- Home
- Sports
- Cricket
- IPL 2026 ಟೂರ್ನಿ ಆರಂಭಕ್ಕೂ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ಹಿನ್ನಡೆ; ಧೋನಿ ಆರಂಭಿಕ ಐಪಿಎಲ್ ಪಂದ್ಯಗಳಿಂದ ಔಟ್!
IPL 2026 ಟೂರ್ನಿ ಆರಂಭಕ್ಕೂ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ಹಿನ್ನಡೆ; ಧೋನಿ ಆರಂಭಿಕ ಐಪಿಎಲ್ ಪಂದ್ಯಗಳಿಂದ ಔಟ್!
ಚೆನ್ನೈ: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮೊದಲೇ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಿಗ್ ಶಾಕ್ ಎದುರಾಗಿದೆ. ತಂಡದ ಮಾಜಿ ನಾಯಕ ಹಾಗೂ ಚಾಣಾಕ್ಷ ವಿಕೆಟ್ ಕೀಪರ್ ಧೋನಿ, ಆರಂಭಿಕ ಐಪಿಎಲ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

ಐಪಿಎಲ್ ಆರಂಭಕ್ಕೂ ಮುನ್ನ ಚೆನ್ನೈಗೆ ಬಿಗ್ ಶಾಕ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೊಸ ಸೀಸನ್ ಶುರುವಾಗೋಕೆ ಕೆಲವೇ ಗಂಟೆಗಳು ಬಾಕಿ ಇರುವಾಗ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ತಂಡದ ನಂಬಿಕಸ್ಥ ಆಟಗಾರ ಎಂ.ಎಸ್. ಧೋನಿ, ಕಾಲಿನ ಗಾಯದ ಕಾರಣ ಟೂರ್ನಿಯ ಮೊದಲ ಎರಡು ವಾರಗಳ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್‌ಗೆ ರಾಜಸ್ಥಾನ ರಾಯಲ್ಸ್ ಮೊದಲ ಸವಾಲು
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೇ ಶನಿವಾರ ಈ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿದೆ. ಸೋಮವಾರ ಸಂಜೆ ಗುವಾಹಟಿಯ ಬರ್ಸಾಪರಾ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ CSK ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಚೆನ್ನೈ ಫ್ರಾಂಚೈಸಿಯಿಂದ ಅಧಿಕೃತ ಪೋಸ್ಟ್
"ಎಂ.ಎಸ್. ಧೋನಿ ಸದ್ಯ ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಅವರು ಐಪಿಎಲ್ 2026ರ ಮೊದಲ ಎರಡು ವಾರಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಬೇಗ ಗುಣಮುಖರಾಗಿ, ತಲಾ" ಎಂದು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ಸಂಜು ಸ್ಯಾಮ್ಸನ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ
ಧೋನಿ ಅನುಪಸ್ಥಿತಿಯಲ್ಲಿ, ಭಾರತದ ಆಟಗಾರ ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ತಂಡದ ಮ್ಯಾನೇಜ್‌ಮೆಂಟ್ ಸಂಜು ಅವರನ್ನು ಧೋನಿಯ ಉತ್ತರಾಧಿಕಾರಿ ಎಂದೇ ಪರಿಗಣಿಸಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಹರಾಜಿಗೂ ಮುನ್ನ, ಒಂದು ದೊಡ್ಡ ಟ್ರೇಡ್ ಮೂಲಕ ಸಂಜು ಚೆನ್ನೈ ತಂಡಕ್ಕೆ ಬಂದಿದ್ದರು. ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರಂತಹ ಇಬ್ಬರು ಪ್ರಮುಖ ಆಟಗಾರರನ್ನು ರಾಜಸ್ಥಾನ ರಾಯಲ್ಸ್‌ಗೆ ನೀಡಿ, CSK ಸಂಜು ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.
ಧೋನಿಯ ಕಳೆದ ಸೀಸನ್ ಹೇಗಿತ್ತು?
2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ, ಧೋನಿ ಕೇವಲ ಐಪಿಎಲ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಕಳೆದ ಸೀಸನ್‌ನಲ್ಲಿ ಅವರು ಚೆನ್ನೈ ಪರ 14 ಪಂದ್ಯಗಳನ್ನು ಆಡಿದ್ದರು. ಇದರಲ್ಲಿ 135.17 ಸ್ಟ್ರೈಕ್ ರೇಟ್‌ನಲ್ಲಿ 196 ರನ್ ಗಳಿಸಿದ್ದರು.
ಚೆನ್ನೈ ಪಾಳಯದಲ್ಲಿ ಮನೆಮಾಡಿದ ಆತಂಕ
ಕಳೆದ ಸೀಸನ್‌ನಲ್ಲಿ ಋತುರಾಜ್ ಗಾಯಕ್ವಾಡ್ ಗಾಯದ ಕಾರಣ ಅಲಭ್ಯರಾದಾಗ, ಧೋನಿಯೇ ತಂಡವನ್ನು ಮುನ್ನಡೆಸಿದ್ದರು. ಧೋನಿ ಗಾಯಗೊಂಡಿರುವುದು ಚೆನ್ನೈ ಪಾಳಯದಲ್ಲಿ ಆತಂಕ ಮೂಡಿಸಿದೆ. ಆದರೆ, ಸಂಜು ಸ್ಯಾಮ್ಸನ್ ಅವರಂತಹ ಆಟಗಾರ ತಂಡದಲ್ಲಿರುವುದು ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

