ದೋಸೆ ಹಿಟ್ಟಿಗೆ ಹೆಚ್ಚು ನೀರು ಹಾಕಿಬಿಟ್ರಾ? 4 ಟ್ರಿಕ್ಸ್ ಬಳಸಿ ತಕ್ಷಣ ಗಟ್ಟಿ ಮಾಡಿ
ದೋಸೆ ಹಿಟ್ಟು ಕೈತಪ್ಪಿ ತೆಳುವಾದರೆ, ಅದನ್ನು ಸರಿಪಡಿಸಲು ಹಲವು ಸುಲಭ ಉಪಾಯಗಳಿವೆ. ಅಡುಗೆಮನೆಯ ಕೆಲ ಪದಾರ್ಥಗಳನ್ನು ಬಳಸಿ ಹಿಟ್ಟನ್ನು ಗಟ್ಟಿಗೊಳಿಸಬಹುದು. ಈ ವಿಧಾನಗಳು ದೋಸೆಯನ್ನು ಗರಿಗರಿಯಾಗಿ ಅಥವಾ ಮೃದುವಾಗಿ ಮಾಡಲು ಸಹ ಸಹಕರಿಸುತ್ತವೆ.

ದೋಸೆ ಹಿಟ್ಟು
ಕೆಲವೊಮ್ಮೆ ದೋಸೆ ಹಿಟ್ಟು ತುಂಬಾ ಗಟ್ಟಿಯಾಗಿದಂತೆ ಅನ್ಕೊಂಡು ನೀರು ಸೇರಿಸಲು ಹೋಗುತ್ತೇವೆ. ಈ ಸಂದರ್ಭದಲ್ಲಿ ಕೈ ತಪ್ಪಿ ಹೆಚ್ಚು ಬೀಳುತ್ತದೆ. ಇನ್ನು ಕೆಲವು ವೇಳೆ ರುಬ್ಬುವಾಗಲು ಹೆಚ್ಚು ನೀರು ಸೇರಿಸುತ್ತವೆ. ಹಿಟ್ಟಿಗೆ ಹೆಚ್ಚು ನೀರು ಸೇರಿಸಿದ್ರೆ ದೋಸೆ ಸರಿಯಾಗಿ ಬರಲ್ಲ. ಈ ಸಮಯದಲ್ಲಿ ಕೆಲವು ವಿಧಾನಗಳ ಮೂಲಕ ದೋಸೆ ಹಿಟ್ಟನ್ನು ಗಟ್ಟಿಯಾಗಿ ಮಾಡಿಕೊಳ್ಳಬಹುದು. ಮನೆಗಳಲ್ಲಿ ಅಮ್ಮಂದಿರು ಈ ಟ್ರಿಕ್ಸ್ ಫಾಲೋ ಮಾಡುತ್ತಿರುತ್ತಾರೆ.
ಅಕ್ಕಿ ಹಿಟ್ಟು
ತೆಳುವಾಗಿರುವ ದೋಸೆ ಹಿಟ್ಟಿಗೆ ಅಕ್ಕಿಹಿಟ್ಟು ಸೇರಿಸಿಕೊಳ್ಳಬಹುದು. ನಿಮ್ಮ ದೋಸೆ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ಹಿಟ್ಟು ಸೇರಿಸಿಕೊಳ್ಳಬೇಕು. ಹೀಗೆ ಮಾಡೋದರಿಂದ ದೋಸೆಹಿಟ್ಟು ಗಟ್ಟಿಯಾಗುತ್ತದೆ. ಅಕ್ಕಿ ಹಿಟ್ಟು ಸೇರಿಸೋದರಿಂದ ದೋಸೆ ಕೂಡ ಗರಿಗರಿಯಾಗಿ ಬರುತ್ತದೆ. ಒಂದೇ ಬಾರಿಗೆ ಹೆಚ್ಚು ಹಿಟ್ಟು ಹಾಕಬೇಡಿ, ಇಲ್ಲದಿದ್ದರೆ ಗಂಟುಗಳಾಗಬಹುದು. ನಿಧಾನವಾಗಿ ಹಿಟ್ಟನ್ನು ಸೇರಿಸುತ್ತಾ, ನಿರಂತರವಾಗಿ ಕಲಕುತ್ತಿರಿ.
ಚಿರೋಟಿ ರವೆ ಅಥವಾ ಸೂಜಿ ರವೆ
ದೋಸೆ ಹಿಟ್ಟನ್ನು ಗಟ್ಟಿ ಮಾಡಲು ಚಿರೋಡಿ ರವೆಯನ್ನು (ಸೂಜಿ) ಕೂಡ ಬಳಸಬಹುದು. ಇದು ದೋಸೆಯನ್ನು ಗರಿಗರಿಯಾಗಿಯೂ ಮಾಡುತ್ತದೆ. ಒಂದರಿಂದ ಎರಡು ಚಮಚ ರವೆಯನ್ನು ದೋಸೆ ಹಿಟ್ಟಿಗೆ ಸೇರಿಸಿ 10 ರಿಂದ 15 ನಿಮಿಷಗಳ ಕಾಲ ಬಿಡಿ. ಇದರಿಂದ ರವೆಯು ನೀರನ್ನು ಹೀರಿಕೊಂಡು ಹಿಟ್ಟನ್ನು ಗಟ್ಟಿಗೊಳಿಸುತ್ತದೆ.
ಅವಲಕ್ಕಿ
ದೋಸೆ ಹಿಟ್ಟು ತುಂಬಾ ತೆಳುವಾಗಿದ್ದರೆ, ನೀವು ಅವಲಕ್ಕಿಯನ್ನು (ಪೋಹಾ) ಸೇರಿಸಬಹುದು. ಇದಕ್ಕಾಗಿ ಅವಲಕ್ಕಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿ, ನಂತರ ಅದನ್ನು ರುಬ್ಬಿಕೊಳ್ಳಿ. ಈ ಅವಲಕ್ಕಿ ಪೇಸ್ಟ್‌ನ್ನು ಸೇರಿಸಿದರೆ, ಹಿಟ್ಟು ಗಟ್ಟಿಯಾಗುವುದಲ್ಲದೆ, ದೋಸೆ ತುಂಬಾ ಮೃದು ಮತ್ತು ಉಬ್ಬಿದಂತೆ ಬರುತ್ತದೆ. ವಿಶೇಷವಾಗಿ ನೀವು ಸಾಫ್ಟ್ ದೋಸೆ ಅಥವಾ ಸೆಟ್ ದೋಸೆ ಮಾಡಲು ಬಯಸಿದರೆ, ಈ ವಿಧಾನವು ತುಂಬಾ ಪರಿಣಾಮಕಾರಿಯಾಗಿರಲಿದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ದೋಸೆ, ಇಡ್ಲಿ ಹಿಟ್ಟು ಹುಳಿಯಾಗಿ ಹಾಳಾಗಿದ್ದರೆ ಸರಿಪಡಿಸಲು ಇಲ್ಲಿದೆ 5 ಸೂಪರ್ Kitchen Tips
ಓಟ್ಸ್
ನೀವು ದೋಸೆ ಹಿಟ್ಟನ್ನು ಗಟ್ಟಿ ಮಾಡುವುದರ ಜೊತೆಗೆ ಆರೋಗ್ಯಕರ ದೋಸೆ ಮಾಡಲು ಬಯಸಿದರೆ, ರೋಲ್ಡ್ ಓಟ್ಸ್ ಅನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಇದನ್ನು ದೋಸೆ ಹಿಟ್ಟಿಗೆ ಸೇರಿಸಿ, ಕಲಕುತ್ತಾ 10 ರಿಂದ 15 ನಿಮಿಷಗಳ ಕಾಲ ಸೆಟ್ ಆಗಲು ಬಿಡಿ. ಓಟ್ಸ್ ಹೆಚ್ಚುವರಿ ನೀರನ್ನು ಹೀರಿಕೊಂಡು ಹಿಟ್ಟನ್ನು ಗಟ್ಟಿಗೊಳಿಸುವುದನ್ನು ನೀವು ನೋಡಬಹುದು. ಇದರಿಂದ ದೋಸೆ ಸೂಪರ್ ಟೇಸ್ಟಿಯಾಗುತ್ತದೆ.
ಇದನ್ನೂ ಓದಿ: ಬ್ರೇಕ್‌ಫಾಸ್ಟ್‌ಗೆ ಇಡ್ಲಿ, ದೋಸೆ ತಿಂದು ಸಾಕಾಯ್ತು ಅನ್ನೋರು ಈ 8 ತಿನಿಸುಗಳನ್ನು ಟ್ರೈ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
