ಲಾಪತಾ ಲೇಡೀಸ್ ಚಿತ್ರತಂಡದ ಮೇಲೆ ಕತೆ ಕದ್ದ ಆರೋಪ: ಅಷ್ಟಕ್ಕೂ ಏನಾಯ್ತು?
ಅರೇಬಿಕ್ ಭಾಷೆಯ ಕಿರುಚಿತ್ರ ‘ಬುರ್ಕಾ ಸಿಟಿ’ ಕಥೆಯನ್ನು ಕಿರಣ್ ರಾವ್ ತಮ್ಮ ಸಿನಿಮಾದಲ್ಲಿ ನಕಲು ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಆರೋಪಿಸಿದ್ದಾರೆ.

ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮ ನಿರ್ದೇಶನಗೊಂಡಿದ್ದ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಚಿತ್ರತಂಡದ ವಿರುದ್ಧ ಕತೆ ಕದ್ದಿರುವ ಆರೋಪ ಕೇಳಿಬಂದಿದೆ.
ಅರೇಬಿಕ್ ಭಾಷೆಯ ಕಿರುಚಿತ್ರ ‘ಬುರ್ಕಾ ಸಿಟಿ’ ಕಥೆಯನ್ನು ಕಿರಣ್ ರಾವ್ ತಮ್ಮ ಸಿನಿಮಾದಲ್ಲಿ ನಕಲು ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ ‘ಬುರ್ಖಾ ಸಿಟಿ’ ಕಿರುಚಿತ್ರದ ವೀಡಿಯೋ ತುಣಕನ್ನು ಪೋಸ್ಟ್ ಮಾಡಿದ್ದಾರೆ.
2019ರಲ್ಲಿ ಬಂದ ಈ ಶಾರ್ಟ್‌ಮೂವಿಯಲ್ಲಿ ವ್ಯಕ್ತಿಯೊಬ್ಬ ಬುರ್ಖಾ ಧರಿಸಿರುವ ಪತ್ನಿಯೊಂದಿಗೆ ಶಾಪಿಂಗ್ ಮಾಡುತ್ತಾ, ಆಕಸ್ಮಿಕವಾಗಿ ತಿಳಿಯದೇ ಬುರ್ಖಾ ಧರಿಸಿದ ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತರುತ್ತಾನೆ.
2024ರಲ್ಲಿ ತೆರೆಗೆ ಬಂದ ‘ಲಾಪತಾ ಲೇಡೀಸ್’ ಸಿನಿಮಾದಲ್ಲೂ ತಲೆ ಮೇಲೆ ಸೆರಗು ಹೊದ್ದ ಹೆಣ್ಣನ್ನು ತನ್ನ ಪತ್ನಿಯೆಂದು ಭಾವಿಸಿ ವ್ಯಕ್ತಿಯೊಬ್ಬ ಮನೆಗೆ ಕರೆತರುತ್ತಾನೆ. ಇದೇ ಈ ಸಿನಿಮಾ ಕಥೆಯ ಪ್ರಧಾನ ಎಳೆಯೂ ಆಗಿದೆ.
ಆಸ್ಕರ್ ರೇಸ್‌ನಿಂದ ಹೊರಬಿದ್ದ ‘ಲಾಪತಾ ಲೇಡೀಸ್’: ಈ ಬಾರಿಯ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ನಾಮನಿರ್ದೇಶನಗೊಂಡು ನಿರೀಕ್ಷೆ ಹುಟ್ಟಿಸಿದ್ದ ಕಿರಣ್ ರಾವ್ ನಿರ್ದೇಶನದ ಹಿಂದಿಯ ‘ಲಾಪತಾ ಲೇಡೀಸ್’ಸಿನಿಮಾ 97ನೇ ಆಸ್ಕರ್ ರೇಸ್‌ನಿಂದ ಹೊರಬಿದ್ದಿದೆ.
ಆದರೆ ಬ್ರಿಟನ್‌ನಿಂದ ನಾಮ ನಿರ್ದೇಶನಗೊಂಡಿದ್ದ, ಭಾರತ ಮೂಲದ ನಿರ್ದೇಶಕಿ ಸಂಧ್ಯಾ ಸೂರಿ ನಿರ್ಮಾಣದ ಹಿಂದಿ ಚಿತ್ರ ‘ಸಂತೋಷ್’ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಿತ್ರ ವಿಭಾಗಕ್ಕೆ ಭಾರತದಿಂದ ಅಧಿಕೃತವಾಗಿ ‘ಲಾಪತಾ ಲೇಡೀಸ್’ ನಾಮ ನಿರ್ದೇಶನಗೊಂಡಿತ್ತು.
ಆದರೆ ಅದು ಅಗ್ರ 5ರಲ್ಲಿ ಸ್ಥಾನ ಪಡೆಯಲು ಸ್ಪರ್ಧಿಸಲಿರುವ 15 ಚಿತ್ರಗಳ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ ಎಂದು ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್’ ಹೇಳಿದೆ.