23 ವರ್ಷಗಳ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಬಾಂಗ್ಲಾದೇಶ, ಮೊದಲ ಟೆಸ್ಟ್‌ನ ಮೊದಲ ದಿನವೇ ಆತಿಥೇಯರನ್ನು 198 ರನ್‌ಗಳಿಗೆ ಕಟ್ಟಿಹಾಕಿದೆ. ಹಸನ್ ಮಹಮೂದ್ ಅವರ 6 ವಿಕೆಟ್‌ಗಳ ನೆರವಿನಿಂದ ಈ ಸಾಧನೆ ಮಾಡಿದ ಬಾಂಗ್ಲಾ, ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಡಾರ್ವಿನ್: 23 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಬಾಂಗ್ಲಾದೇಶ, ಮೊದಲ ಟೆಸ್ಟ್‌ನ ಮೊದಲ ದಿನವೇ ಆತಿಥೇಯರಿಗೆ ಶಾಕ್ ನೀಡಿದೆ. ಡಾರ್ವಿನ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾ ಬೌಲರ್‌ಗಳು ಆಸೀಸ್ ತಂಡವನ್ನು ಕೇವಲ 198 ರನ್‌ಗಳಿಗೆ ಕಟ್ಟಿಹಾಕಿದ್ದಾರೆ. ಮಾಜಿ ನಾಯಕ ಸ್ಟೀವ್ ಸ್ಮಿತ್ 71 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದ್ದು ಬಿಟ್ಟರೆ, ಉಳಿದವರಿಂದ ನಿರೀಕ್ಷಿತ ಆಟ ಬರಲಿಲ್ಲ. ಇನ್ನು

ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡವು ಮೊದಲ ದಿನದಾಟದಂತ್ಯಕ್ಕೆ ಕೇವಲ ಒಂದು ವಿಕೆಟ್ ಕಳೆದುಕೊಂಡು 96 ರನ್‌ ಗಳಿಸಿದ್ದು ಇನ್ನು ಕೇವಲ 102 ರನ್‌ಗಳ ಹಿನ್ನಡೆಯಲ್ಲಿದೆ. ಇದರೊಂದಿಗೆ ಕಾಂಗರೂ ನಾಡಿನಲ್ಲಿ ಮೊದಲ ದಿನವೇ ಆಸೀಸ್ ಸೊಕ್ಕಡಗಿಸುವಲ್ಲಿ ಬಾಂಗ್ಲಾದೇಶ ಹುಲಿಗಳು ಯಶಸ್ವಿಯಾಗಿವೆ. ಮೊಮಿನುಲ್ ಹಕ್ (35) ಮತ್ತು ತನ್ಜಿದ್ ಹಸನ್ ತಮೀಮ್ (32) ಕ್ರೀಸ್‌ನಲ್ಲಿದ್ದಾರೆ. ಶಾದ್ಮಾನ್ ಇಸ್ಲಾಂ (20) ಔಟಾದರು.

ಹಸನ್ ಮಹಮೂದ್ ಮಾರಕ ದಾಳಿ

ಬಾಂಗ್ಲಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ವೇಗಿ ಹಸನ್ ಮಹಮೂದ್, ಆಸೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಕೇವಲ 55 ರನ್ ನೀಡಿ 6 ವಿಕೆಟ್ ಪಡೆದ ಅವರು, ತಮ್ಮ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿದರು. ಇದು ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಬಾಂಗ್ಲಾ ವೇಗಿಯೊಬ್ಬರ ಮೂರನೇ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ಅವರಿಗೆ ತಸ್ಕಿನ್ ಅಹ್ಮದ್ ಮತ್ತು ಇಬಾದತ್ ಹುಸೇನ್ ಉತ್ತಮ ಸಾಥ್ ನೀಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾವನ್ನು ಬಾಂಗ್ಲಾ ಬೌಲರ್‌ಗಳು ಕೇವಲ 53 ಓವರ್‌ಗಳಲ್ಲಿ ಆಲೌಟ್ ಮಾಡಿದರು. ಆರಂಭಿಕರಾದ ಟ್ರಾವಿಸ್ ಹೆಡ್ (22) ಮತ್ತು ಜೇಕ್ ವೆದರಾಲ್ಡ್ (23) ಮೊದಲ ವಿಕೆಟ್‌ಗೆ 45 ರನ್ ಸೇರಿಸಿ ಉತ್ತಮ ಆರಂಭ ನೀಡಿದರೂ, ನಂತರ ತಂಡ ಕುಸಿತ ಕಂಡಿತು. ಸತತ ಓವರ್‌ಗಳಲ್ಲಿ ಇಬ್ಬರನ್ನೂ ಔಟ್ ಮಾಡಿದ ಹಸನ್ ಮಹಮೂದ್, ಆಸೀಸ್ ಪತನಕ್ಕೆ ಮುನ್ನುಡಿ ಬರೆದರು. ನಂತರ ಬಂದ ಮಾರ್ನಸ್ ಲಬುಶೇನ್ (1) ಮತ್ತು ಕ್ಯಾಮರೂನ್ ಗ್ರೀನ್ (13) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

Scroll to load tweet…

ಅಂದಹಾಗೆ ಇದು ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಅತ್ಯಂತ ಕಡಿಮೆ ಮೊದಲ ಇನ್ನಿಂಗ್ಸ್ ಸ್ಕೋರ್ ಆಗಿದೆ. ಈ ಹಿಂದೆ 2017ರಲ್ಲಿ ಮೀರ್‌ಪುರ್‌ನಲ್ಲಿ 217 ರನ್‌ಗಳಿಗೆ ಆಲೌಟ್ ಆಗಿದ್ದು ಕನಿಷ್ಠ ಸ್ಕೋರ್ ಆಗಿತ್ತು.

ಎಲ್ಲರ ಕಣ್ಣು ಎರಡನೇ ದಿನದ ಮೇಲೆ:

ಇನ್ನು ಕೇವಲ 102 ರನ್‌ಗಳ ಹಿನ್ನಡೆಯಲ್ಲಿರುವ ಬಾಂಗ್ಲಾದೇಶ ತಂಡವು ಇದೀಗ ಆಸೀಸ್ ಬೌಲರ್‌ಗಳ ಎದುರು ಎರಡನೇ ದಿನದಾಟದಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎನ್ನುವ ಬಗ್ಗೆ ಕುತೂಹಲ ಜೋರಾಗಿದೆ. ಇನ್ನು ಬಾಂಗ್ಲಾದೇಶ ಕೈಯಲ್ಲಿ 9 ವಿಕೆಟ್‌ಗಳಿದ್ದು, ಒಂದು ವೇಳೆ ಎರಡನೇ ದಿನದಾಟದಲ್ಲಿ ಬಾಂಗ್ಲಾದೇಶ ಬ್ಯಾಟರ್‌ಗಳು ದಿಟ್ಟ ಹೋರಾಟ ತೋರಿ ದೊಡ್ಡ ಮೊತ್ತ ಕಲೆಹಾಕಿದರೆ, ಆತಿಥೇಯ ಆಸೀಸ್ ಮೇಲೆ ಒತ್ತಡ ಬೀಳುವ ಸಾಧ್ಯತೆಯಿದೆ. ಹೀಗಾಗಿ ಎರಡನೇ ದಿನದಾಟದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.