ಪ್ರಭಾಸ್ ಗೆ ತ್ರಿಪ್ತಿ ದಿಮ್ರಿ ನಾಯಕಿ, ರಾಮ್ ಗೋಪಾಲ್ ವರ್ಮಾ ಪುಲ್ ಖುಷ್!
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಎದುರು ತ್ರಿಪ್ತಿ ದಿಮ್ರಿ ನಾಯಕಿಯಾಗಿ ನಟಿಸಲಿದ್ದಾರೆ. ರಾಮ್ ಗೋಪಾಲ್ ವರ್ಮಾ ಈ ಜೋಡಿಯನ್ನು ಬಾಲಿವುಡ್‌ನ ಮುಂದಿನ ದೊಡ್ಡ ತಾರೆಗಳು ಎಂದು ಕೊಂಡಾಡಿದ್ದಾರೆ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಬಹು ನಿರೀಕ್ಷಿತ ಚಿತ್ರ ‘ಸ್ಪಿರಿಟ್’ ಚಿತ್ರದಲ್ಲಿ ನಾಯಕ ನಟ ಪ್ರಭಾಸ್ ಅವರ ಎದುರು ಯುವ ಪ್ರತಿಭೆ ತ್ರಿಪ್ತಿ ದಿಮ್ರಿ ಅವರನ್ನು ನಾಯಕಿಯಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಈ ಸುದ್ದಿ ಫಿಲ್ಮ್ ಇಂಡಸ್ಟ್ರಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ, ವಿಶೇಷವಾಗಿ ತ್ರಿಪ್ತಿಯ ನಟನೆಯಲ್ಲಿನ ಪ್ರಭಾವ ಮತ್ತು ‘ಅನಿಮಲ್’ ಚಿತ್ರದ ಯಶಸ್ಸಿನ ನಂತರ ಚರ್ಚೆ ಹುಟ್ಟುಹಾಕಿದೆ.
ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಈ ಆಯ್ಕೆ ಬಗ್ಗೆ ಖುಷಿ ವ್ಯಕ್ತಪಡಿಸಿ, ವಂಗಾ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ X (ಹಿಂದಿನ ಟ್ವಿಟರ್) ಖಾತೆಯಲ್ಲಿ, ಅವರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, “ಸಂದೀಪ್ ರೆಡ್ಡಿ ಅವರ ನಿರ್ದೇಶನ ಹಾಗೂ ತ್ರಿಪ್ತಿ ದಿಮ್ರಿಯ ‘ಅನಿಮಲ್’ ಚಿತ್ರದಲ್ಲಿ ನೀಡಿದ ಅದ್ಭುತ ಅಭಿನಯ, ಈ ಜೋಡಿಯು ಬಾಲಿವುಡ್‌ನ ಮುಂದಿನ ದೊಡ್ಡ ತಾರೆಗಳಾಗಿ ಬೆಳೆವುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಬರೆದಿದ್ದಾರೆ. ಅವರು ತ್ರಿಪ್ತಿಗೆ ಶುಭಾಶಯ ಕೋರಿದ್ದಾರೆ ಮತ್ತು ‘ನಿನ್ನ ಬೆಳವಣಿಗೆ ಆಕಾಶಕ್ಕೇ ಹಾರಲಿ’ ಎಂದು ಕವಿತೆಯಂತಹ ಮಾತುಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತ್ರಿಪ್ತಿ ದಿಮ್ರಿ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುದ್ದಿ ಖಚಿತಪಡಿಸುತ್ತಾ, ಸಂತೋಷದ ಭಾವನೆ ವ್ಯಕ್ತಪಡಿಸಿದ್ದಾರೆ. “ಇಷ್ಟೊಂದು ದೊಡ್ಡ ಪ್ರಯಾಣದ ಭಾಗವಾಗಿರುವೆ ಎಂಬುದನ್ನು ಇನ್ನೂ ನಂಬಲಾಗುತ್ತಿಲ್ಲ. ನಂಬಿಕೆ ಇಟ್ಟು ಅವಕಾಶಕೊಟ್ಟಿರುವುದಕ್ಕೆ ಧನ್ಯವಾದಗಳು ಸಂದೀಪ್ ಸರ್” ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ಜೋಡಿಯಾಗಿ ಮೊದಲ ಬಾರಿಗೆ ತೆರೆಯ ಮೇಲೆ ಬರುತ್ತಿದ್ದಾರೆ. ಈ ಹಿಂದೆ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆಂಬ ಮಾತುಗಳಿದ್ದರೂ, ಅವರು ನಿರ್ಧಿಷ್ಟ ಬೇಡಿಕೆಗಳ ಕಾರಣದಿಂದಾಗಿ ಚಿತ್ರದಿಂದ ಹೊರ ನಡೆದಿದ್ದಾರೆ ಎಂಬ ವರದಿಗಳಿವೆ. ದೀಪಿಕಾ ಅವರು ಹೆಚ್ಚು ಸಂಭಾವನೆ, ಲಾಭದಲ್ಲಿ ಪಾಲು ಹಾಗೂ ಕೇವಲ ಎಂಟು ಗಂಟೆಗಳ ಕೆಲಸದ ಸಮಯವನ್ನು ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದ್ದು, ಈ ಶರತ್ತುಗಳು ನಿರ್ದೇಶಕ ವಂಗಾ ಅವರಿಗೆ ಇಷ್ಟವಾಗಲಿಲ್ಲ ಎನ್ನಲಾಗಿದೆ.
ಇನ್ನು ವಿಶೇಷ ಮಾಹಿತಿ ಎಂದರೆ, ತ್ರಿಪ್ತಿ ದಿಮ್ರಿ 'ಸ್ಪಿರಿಟ್' ನಂತರ ವಂಗಾ ಅವರ ಇನ್ನೊಂದು ಬಹು ನಿರೀಕ್ಷಿತ ಚಿತ್ರವಾದ 'ಅನಿಮಲ್ ಪಾರ್ಕ್' ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಆದರೆ, ಈ ಚಿತ್ರವನ್ನು 'ಸ್ಪಿರಿಟ್' ಶೂಟಿಂಗ್ ಪೂರ್ಣವಾದ ನಂತರವೇ ಆರಂಭಿಸಲಾಗುವುದು ಎಂಬುದಾಗಿ ದೃಢಪಡಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ತ್ರಿಪ್ತಿ ದಿಮ್ರಿಗೆ ಬಾಲಿವುಡ್‌ನಲ್ಲಿ ಮತ್ತಷ್ಟು ಒಳ್ಳೆಯ ಸ್ಥಾನ ಅವಕಾಶ ತಂದು ಕೊಡಲಿದೆ ಎಂಬುದರಲ್ಲಿ ಅನುಮಾನವಿಲ್ಲ. ‘ಸ್ಪಿರಿಟ್’ ಚಿತ್ರದ ಮೂಲಕ ಅವರು ತಮ್ಮ ಅಭಿನಯ ಸಾಮರ್ಥ್ಯವನ್ನು ಮತ್ತೊಮ್ಮೆ ಜನತೆಗೆ ಸಾಬೀತುಪಡಿಸಲಿದ್ದಾರೆ ಎಂಬ ನಿರೀಕ್ಷೆಯಿದೆ. ಇದರಿಂದಾಗಿ ಪ್ರಭಾಸ್ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಈ ಜೋಡಿಯು ತೆರೆಯ ಮೇಲೆ ನೋಡಲು ಕುತೂಹಲದಲ್ಲಿ ಕಾದಿದ್ದಾರೆ.
ತ್ರಿಪ್ತಿ ಅವರನ್ನು ನಾಯಕಿಯಾಗಿ ನಿರ್ಮಾಪಕರು ಘೋಷಿಸಿದ್ದರಿಂದ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. 2017 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ತ್ರಿಪ್ತಿ ಕಡಿಮೆ ಅವಧಿಯಲ್ಲಿಯೇ ಬಾಲಿವುಡ್‌ನಲ್ಲಿ ಜನಪ್ರಿಯ ನಟಿಯಾಗಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅವರ 'ಅನಿಮಲ್' ಸೇರಿದಂತೆ ತ್ರಿಪ್ತಿ ನಟಿಸಿದ ಪಾತ್ರಗಳು ಹೆಚ್ಚಿನ ಗಮನ ಸೆಳೆದಿವೆ. ಸಂದೀಪ್ ಅವರ ನಿರ್ದೇಶನದ ಪ್ರಭಾಸ್ ನಟನೆಯ ಚಿತ್ರದಲ್ಲಿ ತ್ರಿಪ್ತಿ ನಟಿಸುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಿನಿಪ್ರಿಯರು ಉತ್ಸಾಹದಿಂದ ಸ್ವಾಗತಿಸಿದ್ದಾರೆ.