ಸಚಿನ್‌ರ 15921 ರನ್‌ಗಳ ವಿಶ್ವ ದಾಖಲೆ ಮುರೀತಾರಾ ಜೋ ರೂಟ್? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಮ್ಯಾಂಚೆಸ್ಟರ್: ಇಂಗ್ಲೆಂಡ್‌ನ ಹಿರಿಯ ಬ್ಯಾಟರ್ ಜೋ ರೂಟ್ ಶುಕ್ರವಾರ ಒಂದೇ ದಿನ ಮೂವರು ದಿಗ್ಗಜ ಕ್ರಿಕೆಟಿಗರನ್ನು ಹಿಂದಿಕ್ಕಿ, ಟೆಸ್ಟ್‌ನ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಇದೀಗ ರೂಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ರೆಕಾರ್ಡ್ ಮುರೀತಾರಾ?

ಇಂಗ್ಲೆಂಡ್ ಅನುಭವಿ ಬ್ಯಾಟರ್ ಜೋ ರೂಟ್ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ 157 ಪಂದ್ಯಗಳಲ್ಲಿ 13409 ರನ್ ಬಾರಿಸುವ ಮೂಲಕ ಎರಡನೇ ಸ್ಥಾನಕ್ಕೇರಿದ್ದಾರೆ.
ಗರಿಷ್ಠ ರನ್ ಪಟ್ಟಿಯಲ್ಲಿ ರೂಟ್‌ಗಿಂತ ಮುಂದಿರುವವರು ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮಾತ್ರ. ಸಚಿನ್ 15921 ರನ್ ಗಳಿಸಿದ್ದು, 200 ಪಂದ್ಯಗಳನ್ನಾಡಿದ್ದಾರೆ.
ಇದನ್ನು ಮುರಿಯಲು ರೂಟ್‌ಗೆ ಇನ್ನು 2,512 ರನ್ ಅಗತ್ಯವಿದೆ. ರೂಟ್‌ರ ವಯಸ್ಸು, ಫಿಟ್ನೆಸ್ ಗಮನಿಸಿದರೆ ಸಚಿನ್‌ರ ವಿಶ್ವ ದಾಖಲೆ ಮುರಿಯುವುದು ಅಸಾಧ್ಯವೇನಲ್ಲ.
ರೂಟ್ 2023ರ ಫೆಬ್ರವರಿಯಿಂದ 2539 ರನ್ ಗಳಿಸಿದ್ದಾರೆ. 2024ರಲ್ಲೇ ಕೇವಲ 17 ಪಂದ್ಯಗಳಲ್ಲಿ 63.38ರ ಸರಾಸರಿಯಲ್ಲಿ 1556 ರನ್ ಸಿಡಿಸಿದ್ದರು.
ಕಳೆದ 6 ವರ್ಷಗಳಲ್ಲಿ ಅವರ ಸರಾಸರಿ 55ಕ್ಕಿಂತ ಕಡಿಮೆಯಾಗಿಲ್ಲ. ಈ ಬಾರಿ 5 ಪಂದ್ಯಗಳ 8 ಇನ್ನಿಂಗ್ಸ್‌ನಲ್ಲಿ 437 ರನ್ ಗಳಿಸಿದ್ದಾರೆ.
ಇನ್ನು, ಈ ವರ್ಷ ಇಂಗ್ಲೆಂಡ್‌ಗೆ 6 ಟೆಸ್ಟ್ ಬಾಕಿಯಿದೆ. ಭಾರತ ವಿರುದ್ಧ 1, ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯವಿದೆ. ಮುಂದಿನ ವರ್ಷ ಸೆಪ್ಟೆಂಬರ್‌ವರೆಗೆ ನ್ಯೂಜಿಲೆಂಡ್, ಪಾಕಿಸ್ತಾನ ವಿರುದ್ಧ ತಲಾ 3 ಪಂದ್ಯಗಳು ನಡೆಯಬೇಕಿವೆ.
ಈ ಎಲ್ಲಾ ಪಂದ್ಯಗಳಲ್ಲಿ ರೂಟ್ ಆಡುವ ಸಾಧ್ಯತೆ ಹೆಚ್ಚು. ಅವರಿಗೆ ಈಗ 34 ವರ್ಷವಾಗಿದ್ದು, ಫಿಟ್ನೆಸ್ ಕೂಡಾ ಕಾಯ್ದುಕೊಂಡಿದ್ದಾರೆ. ಹೀಗಾಗಿ ಮುಂದಿನ 3-4 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಮುಂದುವರಿಯಬಹುದು.
ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಸಚಿನ್‌ರ ವಿಶ್ವದಾಖಲೆಯನ್ನು ರೂಟ್ ಮುರಿಯುವ ಸಾಧ್ಯತೆಯಿದೆ. ಅಂದಹಾಗೆ, 2013ರಲ್ಲಿ ಸಚಿನ್ ನಿವೃತ್ತಿಯಾಗುವಾಗ ಅವರಿಗೆ 40 ವರ್ಷ.