Health Tips: ರಾತ್ರಿ ಯಾರಪ್ಪ ಬ್ರಶ್ ಮಾಡ್ತಾರೆ ಅನ್ನೋ ಸೋಂಬೇರಿಗಳಿಗೆ ಕಾಡುತ್ತೆ ಹೃದಯ ರೋಗ!
ನೀವು ರಾತ್ರಿ ಮಲಗೋ ಮೊದ್ಲು ಬ್ರಶ್ ಮಾಡ್ತೀರಾ? ಇಲ್ವಾ? ಇಲ್ಲ ಅಂತ ಅಂದ್ರೆ ಇವತ್ತಿನಿಂದಲೇ ಹಲ್ಲಿನ ಸ್ವಚ್ಚತೆಯ ಬಗ್ಗೆ ಗಮನ ಹರಿಸಿ. ಇಲ್ಲಾಂದ್ರೆ ಹೃದಯದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀಳಬಹುದು ಎಚ್ಚರ.

ಪ್ರತಿಯೊಬ್ಬರೂ ಬೆಳಗ್ಗೆ ಎದ್ದು ಬ್ರಷ್ (brushing) ಮಾಡುವ ಅಭ್ಯಾಸ ಹೊಂದಿದ್ದಾರೆ. ಆದರೆ ರಾತ್ರಿ ಮಲಗುವ ಮುನ್ನವೇ ಹಲ್ಲುಗಳನ್ನು ಸ್ವಚ್ಛಗೊಳಿಸುವವರು ಬಹಳ ಕಡಿಮೆ. ದಿನಕ್ಕೆ ಎರಡು ಬಾರಿ ಬ್ರಷ್ ಮಾಡದಿರುವುದು ಹಲ್ಲು ಮತ್ತು ಒಸಡುಗಳನ್ನು ಹಾನಿಗೊಳಿಸುತ್ತದೆ ಎಂದು ತಿಳಿದಿದ್ದರೂ, ಜನರು ಅಜಾಗರೂಕರಾಗಿದ್ದಾರೆ. ಇದೀಗ ಬಾಯಿಯ ನೈರ್ಮಲ್ಯದ ಬಗ್ಗೆ ಒಂದು ಆಘಾತಕಾರಿ ಸಂಗತಿ ತಿಳಿದು ಬಂದಿದೆ.
ರಾತ್ರಿ ಮಲಗುವ ಮೊದಲು ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು ಎಂದು ಬಾಲ್ಯದಿಂದಲೂ ನಮಗೆ ಹಿರಿಯರು ಹೇಳಿರೋದನ್ನು ಕೇಳಿರ್ತೀವಿ. ಆದರೆ ಬಾಲ್ಯದಲ್ಲಿ ಹೇಳಿದ್ದನ್ನು, ನಾವು ಅಲ್ಲೇ ಮರೆತು ಬಿಡ್ತೀವಿ. ರಾತ್ರಿ ಮಲಗುವ ಮೊದಲು ಬ್ರಷ್ ಮಾಡದ ಅಥವಾ ಬಾಯಿಯ ಆರೋಗ್ಯವನ್ನು (oral health) ನಿರ್ಲಕ್ಷಿಸುವವರಲ್ಲಿ ನೀವೂ ಒಬ್ಬರಾಗಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ ಮಾತ್ರ.
ಇತ್ತೀಚೆಗೆ, ಕಳಪೆ ಬಾಯಿಯ ಆರೋಗ್ಯದ ಬಗ್ಗೆ ಆಘಾತಕಾರಿ ವಿಷಯವೊಂದು ಬಹಿರಂಗವಾಗಿದೆ. ಅದೇನೆಂದರೆ ತಜ್ಞರ ಪ್ರಕಾರ, ರಾತ್ರಿಯಲ್ಲಿ ಬ್ರಷ್ ಮಾಡದಿರುವುದು ಒಸಡುಗಳನ್ನು ಹಾಳುಮಾಡುವುದಲ್ಲದೆ, ಹೃದಯದ ಆರೋಗ್ಯದ (heart health) ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆಯಂತೆ.
ಜಪಾನ್‌ನಲ್ಲಿ ನಡೆಸಿದ ಸಂಶೋಧನೆಯು ಬಾಯಿಯ ನೈರ್ಮಲ್ಯ ಮತ್ತು ಪರಿಧಮನಿಯ ಹೃದ್ರೋಗದ ನಡುವೆ ಬಲವಾದ ಸಂಬಂಧವನ್ನು ಕಂಡುಹಿಡಿದಿದೆ. ಹಾಗಾಗಿ ಮಲಗುವ ಮೊದಲು ಬ್ರಷ್ ಮಾಡುವುದು ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲ, ಇದು ಹೃದಯಕ್ಕೂ ಪ್ರಯೋಜನಕಾರಿಯಾಗಿದೆ.
ಸಂಶೋಧನೆ ಏನು ಹೇಳುತ್ತೆ?
ಸಂಶೋಧನೆಯಲ್ಲಿ, 2013 ಮತ್ತು 2016 ರ ನಡುವೆ ಜಪಾನ್ನ ಒಸಾಕಾ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಂದ 1,675 ರೋಗಿಗಳನ್ನು ಆಯ್ಕೆ ಮಾಡಲಾಗಿತ್ತು. ಅವರನ್ನ ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿತ್ತು. ಮೊದಲನೆಯ ವರ್ಗ ದಿನಕ್ಕೆ ಎರಡು ಬಾರಿ ಬೆಳಿಗ್ಗೆ ಮತ್ತು ಸಂಜೆ ಬ್ರಷ್ ಮಾಡುತ್ತಿದ್ದರು. ಎರಡನೆಯ ವರ್ಗ ರಾತ್ರಿಯಲ್ಲಿ ಮಾತ್ರ ಬ್ರಷ್ ಮಾಡುವವರು. ಮೂರನೆಯ ವರ್ಗವು ಬೆಳಿಗ್ಗೆ ಮಾತ್ರ ಬ್ರಷ್ ಮಾಡುವವರನ್ನು ಒಳಗೊಂಡಿತ್ತು. ನಾಲ್ಕನೇ ವರ್ಗದಲ್ಲಿ, ಬ್ರಷ್ ಮಾಡದ ಜನರನ್ನು ಇರಿಸಲಾಯಿತು.
ಸಂಶೋಧಕರು ಭಾಗವಹಿಸುವವರ ವಯಸ್ಸು, ಲಿಂಗ ಮತ್ತು ಧೂಮಪಾನ ಅಭ್ಯಾಸವನ್ನು ಸಹ ಗಣನೆಗೆ ತೆಗೆದುಕೊಂಡರು. ಇದಲ್ಲದೆ, ಅವರ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಸಹ ಪರಿಶೀಲಿಸಲಾಯಿತು. ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಹೃದಯ ವೈಫಲ್ಯ (heart failure), ಹೃದಯ ಲಯ ಅಸ್ವಸ್ಥತೆ, ಹೃದಯಾಘಾತ, ಎದೆ ನೋವಿನಂತಹ ಹೃದಯ ಸಂಬಂಧಿತ ಕಾಯಿಲೆಗಳ ಮೇಲೆ ಸಂಶೋಧನೆ ಕೇಂದ್ರೀಕರಿಸಿದೆ.
ದಿನಕ್ಕೆ ಎರಡು ಬಾರಿ ಬ್ರಷ್ ಮಾಡುವವರು ಮತ್ತು ರಾತ್ರಿಯಲ್ಲಿ ಮಾತ್ರ ಬ್ರಷ್ ಮಾಡುವವರು ಬ್ರಷ್ ಮಾಡದವರಿಗಿಂತ ಕಡಿಮೆ ಹೃದ್ರೋಗದ ಸಮಸ್ಯೆಯನ್ನು ಹೊಂದಿದ್ದಾರೆ ಎಂದು ಅದು ಕಂಡುಹಿಡಿದಿದೆ. ಬೆಳಿಗ್ಗೆ ಹಲ್ಲುಜ್ಜುವುದು ಸಾಕಾಗುವುದಿಲ್ಲ ಮತ್ತು ರಾತ್ರಿಯಲ್ಲಿ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಅವಶ್ಯಕ ಎಂದು ಸಂಶೋಧನೆ ಬಹಿರಂಗಪಡಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.