- Home
- Life
- Food
- ಎಷ್ಟೋ ಜನರಿಗೆ ಕೆಸುವಿನ ಸೊಪ್ಪಿನ ಕರಕಲಿ ಗೊತ್ತೇ ಇಲ್ಲ! ಬಿಸಿ ಬಿಸಿ ಅನ್ನದ ಜೊತೆ ತಿಂದ್ರಂತೂ ಆಹಾ...! ವಿಧಾನ ಇಲ್ಲಿದೆ!
ಎಷ್ಟೋ ಜನರಿಗೆ ಕೆಸುವಿನ ಸೊಪ್ಪಿನ ಕರಕಲಿ ಗೊತ್ತೇ ಇಲ್ಲ! ಬಿಸಿ ಬಿಸಿ ಅನ್ನದ ಜೊತೆ ತಿಂದ್ರಂತೂ ಆಹಾ...! ವಿಧಾನ ಇಲ್ಲಿದೆ!
Kesuvina Soppu Karakali Dish: ಮಂಗಳೂರು, ಉತ್ತರ ಕನ್ನಡ, ತೀರ್ಥಹಳ್ಳಿ, ಶಿವಮೊಗ್ಗ ಮುಂತಾದ ಭಾಗದವರಿಗೆ ಕೆಸವಿನ ಸೊಪ್ಪಿನ ಪರಿಚಯ ಇರುತ್ತದೆ. ಇಂದು ಬೆಂಗಳೂರಿನಲ್ಲಿ ಕೂಡ ಮಂಗಳೂರು ಸ್ಟೋರ್‌ಗಳಲ್ಲಿ ಕೆಸವಿನ ಸೊಪ್ಪು ಸಿಗುವುದು. ಈ ಸೊಪ್ಪಿನಿಂದ ವಿವಿಧ ರೀತಿಯ ಅಡುಗೆ ಮಾಡಬಹುದು.

ಕೆಸವಿನ ಪತ್ರೊಡೆ ಅನೇಕರಿಗೆ ಗೊತ್ತಿದೆ. ಅದರಂತೆ ಕರಕಲಿ ಕೂಡ ತುಂಬ ರುಚಿ. ಬಿಸಿ ಬಿಸಿ ಅನ್ನದ ಜೊತೆ ಕರಕಲಿ ಇದ್ರೆ ಊಟ ಮಾತ್ರ ಭರ್ಜರಿ ಚೆನ್ನಾಗಿರುವುದು. ಹಾಗಾದರೆ ಕರಕಲಿ ಮಾಡುವುದು ಹೇಗೆ?
ಕೆಸವಿನ ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ಅದರ ದಂಟನ್ನು ಕೂಡ ಕತ್ತರಿಸಿ ಎಸೆಯಿರಿ. ಕೇವಲ ಎಲೆಗಳನ್ನು ಸಣ್ಣದಾಗಿ ಕಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಜಾಸ್ತಿ ಎಲೆಗಳು ಬೇಕಾಗುತ್ತವೆ. ಹೀಗಾಗಿ ನಿಮಗೆ ಎಷ್ಟು ಬೇಕೋ ಅಷ್ಟೇ ಎಲೆಗಳನ್ನು ಬಳಸಿ.
ಕಟ್ ಮಾಡಿಕೊಂಡ ಕೆಸವಿನ ಎಲೆಗಳಿಗೆ ಸ್ವಲ್ಪ ಹುಳಸೆಹಣ್ಣು, ಸೂಜು ಮೆಣಸು ಅಥವಾ ಗಾಂಧಾರಿ ಮೆಣಸು ಅಥವಾ ಜೀರಿಗೆ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ. ಹುಳಸೆಹಣ್ಣು ಜಾಸ್ತಿಯೂ ಆಗಬಾರದು, ಕಡಿಮೆಯೂ ಆಗಬಾರದು. ತುಂಬ ಕಡಿಮೆ ಹಾಕಿದರೆ ಕೆಸವಿನ ಸೊಪ್ಪು ಬಾಯಿ ತುರಿಸುವುದು.
ಕೆಸವಿನ ಸೊಪ್ಪು ಬೆಂದಮೇಲೆ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಆಮೇಲೆ ಎಣ್ಣೆ, ಕೆಂಪುಮೆಣಸು, ಬೆಳ್ಳುಳ್ಳಿ, ಸಾಸಿವೆಕಾಳು, ಉದ್ದಿನ ಕಾಳು ಹಾಕಿ ಒಂದು ಒಗ್ಗರಣೆ ಹಾಕಿ ಅದನ್ನು ರುಬ್ಬಿಕೊಂಡ ಕೆಸವಿನ ಸೊಪ್ಪಿಗೆ ಹಾಕಿ ಮಿಕ್ಸ್ ಮಾಡಿ.
ಬಿಸಿ ಬಿಸಿ ಅನ್ನದ ಜೊತೆ ಕರಕಲಿ ಊಟ ಮಾಡಿದರಂತೂ.. ಆ ರುಚಿಯನ್ನು ಪದಗಳಲ್ಲಿ ಹೇಳಲಾಗದು. ಎಲ್ಲ ಕೆಸವಿನ ಸೊಪ್ಪಿನಲ್ಲಿ ಅಡುಗೆ ಮಾಡಲಾಗದು. ಹೀಗಾಗಿ ಮರಗೆಸದಲ್ಲಿ ಕರಕಲಿ ಮಾಡಿದರೆ ಚೆನ್ನ.