ಪ್ರಭಾಸ್ ಸಿನಿರಂಗಕ್ಕೆ ಬಂದು 24 ವರ್ಷ: ಈ ಪ್ಯಾನ್ ಇಂಡಿಯಾ ಸ್ಟಾರ್ ಹವಾ ಶುರುವಾಗಿದ್ದೇ ರೋಚಕ!
ಭಾರತೀಯ ಚಿತ್ರರಂಗದಲ್ಲಿ ಪ್ರಭಾಸ್ 24 ವರ್ಷ ಪೂರೈಸಿದ್ದಾರೆ. 'ಈಶ್ವರ್' ಚಿತ್ರದಿಂದ ಶುರುವಾದ ಇವರ ಪಯಣ, 'ಬಾಹುಬಲಿ' ಮತ್ತು 'ಕಲ್ಕಿ 2898 AD' ಚಿತ್ರಗಳ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಇವರ ಜನಪ್ರಿಯತೆಗೆ ಐದು ಪ್ರಮುಖ ಕಾರಣಗಳು ಹಾಗೂ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತದ ಅತಿದೊಡ್ಡ ಸೂಪರ್ಸ್ಟಾರ್ ಪ್ರಭಾಸ್
'ಈಶ್ವರ್' ಚಿತ್ರದ ಮೂಲಕ ನಟನೆಗೆ ಕಾಲಿಟ್ಟ ಪ್ರಭಾಸ್, ಈಗ 24 ವರ್ಷಗಳನ್ನು ಪೂರೈಸಿದ್ದಾರೆ. ತೆಲುಗು ಚಿತ್ರರಂಗದ ಭರವಸೆಯ ನಟನಾಗಿದ್ದ ಇವರು, ಇಂದು ಭಾರತದ ಅತಿದೊಡ್ಡ ಸೂಪರ್ಸ್ಟಾರ್ ಆಗಿ ಬೆಳೆದಿದ್ದಾರೆ. ಬಾಷೆ, ಗಡಿಗಳನ್ನು ಮೀರಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಬಾಕ್ಸ್ ಆಫೀಸ್ ಧೂಳೀಪಟ ಮಾಡುವ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.
1. ಬಾಹುಬಲಿ: ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ
ಪ್ರಭಾಸ್ ವೃತ್ತಿಜೀವನ ಹಾಗೂ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದು 'ಬಾಹುಬಲಿ'. ಈ ಸಿನಿಮಾ ಕೇವಲ ದಾಖಲೆಗಳನ್ನು ಮುರಿಯಲಿಲ್ಲ, ಭಾರತೀಯ ಸಿನಿಮಾಗಳು ದೇಶಾದ್ಯಂತ ಹಾಗೂ ವಿದೇಶಗಳಲ್ಲೂ ಸದ್ದು ಮಾಡಲು ದಾರಿ ಮಾಡಿಕೊಟ್ಟಿತು. 'ಬಾಹುಬಲಿ 2' ವಿಶ್ವಾದ್ಯಂತ ₹1,000 ಕೋಟಿ ಗಳಿಸಿದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಮೂಲಕ ಪ್ರಭಾಸ್, ಪ್ರಾದೇಶಿಕ ನಟ ಎಂಬ ಹಣೆಪಟ್ಟಿಯಿಂದ ಹೊರಬಂದು ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು.
2. ಬಿಡುಗಡೆಯಾದ ಪ್ರತಿ ಸಿನಿಮಾವೂ ದೊಡ್ಡ ಹಬ್ಬ
ಪ್ರಭಾಸ್ ಅವರ ಸ್ಟಾರ್ಡಮ್ ಎಷ್ಟಿದೆ ಅಂದರೆ, ಅವರ ಪ್ರತಿ ಸಿನಿಮಾ ಬಿಡುಗಡೆಯೂ ಒಂದು ದೊಡ್ಡ ಇವೆಂಟ್ ಆಗಿರುತ್ತದೆ. 'ಸಾಹೋ', 'ಸಲಾರ್: ಪಾರ್ಟ್ 1' ಮತ್ತು 'ಕಲ್ಕಿ 2898 AD' ಚಿತ್ರಗಳ ಮೂಲಕ ವಿಭಿನ್ನ ಕಥೆಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಮೊದಲ ದಿನವೇ ₹100 ಕೋಟಿ ಗಳಿಸಿದ ಐದು ಸಿನಿಮಾಗಳನ್ನು ನೀಡಿದ ಏಕೈಕ ನಟ ಪ್ರಭಾಸ್. 'ಬಾಹುಬಲಿ 2', 'ಸಾಹೋ', 'ಆದಿಪುರುಷ್', 'ಸಲಾರ್' ಹಾಗೂ 'ಕಲ್ಕಿ 2898 AD' ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿವೆ.
3. ಪ್ಯಾನ್ ಇಂಡಿಯಾ ಸ್ಟಾರ್ ಹಾಗೂ ಜಾಗತಿಕ ಅಭಿಮಾನಿ ಬಳಗ
ಪ್ರಭಾಸ್ ಅವರ ಜನಪ್ರಿಯತೆ ಕೇವಲ ಒಂದು ಚಿತ್ರರಂಗ ಅಥವಾ ಭಾಷೆಗೆ ಸೀಮಿತವಾಗಿಲ್ಲ. ಇವರ ಸಿನಿಮಾಗಳು ದೇಶದ ಮೂಲೆ ಮೂಲೆಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತವೆ. ವಿದೇಶಗಳಲ್ಲೂ ಇವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಸಿನಿಮಾ ರಿಲೀಸ್ ಆಗುವಾಗ ನಡೆಯುವ ಸಂಭ್ರಮ ಹಾಗೂ ಹೊಸ ಸಿನಿಮಾದ ಅನೌನ್ಸ್ಮೆಂಟ್ಗಾಗಿ ಕಾಯುವ ಕಾತರವೇ ಇವರ ಸ್ಟಾರ್ಡಮ್ಗೆ ಸಾಕ್ಷಿ. ಎಲ್ಲಾ ವಯಸ್ಸಿನ ಪ್ರೇಕ್ಷಕರ ಜೊತೆ ಇವರಿಗಿರುವ ಕನೆಕ್ಟ್ ಇವರನ್ನು ದೊಡ್ಡ ಸೂಪರ್ಸ್ಟಾರ್ ಮಾಡಿದೆ.
4. ವಿಭಿನ್ನ ಪಾತ್ರಗಳು ಹಾಗೂ ಸರಳ ವ್ಯಕ್ತಿತ್ವ
ಬಾಕ್ಸ್ ಆಫೀಸ್ ಕಲೆಕ್ಷನ್ ಮಾತ್ರವಲ್ಲದೆ, ಪ್ರಭಾಸ್ ಅವರ ಸರಳ ವ್ಯಕ್ತಿತ್ವ ಕೂಡ ಅಭಿಮಾನಿಗಳನ್ನು ಸೆಳೆದಿದೆ. ಪೌರಾಣಿಕ, ಭವಿಷ್ಯದ ಕಥೆ, ಆಕ್ಷನ್ ಡ್ರಾಮಾ ಅಥವಾ ಭಾವನಾತ್ಮಕ ಕಥೆ—ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬುತ್ತಾರೆ. ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ, ಪ್ರಭಾಸ್ ಅವರ ಸರಳತೆ ಹಾಗೂ ಮೃದು ಸ್ವಭಾವ ಇಂದಿಗೂ ಹಾಗೆಯೇ ಇದೆ. ಅಭಿಮಾನಿಗಳ ಜೊತೆಗಿನ ಇವರ ಒಡನಾಟ ಇವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿದೆ.
5. ಮುಂಬರುವ ಬಹುನಿರೀಕ್ಷಿತ ಸಿನಿಮಾಗಳು
ಸಿನಿಮಾರಂಗದಲ್ಲಿ 24 ವರ್ಷ ಪೂರೈಸಿರುವ ಪ್ರಭಾಸ್, ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಪ್ರಾಜೆಕ್ಟ್ಗಳೊಂದಿಗೆ ಬರಲಿದ್ದಾರೆ. 'ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವಂ', 'ಕಲ್ಕಿ 2898 AD ಪಾರ್ಟ್ 2', 'ಸ್ಪಿರಿಟ್' ಹಾಗೂ 'ಫೌಜಿ' ಸಿನಿಮಾಗಳು ಇವರ ಲೈನ್ಅಪ್ನಲ್ಲಿವೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್ 2', ನಾಗ್ ಅಶ್ವಿನ್ ಅವರ 'ಕಲ್ಕಿ 2898 AD ಪಾರ್ಟ್ 2', ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಹಾಗೂ ಹನು ರಾಘವಪುಡಿ ಅವರ 'ಫೌಜಿ' ಸಿನಿಮಾಗಳು ಪ್ರಭಾಸ್ ವೃತ್ತಿಬದುಕಿನ ಪ್ರಮುಖ ಘಟ್ಟವಾಗಲಿವೆ.
ಇನ್ನು 24 ವರ್ಷಗಳ ಪಯಣದಲ್ಲಿ ಪ್ರಭಾಸ್ ಹಲವು ಮೈಲಿಗಲ್ಲುಗಳನ್ನು ತಲುಪಿದ್ದಾರೆ. 'ಬಾಹುಬಲಿ' ಮೂಲಕ ಇತಿಹಾಸ ಸೃಷ್ಟಿಸಿದ ಈ ಸೂಪರ್ಸ್ಟಾರ್, ಮುಂಬರುವ ಸಿನಿಮಾಗಳ ಮೂಲಕ ಪ್ರೇಕ್ಷಕರ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಕಳೆದ 24 ವರ್ಷಗಳಿಗಿಂತ ಮುಂಬರುವ ದಿನಗಳು ಇನ್ನಷ್ಟು ಅದ್ಭುತವಾಗಿರಲಿವೆ ಎಂಬ ನಂಬಿಕೆ ಅಭಿಮಾನಿಗಳಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













