ಕರೀಷ್ಮಾ ಮಾಜಿ ಗಂಡ ಸಂಜಯ್ ಕಪೂರ್ 10 ಸಾವಿರ ಕೋಟಿ ಆಸ್ತಿ ಯಾರಿಗೆ ಸೇರುತ್ತೆ?
ಜೇನುನೊಣ ನುಂಗಿ ಪೋಲೋ ಆಡುವಾಗಲೇ ನಿಧನರಾದ ಬಿಲಿಯನೇರ್ ಉದ್ಯಮಿ ಸಂಜಯ್ ಕಪೂರ್. ಈಗ ಕಂಪನಿ ಮತ್ತು ಆಸ್ತಿಯ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎದ್ದಿದೆ. ಮಕ್ಕಳು ಮತ್ತು ಮಾಜಿ ಪತ್ನಿ ಕರೀಷ್ಮಾ ಕಪೂರ್ ಗೆ ಏನು ಸಿಗಲಿದೆ?

ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರ ಮಾಜಿ ಪತಿ, ಬಿಲಿಯನೇರ್ ಉದ್ಯಮಿ ಸಂಜಯ್ ಕಪೂರ್ ಲಂಡನ್‌ನಲ್ಲಿ ಪೋಲೋ ಆಡುತ್ತಿದ್ದಾಗಲೇ ನಿಧನರಾಗಿದ್ದರು. ಸಂಜಯ್ ಕಪೂರ್ ಸಾವಿಗೆ ಅನಾಫಿಲ್ಯಾಕ್ಟಿಕ್ ಆಘಾತ ಎಂದು ವರದಿಯಾಗಿದೆ. ಅಂದ್ರೆ ಪಂದ್ಯವಾಡುವ ವೇಳೆ ಜೇನುನೊಣವನ್ನು ನುಂಗುವುದರಿಂದ ಸಂಜಯ್ ಕಪೂರ್ ಸಾವು ಆಗಿದೆ ಎಂದು ಹೇಳಲಾಗಿದೆ.
58 ವರ್ಷದ ಸಂಜಯ್ ಕಪೂರ್ ವಿಶ್ವ ದರ್ಜೆಯ ಆಟೋ ಕಾಂಪೊನೆಂಟ್ ಕಂಪನಿಯಾದ ಸೋನಾ ಕಾಮ್‌ಸ್ಟಾರ್‌ನ ಅಧ್ಯಕ್ಷರಾಗಿದ್ದರು. ತಂದೆ ಸುರೀಂದರ್ ನಿಧನದ ಬಳಿಕ ಸಂಜಯ್ ಕಂಪನಿಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಸಂಜಯ್ ಕಪೂರ್ ನೇತೃತ್ವದಲ್ಲಿ ಸೋನಾ ಕಾಮ್‌ಸ್ಟಾರ್ ಕಂಪನಿ ಭಾರತ, ಯುಎಸ್, ಚೀನಾ, ಮೆಕ್ಸಿಕೊ ಮತ್ತು ಸೆರ್ಬಿಯಾ ದೇಶಗಳಿಗೆ ತನ್ನ ವ್ಯಾಪಾರವನ್ನು ವಿಸ್ತರಿಸಿಕೊಂಡಿತ್ತು. ಈ ಮೂಲಕ ಸಂಜಯ್ ಕಪೂರ್ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು.
ಸಂಜಯ್ ಕಪೂರ್ ಆಟೋಮೊಬೈಲ್ ಕ್ಷೇತ್ರದಲ್ಲಿ ತಮ್ಮದೇ ಬೃಹತ್ ಸಾಮ್ರಾಜ್ಯವನ್ನು ಕಟ್ಟಿ ಯಶಸ್ವಿ ಉದ್ಯಮಿಯಾಗಿದ್ದರು. ಸಂಜಯ್ ಕಪೂರ್ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 31,000 ಕೋಟಿ ರೂ. (ಸುಮಾರು $4 ಬಿಲಿಯನ್) ಎಂದು ವರದಿಯಾಗಿದೆ. ಇದೀಗ ಸಂಜಯ್ ಕಪೂರ್ ನಿಧನದ ಬಳಿಕ ಕಂಪನಿಯ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಪ್ರಶ್ನೆ ಮೂಡಿದೆ.
ಸಂಜಯ್ ಕಪೂರ್ ನಿಧನದ ಮರುಕ್ಷಣವೇ ಅವರ ಉತ್ತರಾಧಿಕಾರಿ ಯಾರು? ಸೋನಾ ಕಾಮ್‌ಸ್ಟಾರ್‌ನ ಭವಿಷ್ಯದ ನಾಯಕತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಯೊಂದು ಮೂಡಿದೆ. ಸಂಜಯ್ ಕಪೂರ್ ಮಕ್ಕಳು ಇನ್ನು ಚಿಕ್ಕವರಾಗಿರೋದರಿಂದ ಅಷ್ಟು ದೊಡ್ಡ ಕಂಪನಿಯ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದು ಕಷ್ಟ ಸಾಧ್ಯ. ಉತ್ತರಾಧಿಕಾರಿ ಯಾರು ಎಂಬುದರ ಬಗ್ಗೆ ಇದುವರೆಗೂ ಸ್ಪಷ್ಟತೆ ಸಿಕ್ಕಿಲ್ಲ.
ಮಾಜಿ ಪತ್ನಿ ಕರೀಷ್ಮಾ ಕಪೂರ್‌ಗೆ ಏನೇನು ಸಿಗಲಿದೆ?
ಸಂಜಯ್ ಕಪೂರ್ ಅವರ ವೈಯಕ್ತಿಕ ಒಟ್ಟು ಆಸ್ತಿ ಸುಮಾರು $1.2 ಬಿಲಿಯನ್ (ಸುಮಾರು ರೂ.10,300 ಕೋಟಿ) ಎಂದು ಪೋರ್ಬ್ಸ್ ವರದಿ ಮಾಡಿದೆ. ಈ ಎಲ್ಲಾ ಆಸ್ತಿಯನ್ನು ಸಂಜಯ್ ಕಪೂರ್ ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ಪಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕರೀಷ್ಮಾ ಕಪೂರ್ ಜೊತೆಗಿನ ಡಿವೋರ್ಸ್ ಬಳಿಕ ಸಂಜಯ್ ಕಪೂರ್ ಮಕ್ಕಳಾದ ಸಮೈರಾ ಮತ್ತು ಕಿಯಾನ್‌ಗೆ ತಲಾ 14 ಕೋಟಿ ರೂ. ಮೌಲ್ಯದ ಬಾಂಡ್‌ಗಳು ಮತ್ತು ತಲಾ 10 ಲಕ್ಷ ರೂ. ಮಾಸಿಕ ಆದಾಯವನ್ನು ವ್ಯವಸ್ಥೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಪ್ರಿಯಾ ಸಚ್‌ದೇವ್ ಅವರಿಂದ 6 ವರ್ಷದ ಮಗ ಅಜಾರಿಯಸ್ ಕೂಡ ಇದ್ದಾನೆ.
ಉದ್ಯಮಿ ಸಂಜಯ್ ಕಪೂರ್ ಮೂರು ಮದುವೆಯಾಗಿದ್ದರು. ನಂದಿತಾ ಮಹತಾನಿ, ಕರಿಷ್ಮಾ ಕಪೂರ್ ಮತ್ತು ಪ್ರಿಯಾ ಸಚ್‌ದೇವ್ ಮೂವರು ಪತ್ನಿಯರಿದ್ದು, ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಸಂಜಯ್ ಕಪೂರ್ ಅವರನ್ನು ದೂರದೃಷ್ಟಿಯ ಉದ್ಯಮಿ ಮತ್ತು ಶ್ರದ್ಧಾಭರಿತ ಕುಟುಂಬ ವ್ಯಕ್ತಿ ಎಂದು ಸ್ಮರಿಸಲಾಗುತ್ತದೆ.