ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಸಂಪೂರ್ಣ ಅಧಿಪತ್ಯ ಸಾಧಿಸಿದೆ. ಭಾರತ ಇನ್ನಿಂಗ್ಸ್‌ ಸೋಲಿನ ಭೀತಿಯಿಂದ ಪಾರಾಗಿದ್ದರೂ, ಗೆಲುವಿನ ಆಸೆ ಮರೀಚಿಕೆಯಾಗಿದೆ. ಕೊನೆಯ ದಿನದಾಟದಲ್ಲಿ ಭಾರತ ಸೋಲು ತಪ್ಪಿಸಿಕೊಳ್ಳುವತ್ತ ಗಮನ ಹರಿಸಲಿದೆ.

ಮ್ಯಾಂಚೆಸ್ಟರ್‌: ಸರಣಿಯ ನಿರ್ಣಾಯಕ ಪಂದ್ಯವಾಗಿರುವ 4ನೇ ಟೆಸ್ಟ್‌ ಮೇಲೆ ಇಂಗ್ಲೆಂಡ್‌ ಸಂಪೂರ್ಣ ಅಧಿಪತ್ಯ ಸಾಧಿಸಿದ್ದ ಹೊರತಾಗಿಯೂ, ಭಾರತ ದಿಟ್ಟ ಹೋರಾಟ ಪ್ರದರ್ಶಿಸುತ್ತಿದೆ. ಒಂದು ಹಂತದಲ್ಲಿ ಇನ್ನಿಂಗ್ಸ್‌ ಸೋಲಿನ ಭೀತಿಗೆ ಒಳಗಾಗಿದ್ದ ಭಾರತ ಸದ್ಯ ಚೇತರಿಸಿಕೊಂಡಿದ್ದು, ಕೊನೆ ದಿನದ ಕ್ಲೈಮ್ಯಾಕ್ಸ್‌ ಬಾಕಿ ಇಟ್ಟುಕೊಂಡಿದೆ. ಭಾರತದ ಗೆಲುವಿನ ಆಸೆ ಮರೀಚಿಕೆಯಾಗಿದ್ದರೂ ಸೋಲು ತಪ್ಪಿಸಲು ಹೋರಾಡುತ್ತಿದೆ.

ಭಾರತದ 358 ರನ್‌ಗೆ ಉತ್ತರವಾಗಿ 3ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 544 ರನ್‌ ಗಳಿಸಿದ್ದ ಇಂಗ್ಲೆಂಡ್‌ ಶನಿವಾರ 669 ರನ್‌ಗೆ ಆಲೌಟಾಯಿತು. ಮೊದಲ ಇನ್ನಿಂಗ್ಸ್‌ನ 311 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ 4ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 174 ರನ್‌ ಕಲೆಹಾಕಿದೆ. ತಂಡ ಇನ್ನೂ 137 ರನ್‌ ಹಿನ್ನಡೆಯಲ್ಲಿದೆ.

Scroll to load tweet…

ಸ್ಟೋಕ್ಸ್‌ ಅಬ್ಬರ:

ಶನಿವಾರ ಮ್ಯಾಂಚೆಸ್ಟರ್‌ ಕ್ರೀಡಾಂಗಣ ಸ್ಟೋಕ್ಸ್‌ ಅಬ್ಬರಕ್ಕೆ ಸಾಕ್ಷಿಯಾಯಿತು. 77 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಸ್ಟೋಕ್ಸ್‌ ಟೆಸ್ಟ್‌ನಲ್ಲಿ 14ನೇ ಶತಕ ಪೂರ್ಣಗೊಳಿಸಿದರು. ಅವರು 141 ರನ್‌ ಗಳಿಸಿ ಜಡೇಜಾಗೆ ವಿಕೆಟ್‌ ಒಪ್ಪಿಸಿದರು. ಲಿಯಾಮ್‌ ಡಾವ್ಸನ್‌ 26, ಬ್ರೈಡನ್‌ ಕಾರ್ಸ್‌ 47 ರನ್‌ ಗಳಿಸಿ ತಂಡವನ್ನು 650ರ ಗಡಿ ದಾಟಿಸಿದರು. ಜಡೇಜಾ 4, ಬುಮ್ರಾ 2 ವಿಕೆಟ್‌ ಕಿತ್ತರು.

ಆರಂಭಿಕ ಆಘಾತ:

ದೊಡ್ಡ ಹಿನ್ನಡೆ ಕಂಡ ಭಾರತ 2ನೇ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಮತ್ತಷ್ಟು ಆಘಾತಕ್ಕೆ ಒಳಗಾಯಿತು. 4 ಮತ್ತು 5ನೇ ಎಸೆತಗಳಲ್ಲಿ ಯಶಸ್ವಿ ಜೈಸ್ವಾಲ್‌, ಸಾಯಿ ಸುದರ್ಶನ್‌ರನ್ನು ಕ್ರಿಸ್‌ ವೋಕ್ಸ್‌ ಪೆವಿಲಿಯನ್‌ಗೆ ಅಟ್ಟಿದರು. ಆದರೆ ಕೆ.ಎಲ್‌.ರಾಹುಲ್‌ ಹಾಗೂ ನಾಯಕ ಗಿಲ್‌ ಹೋರಾಟ ಬಿಡಲಿಲ್ಲ. 3ನೇ ವಿಕೆಟ್‌ಗೆ ಜೊತೆಯಾದ ಈ ಜೋಡಿ 373 ಎಸೆತಗಳಲ್ಲಿ 174 ರನ್‌ ಸೇರಿಸಿತು. ಗಿಲ್‌ 167 ಎಸೆತಕ್ಕೆ ಔಟಾಗದೆ 78 ರನ್‌ ಗಳಿಸಿದ್ದರೆ, ರಾಹುಲ್‌ 210 ಎಸೆತಕ್ಕೆ ಔಟಾಗದೆ 87 ರನ್‌ ಸಿಡಿಸಿದ್ದಾರೆ.

ಸ್ಕೋರ್‌: ಭಾರತ 358/10 ಮತ್ತು 174/2 (4ನೇ ದಿನದಂತ್ಯಕ್ಕೆ) ರಾಹುಲ್‌ 87, ಗಿಲ್ 78, ವೋಕ್ಸ್‌ 48/2, ಇಂಗ್ಲೆಂಡ್‌ 669/10 (ಸ್ಟೋಕ್ಸ್‌ 141, ಕಾರ್ಸ್‌ 47, ಜಡೇಜಾ 4-143, ಬೂಮ್ರಾ 1-112, ಸುಂದರ್‌ 2-107)

11 ವರ್ಷ ಬಳಿಕ 600+ ರನ್‌ ನೀಡಿದ ಭಾರತ

ಭಾರತ ತಂಡ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ 11 ವರ್ಷಗಳ ಬಳಿಕ ಎದುರಾಳಿಗೆ 600ಕ್ಕೂ ಹೆಚ್ಚು ರನ್‌ ಬಿಟ್ಟುಕೊಟ್ಟಿತು. 2014ರಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್‌ ತಂಡ 8 ವಿಕೆಟ್‌ಗೆ 680 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತ್ತು.

ಮೊದಲ ಬಾರಿ 100+ ರನ್‌ ಕೊಟ್ಟ ಬುಮ್ರಾ

ಬುಮ್ರಾ ಇದೇ ಮೊದಲ ಬಾರಿ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ 100+ ರನ್‌ ಬಿಟ್ಟುಕೊಟ್ಟರು. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್‌ ಟೆಸ್ಟ್‌ನಲ್ಲಿ 99 ರನ್‌ ನೀಡಿದ್ದು ಈ ಹಿಂದಿನ ದಾಖಲೆ.

ಕೆ.ಎಲ್‌.ರಾಹುಲ್‌ 9000 ರನ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆ.ಎಲ್‌.ರಾಹುಲ್‌ 9000 ರನ್‌ ಪೂರ್ಣಗೊಳಿಸಿದರು. ಭಾರತ ಪರ ಕನ್ನಡಿಗ ರಾಹುಲ್‌ 72 ಟಿ20 ಪಂದ್ಯಗಳಲ್ಲಿ 2265, ಏಕದಿನದ 85 ಪಂದ್ಯಗಳಲ್ಲಿ 3043 ಹಾಗೂ 61 ಟೆಸ್ಟ್ ಪಂದ್ಯಗಳಲ್ಲಿ 3632 ರನ್‌ ಗಳಿಸಿದ್ದಾರೆ.

Scroll to load tweet…

7000 ರನ್‌, 200 ವಿಕೆಟ್‌: ಸ್ಟೋಕ್ಸ್‌ 3ನೇ ಕ್ರಿಕೆಟಿಗ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೆನ್‌ ಸ್ಟೋಕ್ಸ್‌ 7000 ರನ್‌ ಹಾಗೂ 200 ವಿಕೆಟ್‌ ಸಾಧನೆ ಮಾಡಿದ್ದಾರೆ. ಈ ಮೈಲುಗಲ್ಲು ತಲುಪಿದ 3ನೇ ಆಟಗಾರ. ವಿಂಡೀಸ್‌ನ ಗ್ಯಾರಿ ಸೋಬರ್ಸ್‌(8032 ರನ್‌, 235 ವಿಕೆಟ್), ದಕ್ಷಿಣ ಆಫ್ರಿಕಾದ ಕ್ಯಾಲಿಸ್‌ (13289 ರನ್‌, 292 ವಿಕೆಟ್‌) ಇತರ ಸಾಧಕರು.