ಶೆಫಾಲಿ ಜರಿವಾಲಾ ಹಠಾತ್ ನಿಧನದ ಬೆನ್ನಲ್ಲೇ ಮೊದಲ ಪತಿಯ ಬಗ್ಗೆ ಹುಡುಕಾಟ!
ಕಾಂತಾ ಲಗಾ ಹಾಡಿನ ನಟಿ ಶೆಫಾಲಿ ಜರಿವಾಲಾ ಅವರ ಹಠಾತ್ ನಿಧನವು ಮನರಂಜನಾ ಲೋಕದಲ್ಲಿ ಆಘಾತ ಮೂಡಿಸಿದೆ. ಅವರ ಮೊದಲ ಪತಿ ಮೀಟ್ ಬ್ರದರ್ಸ್‌ನ ಹರ್ಮೀತ್ ಸಿಂಗ್ ಜೊತೆಗಿನ ಸಂಬಂಧದ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಶೆಫಾಲಿ ಮತ್ತು ಹರ್ಮೀತ್ ಅವರ ದಾಂಪತ್ಯ ಮತ್ತು ವಿಚ್ಛೇದನದ ಕಾರಣ ತಿಳಿದುಕೊಳ್ಳಿ.

2011ರಲ್ಲಿ ಬಿಡುಗಡೆಯಾದ ಪುನೀತ್ ರಾಜ್ ಕುಮಾರ್ ನಟನೆಯ ಹುಡುಗರು ಸಿನೆಮಾದ 'ನಾ ಬೋರ್ಡ್ ಇರದ ಬಸ್ಸಲಿ ಹತ್ತಿ ಬಂದ ಚೋಕರಿ' ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದ ನಟಿ, 2002ರ ಹಿಟ್ ಮ್ಯೂಸಿಕ್ ವಿಡಿಯೋ “ಕಾಂತಾ ಲಗಾ” ಮೂಲಕ ಪಾಪ್ ಸಂಸ್ಕೃತಿಯಲ್ಲಿ ಐಕಾನ್ ಆಗಿದ್ದ ನಟಿ ಮತ್ತು ಮಾಡೆಲ್ ಶೆಫಾಲಿ ಜರಿವಾಲಾ ಅವರು ಜೂನ್ 27ರಂದು ಶುಕ್ರವಾರ ಆಕಸ್ಮಿಕ ಮರಣ ಹೊಂದಿದ್ದಾರೆ. ಸಾವಿಗೆ ಹೃದಯಾಘಾತ ಕಾರಣ ಎನ್ನಲಾಗುತ್ತಿದೆ. ಆದರೆ ಸಾವಿನ ಬಗ್ಗೆ ಊಹಾಪೋಹಗಳು ಕೂಡ ಹುಟ್ಟಿಕೊಂಡಿದೆ. ನಟಿಗೆ 42 ವರ್ಷ ವಯಸ್ಸು. ಅವರ ಹಠಾತ್ ನಿಧನದ ಸುದ್ದಿ ಮನರಂಜನಾ ಜಗತ್ತಿನಲ್ಲಿ ಆಘಾತದ ಅಲೆ ಎಬ್ಬಿಸಿದೆ. ಶೆಫಾಲಿ ಜರಿವಾಲಾ ಅವರ ವೈಯಕ್ತಿಕ ಜೀವನವನ್ನೂ ಅಭಿಮಾನಿಗಳು ಈಗ ನೆನಪಿಸಿಕೊಳ್ಳುತ್ತಿದ್ದಾರೆ, ವಿಶೇಷವಾಗಿ ಅವರ ಮೊದಲ ಪತಿ ಮತ್ತು ಪ್ರಸಿದ್ಧ ಸಂಗೀತ ಜೋಡಿ ಮೀಟ್ ಬ್ರದರ್ಸ್‌ನ ಹರ್ಮೀತ್ ಸಿಂಗ್ ಜೊತೆಗಿನ ಸಂಬಂಧವನ್ನು ನೆನಪಿಸಿಕೊಂಡಿದ್ದಾರೆ.
ಹರ್ಮೀತ್ ಸಿಂಗ್ ಯಾರು?
ಹರ್ಮೀತ್ ಸಿಂಗ್ ಪ್ರಸಿದ್ಧ “ಮೀಟ್ ಬ್ರದರ್ಸ್” ಸಂಗೀತ ನಿರ್ದೇಶಕ ಜೋಡಿಯಲ್ಲಿ ಒಬ್ಬರು. ಆಗಸ್ಟ್ 25, 1980 ರಂದು ಜನಿಸಿದ ಹರ್ಮೀತ್, ತಮ್ಮ ಸಹೋದರ ಮನ್ಮೀತ್ ಜೊತೆ ಸೇರಿ ಬಾಲಿವುಡ್‌ನ ಹಲವು ಹಿಟ್ ಹಾಡುಗಳನ್ನು ಸಂಯೋಜಿಸಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ ಅವರು ಕಹಾನಿ ಘರ್ ಘರ್ ಕಿ, ಕುಸುಮ್, ಮತ್ತು ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಮುಂತಾದ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಂತರ ಅವರು ಸಂಗೀತದಲ್ಲಿ ಪೂರ್ತಿ ತೊಡಗಿಸಿಕೊಂಡರು ಮತ್ತು ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಅದರಲ್ಲೂ ರಾಯ್ ಚಿತ್ರದ ಸಂಗೀತಕ್ಕಾಗಿ ಐಫಾ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳು ಪ್ರಮುಖವು. 2018ರಲ್ಲಿ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಹರ್ಮೀತ್ ಈಗ ಸುನೈನಾ ಸಿಂಗ್ ಅವರನ್ನು ವಿವಾಹವಾಗಿದ್ದು, ಅವರಿಗೆ ಒಬ್ಬ ಮಗನಿದ್ದಾರೆ.
ಶೆಫಾಲಿ ಜರಿವಾಲಾ ಮತ್ತು ಹರ್ಮೀತ್ ಸಿಂಗ್ ಮದುವೆ ಜೀವನ
ಶೆಫಾಲಿ ಮತ್ತು ಹರ್ಮೀತ್ 2004ರಲ್ಲಿ ವಿವಾಹವಾದರೂ, ಅವರ ಮದುವೆ ಐದು ವರ್ಷಗಳಲ್ಲೇ 2009ರಲ್ಲಿ ವಿಚ್ಛೇದನಕ್ಕೆ ತಲುಪಿತು. ಈ ವಿಚ್ಛೇದನ ಸುಲಭವಾಗಿರಲಿಲ್ಲ. ಶೆಫಾಲಿ, ಹರ್ಮೀತ್ ವಿರುದ್ಧ ದೈಹಿಕ ಹಾಗೂ ಮಾನಸಿಕ ಕಿರುಕುಳ ಆರೋಪಿಸಿ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಶೆಫಾಲಿಯ ಹೇಳಿಕೆಯ ಪ್ರಕಾರ, ಹರ್ಮೀತ್ ತಮ್ಮ ಜಂಟಿ ಖಾತೆಯಿಂದ ಸುಮಾರು 12 ಲಕ್ಷ ರೂ. ಅವರನ್ನು ಕೇಳದೆ ತೆಗೆದುಕೊಂಡಿದ್ದರೆಂದು ಅವರು ಆರೋಪಿಸಿದ್ದರು.
2021ರಲ್ಲಿ ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಶೆಫಾಲಿ ತಮ್ಮ ದುಃಖದ ದಾಂಪತ್ಯದ ಬಗ್ಗೆ ತೆರೆದ ಮಾತನಾಡುತ್ತಾ, “ಯಾರೂ ನಿಮ್ಮನ್ನು ಮೆಚ್ಚುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮಹತ್ವದ್ದು. ಪ್ರತಿಯೊಂದು ಹಿಂಸೆ ದೈಹಿಕವಾಗಿರಲೇಬೇಕೆಂಬುದಿಲ್ಲ. ಮಾನಸಿಕ ಹಿಂಸೆ ಕೂಡ ತುಂಬಾ ನೋವನ್ನು ಉಂಟುಮಾಡುತ್ತದೆ,” ಎಂದು ಹೇಳಿದ್ದಾರೆ.
ಆರ್ಥಿಕ ಸ್ವಾತಂತ್ರ್ಯದ ಕುರಿತು ಶೆಫಾಲಿ, ನಾನು ಸ್ವತಂತ್ರವಾಗಿದ್ದರಿಂದ ವಿಚ್ಛೇದನದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ನಾನು ನನ್ನ ಹಣವನ್ನು ಸಂಪಾದಿಸುತ್ತಿದ್ದೆ. ನಮ್ಮ ದೇಶದಲ್ಲಿ ವಿಚ್ಛೇದನವನ್ನು ತಪ್ಪು ಎಂದು ನೋಡುತ್ತಾರೆ. ಆದರೆ ನಾನು ಬೆಳೆದ ರೀತಿಯಲ್ಲಿ, ಸಮಾಜದ ಬಗ್ಗೆ ಹೆಚ್ಚು ಕಾಳಜಿ ಇಲ್ಲದೆ ನನಗೆ ಸರಿಯೆಂದು ಅನ್ನಿಸಿದನ್ನು ಮಾಡುತ್ತೇನೆ. ನನ್ನ ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮತ್ತು ಬಲವಾದ ಬೆಂಬಲ ನನಗಿತ್ತು ಎಂದಿದ್ದರು.
ಶೆಫಾಲಿ ನಂತರ ತಮ್ಮ ಜೀವನವನ್ನು ಮುಂದುವರೆಸಿ, 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ವಿವಾಹವಾದರು. ಶೆಫಾಲಿ ಜರಿವಾಲಾ ಮತ್ತು ಪರಾಗ್ ತ್ಯಾಗಿ ಅವರ ಬಾಂಧವ್ಯವು ಅವರ ಜೀವನದ ಕಠಿಣ ಸಮಯದಲ್ಲಿ, ಅವರ ತಂದೆಯ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಬೆಂಬಲಕ್ಕೆ ನಿಂತಾಗ ಇಬ್ಬರ ಬಾಂಧವ್ಯವು ಗಾಢವಾಯಿತು. ಆ ಸಮಯದಲ್ಲಿ, ಶೆಫಾಲಿ ಪರಾಗ್ ಅವರ ಪೋಷಕರನ್ನು ಮುಂಬೈಗೆ ಕರೆತಂದು ಅವರನ್ನು ನೋಡಿಕೊಂಡರು ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅವರು ಮೊದಲೇ ಮದುವೆಯಾಗಬೇಕಿತ್ತು, ಆದರೆ ಕೌಟುಂಬಿಕ ಕಾರಣಗಳಿಗಾಗಿ ಅವರು ಮದುವೆಯನ್ನು ಮುಂದೂಡಿದರು.
ಪರಾಗ್ ತ್ಯಾಗಿ ಅವರು ದೂರದರ್ಶನ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ಸಕ್ರಿಯತೆಯನ್ನು ಮುಂದುವರಿಸಿದ್ದಾರೆ. ವರದಿಗಳ ಪ್ರಕಾರ, ಶೆಫಾಲಿ ಜರಿವಾಲಾ ಅವರ ಅಂತ್ಯಕ್ರಿಯೆ ಇಂದು, ಜೂನ್ 28, 2025 ರಂದು ಓಶಿವಾರಾದ ಸ್ಮಶಾನದಲ್ಲಿ ನಡೆಯಲಿದೆ. ಬಾಲಿವುಡ್ ಲೈಫ್‌ಗೆ ನೀಡಿದ ಸಂದರ್ಶನದಲ್ಲಿ, ಶೆಫಾಲಿ ಹೆಣ್ಣು ಮಗುವನ್ನು ದತ್ತು ಪಡೆಯುವ ತನ್ನ ಬಹುದಿನಗಳ ಆಸೆಯನ್ನು ಹಂಚಿಕೊಂಡಿದ್ದರು.