'ತುಂಬಾ ದಪ್ಪಗಿದ್ದೀ', ಬಾಡಿ ಶೇಮಿಂಗ್ ಎದುರಿಸಿದ್ದ ಖ್ಯಾತ ನಟಿ; ಡಿಪ್ರೆಶನ್‌ನಿಂದ ಮನೆಯಲ್ಲೇ ಲಾಕ್ ಮಾಡ್ಕೊಂಡಿದ್ರು!
ಆಕೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ. 17 ನೇ ವಯಸ್ಸಿನಲ್ಲಿ ಮನೆ ತೊರೆದು ಹಲವು ಕೆಲಸಗಳನ್ನು ಮಾಡಿ ನಟಿಯಾದರು. ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡರು. ಆದ್ರೆ ಬಾಡಿಶೇಮಿಂಗ್‌ಗೆ ಒಳಗಾಗಿ ಸಿಕ್ಕಾಪಟ್ಟೆ ಟ್ರೋಲ್ ಆದರು. ಖಿನ್ನತೆಗೊಳಗಾದ ನಟಿ, ಜನರನ್ನು ನೋಡೋಕೆ ಹಿಂಜರಿದು ಮನೆಯೊಳಗೇ ಲಾಕ್ ಮಾಡ್ಕೊಂಡಿದ್ರು. ಯಾರು ಆ ನಟಿ?
ಸಿನಿಮಾ ಇಂಡಸ್ಟ್ರಿ ಅಂದ್ಮೇಲೆ ಅಲ್ಲಿ ಪ್ರತಿಭೆಗಿಂತ ಸೌಂದರ್ಯಕ್ಕೆ ಹೆಚ್ಚು ಬೆಲೆಯಿದೆ. ಹೀಗಾಗಿ ನಟ-ನಟಿಯರು ತಮ್ಮ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಯಾವಾಗಲೂ ಫಿಟ್ ಅಂಡ್ ಫೈನ್ ಆಗಿರುವಂತೆ ನೋಡಿಕೊಳ್ಳುತ್ತಾರೆ. ಸ್ವಲ್ಪ ದಪ್ಪ ಆದರೂ ಬಾಡಿ ಶೇಮಿಂಗ್‌ಗೆ, ಟ್ರೋಲ್‌ಗೆ ಒಳಗಾಗಬೇಕಾಗುತ್ತದೆ. ಹಾಗೆಯೇ ಬಾಲಿವುಡ್‌ನ ರಾಷ್ಟ್ರವಿಜೇತ ನಟಿಯೊಬ್ಬರು ತಮ್ಮ ಹೆಚ್ಚುವರಿ ತೂಕಕ್ಕಾಗಿ ಟೀಕಿಸಲ್ಪಟ್ಟರು. ಸಾಲು ಸಾಲು ಚಿತ್ರಗಳು ಸೋತು ಹೋದ ಬೆನ್ನಲ್ಲೇ ಬಾಡಿ ಶೇಮಿಂಗ್‌ನಿಂದ ಟ್ರೋಲ್ ಆಗಿ ಖಿನ್ನತೆಯನ್ನು ಎದುರಿಸಿದರು.
ರಾಷ್ಟ್ರಪ್ರಶಸ್ತಿ ವಿಜೇತ ನಟಿ 17ಕ್ಕೆ ಮನೆ ತೊರೆದು ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಬೇಕೆಂದು ಬಯಸಿದ್ದರು. ನಟಿಯಾಗುವ ಮೊದಲು ಅವರು PR ಸಲಹೆಗಾರರಾಗಿ YRF ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ನಟಿಯಾದರೂ. ಆ ಬಳಿಕ ಖಿನ್ನತೆಗೆ ಜಾರಿ ಎಲ್ಲವನ್ನೂ ಕಳೆದುಕೊಳ್ಳುವಂತಾಯ್ತು. ಆಕೆ ಬೇರೆ ಯಾರೂ ಅಲ್ಲ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ.
ಪರಿಣಿತಿ ಚೋಪ್ರಾ ಅವರು ಅಂಬಾಲಾದ ಜೀಸಸ್ ಮತ್ತು ಮೇರಿ ಕಾನ್ವೆಂಟ್‌ನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಲಂಡನ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ನಟಿ 17ನೇ ವಯಸ್ಸಿನಲ್ಲಿ ಮನೆ ತೊರೆದರು. ಮ್ಯಾಂಚೆಸ್ಟರ್ ಬಿಸಿನೆಸ್ ಸ್ಕೂಲ್‌ನಿಂದ ವ್ಯಾಪಾರ, ಹಣಕಾಸು ಮತ್ತು ಅರ್ಥಶಾಸ್ತ್ರದಲ್ಲಿ ಟ್ರಿಪಲ್ ಗೌರವ ಪದವಿಯನ್ನು ಪಡೆದರು. ಅಧ್ಯಯನ ಮಾಡುವಾಗ, ನಟಿ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್‌ಗೆ ಅರೆಕಾಲಿಕ ಅಡುಗೆ ವಿಭಾಗದ ತಂಡದ ನಾಯಕಿಯಾಗಿ ಕೆಲಸ ಮಾಡುತ್ತಿದ್ದರು.
ಪರಿಣಿತಿ ಚೋಪ್ರಾ ಭಾರತಕ್ಕೆ ಹಿಂತಿರುಗಿದಾಗ, ಅವರು ಯಶ್ ರಾಜ್ ಫಿಲ್ಮ್ಸ್‌ನ ಮಾರ್ಕೆಟಿಂಗ್ ವಿಭಾಗದಲ್ಲಿ ಇಂಟರ್ನ್‌ಶಿಪ್ ಪಡೆದರು, ನಿರ್ಮಾಣ ಕಂಪನಿಯಲ್ಲಿ ಸಾರ್ವಜನಿಕ ಸಂಪರ್ಕ ಸಲಹೆಗಾರರಾಗಿ ಸೇರಿಕೊಂಡರು. ನಂತರ, 2010 ರಲ್ಲಿ ಬ್ಯಾಂಡ್ ಬಾಜಾ ಬಾರಾತ್‌ಗಾಗಿ ಪ್ರಚಾರಕ್ಕಾಗಿ ಕೆಲಸ ಮಾಡುವಾಗ, ಪರಿಣಿತಿ ಅವರು ನಟಿಯಾಗಲು ಬಯಸುತ್ತಾರೆ ಎಂದು ಅರಿತುಕೊಂಡರು ಮತ್ತು ನಟನಾ ಶಾಲೆಗೆ ಸೇರಲು YRF ನಲ್ಲಿ ತಮ್ಮ ಕಾರ್ಯನಿರ್ವಾಹಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು.
ಪರಿಣಿತಿ ಚೋಪ್ರಾ ಅವರು ರಣವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಅವರೊಂದಿಗೆ ರೊಮ್ಯಾಂಟಿಕ್ ಕಾಮಿಡಿ ಲೇಡೀಸ್ ವರ್ಸಸ್ ರಿಕಿ ಬಹ್ಲ್‌ನಲ್ಲಿ ಪೋಷಕ ಪಾತ್ರದಲ್ಲಿ ಸಿನಿಮಾಕ್ಕೆ ಚೊಚ್ಚಲ ಪ್ರವೇಶ ಮಾಡಿದರು. ಚಿತ್ರವು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಗಲ್ಲಾಪೆಟ್ಟಿಗೆಯಲ್ಲಿ ಮಧ್ಯಮ ಯಶಸ್ಸನ್ನು ಕಂಡಿತು. ಪರಿಣಿತಿ ಚೋಪ್ರಾ ಅವರ ಎರಡನೇ ಚಿತ್ರ ಅರ್ಜುನ್ ಕಪೂರ್ ಜೊತೆಯಲ್ಲಿ ಹಬೀಬ್ ಫೈಸಲ್ ಅವರ ಆಕ್ಷನ್ ರೋಮ್ಯಾಂಟಿಕ್ ಡ್ರಾಮಾ ಇಶಾಕ್ಜಾದೆ. ಚಿತ್ರದಲ್ಲಿನ ಅವರ ಪಾತ್ರವು ಅವರಿಗೆ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿತು.
'ನಾನು ಚೆನ್ನಾಗಿ ತಿನ್ನುವುದನ್ನು ಮತ್ತು ಮಲಗುವುದನ್ನು ನಿಲ್ಲಿಸಿದೆ. ಆ ಸಮಯದಲ್ಲಿ ಯಾವುದೇ ಸ್ನೇಹಿತರನ್ನು ಹೊಂದಿರಲಿಲ್ಲ. ನಾನು ಜನರನ್ನು ಭೇಟಿಯಾಗಲಿಲ್ಲ. ನನ್ನ ಕುಟುಂಬ ಸೇರಿದಂತೆ ಎಲ್ಲರೊಂದಿಗೆ ಸಂಪರ್ಕ ಕಡಿತಗೊಳಿಸಿದ್ದೆ. ನಾನು ನನ್ನ ಕೋಣೆಯಲ್ಲಿ ಟಿವಿ ನೋಡುತ್ತಿದ್ದೆ, ಮಲಗುತ್ತಿದ್ದೆ, ನಾನು ಸೋಮಾರಿಯಾಗಿದ್ದೆ. ನಾನೊಬ್ಬ ಸಾಮಾನ್ಯ ಖಿನ್ನತೆಗೆ ಒಳಗಾದ ಹುಡುಗಿ. ನಾನು ಸುಮಾರು ಆರು ತಿಂಗಳ ಕಾಲ ಮಾಧ್ಯಮವನ್ನು ಭೇಟಿ ಮಾಡಲಿಲ್ಲ' ಎಂದು ತಿಳಿಸಿದ್ದರು.
ತನ್ನ ಸಹೋದರ ಹೇಗೆ ಗುಣಮುಖನಾಗಲು ಸಹಾಯ ಮಾಡಿದನೆಂದು ಪರಿಣಿತಿ ಚೋಪ್ರಾ ನೆನಪಿಸಿಕೊಂಡಿದ್ದರು. ನನ್ನ ಸಹೋದರ ಮತ್ತು ನನ್ನ ಸ್ನೇಹಿತೆ ಖಿನ್ನತೆಯಿಂದ ಹೊರ ಬರಲು ನನಗೆ ಸಹಾಯ ಮಾಡಿದರು. 2016 ರ ಆರಂಭದ ವೇಳೆಗೆ ಉತ್ತಮವಾಗಲು ಪ್ರಾರಂಭಿಸಿದೆ. ಫಿಟ್ ಆಗಲು ಎಲ್ಲಾ ರೀತಿಯ ಪ್ರಯತ್ನ ಮಾಡಿದೆ ಎಂದು ನಟಿ ಹೇಳಿದ್ದರು.
ನಟಿ ಇತ್ತೀಚೆಗೆ ರಾಜಕಾರಣಿ ರಾಘವ್ ಚಡ್ಡಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಅದ್ದೂರಿ ಸಮಾರಂಭದಲ್ಲಿ ಇಬ್ಬರೂ ವಿವಾಹವಾದರು. ದಂಪತಿಗಳು ಲಂಡನ್‌ನಲ್ಲಿ ಓದುತ್ತಿರುವಾಗ ಪರಸ್ಪರ ಭೇಟಿಯಾದರು ಎಂದು ತಿಳಿದುಬಂದಿದೆ. ನಟಿ, ಪರಿಣಿತಿ ಚೋಪ್ರಾ 'ಮಿಷನ್ ರಾಣಿಗಂಜ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಿನು ಸುರೇಶ್ ದೇಸಾಯಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಕುಮುದ್ ಮಿಶ್ರಾ ಮತ್ತು ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅಕ್ಟೋಬರ್ 6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.