಸ್ (ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹರಡೋದು) ಇದ್ದಲ್ಲಿ, ಚಿಕಿತ್ಸೆಯ ನಂತರವೂ, ರೋಗಿಯು ಕೆಲವು ತಿಂಗಳುಗಳು ಅಥವಾ ಕೆಲವು ವರ್ಷಗಳವರೆಗೆ ಬದುಕುಳಿಯಲು ಸಾಧ್ಯವಾಗುತ್ತೆ ಅಷ್ಟೇ.