ನೀನು ದಾಟಿರುವುದು ಬ್ಲಡ್ಲೈನ್, ರಕ್ತ ಹರಿದೇ ಹರಿಯುತ್ತೆ: ಸ್ಯಾಂಡಲ್‌ವುಡ್‌ನಲ್ಲಿ 'ಯುವ' ಪರ್ವ ಆರಂಭ
ಯುವ ರಾಜ್‌ಕುಮಾರ್ ಮೊದಲ ಸಿನಿಮಾಕ್ಕೆ ‘ಯುವ’ ಎಂದು ಹೆಸರಿಡಲಾಗಿದೆ. ಮೊದಲ ಸಿನಿಮಾ ಶುರುವಾಗುವ ಮೊದಲು ಶೇಷಾದ್ರಿಪುರಂ ಸುಬ್ರಹ್ಮಣ್ಯ ಸ್ವಾಮಿಗೆ ಯುವರಾಜ್ ಕುಮಾರ್ ಪೂಜೆ ಸಲ್ಲಿಸಿದ್ದಾರೆ.
ದೊಡ್ಮನೆಯ ಮತ್ತೊಂದು ಕುಡಿ ಸ್ಯಾಂಡಲ್‌ವುಡ್‌ಗೆ ಕಾಲಿಟಿದ್ದು, ರಾಘವೇಂದ್ರ ರಾಜ್‌ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್‌ಕುಮಾರ್ ಇಂದು ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಯುವ ರಾಜ್‌ಕುಮಾರ್ ನಟನೆಯ ಮೊದಲ ಸಿನಿಮಾದ ಟೈಟಲ್ ಇಂದು ಬಿಡುಗಡೆ ಆಗಿದ್ದು, ಯೂಥ್ಫುಲ್ ಹೆಸರನ್ನು ಸಿನಿಮಾಕ್ಕೆ ಇಡಲಾಗಿದೆ.
ಹೌದು! ಯುವ ರಾಜ್‌ಕುಮಾರ್ ಮೊದಲ ಸಿನಿಮಾಕ್ಕೆ ‘ಯುವ’ ಎಂದು ಹೆಸರಿಡಲಾಗಿದೆ. ಮೊದಲ ಸಿನಿಮಾ ಶುರುವಾಗುವ ಮೊದಲು ಶೇಷಾದ್ರಿಪುರಂ ಸುಬ್ರಹ್ಮಣ್ಯ ಸ್ವಾಮಿಗೆ ಯುವರಾಜ್ ಕುಮಾರ್ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ನಿರ್ಮಾಪಕ ವಿಜಯ್ ಕಿರಂಗದೂರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವಗೆ ಸಾಥ್ ನೀಡಿದ್ದಾರೆ.
ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮವು ಬೆಂಗಳೂರಿನ ಅಶೋಕ ಹೋಟಲ್‌ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಟೈಟಲ್ ಅನ್ನು ಅನಾವರಣ ಮಾಡಲಾಗಿದೆ. ಜೊತೆಗೆ ಬೆಂಗಳೂರಿನ ಕುರುಬರಹಳ್ಳಿಯ ಅಣ್ಣಾವ್ರ ಪ್ರತಿಮೆ ಬಳಿ ಎಲ್‌ಇಡಿ ಸ್ಕ್ರಿನ್‌ನಲ್ಲಿ ಪ್ರದರ್ಶನ ಮಾಡಿದ ಜೊತೆಗೆ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸಹ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.
ಇನ್ನು ಸಿನಿಮಾದ ಟೈಟಲ್ ಟೀಸರ್ ಸಹ ಬಿಡುಗಡೆ ಆಗಿದ್ದು, ಸಿನಿಮಾ ಭರ್ಜರಿ ಆಕ್ಷನ್ ಸಿನಿಮಾ ಆಗಿರುವ ಸೂಚನೆ ನೀಡಿದೆ. ಟೈಟಲ್ ಟೀಸರ್ನಲ್ಲಿಯೇ ಸುತ್ತಿಗೆ, ಬ್ಯಾಟು, ಕತ್ತಿಗಳು ರಾರಾಜಿಸಿವೆ. ಖಡಕ್ ಧ್ವನಿಯನ್ನು ಡೈಲಾಗ್ ಸಹ ಹೊಡೆದಿರುವ ಯುವ ರಾಜ್‌ಕುಮಾರ್, ನೀನು ದಾಟಿರುವುದು ಬ್ಲಡ್ಲೈನ್, ರಕ್ತ ಹರಿದೇ ಹರಿಯುತ್ತೆ ಎಂದು ವಿಲನ್ಗಳಿಗೆ ಎಚ್ಚರಿಕೆ ಸಹ ನೀಡಿದ್ದಾರೆ.
ಈ ಸಿನಿಮಾವು ಗ್ಯಾಂಗ್ವಾರ್ಗೆ ಸಂಬಂಧಿಸಿದ ಕತೆ ಹೊಂದಿರುವ ಸುಳಿವೂ ಸಹ ಟೈಟಲ್ ಟೀಸರ್ನಲ್ಲಿದೆ. ಸಿನಿಮಾದ ಟೈಟಲ್ ಬಿಡುಗಡೆ ದಿನವೇ ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದ್ದು, ಯುವ ರಾಜ್‌ಕುಮಾರ್ ಮೊದಲ ಸಿನಿಮಾ ಯುವ, ಇದೇ ವರ್ಷಾಂತ್ಯ ಡಿಸೆಂಬರ್ 22ನೇ ತಾರೀಖು ಬಿಡುಗಡೆ ಆಗಲಿದೆ.