ಐಪಿಎಲ್ ಅತೀ ದೊಡ್ಡ ಟ್ರೇಡ್ ಡೀಲ್, ಲಖನೌ ತೊರೆದು ಈ ತಂಡ ಸೇರಿಕೊಳ್ಳಲಿದ್ದಾರೆ ರಿಷಬ್ ಪಂತ್
ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ತ್ಯಜಿಸಿರುವ ರಿಷಬ್ ಪಂತ್ ಇದೀಗ ತಂಡವನ್ನೇ ತೊರೆಯುತ್ತಿದ್ದಾರೆ. ಅತೀ ದೊಡ್ಡ ಟ್ರೇಡ್ ಡೀಲ್ ಮೂಲಕ ಪಂತ್, ಬೇರೆ ತಂಡ ಸೇರಿಕೊಳ್ಳುತ್ತಿದ್ದಾರೆ.ಸ್ಪಿನ್ನರ್ ಜೊತೆ ಟ್ರೇಡ್ ಡೀಲ್ ಮಾತುಕತೆ ನಡೆದಿದೆ.

ಲಖನೌ ತಂಡದಿಂದ ದೂರ ಸರಿಯುತ್ತಿದ್ದಾರೆ ರಿಷಬ್ ಪಂತ್
ಐಪಿಎಲ್ 2026 ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ರಿಷಬ್ ಪಂತ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಪರಿಣಾಮ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಹೀನಾಯ ಸೋಲು, ಕಳಪೆ ಪ್ರದರ್ಶನ ಸೇರಿದಂತೆ ಹಲವು ಕಾರಣಗಳಿಂದ ರಿಷಬ್ ಪಂತ್ ಸ್ವಯಂಪ್ರೇರಿತವಾಗಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ಹಿಂದೆ ಸರಿದಿದ್ದರು. ಇದೀಗ ತಂಡದಿಂದಲೇ ದೂರ ಸರಿಯುತ್ತಿದ್ದಾರೆ.
ಯಾವ ತಂಡಕ್ಕೆ ರಿಷಬ್ ಪಂತ್
ರಿಷಬ್ ಪಂತ್ ಲಖನೌ ತಂಡ ತೊರೆದು ನೇರವಾಗಿ ಮರಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಳ್ಳುತ್ತಿದ್ದಾರೆ. ಟ್ರೇಡ್ ಡೀಲ್ ಮೂಲಕ ಲಖನೌ ತಂಡದಿಂದ ರಿಷಬ್ ಪಂತ್ ಡೆಲ್ಲಿ ತಂಡ ಸೇರಿಕೊಂಡರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್ ಲಖನೌ ಸೂಪರ್ ಜೈಂಟ್ಸ್ ತಂಡ ಸೇರಿಕೊಳ್ಳುತ್ತಿದ್ದಾರೆ. ಈ ಕುರಿತು ಮಾತುಕತೆಗಳು ಅಂತಿಮ ಹಂತ ತಲುಪಿದೆ ಎಂದು ವರದಿಯಾಗಿದೆ.
27 ಕೋಟಿ ರೂಗೆ ಖರೀದಿಸಿದ್ದ ಲಖನೌ
ಐಪಿಎಲ್ ಹರಾಜಿನಲ್ಲಿ ಲಖನೌ ತಂಡ ಬರೋಬ್ಬರಿ 27 ಕೋಟಿ ರೂಪಾಯಿ ನೀಡಿ ರಿಷಬ್ ಪಂತ್ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ರಿಷಬ್ ಪಂತ್ ಹೊರಮ್ಮಿದ್ದರು. ಆದರೆ ಪಂತ್ ನಾಯಕತ್ವಜಲ್ಲಿ ಲಖನೌ ತಂಡ 2025 ಹಾಗೂ 2026ಲ್ಲಿ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದೆ. ಮಾಲೀಕ ಸಂಜೀವ್ ಗೊಯೆಂಕಾ ಹಲವು ಬಾರಿ ಪಂತ್ ಜೊತೆಗಿನ ಮಾತುಕತೆ ಭಾರಿ ಸದ್ದು ಮಾಡಿತ್ತು. ಇದೀಗ ಹೊಸ ಬೆಳವಣಿಗೆ ನಡೆಯುತ್ತಿದೆ.
13 ಕೋಟಿ ರೂ ಕುಲ್ದೀಪ್ ಲಖನೌ ತಂಡಕ್ಕೆ
ಕುಲ್ದೀಪ್ ಯಾದವ್ 2026ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಪರ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. 13.25 ಕೋಟಿ ರೂಪಾಯಿ ಮೌಲ್ಯದ ಕುಲ್ದೀಪ್ ಯಾದವ್ 12 ಪಂದ್ಯದಿಂದ 10 ವಿಕೆಟ್ ಕಬಳಿಸಿದ್ದರು. ಇದೀಗ ಎರಡು ಕಳಪೆ ಪ್ರದರ್ಶನ ನೀಡಿದ ಆಟಗಾರರು ಐಪಿಎಲ್ ಟ್ರೇಡ್ ಡೀಲ್ ಮೂಲಕ ಅದಲು ಬದಲಾಗುತ್ತಿದ್ದಾರೆ. ಹೊಸ ತಂಡದಲ್ಲಿ ಅದೃಷ್ಠ ಪರೀಕ್ಷೆ ನಡೆಸಲಿದ್ದಾರೆ.
ಶೀಘ್ರದಲ್ಲೇ ಅಧಿಕೃತ ಘೋಷಣೆ
ರಿಷಬ್ ಪಂತ್ ಟ್ರೇಡ್ ಡೀಲ್ ಕುರಿತು ಶೀಘ್ರದಲ್ಲೇ ಉಭಯ ತಂಡಗಳು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ರಿಷಬ್ ಪಂತ್ ಮತ್ತೆ ಡೆಲ್ಲಿ ತಂಡ ಸೇರಿಕೊಳ್ಳುತ್ತಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಕಳಪೆ ಪ್ರದರ್ಶನ ನೀಡಿದ್ದ ಪಂತ್, ಲಖನೌ ತಂಡಕ್ಕೆ ದುಬಾರಿ ಮೊತ್ತಕ್ಕೆ ಬಿಕರಿಯಾಗಿದ್ದರು. ಇದೀಗ ಮತ್ತೆ ಪಂತ್ ಡೆಲ್ಲಿ ತಂಡ ಸೇರಿಕೊಳ್ಳುವ ತಯಾರಿಯಲ್ಲಿದ್ದಾರೆ.
ಐಪಿಎಲ್ 2027ರಲ್ಲಿ ಹಲವು ಬದಲಾವಣೆ
ಐಪಿಎಲ್ 2027ರಲ್ಲಿ ತಂಡದ ಕೆಲ ಆಟಗಾರರು ಅದಲು ಬದಲಾಗುವ ಸಾಧ್ಯತೆ ಇದೆ. ಟ್ರೇಡ್ ಮೂಲಕ ಕೆಲ ಬದಲಾವಣೆ ಕಸರತ್ತು ನಡೆಯುತ್ತಿದೆ. ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟಲು ಬದಲಾವಣೆ ಮಾಡುತ್ತಿದೆ. ಈ ಮೂಲಕ ಫೈನಲ್ ಪ್ರವೇಶಿಸಲು ಮುಂದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

