ಫಿಕಲ್ ಇನ್‌ಸ್ಟಂಟ್ ಪೌಡರ್; ಬೇಕೆನಿಸಿದಾಗ 5 ನಿಮಿಷದಲ್ಲಿ ಮಾಡ್ಕೊಳ್ಳಿ ಫ್ರೆಶ್ ಉಪ್ಪಿನಕಾಯಿ
ಮನೆಯಲ್ಲಿಯೇ ಇನ್‌ಸ್ಟಂಟ್ ಉಪ್ಪಿನಕಾಯಿ ಪುಡಿಯನ್ನು ಸುಲಭವಾಗಿ ತಯಾರಿಸಬಹುದು. ಈ ಸಿದ್ಧಪಡಿಸಿದ ಪುಡಿಯಿಂದ ಮಾವಿನಕಾಯಿ, ನೆಲ್ಲಿಕಾಯಿ, ಕ್ಯಾರೆಟ್‌ನಂತಹ ತರಕಾರಿಗಳನ್ನು ಬಳಸಿ ಬೇಕೆಂದಾಗ ರುಚಿಕರವಾದ ಮತ್ತು ತಾಜಾ ಉಪ್ಪಿನಕಾಯಿಯನ್ನು ನಿಮಿಷಗಳಲ್ಲಿ ಮಾಡಿಕೊಳ್ಳಬಹುದು.

ಇನ್‌ಸ್ಟಂಟ್ ಪೌಡರ್
ಇಂದು ಮಾರುಕಟ್ಟೆಯಲ್ಲಿ ಬಗೆ ಬಗೆಯ ಉಪ್ಪಿನಕಾಯಿಗಳು ಸಿಗುತ್ತವೆ. ಕೆಲವರು ಮನೆಯಲ್ಲಿಯೇ ಉಪ್ಪಿನಕಾಯಿ ಹಾಕಿಕೊಂಡು ಸ್ಟೋರ್ ಮಾಡಿಕೊಂಡು ವರ್ಷಗಟ್ಟಲೇ ತಿಂತಾರೆ. ಆದ್ರೆ ಕೆಲವರಿಗೆ ಸ್ಟೋರ್ ಮಾಡುವ ವಿಧಾನ ತಿಳಿಯದ ಹಿನ್ನೆಲೆ ಅಂಗಡಿಯಿಂದ ತರಿಸಿಕೊಳ್ಳುತ್ತಾರೆ. ಈ ಇನ್‌ಸ್ಟಂಟ್ ಪೌಡರ್ ಇದ್ರೆ ಬೇಕೆನಿಸಿದಾಗ ರುಚಿಯಾದ ಬಗೆ ಬಗೆಯ ಫ್ರೆಶ್ ಉಪ್ಪಿನಕಾಯಿ ಮಾಡಿಕೊಳ್ಳಬಹುದು.
ಇನ್‌ಸ್ಟಂಟ್ ಪೌಡರ್ ಮಾಡಿಕೊಳ್ಳಲು ಬೇಕಾಗುವ ಸಾಮಾಗ್ರಿಗಳು
ಸಾಸವೆ: 100 ಗ್ರಾಂ, ಮೆಂತ್ಯೆ: 50 ಗ್ರಾಂ, ಬ್ಯಾಡಗಿ ಮೆಣಸಿನಕಾಯಿ: 10 ರಿಂದ 12, ಅರಿಶಿಣ ಪುಡಿ: 1 ಟೀ ಸ್ಪೂನ್, ಇಂಗು: 1/2 ಟೀ ಸ್ಪೂನ್, ಉಪ್ಪು: ರುಚಿಗೆ ತಕ್ಕಷ್ಟು
ಇನ್‌ಸ್ಟಂಟ್ ಪೌಡರ್ ಮಾಡುವ ವಿಧಾನ
ಮೊದಲಿಗೆ ಸಾಸವೆ ಮತ್ತು ಮೆಂತ್ಯೆಯನ್ನು ಪರಿಮಳ ಬರೋವರೆಗೂ ಹುರಿದುಕೊಳ್ಳಿ. ನಂತರ ಇದೇ ಕಾವಲಿ ಮೇಲೆ ಹಾಕಿ ಬ್ಯಾಡಗಿ ಮೆಣಸಿನಕಾಯಿಯನ್ನು ಸಹ ಹುರಿದುಕೊಳ್ಳಬೇಕು. ಮೂರು ಪದಾರ್ಥಗಳನ್ನು ಸಂಪೂರ್ಣವಾಗಿ ತಣ್ಣಗಾದ ಮೇಲೆ ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
ಸಾಸವೆ, ಮೆಂತ್ಯೆ ಮತ್ತು ಮೆಣಸಿನಕಾಯಿ ಮಿಶ್ರಣ
ಸಾಸವೆ, ಮೆಂತ್ಯೆ ಮತ್ತು ಮೆಣಸಿನಕಾಯಿ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಇಂಗು ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ನಿಮಗೆ ಇನ್‌ಸ್ಟಂಟ್ ಉಪ್ಪಿನಕಾಯಿ ಪೌಡರ್ ಸಿದ್ಧವಾಗುತ್ತದೆ. ಈ ಉಪ್ಪಿನಕಾಯಿ ಪೌಡರ್‌ನನ್ನು ಗಾಳಿಯಾಡದ ಗಾಜಿನ ಜಾರ್‌ನಲ್ಲಿ ತುಂಬಿಸಿಕೊಂಡ್ರೆ ಬೇಕೆನಿಸಿದಾಗ ಫ್ರೆಶ್ ಉಪ್ಪಿನಕಾಯಿ ಮಾಡಿಕೊಂಡು ಸವಿಯಬಹುದು.
ಈ ಮಿಶ್ರಣದಿಂದ ಯಾವೆಲ್ಲಾ ಉಪ್ಪಿನಕಾಯಿ ಮಾಡಬಹುದು?
ಬೆಳ್ಳುಳ್ಳಿ, ಕ್ಯಾರೆಟ್, ನೆಲ್ಲಿಕಾಯಿ, ಮಾವಿನಕಾಯಿ, ನಿಂಬೆಹಣ್ಣು ಸೇರಿದಂತೆ ನಿಮ್ಮಿಷ್ಟದ ತರಕಾರಿ ಬಳಸಿಕೊಂಡು ಉಪ್ಪಿನಕಾಯಿ ಮಾಡಿಕೊಳ್ಳಬಹುದು. ಉದಾಹರಣೆಗೆ ಮಾವಿನಕಾಯಿ ಸಣ್ಣ ತುಂಡುಗಳನ್ನು ಮಾಡಿಕೊಳ್ಳಿ. ಒಲೆ ಮೇಲೆ ಬಾಣಲೆ ಇಟ್ಕೊಂಡು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ನಿಮ್ಮ ಇನ್‌ಸ್ಟಂಟ್ ಪೌಡರ್ ಸೇರಿಸಿ. ನಂತರ ಒಲೆ ಆಫ್ ಮಾಡಿ ಮಾವಿನಕಾಯಿ ತುಂಡು ಸೇರಿಸಿದ್ರೆ ಇನ್‌ಸ್ಟಂಟ್ ಪಿಕಲ್ ರೆಡಿಯಾಗುತ್ತದೆ.
ಹುಳಿಗೆ ನಿಂಬೆಹಣ್ಣು
ಈ ರೀತಿ ಮಾಡಿರುವ ಉಪ್ಪಿನಕಾಯಿ ಹೆಚ್ಚು ದಿನ ಸ್ಟೋರ್ ಮಾಡಲು ಆಗಲ್ಲ. ಹಾಗಾಗಿ ಬೇಕಾದಷ್ಟು ಮಾತ್ರವನ್ನು ರೆಡಿ ಮಾಡಿಕೊಳ್ಳಿ. ಇನ್ನು ತರಕಾರಿ ಉಪ್ಪಿನಕಾಯಿ ಹಾಕುವ ಸಂದರ್ಭದಲ್ಲಿ ಹುಳಿಗೆ ನಿಂಬೆಹಣ್ಣು ಮಾಡಿಕೊಳ್ಳಿ. ಒಗ್ಗರಣೆ ಸಮಯದಲ್ಲಿ ಬೇಕಿದ್ರೆ ಮತ್ತೊಂದಿಷ್ಟು ಸಾಸವೆ, ಕೊಂಚ ಜೀರಿಗೆ ಸೇರಿಸಿಕೊಳ್ಳಬಹುದು. ಗೆಸ್ಟ್‌ಗಳು ಬಂದಾಗ ಈ ರೀತಿಯಲ್ಲಿ ಉಪ್ಪಿನಕಾಯಿ ಮಾಡಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

