15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಭಾರತದ ಏಕದಿನ ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಮಾಜಿ ಕ್ರಿಕೆಟಿಗ ಫರೋಖ್ ಇಂಜಿನಿಯರ್ ಸಲಹೆ ನೀಡಿದ್ದಾರೆ. 2027ರ ವಿಶ್ವಕಪ್ ದೃಷ್ಟಿಯಿಂದ, ರೋಹಿತ್ ಶರ್ಮಾ ಜೊತೆ ವೈಭವ್ ಇನ್ನಿಂಗ್ಸ್ ಆರಂಭಿಸಬೇಕು ಮತ್ತು ಶುಭಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.
ನವದೆಹಲಿ: ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದೇ ಗುರುತಿಸಲ್ಪಡುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಅವರನ್ನು ಈಗಲೇ ಭಾರತದ ಏಕದಿನ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಕೂಗು ಕೇಳಿಬಂದಿದೆ. ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಫರೋಖ್ ಇಂಜಿನಿಯರ್ ಅವರು, 2027ರ ವಿಶ್ವಕಪ್ ದೃಷ್ಟಿಯಿಂದ ಸೂರ್ಯವಂಶಿ ಅವರನ್ನು ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ಗಿಲ್ ಸ್ಥಾನ ಬದಲಾವಣೆಗೆ ಸಲಹೆ
ಪ್ರಸ್ತುತ ರೋಹಿತ್ ಶರ್ಮಾ ಜೊತೆ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಆದರೆ ಫರೋಖ್ ಇಂಜಿನಿಯರ್ ಪ್ರಕಾರ, ಗಿಲ್ ಅವರನ್ನು ಮಧ್ಯಮ ಕ್ರಮಾಂಕದ 4ನೇ ಸ್ಥಾನಕ್ಕೆ ಇಳಿಸುವುದು ಸೂಕ್ತ. ಆದರ್ಶ ಪರಿಸ್ಥಿತಿಯೆಂದರೆ ಶುಭಮನ್ ಗಿಲ್ ಮತ್ತು ವೈಭವ್ ಸೂರ್ಯವಂಶಿ ಇಬ್ಬರೂ ತಂಡದಲ್ಲಿರಬೇಕು. ಗಿಲ್ ಪ್ರಸ್ತುತ ತಂಡದ ಅತ್ಯುತ್ತಮ ಬ್ಯಾಟರ್ ಆಗಿರುವುದರಿಂದ ಅವರು 4ನೇ ಸ್ಥಾನದಲ್ಲಿ ಆಡಲಿ, ಅದರಿಂದ ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಬಲ ಸಿಗುತ್ತದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ.
ಲೆಫ್ಟ್-ರೈಟ್ ಕಾಂಬಿನೇಷನ್ ವರ್ಕೌಟ್ ಆಗುತ್ತೆ
ರೋಹಿತ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಆರಂಭಿಕರಾಗಿ ಬಂದರೆ ಎಡಗೈ-ಬಲಗೈ ಬ್ಯಾಟಿಂಗ್ ಜೋಡಿಯಾಗುತ್ತದೆ. ಇದು ಎದುರಾಳಿ ಬೌಲರ್‌ಗಳಿಗೆ ತಲೆನೋವಾಗಲಿದೆ ಎಂಬುದು ಇಂಜಿನಿಯರ್ ಅವರ ವಾದ. ಸೂರ್ಯವಂಶಿಯಂತಹ ಬ್ಯಾಟರ್ ಓಪನಿಂಗ್‌ನಲ್ಲಿ ಮೈದಾನದ ಗ್ಯಾಪ್‌ಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿ ಬರಲಿ ಮತ್ತು ಗಿಲ್ 4ನೇ ಸ್ಥಾನದಲ್ಲಿ ಬರಲಿ, ಆಗ ನಮ್ಮ ಬ್ಯಾಟಿಂಗ್ ಲೈನ್‌ಅಪ್ ಅತ್ಯಂತ ಬಲಿಷ್ಠವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಸೂರ್ಯವಂಶಿ ಒಬ್ಬ ಜೀನಿಯಸ್
ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿ ಪಡೆದಿದ್ದರು. ಕೇವಲ 15 ವರ್ಷದ ಈ ಹುಡುಗ ಎರಡು ಅರ್ಧಶತಕ ಸೇರಿದಂತೆ 151 ರನ್ ಗಳಿಸಿದ್ದರು. ಅವರ ಈ ಪ್ರತಿಭೆಯನ್ನು ಕಂಡ ಇಂಜಿನಿಯರ್, ವೈಭವ್‌ನನ್ನು ವೆಸ್ಟ್ ಇಂಡೀಸ್ ದಂತಕಥೆ ವಿವ್ ರಿಚರ್ಡ್ಸ್‌ಗೆ ಹೋಲಿಸಿದ್ದಾರೆ. ಆತ ಒಬ್ಬ ಜೀನಿಯಸ್. ನಾನು ನೋಡಿದ ಅತ್ಯುತ್ತಮ ಬ್ಯಾಟರ್ ಎಂದರೆ ವಿವ್ ರಿಚರ್ಡ್ಸ್. ವೈಭವ್ ಅವರನ್ನು ಸರಿಯಾಗಿ ಬೆಳೆಸಿದರೆ ಅವರು ಭಾರತದ ಅತಿದೊಡ್ಡ ಆಸ್ತಿಯಾಗಲಿದ್ದಾರೆ ಎಂದು ಹೊಗಳಿದ್ದಾರೆ. ಒಟ್ಟಾರೆಯಾಗಿ 2027ರ ವಿಶ್ವಕಪ್‌ಗೆ ಇನ್ನು ಸಾಕಷ್ಟು ಸಮಯ ಇರುವುದರಿಂದ ಈ ಯುವ ಎಡಗೈ ಬ್ಯಾಟರ್‌ನನ್ನು ಈಗಲೇ ಅಂತರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸಬೇಕು ಎಂಬುದು ಫರೋಖ್ ಇಂಜಿನಿಯರ್ ಅವರ ಆಶಯವಾಗಿದೆ.


