- Home
- Sports
- Cricket
- ನಿವೃತ್ತಿಯಾದ 14 ವರ್ಷಗಳ ಬಳಿಕ ಟೀಮ್ ಇಂಡಿಯಾ ಜೆರ್ಸಿ ಧರಿಸಿ ಮೈದಾನಕ್ಕಿಳಿದ ಸಚಿನ್; ಮಾಸ್ಟರ್ ಬ್ಲಾಸ್ಟರ್ ಹೊಸ ಲುಕ್ ವೈರಲ್!
ನಿವೃತ್ತಿಯಾದ 14 ವರ್ಷಗಳ ಬಳಿಕ ಟೀಮ್ ಇಂಡಿಯಾ ಜೆರ್ಸಿ ಧರಿಸಿ ಮೈದಾನಕ್ಕಿಳಿದ ಸಚಿನ್; ಮಾಸ್ಟರ್ ಬ್ಲಾಸ್ಟರ್ ಹೊಸ ಲುಕ್ ವೈರಲ್!
ಸಚಿನ್ ತೆಂಡೂಲ್ಕರ್ ಅವರು 15 ವರ್ಷಗಳ ಬಳಿಕ ಮತ್ತೆ ಟೀಮ್ ಇಂಡಿಯಾ ಜರ್ಸಿ ಧರಿಸಿ, 2011ರ ವಿಶ್ವಕಪ್ ಗೆಲುವಿನ ಐತಿಹಾಸಿಕ ಕ್ಷಣವನ್ನು ಸ್ಮರಿಸಿದ್ದಾರೆ. ಗೌತಮ್ ಗಂಭೀರ್ ಅವರ ಅಮೋಘ 97 ರನ್ ಮತ್ತು ನಾಯಕ ಎಂ.ಎಸ್. ಧೋನಿಯವರ ಅಜೇಯ 91 ರನ್‌ಗಳ ನೆರವಿನಿಂದ ಭಾರತ ವಿಶ್ವಕಪ್ ಗೆದ್ದಿತ್ತು.

ಭಾರತ ತಂಡದ ಜರ್ಸಿಯಲ್ಲಿ ಸಚಿನ್; 15 ವರ್ಷಗಳ ಬಳಿಕವೂ ನಿಲ್ಲದ ಹೃದಯದ ಬಡಿತ!
ನಿವೃತ್ತಿಯಾದ 14 ವರ್ಷಗಳ ಬಳಿಕ ನೀಲಿ ಬಣ್ಣದ ಟೀಮ್ ಇಂಡಿಯಾ ಜರ್ಸಿ ತೊಟ್ಟು ಮೈದಾನಕ್ಕಿಳಿಯುವ ದೃಶ್ಯವಿರುವ ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 2011ರ ಏಪ್ರಿಲ್ 2 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಆ ಐತಿಹಾಸಿಕ ಫೈನಲ್ ಪಂದ್ಯವನ್ನು ನೆನಪಿಸಿಕೊಂಡಿರುವ ಸಚಿನ್, "ಪಂದ್ಯದ ಮೊದಲ ಎಸೆತವು ಯಾವಾಗಲೂ ನಮ್ಮ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ... ಅಂದು ರಾತ್ರಿ ಆ ಬಡಿತ ಎಂದಿಗೂ ನಿಲ್ಲಲೇ ಇಲ್ಲ. 15 ವರ್ಷಗಳ ನಂತರವೂ ಆ ನೆನಪು ನಮ್ಮೊಂದಿಗೆ ಹಾಗೇ ಉಳಿದಿದೆ. ನಾವೆಲ್ಲರೂ ಒಂದೇ ಕನಸಿನೊಂದಿಗೆ ಬೆಳೆದ ಯುವ ಕ್ರಿಕೆಟಿಗರ ಗುಂಪಾಗಿದ್ದೆವು. ಅದು ಭಾರತಕ್ಕಾಗಿ ವಿಶ್ವಕಪ್ ಗೆಲ್ಲುವುದು. ಈ ಜರ್ನಿಯಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ಧನ್ಯವಾದಗಳು. ಜೈ ಹಿಂದ್!" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ಕನಸು ನನಸಾದ ಕ್ಷಣ; ಭಾರತದ ಪರ ಗರಿಷ್ಠ ರನ್ ಸರದಾರ
ತಮ್ಮ ಸುದೀರ್ಘ ಹಾಗೂ ಅದ್ಭುತ ಕ್ರಿಕೆಟ್ ವೃತ್ತಿಜೀವನದಲ್ಲಿ ಇಡೀ ದೇಶದ ಕೋಟ್ಯಂತರ ಅಭಿಮಾನಿಗಳ ಭರವಸೆಯ ಹೊರೆಯನ್ನು ಹೊತ್ತಿದ್ದ ಸಚಿನ್ ಅವರಿಗೆ 2011ರ ವಿಶ್ವಕಪ್ ಕೊನೆಯ ಟೂರ್ನಿಯಾಗಿತ್ತು. ತಮ್ಮ ಕೊನೆಯ ವಿಶ್ವಕಪ್‌ನಲ್ಲಿ ತವರು ಮೈದಾನದಲ್ಲೇ ಟ್ರೋಫಿ ಎತ್ತಿಹಿಡಿಯುವ ಮೂಲಕ ಮಾಸ್ಟರ್ ಬ್ಲಾಸ್ಟರ್ ತಮ್ಮ ಸುದೀರ್ಘ ಕಾಲದ ಬರವನ್ನು ನೀಗಿಸಿಕೊಂಡಿದ್ದರು. ಭಾರತದ ಬ್ಯಾಟಿಂಗ್ ಪಡೆಯಲ್ಲಿ ಸಚಿನ್ ತೆಂಡುಲ್ಕರ್ ಅವರೇ ಆ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮುವ ಮೂಲಕ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಾಂಖೆಡೆ ಹೈವೋಲ್ಟೇಜ್ ಫೈನಲ್; ಜಯವರ್ಧನೆ ಶತಕದ ಸವಾಲು
ಮಿಲಿಯನ್ ಗಟ್ಟಲೆ ಪ್ರೇಕ್ಷಕರು ಉಸಿರು ಬಿಗಿಹಿಡಿದು ವೀಕ್ಷಿಸಿದ 2011ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ, ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಲಂಕಾ ಪರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಮಹೇಲಾ ಜಯವರ್ಧನೆ ಅವರು ಅಜೇಯ 103* ರನ್‌ಗಳ ಆಕರ್ಷಕ ಶತಕ ಬಾರಿಸುವ ಮೂಲಕ ತಂಡಕ್ಕೆ ಬಲಿಷ್ಠ ಅಡಿಪಾಯ ಹಾಕಿಕೊಟ್ಟಿದ್ದರು. ಇದರಿಂದಾಗಿ ಭಾರತದ ಮುಂದೆ ಕಠಿಣ ಗುರಿ ಸೃಷ್ಟಿಯಾಗಿತ್ತು.
ಆರಂಭಿಕ ಆಘಾತದಿಂದ ಭಾರತವನ್ನು ಪಾರು ಮಾಡಿದ ಗೌತಮ್ ಗಂಭೀರ್ ಧೀರ ಹೋರಾಟ
275 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಭಾರಿ ಆಘಾತ ಎದುರಾಗಿತ್ತು. ಸ್ಪೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಖಾತೆ ತೆರೆಯುವ ಮುನ್ನವೇ ಔಟಾಗಿ ಹೊರನಡೆದರು. ಈ ವೇಳೆ ಕ್ರೀಸ್ ಕಚ್ಚಿ ನಿಂತ ಗೌತಮ್ ಗಂಭೀರ್ ಅವರು 97 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಕೇವಲ 3 ರನ್‌ಗಳಿಂದ ಶತಕ ವಂಚಿತರಾದರೂ, ಗಂಭೀರ್ ಆಡಿದ ಆ ಇನಿಂಗ್ಸ್ ಭಾರತದ ಗೆಲುವಿಗೆ ಗಟ್ಟಿಯಾದ ಅಡಿಪಾಯವನ್ನು ನಿರ್ಮಿಸಿತು.
ಧೋನಿ ಸಿಕ್ಸರ್ ರಾಜವೈಭವ; 28 ವರ್ಷಗಳ ಸುದೀರ್ಘ ಕಾಯುವಿಕೆಗೆ ಮುಕ್ತಿ!
ಅಂತಿಮವಾಗಿ ಪಂದ್ಯವನ್ನು ಗೆಲುವಿನ ದಡಕ್ಕೆ ತಲುಪಿಸಿದ್ದು ನಾಯಕ ಎಂ.ಎಸ್. ಧೋನಿ. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಧೋನಿ, ಯುವರಾಜ್ ಸಿಂಗ್ (ಅಜೇಯ 21 ರನ್) ಜೊತೆಗೂಡಿ ಭರ್ಜರಿ ಜೊತೆಯಾಟವಾಡಿದರು. ಕೇವಲ 79 ಎಸೆತಗಳಲ್ಲಿ ಅಜೇಯ 91 ರನ್ ಸಿಡಿಸಿದ ಧೋನಿ, ಪಂದ್ಯದ ಕೊನೆಯಲ್ಲಿ ಲಾಂಗ್ ಆನ್ ಮೇಲಿಂದ ಸಿಡಿಸಿದ ಆ ಸ್ಮರಣೀಯ ಸಿಕ್ಸರ್ ಭಾರತಕ್ಕೆ 6 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟಿತು. ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ ಭಾರತ ವಿಶ್ವವಿಜೇತವಾಯಿತು. ಇದು 1983ರ ನಂತರ ಭಾರತ ಸಾಧಿಸಿದ ಮೊದಲ ವಿಶ್ವಕಪ್ ಜಯವಾಗಿದ್ದು, 28 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸತ್ತು. ಸದ್ಯ ಸಚಿನ್ ಅಪೊಲೋ ಟೈಯರ್ಸ್ ಜೊತೆಗಿನ ಪಾಲುದಾರಿಕೆಗಾಗಿ ಟೀಮ್ ಇಂಡಿಯಾ ಜೆರ್ಸಿ ಧರಿಸಿ ಹಳೇ ನೆನಪನ್ನು ಕೆದಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

