6 ವರ್ಷದಿಂದ ಹಾಸಿಗೆ ಹಿಡಿದಿದ್ದ ಯುವಕನ ಜೀವ ಉಳಿಸಿದ ವೈದ್ಯರು, ಇತಿಹಾಸ ಸೃಷ್ಟಿಸಿದ ಋಷಿಕೇಶದ ಏಮ್ಸ್
ಕುಂಬಳಕಾಯಿ ಗಾತ್ರದ ಗೆಡ್ಡೆಯಿಂದಾಗಿ ಯುವಕನಿಗೆ ಕುಳಿತುಕೊಳ್ಳಲು ಅಥವಾ ಮಲವಿಸರ್ಜನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಉತ್ತರ ಪ್ರದೇಶ ಮತ್ತು ದೆಹಲಿಯಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ತೋರಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಕೊನೆಗೆ…

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ 27 ವರ್ಷದ ರೋಗಿಯ ಕಾಲಿನಿಂದ 35 ಕೆಜಿ ತೂಕದ ಬೋನ್ ಟ್ಯೂಮರ್ ಅನ್ನು ಋಷಿಕೇಶದ ಏಮ್ಸ್ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ದಿನಗೂಲಿ ನೌಕರ ಮೊಹಮ್ಮದ್ ಸಲ್ಮಾನ್ ಕಳೆದ ಆರು ವರ್ಷಗಳಿಂದ ಕಾರ್ಟಿಲೆಜ್‌ನಲ್ಲಿ ಹುಟ್ಟುವ ಅಪರೂಪದ ಮೂಳೆ ಕ್ಯಾನ್ಸರ್ ಕೊಂಡ್ರೊಸಾರ್ಕೊಮಾ(Chondrosarcoma)ದಿಂದ ಬಳಲುತ್ತಿದ್ದರು.
ಮೊಹಮ್ಮದ್ ಸಲ್ಮಾನ್ ತೊಡೆಯ ಬಳಿ ಮೊದಲು ಸಣ್ಣ ಊತವಾಗಿ ಇದು ಪ್ರಾರಂಭವಾಯಿತು. ಆದರೆ ಕಳೆದ ಆರು ತಿಂಗಳಲ್ಲಿ ಮಾರಣಾಂತಿಕ, ಕ್ಯಾನ್ಸರ್ ಗೆಡ್ಡೆಯಾಗಿ ಬೆಳೆದು ಓಡಾಡಲು ಬರದಂತಾಗಿ ಹಾಸಿಗೆ ಹಿಡಿದರು. ಕುಂಬಳಕಾಯಿ ಗಾತ್ರದ ಗೆಡ್ಡೆಯಿಂದಾಗಿ ಯುವಕನಿಗೆ ಕುಳಿತುಕೊಳ್ಳಲು ಅಥವಾ ಮಲವಿಸರ್ಜನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಉತ್ತರ ಪ್ರದೇಶ ಮತ್ತು ದೆಹಲಿಯಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ತೋರಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಕೊನೆಗೆ ಸಲ್ಮಾನ್ ಋಷಿಕೇಶದ ಏಮ್ಸ್‌ಗೆ ಬಂದರು.
ಬೋನ್ ಟ್ಯೂಮರ್ ಗಾತ್ರ ದೊಡ್ಡದಿದ್ದರಿಂದ ನಡೆಯಲು ಅಥವಾ ದಿನನಿತ್ಯದ ಚಟುವಟಿಕೆಗಳನ್ನು ನಡೆಸಲು ಮೊಹಮ್ಮದ್ ಸಲ್ಮಾನ್ ಅವರಿಗೆ ಸಾಧ್ಯವಾಗುತ್ತಿರಲಿಲ್ಲ ಎಂದು ವೈದ್ಯಕೀಯ ತಂಡ ಮಂಗಳವಾರ ತಿಳಿಸಿದೆ. ಆರು ಗಂಟೆಗಳ ಕಾಲ ನಡೆದ, ಹೆಚ್ಚಿನ ಅಪಾಯದಿಂದ ಕೂಡಿದ್ದ ಸಂಕೀರ್ಣವಾದ ಈ ಶಸ್ತ್ರಚಿಕಿತ್ಸಾ ವಿಧಾನವನ್ನು ಜೂನ್ 9 ರಂದು ನಡೆಸಲಾಯಿತು.
"ಗಡ್ಡೆಯ ಗಾತ್ರ ಮತ್ತು ತೂಕದಿಂದಾಗಿ ಶಸ್ತ್ರಚಿಕಿತ್ಸೆ ಹೆಚ್ಚು ಸವಾಲಿನದ್ದಾಗಿತ್ತು, ಇದನ್ನು ತೆಗೆದ ನಂತರ 34.7 ಕೆಜಿ (53x24x19 ಇಂಚುಗಳು) ಎಂದು ದೃಢಪಡಿಸಲಾಯಿತು. ಇದರ ಸಂಪೂರ್ಣ ಗಾತ್ರವು MRI ಸ್ಕ್ಯಾನ್‌ಗಳನ್ನು ಕಷ್ಟಕರವಾಗಿಸಿತ್ತು. ಆದ್ದರಿಂದ ರಕ್ತ ಪೂರೈಕೆಯನ್ನು ನಿರ್ಣಯಿಸಲು ಆಂಜಿಯೋಗ್ರಫಿಯನ್ನು ಮೊದಲೇ ನಡೆಸಲಾಯಿತು" ಎಂದು ಡಾ. ಧಿಂಗ್ರಾ ಹೇಳಿದರು.
"ಈ ಶಸ್ತ್ರಚಿಕಿತ್ಸೆ ಆಸ್ಪತ್ರೆಗೆ ಹೊಸ ಮಾನದಂಡವನ್ನು ಸ್ಥಾಪಿಸಿದ್ದಲ್ಲದೆ, ಅಪರೂಪದ ಮತ್ತು ಸಂಕೀರ್ಣ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತದೆ" ಎಂದು ಋಷಿಕೇಶದ ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರೊಫೆಸರ್ ಮೀನು ಸಿಂಗ್ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ, ಸಲ್ಮಾನ್ ವಾರ್ಡ್‌ನಲ್ಲಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಡಿಸ್ಮಾರ್ಜ್ ಆಗುವ ನಿರೀಕ್ಷೆಯಿದೆ. "ನನಗೆ ಹೊಸ ಜೀವನಕ್ಕೆ, ಹೊಸ ತಿರುವು ನೀಡಿದ್ದಕ್ಕಾಗಿ ಮತ್ತು ಈ ಗೆಡ್ಡೆಯಿಂದ ಉಂಟಾದ ನೋವಿನಿಂದ ನನ್ನನ್ನು ಮುಕ್ತಗೊಳಿಸಿದ್ದಕ್ಕಾಗಿ ನಾನು ವೈದ್ಯರಿಗೆ ಕೃತಜ್ಞನಾಗಿದ್ದೇನೆ" ಎಂದು ಸಲ್ಮಾನ್ ಕೃತಜ್ಞತೆ ತಿಳಿಸಿದ್ದಾರೆ.