- Home
- Sports
- Cricket
- IPL 2027 ಟೂರ್ನಿಗೂ ಮುನ್ನ ಅಧಿಕೃತವಾಗಿ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ ರಿಷಭ್ ಪಂತ್; LSG ಪಾಲಾದ ಡೆಲ್ಲಿ ಗೇಮ್ ಚೇಂಜರ್!
IPL 2027 ಟೂರ್ನಿಗೂ ಮುನ್ನ ಅಧಿಕೃತವಾಗಿ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ ರಿಷಭ್ ಪಂತ್; LSG ಪಾಲಾದ ಡೆಲ್ಲಿ ಗೇಮ್ ಚೇಂಜರ್!
ಬೆಂಗಳೂರು: 2026ರ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿ ಕೆಲವೇ ತಿಂಗಳು ಕಳೆದಿವೆ. ಹೀಗಿರುವಾಗಲೇ 20ನೇ ಸೀಸನ್ ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ಆರಂಭಿಸಿವೆ. ಇದೀಗ ಲಖನೌ ತಂಡದಿಂದ ರಿಷಭ್ ಪಂತ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಅಧಿಕೃತವಾಗಿ ಜಾರಿದ್ದಾರೆ.

ಅಧಿಕೃತವಾಗಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ರಿಷಭ್ ಪಂತ್
ಕಳೆದ ಕೆಲವು ಸೀಸನ್‌ನಲ್ಲಿ ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ಇದೀಗ ಮತ್ತೆ ತನ್ನ ತವರಾದ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ್ದಾರೆ. ಈ ವಿಚಾರವನ್ನು ಐಪಿಎಲ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿಯೇ ಖಚಿತಪಡಿಸಿದೆ. ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಮೂಲಕವೇ ತನ್ನ ಐಪಿಎಲ್ ಪಯಣವನ್ನು ಆರಂಭಿಸಿದ್ದರು.
ರಿಷಭ್ ಪಂತ್ ಟ್ರೇಡಿಂಗ್ ಗಾಸಿಪ್‌ಗೆ ತೆರೆ
ಕಳೆದ ಸೀಸನ್‌ನಲ್ಲಿ ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಇದರ ಬೆನ್ನಲ್ಲೇ ರಿಷಭ್ ಪಂತ್, ಲಖನೌ ತಂಡವನ್ನು ತೊರೆಯಲಿದ್ದಾರೆ ಎನ್ನುವ ಚರ್ಚೆ ಜೋರಾಗಿತ್ತು.
27 ಕೋಟಿ ರುಪಾಯಿಗೆ ಲಖನೌ ಪಾಲಾಗಿದ್ದ ಪಂತ್
2025ರ ಐಪಿಎಲ್ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಬರೋಬ್ಬರಿ 27 ಕೋಟಿ ರುಪಾಯಿ ನೀಡಿ ರಿಷಭ್ ಪಂತ್ ಅವರನ್ನು ಖರೀದಿಸಿತ್ತು. ಈ ಮೂಲಕ ಐಪಿಎಲ್ ಹರಾಜಿನ ಇತಿಹಾಸದಲ್ಲೇ ಅತಿದೊಡ್ಡ ಮೊತ್ತಕ್ಕೆ ಹರಾಜಾದ ಭಾರತೀಯ ಆಟಗಾರ ಎನ್ನುವ ದಾಖಲೆ ಬರೆದಿದ್ದರು. ಇದೀಗ ರಿಷಭ್ ಪಂತ್ 15 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಾರಾಟವಾಗಿದ್ದಾರೆ. ಅಲ್ಲಿಗೆ ಕಳೆದ ಸೀಸನ್‌ಗೆ ಹೋಲಿಸಿದರೆ 12 ಕೋಟಿ ರುಪಾಯಿ ಸಂಬಳ ಕಡಿತದೊಂದಿಗೆ ಮುಂಬರುವ ಸೀಸನ್ ಐಪಿಎಲ್‌ನಲ್ಲಿ ಡೆಲ್ಲಿ ಪರ ಪಂತ್ ಆಡಲಿದ್ದಾರೆ.
ಡೆಲ್ಲಿ ಪರ ಅತಿಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿರುವ ಆಟಗಾರ ರಿಷಭ್ ಪಂತ್
ರಿಷಭ್ ಪಂತ್ 2016ರಿಂದ 2024ರವರೆಗೆ 111 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಈ ಮೂಲಕ ಡೆಲ್ಲಿ ಪರ ಅತಿಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದರು. ಇನ್ನು ಇದಷ್ಟೇ ಅಲ್ಲದೇ 2021ರಿಂದ 2024ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 43 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಇದೀಗ ಮತ್ತೆ ಪಂತ್ ತಮ್ಮ ನೆಚ್ಚಿನ ತಂಡಕ್ಕೆ ವಾಪಾಸ್ಸಾಗಿದ್ದಾರೆ.
ಡೆಲ್ಲಿ ಗೇಮ್ ಚೇಂಜರ್ ಕುಲ್ದೀಪ್ ಯಾದವ್ ಲಖನೌ ಪಾಲು
ಇನ್ನೊಂದಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೇಮ್ ಚೇಂಜರ್ ಆಗಿ ಗುರುತಿಸಿಕೊಂಡಿದ್ದ ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್ದೀಪ್ ಯಾದವ್ ಅವರನ್ನು 13.5 ಕೋಟಿ ರುಪಾಯಿಗೆ ಲಖನೌ ಸೂಪರ್ ಜೈಂಟ್ಸ್‌ಗೆ ಮಾರಾಟ ಮಾಡಲಾಗಿದೆ. ಹೀಗಾಗಿ ಕುಲ್ದೀಪ್ ಯಾದವ್ 2027ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲಿದ್ದಾರೆ.
13.50 ಕೋಟಿ ರುಪಾಯಿಗೆ ಲಖನೌ ಪಾಲಾದ ಕುಲ್ದೀಪ್ ಯಾದವ್
ಕಳೆದ ಐದು ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಯಶಸ್ವಿ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಗುರುತಿಸಿಕೊಂಡಿದ್ದರು. 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡಿಕೊಂಡ ಕುಲ್ದೀಪ್ ಯಾದವ್, 65 ಪಂದ್ಯಗಳನ್ನಾಡಿ 72 ವಿಕೆಟ್ ಕಬಳಿಸಿದ್ದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ಕುಲ್ದೀಪ್ ಯಾದವ್, 13.50 ಕೋಟಿ ರುಪಾಯಿಗೆ ಮುಂಬರುವ ಸೀಸನ್‌ನಲ್ಲಿ ಲಖನೌ ತಂಡವನ್ನು ಪ್ರತಿನಿಧಿಸಲಿದ್ದಾರೆ.
🚨 Announcement 🚨
Rishabh Pant and Kuldeep Yadav complete high-profile trade between @DelhiCapitals and @LucknowIPL.
Rishabh Pant all set to rejoin #DC at INR 15 Crore whereas Kuldeep Yadav will join #LSG at INR 13.5 Crore.
More Details ▶️ https://t.co/64HeOX143I… pic.twitter.com/tIEvj7fgNo— IndianPremierLeague (@IPL) June 23, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

