ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡೋದ್ರಿಂದ ಎಷ್ಟೊಂದು ಲಾಭ
ಚಳಿಗಾಲದಲ್ಲಿ ತಣ್ಣೀರು ಸ್ನಾನ ಅಂದ್ರೆ ಗಡ ಗಡ ನಡುಗುವವರೇ ಜಾಸ್ತಿ. ತರಗುಟ್ಟುವ ಚಳಿಯ ನಡುವೆ ತಣ್ಣೀರು ಸ್ನಾನ ಮಾಡಲು ಬಹುತೇಕರು ಇಷ್ಟಪಡುವುದಿಲ್ಲ. ಆದರೆ ಕೆಲವರು ಯಾವ ಕಾಲವಾದರೂ ತಣ್ಣೀರಿನಿಂದಲೇ ಸ್ನಾನ ಮಾಡ್ತಾರೆ. ಚಳಿಗಾಲದಲ್ಲೂ ಕೂಡ ತಣ್ಣೀರಿನಿಂದ ಸ್ನಾನ ಮಾಡುವವರು ಕೆಲವರಿದ್ದಾರೆ. ಆದರೆ ಹೀಗೆ ಸ್ನಾನ ಮಾಡಿದರೆ ಏನಾಗುತ್ತೆ ಗೊತ್ತಾ?
ದೇಹದ ಸ್ವಚ್ಛತೆಗಾಗಿ ಪ್ರತಿದಿನ ಸ್ನಾನ ಮಾಡುವುದು ಅಗತ್ಯ. ಸ್ನಾನ ಮಾಡುವುದರಿಂದ ದೇಹಕ್ಕೆ ಅಂಟಿಕೊಂಡಿರುವ ಮಣ್ಣು, ಧೂಳು, ಬ್ಯಾಕ್ಟೀರಿಯಾ, ವೈರಸ್‌ಗಳು ನಿವಾರಣೆಯಾಗಿ ದೇಹ ಶುಚಿಯಾಗುತ್ತದೆ. ತಜ್ಞರ ಪ್ರಕಾರ, ದೈನಂದಿನ ಸ್ನಾನವು ನಮ್ಮನ್ನು ಅನೇಕ ರೋಗಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಆದರೆ ನಮ್ಮಲ್ಲಿ ಹಲವರು ಕಾಲಕ್ಕೆ ತಕ್ಕಂತೆ, ಆರೋಗ್ಯದ ದೃಷ್ಟಿಯಿಂದ ಬಿಸಿ ನೀರು, ತಣ್ಣೀರಿನಿಂದ ಸ್ನಾನ ಮಾಡುತ್ತೇವೆ.
ಕೆಲವರು ಯಾವ ಋತುವಿನಲ್ಲಾದರೂ ಬಿಸಿನೀರಿನಿಂದ ಸ್ನಾನ ಮಾಡಿದರೆ ಮತ್ತೆ ಕೆಲವರು ತಣ್ಣೀರಿನಿಂದ ಸ್ನಾನ ಮಾಡ್ತಾರೆ. ಆದರೆ ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಮಾಡುವವರೂ ಇದ್ದಾರೆ. ಆದರೆ ಇದು ಸಾಹಸ ಅಂತಾನೆ ಹೇಳ್ಬೇಕು. ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಅಂದ್ರೆ ಗಡಗಡ ನಡುಗುವವರಿದ್ದಾರೆ. ಆದರೆ ಪ್ರಾಚೀನ ಗ್ರೀಕರು, ರಷ್ಯನ್ನರಿಂದ ಹಿಡಿದು ಇಂದಿನ ಕ್ರೀಡಾಪಟುಗಳು, ಸೆಲೆಬ್ರಿಟಿಗಳು ಚಳಿಗಾಲದಲ್ಲೂ ತಣ್ಣೀರಿನ ಸ್ನಾನವನ್ನೇ ಮಾಡ್ತಾರೆ. ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಮಾಡಿದ್ರೆ ಏನಾಗುತ್ತೆ ಅಂತ ಈಗ ತಿಳಿದುಕೊಳ್ಳೋಣ ಬನ್ನಿ.
ರಕ್ತ ಪರಿಚಲನೆ ಸುಧಾರಿಸುತ್ತದೆ
ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಅಂದ್ರೆ ಹೆದರುವವರು ತುಂಬಾ ಜನ ಇರ್ತಾರೆ. ಆದರೆ ಈ ಋತುವಿನಲ್ಲೂ ನೀವು ತಣ್ಣೀರಿನಿಂದ ಸ್ನಾನ ಮಾಡಿದ್ರೆ ಒಳ್ಳೆಯ ಲಾಭಗಳನ್ನ ಪಡೀತೀರ. ಅದ್ರಲ್ಲಿ ಒಂದು ಸುಧಾರಿತ ರಕ್ತ ಪರಿಚಲನೆ. ಹೌದು, ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಿದ್ರೆ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ದೇಹದ ಎಲ್ಲಾ ಅಂಗಗಳಿಗೆ ರಕ್ತದ ಹರಿವು ಹೆಚ್ಚಾಗಿ ಅವು ಚೆನ್ನಾಗಿ ಕೆಲಸ ಮಾಡುತ್ತವೆ.
ಚುರುಕುತನ: ನೀವು ಪ್ರತಿದಿನ ಬೆಳಿಗ್ಗೆ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ಚರ್ಮಕ್ಕೆ ವಿಶ್ರಾಂತಿ ಸಿಗುತ್ತದೆ. ಅಲ್ಲದೆ ನಿಮ್ಮ ಉಸಿರಾಟದ ವೇಗ ಕೂಡ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ದೇಹವು ಆಮ್ಲಜನಕವನ್ನು ಹೆಚ್ಚು ತೆಗೆದುಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ನಾವು ಚುರುಕಾಗಿರುತ್ತೇವೆ.
ರೋಗನಿರೋಧಕ ಶಕ್ತಿ : ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಿದರೆ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ರೋಗನಿರೋಧಕ ಕಣಗಳ ಕಾರ್ಯಚಟುವಟಿಕೆ ಹೆಚ್ಚಾಗುತ್ತದೆ. ಅಂದರೆ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಜ್ವರ ಮುಂತಾದ ಅನಾರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಚರ್ಮ ಮತ್ತು ಕೂದಲಿನ ಆರೋಗ್ಯ
ಬಿಸಿ ನೀರಿಗಿಂತ ತಣ್ಣೀರಿನಿಂದ ಸ್ನಾನ ಮಾಡಿದರೆ ನಿಮ್ಮ ಕೂದಲಿನಿಂದ ಹೆಚ್ಚುವರಿ ಎಣ್ಣೆ, ಧೂಳು, ಮಣ್ಣು ನಿವಾರಣೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಂದರೆ ತಣ್ಣೀರು ಚಳಿಗಾಲದಲ್ಲಿ ನಿಮ್ಮ ಚರ್ಮ ಒಣಗದಂತೆ ತಡೆಯಲು ಸಹಾಯ ಮಾಡುತ್ತದೆ. ಇದು ನಿಮ್ಮ ಕೂದಲು ಮತ್ತು ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಸ್ನಾಯು ನೋವಿನಿಂದ ಪರಿಹಾರ
ಸ್ನಾಯು ನೋವು ಇರುವವರು ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಮಾಡಿದರೆ ಒಳ್ಳೆಯದು. ಏಕೆಂದರೆ ತಣ್ಣೀರು ಸ್ನಾಯು ನೋವಿನಿಂದ ಪರಿಹಾರ ನೀಡಲು ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ತಣ್ಣೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ಸ್ನಾಯುಗಳು ಸಡಿಲಗೊಂಡು ಸ್ನಾಯು ನೋವು ಕಡಿಮೆಯಾಗುತ್ತದೆ.
ಮಾನಸಿಕ ಸ್ಥಿತಿ ಸುಧಾರಿಸುತ್ತದೆ
ತಣ್ಣೀರು ನಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತಣ್ಣೀರು ನಮ್ಮ ದೇಹದಲ್ಲಿ ಡೋಪಮೈನ್, ಸಿರೊಟೋನಿನ್ ಮಟ್ಟವನ್ನು ಸುಧಾರಿಸುತ್ತದೆ. ಇದರಿಂದ ಒತ್ತಡ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ನಿಮಗೆ ಉಲ್ಲಾಸದ ಅನುಭವ ನೀಡುತ್ತದೆ.
ಇವುಗಳನ್ನು ನೆನಪಿನಲ್ಲಿಡಿ
ತಣ್ಣೀರಿನ ಸ್ನಾನವು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ತಣ್ಣೀರನ್ನು ದೇಹದ ಮೇಲೆ ಸುರಿಯುವುದರಿಂದ ಹೃದಯಾಘಾತದ ಅಪಾಯವಿರುತ್ತದೆ. ಆದ್ದರಿಂದ ತಣ್ಣೀರನ್ನು ನೇರವಾಗಿ ತಲೆಯ ಮೇಲೆ ಸುರಿಯದೆ, ಮೊದಲು ಪಾದಗಳಿಂದ ದೇಹವನ್ನು ತಣ್ಣೀರಿನಿಂದ ತೊಳೆಯಲು ಪ್ರಾರಂಭಿಸಬೇಕು. ಕೆಮ್ಮು, ಜ್ವರ, ನೆಗಡಿ, ಹೃದ್ರೋಗ, ಹೃದಯ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ತಣ್ಣೀರಿನಿಂದ ಸ್ನಾನ ಮಾಡಬಾರದು.