ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ ಜಜ್ಜಿ ಮೆಣಸಿನಕಾಯಿಗೆ ಹೆಚ್ಚಿ ಮಾಡ್ಕೊಳ್ಳಿ ಮಸಾಲಾ ಚಿಲ್ಲಿ
ಹಸಿಮೆಣಸಿನಕಾಯಿಗಳನ್ನು ಎಣ್ಣೆಯಲ್ಲಿ ಹುರಿದು, ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ ಬಳಸಿ ಮಾಡಿದ ಮಸಾಲೆಯೊಂದಿಗೆ ಬೆರೆಸಿ ರುಚಿಕರವಾದ ಮಸಾಲೆ ಮೆಣಸಿನಕಾಯಿ ತಯಾರಿಸುವ ವಿಧಾನವನ್ನು ಈ ಲೇಖನ ವಿವರಿಸುತ್ತದೆ. ಖಾರದ ಜೊತೆಗೆ ಹುಳಿ ರುಚಿಗಾಗಿ ನಿಂಬೆ ರಸವನ್ನು ಸೇರಿಸುವ ಆಯ್ಕೆಯನ್ನೂ ಇದು ಸೂಚಿಸುತ್ತದೆ.

ಮಸಾಲೆ ಮೆಣಸಿನಕಾಯಿ
ಊಟದ ಜೊತೆ ಕೆಲವರಿಗೆ ಉಪ್ಪಿನಕಾಯಿ, ಸಲಾಡ್, ಮೊಸರು, ಚಟ್ನಿಪುಡಿ ಕಡ್ಡಾಯವಾಗಿ ಬೇಕು. ಅದರಲ್ಲೂ ಉತ್ತರ ಕರ್ನಾಟಕದ ಮಂದಿಯ ಊಟ ಅಂದ್ರೆ ಸಿಕ್ಕಾಪಟ್ಟೆ ಖಾರ. ಆದರೂ ಕೆಲವರು ಊಟದ ಜೊತೆ ನೆಂಚಿಕೊಳ್ಳಲು ಹಸಿಮೆಣಸಿನಕಾಯಿ ತೆಗೆದುಕೊಳ್ಳುತ್ತಾರೆ. ಒಂದಿಷ್ಟು ಜನರು ಹಸಿಮೆಣಸಿನಕಾಯಿಗೆ ಕೊಂಚ ಮಸಾಲೆ ಸೇರಿಸುತ್ತಾರೆ. ಈ ಮಸಾಲೆ ಸೇರಿಸೋದು ಹೇಗೆ ಎಂದು ನೋಡೋಣ ಬನ್ನಿ.
ಮೆಣಸಿನಕಾಯಿಗಳನ್ನು ಫ್ರೈ ಮಾಡಿಕೊಳ್ಳಿ
ಮೊದಲಿಗೆ ಹಸಿಮೆಣಸಿನಕಾಯಿಗಳನ್ನು ಬಾಣಲೆಗೆ ಹಾಕಿಕೊಂಡು ಒಲೆ ಮೇಲಿಟ್ಟುಕೊಳ್ಳಿ. ನಂತರ ಇದಕ್ಕೆ ಎರಡರಿಂದ ಮೂರು ಟೀ ಸ್ಪೂನ್‌ನಷ್ಟು ಅಡುಗೆಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿಕೊಂಡು ಎತ್ತಿಟ್ಟುಕೊಳ್ಳಿ.
ಮಸಾಲೆ
ಈಗ ಮತ್ತೊಂದೆಡೆ ಒಂದು ಮಿಕ್ಸಿ ಜಾರ್‌ಗೆ ಕೋತಂಬರಿ ಸೊಪ್ಪು, ಜೀರಿಗೆ, ಬೆಳ್ಳುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ತರತರಿಯಾಗಿ ರುಬ್ಬಿಕೊಂಡು ಎತ್ತಿಟ್ಟುಕೊಳ್ಳಿ. (ಬೇಕಿದ್ರೆ ಕರೀಬೇವು ಸೇರಿಸಿಕೊಳ್ಳಬಹುದು) ಅಥವಾ ಒಗ್ಗರಣೆಯಲ್ಲಿಯೂ ಸೇರಿಸಿಕೊಳ್ಳಬಹುದು.
ಮಸಾಲೆ ಜೊತೆ ಮೆಣಸಿನಕಾಯಿ ಸೇರಿಸಿಕೊಳ್ಳಿ
ಈಗ ಮತ್ತೊಮ್ಮೆ ಬಾಣಲೆಯನ್ನು ಒಲೆ ಮೇಲಿಟ್ಟು, ಒಂದು ಟೀ ಸ್ಪೂನ್‌ನಷ್ಟು ಎಣ್ಣೆ ಹಾಕಿಕೊಳ್ಳಿ. ಈ ಎಣ್ಣೆಗೆ ರುಬ್ಬಿಕೊಂಡಿರುವ ಮಸಾಲೆಯನ್ನ ಹಾಕಿಕೊಂಡು ಎರಡು ನಿಮಿಷ ಫ್ರೈ ಮಾಡಿಕೊಳ್ಳಬೇಕು. ಈಗ ಹುರಿದುಕೊಂಡಿರುವ ಮೆಣಸಿನಕಾಯಿಗಳನ್ನು ಬಾಣಲೆಗೆ ಹಾಕಿಕೊಂಡು ಮಸಾಲೆ ಜೊತೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎರಡು ನಿಮಿಷ ಫ್ರೈ ಮಾಡಿಕೊಳ್ಳಬೇಕು.
ಖಾರದ ಜೊತೆ ಹುಳಿ
ಕೊನೆಯದಾಗಿ ಒಂದು ಟೀ ಸ್ಪೂನ್‌ನಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಂಡ್ರೆ ಮಸಾಲೆಯುಕ್ತ ಹಸಿಮೆಣಸಿನಕಾಯಿ ರೆಡಿಯಾಗುತ್ತದೆ. ಈ ವೇಳೆ ಬೇಕಿದ್ರೆ ನೀವು ಒಂದೆರಡು ಹನಿಯಷ್ಟು ನಿಂಬೆಹಣ್ಣಿನ ರಸ ಸೇರಿಸಿಕೊಳ್ಳಬಹುದು. ಹೀಗೆ ಮಾಡೋದರಿಂದ ಖಾರದ ಜೊತೆ ಹುಳಿ ರುಚಿಯೂ ಸಿಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

