ಐಪಿಎಲ್ 2026 ಸೀಸನ್‌ಗೆ ರಾಜಸ್ಥಾನ ರಾಯಲ್ಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಂದಿರುವ ಸಂಜು ಸ್ಯಾಮ್ಸನ್, ವಿಕೆಟ್ ಕೀಪಿಂಗ್ ಬದಲು ಔಟ್‌ಫೀಲ್ಡರ್ ಆಗಿ ಅಭ್ಯಾಸ ನಡೆಸುತ್ತಿದ್ದಾರೆ. ಎಂ.ಎಸ್. ಧೋನಿಯೇ ವಿಕೆಟ್ ಕೀಪಿಂಗ್ ಮುಂದುವರಿಸುವ ಸಾಧ್ಯತೆಗಳಿದ್ದು, ಸಂಜು ಅವರ ಹೊಸ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಚೆನ್ನೈ: ಐಪಿಎಲ್ 2026 ಸೀಸನ್‌ಗೆ ಇನ್ನೇನು ದಿನಗಣನೆ ಶುರುವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ (CSK) ಕ್ಯಾಂಪ್‌ನಿಂದ ಹೊರಬೀಳುತ್ತಿರುವ ಸುದ್ದಿಗಳು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿವೆ. ರಾಜಸ್ಥಾನ ರಾಯಲ್ಸ್‌ನಿಂದ CSKಗೆ ಬಂದಿರುವ ಸಂಜು ಸ್ಯಾಮ್ಸನ್, ಔಟ್‌ಫೀಲ್ಡ್‌ನಲ್ಲಿ ಫೀಲ್ಡಿಂಗ್ ಪ್ರಾಕ್ಟೀಸ್ ಮಾಡುತ್ತಿರುವ ಫೋಟೋಗಳು ಈಗ ಹಾಟ್ ಟಾಪಿಕ್ ಆಗಿವೆ. ಮಾಜಿ ಆಟಗಾರ ಅಶ್ವಿನ್ 'X' ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಎಲ್ಲಾ ಚರ್ಚೆಗಳಿಗೆ ಕಾರಣವಾಗಿದೆ.
ಫೀಲ್ಡಿಂಗ್ ಕೋಚ್ ಜೇಮ್ಸ್ ಫೋಸ್ಟರ್ ಅವರ ಗೈಡೆನ್ಸ್‌ನಲ್ಲಿ ಸಂಜು ಔಟ್‌ಫೀಲ್ಡ್‌ನಲ್ಲಿ ಹೈ ಕ್ಯಾಚ್‌ಗಳನ್ನು ಹಿಡಿಯುವ ಅಭ್ಯಾಸ ಮಾಡುತ್ತಿರುವುದನ್ನು ಫೋಟೋಗಳಲ್ಲಿ ನೋಡಬಹುದು. 'ಇದೇನಾದ್ರೂ ಸೂಚನೇನಾ, ಅಥವಾ ನಿಧಾನವಾಗಿ ಅಭ್ಯಾಸ ಮಾಡ್ಕೊಳ್ತಿದ್ದಾರಾ?' ಎಂದು ಅಶ್ವಿನ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ಅಭಿಮಾನಿಗಳಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಎಂ.ಎಸ್. ಧೋನಿಯಿಂದ ಸಂಜು ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ತಾರೆ ಅಂತ ಎಲ್ಲರೂ ಅಂದ್ಕೊಂಡಿದ್ದರು. ಆದರೆ, ಹೊಸ ವರದಿಗಳ ಪ್ರಕಾರ, 44 ವರ್ಷದ ಧೋನಿಯೇ ವಿಕೆಟ್ ಹಿಂದೆ ಮುಂದುವರಿಯಲಿದ್ದು, ಸಂಜು ಸ್ಪೆಷಲಿಸ್ಟ್ ಔಟ್‌ಫೀಲ್ಡರ್ ಆಗಿ ಆಡುವ ಸಾಧ್ಯತೆ ಇದೆ.
ಸಂಜು ಒಬ್ಬ ಅತ್ಯುತ್ತಮ ಅಥ್ಲೀಟ್ ಆಗಿದ್ದು, ಔಟ್‌ಫೀಲ್ಡ್‌ನಲ್ಲೂ ನಂಬಿಕಸ್ಥ ಫೀಲ್ಡರ್ ಅನ್ನೋದು ಈ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. 2026ರ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಂತರ ಸಂಜು ಚೆನ್ನೈ ಕ್ಯಾಂಪ್ ಸೇರಿದ್ದಾರೆ. ಭಾರತ ಕಪ್ ಗೆದ್ದ ಆ ಟೂರ್ನಿಯಲ್ಲಿ ಸಂಜು 'ಸರಣಿ ಶ್ರೇಷ್ಠ' ಪ್ರಶಸ್ತಿ ಪಡೆದಿದ್ದರು. ಕೊನೆಯ ಮೂರು ಪ್ರಮುಖ ಪಂದ್ಯಗಳಲ್ಲಿ ಸತತವಾಗಿ ಅರ್ಧಶತಕ ಬಾರಿಸಿ ಸಂಜು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.
ಬದಲಾವಣೆಯ ಹೋರಾಟ
11 ವರ್ಷಗಳ ಕಾಲ ರಾಜಸ್ಥಾನ ರಾಯಲ್ಸ್ ಜೊತೆಗಿನ ಸಂಬಂಧವನ್ನು ಮುಗಿಸಿಕೊಂಡು ಸಂಜು ಚೆನ್ನೈಗೆ ಬಂದಿದ್ದಾರೆ. ಈ ಟ್ರಾನ್ಸ್‌ಫರ್‌ನಲ್ಲಿ ರಾಜಸ್ಥಾನ ತಂಡ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಪಡೆದುಕೊಂಡಿದೆ. ಮಾರ್ಚ್ 30ರಂದು ಗುವಾಹಟಿಯಲ್ಲಿ ಸಂಜು ತಮ್ಮ ಹಳೆಯ ತಂಡವಾದ ರಾಜಸ್ಥಾನ ರಾಯಲ್ಸ್ ವಿರುದ್ಧವೇ ಚೆನ್ನೈ ಜೆರ್ಸಿಯಲ್ಲಿ ಮೊದಲ ಪಂದ್ಯ ಆಡಲಿದ್ದಾರೆ. ಅಂದು ಸಂಜು ಅವರ ಪಾತ್ರ ಏನಿರಲಿದೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
2023ರ ಬಳಿಕ ಆರನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟ ಸಿಎಸ್‌ಕೆ:
2023ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಐದನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು, ಮುಂಬೈ ಇಂಡಿಯನ್ಸ್ ದಾಖಲೆ ಸರಿಗಟ್ಟುವಲ್ಲಿ ಯಶಸ್ವಿಯಾಗಿತ್ತು.ಮುಂಬೈ ಇಂಡಿಯನ್ಸ್ ಕೂಡಾ ಐಪಿಎಲ್‌ನಲ್ಲಿ ಐದು ಟ್ರೋಫಿ ಗೆದ್ದಿದೆ. ಇನ್ನು ಧೋನಿ ಇದೀಗ ನಾಯಕತ್ವದಿಂದ ಕೆಳಗಿಳಿದಿದ್ದು, ಋತುರಾಜ್ ಗಾಯಕ್ವಾಡ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಸಿಎಸ್‌ಕೆ ಆರನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.


