ಬಳಿ ಕೂದಲು ಹೆಚ್ಚಾಗುತ್ತಿದೆಯಾ? ಈ ವಿಟಮಿನ್ಸ್ ಕೊರತೆ ಸರಿದೂಗಿಸುವುದು ಹೇಗೆ?
ಬಳಿ ಕೂದಲು ಹೆಚ್ಚಾಗುತ್ತಿದೆಯಾ? ಈ ವಿಟಮಿನ್ಸ್ ಕೊರತೆ ಸರಿದೂಗಿಸುವುದು ಹೇಗೆ? ವಯಸ್ಸು ಮತ್ತು ಜೆನೆಟಿಕ್ಸ್ ಮಾತ್ರವಲ್ಲ, ಕೆಲವು ವಿಟಮಿನ್ಸ್ ಮತ್ತು ಖನಿಜಗಳ ಕೊರತೆಯೂ ಇದಕ್ಕೆ ಕಾರಣವಾಗಬಹುದು. ಸೂಕ್ತ ಪೋಷಕಾಂಶಗಳು ಕೂದಲಿನ ನೈಸರ್ಗಿಕ ಬಣ್ಣ ಉಳಿಸಿಕೊಳ್ಳಲು ಹೇಗೆ ಸಹಾಯ ಮಾಡುತ್ತವೆ?

ಕೂದಲು ಬಿಳಿಯಾದ್ರೆ ಏನರ್ಥ?
ಕೂದಲು ಬಿಳಿಯಾದ್ರೆ ಅಪ್ಸೆಟ್ ಆಗೋದು ಸಹಜ. ವಯಸ್ಸಾದ ಮೇಲಾದರೆ ಓಕೆ. ತೀರಾ ಚಿಕ್ಕ ವಯಸ್ಸಿನಲ್ಲಿಯೇ ನೆರೆಗೂದಲು ಕಾಣಿಸಿಕೊಂಡರೆ ಆತಂಕ ಮತ್ತಷ್ಟೂ ಹೆಚ್ಚಾಗುತ್ತದೆ. ಇದಕ್ಕೆ ವಿಟಮಿನ್ಸ್ ಕೊರತೆಯೇ ಕಾರಣ ಅನ್ನುತ್ತೆ ಕೆಲವು ಸಂಶೋಧನೆಗಳು. 2022ರಲ್ಲಿ International Journal of Dermatologyನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಯಸ್ಸಿಗೂ ಮುನ್ನ ಕೂದಲು ಬಿಳಿಯಾಗೋವರಲ್ಲಿ ವಿಟಮಿನ್ B12, ಜಿಂಕ್, ಮ್ಯಾಗ್ನೀಷಿಯಂ ಮತ್ತು ಕಾಪರ್ ಮಟ್ಟ ಕಡಿಮೆ ಇರುತ್ತದೆ. ಸಾಮಾನ್ಯ ಕೂದಲು ಬಣ್ಣ ಇರುವವರಿಗಿಂತ ಇವರಲ್ಲಿ ಈ ಪೋಷಕಾಂಶಗಳ ಕೊರತೆ ಹೆಚ್ಚಿರುತ್ತದೆ.
ಕೂದಲು ಬಿಳಿಯಾಗಲು ಕಾರಣ
ಈ ಎಲ್ಲಾ ಪೋಷಕಾಂಶಗಳು ಮೆಲನಿನ್ ಉತ್ಪಾದನೆಗೆ ಅತ್ಯಗತ್ಯ. ಮೆಲನಿನ್ ಅಂದ್ರೇ ಕೂದಲಿಗೆ ಅದರ ನೈಸರ್ಗಿಕ ಬಣ್ಣ ಕೊಡುವ ಅಂಶ. ದೇಹಕ್ಕೆ ಬೇಕಾದಷ್ಟು ವಿಟಮಿನ್ ಸಿಗದಿದ್ದರೆ, ಮೆಲನೊಸೈಟ್ಸ್ ಸರಿಯಾಗಿ ಕೆಲಸ ಮಾಡಲ್ಲ. ಪರಿಣಾಮವಾಗಿ ಕೂದಲು ವಯಸ್ಸಿಗೆ ಮುನ್ನವೇ ಬೇಗ ಬಿಳಿಯಾಗುತ್ತದೆ. ಬಿಳಿಯಾದ ಕೂದಲನ್ನು ನ್ಯಾಚುರಲ್ ಆಗಿಯೇ ಕಪ್ಪು ಮಾಡಲು ಅಸಾಧ್ಯ. ಆದರೆ, ಸೂಕ್ತ ಆಹಾರ ಮತ್ತು ವಿಟಮಿನ್ ಸೇವನೆಯಿಂದ ಈ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು. ಯಾವ ಯಾವ ವಿಟಮಿನ್‌ಗಳು ಕೂದಲು ಬಿಳಿಯಾಗಲು ಕಾರಣವಾಗುತ್ತವೆ, ಯಾವ ಪೋಷಕಾಂಶಗಳು ಸಹಾಯ ಮಾಡುತ್ತವೆ, ಮತ್ತು ಅವನ್ನು ಆಹಾರದಲ್ಲಿ ಹೇಗೆ ಸೇರಿಸಿಕೊಳ್ಳಬೇಕು?.
ವಿಟಮಿನ್ ಕೊರತೆ
ವಿಟಮಿನ್ ಕೊರತೆ
ಕೂದಲಿನ ಬೇರುಗಳಲ್ಲಿ ಮೆಲನಿನ್ ಉತ್ಪಾದನೆ ಕಡಿಮೆಯಾದಾಗ ಕೂದಲು ಬಿಳಿಯಾಗುತ್ತದೆ. ವಯಸ್ಸು ಇದಕ್ಕೆ ಒಂದು ಕಾರಣವಾದರೂ, ವಿಟಮಿನ್ B12, B5 ಮತ್ತು D ಕೊರತೆಯಾದರೆ ಕೂದಲು ಬೇಗ ಬಿಳಿಯಾಗಬಹುದು. ಈ ವಿಟಮಿನ್‌ಗಳು ಮೆಲನೊಸೈಟ್ಸ್ ಕೆಲಸಕ್ಕೆ ತುಂಬಾ ಅಗತ್ಯ.
ವಿಟಮಿನ್ B12
ವಿಟಮಿನ್ B12 ಡಿಎನ್‌ಎ ನಿರ್ಮಾಣ ಮತ್ತು ರಕ್ತಕಣಗಳ ಉತ್ಪಾದನೆಗೆ ಬಹಳ ಮುಖ್ಯ. ದೇಹದಲ್ಲಿ B12 ಕಡಿಮೆ ಇದ್ದರೆ ಮೆಲನೊಸೈಟ್ಸ್ ಸರಿಯಾಗಿ ಕೆಲಸ ಮಾಡಲ್ಲ, ಅದರಿಂದ ಕೂದಲು ಬೇಗ ಬಿಳಿಯಾಗುತ್ತದೆ. ಮೊಟ್ಟೆ, ಹಾಲು, ಹಾಲಿನ ಉತ್ಪನ್ನಗಳು ಮತ್ತು ಫೋರ್ಟ್‌ಫೈಡ್ ಸೀರಲ್ಸ್ ಅನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಕೂದಲಿನ ಬಣ್ಣ ಉಳಿಸಿಕೊಳ್ಳಲು ಸಹಾಯವಾಗುತ್ತದೆ.
ವಿಟಮಿನ್ D
ಕೂದಲಿನ ಬೇರಿನ ಆರೋಗ್ಯಕ್ಕೆ ವಿಟಮಿನ್ D ಸಹಕರಿಸುತ್ತದೆ. ಸಂಶೋಧನೆಗಳ ಪ್ರಕಾರ, ವಿಟಮಿನ್ D ಕಡಿಮೆ ಇದ್ದವರಲ್ಲಿ ಬಿಳಿ ಕೂದಲು ಬೇಗ ಕಾಣಿಸಿಕೊಳ್ಳುತ್ತದೆ. ಸೂರ್ಯನ ಬೆಳಕು, ಕೊಬ್ಬಿನಾಂಶ ಹೆಚ್ಚಿರುವ ಮೀನು, ಫೋರ್ಟ್‌ಫೈಡ್ ಹಾಲು ಮತ್ತು ಮೊಟ್ಟೆಯ ಹಳದಿ ಭಾಗ ವಿಟಮಿನ್ D ಹೆಚ್ಚಿಸಬಲ್ಲದು.
ವಿಟಮಿನ್ B7 (ಬಯೋಟಿನ್)
ಬಯೋಟಿನ್ ಅಂದ್ರೇ ವಿಟಮಿನ್ B7. ಇದು ಕೂದಲು ಬೆಳೆಯಲು ಮತ್ತು ಬಲವಾಗಲು ಬೇಕು. ಬಯೋಟಿನ್ ಕೊರತೆ ಅಪರೂಪವಾದರೂ, ಇದರಿಂದ ಕೂದಲು ಉದುರುವುದು, ಬೇಗ ಬಿಳಿಯಾಗುವುದು ಸಾಧ್ಯ. ಕಾಯಿ ಬೀಜ, ಧಾನ್ಯಗಳು, ಮೊಟ್ಟೆ, ಬೇಳೆಕಾಳುಗಳು ಮತ್ತು ಹಸಿರು ಸೊಪ್ಪಿನಲ್ಲಿ ಬಯೋಟಿನ್ ಹೆಚ್ಚು ಸಿಗುತ್ತದೆ. ನಿಯಮಿತವಾಗಿ ಇವುಗಳನ್ನು ಸೇವಿಸಿದರೆ ಕೂದಲು ಗಟ್ಟಿಯಾಗಿ, ಚೆನ್ನಾಗಿ ಬೆಳೆಯುತ್ತದೆ.
ವಿಟಮಿನ್ B5 (ಪ್ಯಾಂಟೊಥೆನಿಕ್ ಆಸಿಡ್)
ರಕ್ತಕಣಗಳ ಉತ್ಪಾದನೆಗೆ ವಿಟಮಿನ್ B5 ಬೇಕು. ಕೂದಲಿನ ಬೇರುಗಳಿಗಿದು ಪೋಷಣೆ ನೀಡುತ್ತದೆ. ಇದರ ಕೊರತೆಯಿಂದ ಕೂದಲು ಬೇಗ ಬಿಳಿಯಾಗಬಹುದು. ಮೊಟ್ಟೆ, ಅವಕಾಡೊ, ಬೇಳೆಕಾಳುಗಳಲ್ಲಿ ಈ ವಿಟಮಿನ್ ಹೆಚ್ಚು ಇದೆ. ಇದು ದೇಹದಲ್ಲಿ ಶಕ್ತಿ ಉತ್ಪಾದನೆಗೂ ಹಾರ್ಮೋನ್ ಬ್ಯಾಲೆನ್ಸ್‌ಗೂ ಸಹಕಾರಿ.
ಕಾಪರ್, ಜಿಂಕ್ ಮತ್ತು ಐರನ್
ಮೆಲನಿನ್ ಉತ್ಪಾದನೆಗೆ ಕಾಪರ್ ನೇರವಾಗಿ ಸಹಾಯ ಮಾಡುತ್ತದೆ. ಜಿಂಕ್ ಕೂದಲಿನ ಟಿಶ್ಯೂ ರಿಪೇರಿ ಮಾಡಿ, ಕೂದಲಿನ ಬೇರುಗಳಿಗೆ ಕಬ್ಬಿಣಾಂಶ ಆಮ್ಲಜನಕವನ್ನು ಪೂರೈಸುತ್ತದೆ. ಅಧ್ಯಯನಗಳ ಪ್ರಕಾರ, ಬಿಳಿ ಕೂದಲು ಬೇಗಾದರೆ ಈ ಖನಿಜಗಳ ಕೊರತೆ ಹೆಚ್ಚು. ಕಾಯಿ, ಬೀಜ, ಹಸಿರು ಸೊಪ್ಪು, ಕಡಿಮೆ ಕೊಬ್ಬಿನ ಮಾಂಸ ತಿಂದ್ರೆ ಒಳ್ಳೇದು.
ಆರೋಗ್ಯಕರ ಕೂದಲಿಗೇನು ಮಾಡಬೇಕು?
- ಸಮತೋಲಿತ ಆಹಾರ ಸೇವನೆ ಮುಖ್ಯ. ಏನೇನು ತಿನ್ನಬೇಕು?
- ವಿಟಮಿನ್‌ಗಳುಳ್ಳ ಆಹಾರ ತಿನ್ನಿ: B12, D, B7, B5, ಕಾಪರ್, ಜಿಂಕ್, ಐರನ್.
- ಅಗತ್ಯವಿದ್ದರೆ ಸಪ್ಲಿಮೆಂಟ್: ಡಾಕ್ಟರ್ ಸಲಹೆ ಕಡ್ಡಾಯ.
- ಸೂರ್ಯನ ಬೆಳಕು: ದಿನಕ್ಕೆ ಸ್ವಲ್ಪ ಹೊತ್ತು ಬಿಸಿಲಲ್ಲಿ ಇರಿ.
- ಸ್ಟ್ರೆಸ್ ಕಡಿಮೆ ಮಾಡಿ: ಯೋಗ, ಧ್ಯಾನ, ಉಸಿರಾಟ ಅಭ್ಯಾಸ ಮಾಡಿ.
- ಆರೋಗ್ಯ ತಪಾಸಣೆ: ನಿಯಮಿತ ಚೆಕ್‌ಅಪ್‌ನಿಂದ ಕೊರತೆ ಬೇಗ ಪತ್ತೆಯಾಗುತ್ತದೆ.
ಕೂದಲಿನ ನೈಸರ್ಗಿಕ ಬಣ್ಣವನ್ನು ಹೇಗೆ ಉಳಿಸಬಹುದು?
ಸರಿಯಾದ ವಿಟಮಿನ್ ಸೇವನೆಯಿಂದ ಮೆಲನೊಸೈಟ್ಸ್ ಚೆನ್ನಾಗಿ ಕೆಲಸ ಮಾಡುತ್ತವೆ. B12, D, B7, B5 ಜೊತೆಗೆ ಕಾಪರ್, ಜಿಂಕ್, ಐರನ್ ಸೇರಿ ಕೂದಲು ಬಿಳಿಯಾಗುವುದನ್ನು ನಿಧಾನಗೊಳಿಸುತ್ತವೆ. ಇದರಿಂದ ಕೂದಲು ಬಣ್ಣ ಮಾತ್ರವಲ್ಲ, ಒಟ್ಟಾರೆ ಕೂದಲಿನ ಆರೋಗ್ಯವೂ ಉತ್ತಮವಾಗುತ್ತದೆ. ವಂಶಪಾರಂಪರ್ಯ, ವಯಸ್ಸು ಮತ್ತು ವಿಟಮಿನ್ ಕೊರತೆ ಕೂದಲು ಬಿಳಿಯಾಗಲು ಕಾರಣವಾಗಬಹುದು. ಆದರೆ ಸರಿಯಾದ ಆಹಾರ, ಸ್ಟ್ರೆಸ್ ಕಂಟ್ರೋಲ್ ಮತ್ತು ಆರೋಗ್ಯದ ಮೇಲೆ ಗಮನ ಇಟ್ಟರೆ ಬಿಳುಪನ್ನು ನಿಧಾನಗೊಳಿಸಬಹುದು. ನಿಮ್ಮ ಕೂದಲು ಇನ್ನೂ ಹೆಚ್ಚು ಕಾಲ ಚೆನ್ನಾಗಿ ಕಾಣಲು ಇದು ಸಹಾಯ ಮಾಡುತ್ತದೆ.
ವಿಶೇಷ ಸೂಚನೆ:
ವಿಶೇಷ ಸೂಚನೆ: ಈ ಲೇಖನ ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಆಹಾರ ಬದಲಾವಣೆ ಮಾಡುವ ಮೊದಲು ಅರ್ಹ ವೈದ್ಯರ ಸಲಹೆ ಪಡೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

