- Home
- Entertainment
- Cine World
- 'ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ' ಅನ್ನೋ ಹಾಗೇ ಆಯ್ತು ಬಾಳು ಗೋಳು; ಬ್ಲೇಕ್ ಲೈವ್ಲಿಗೆ ಮತ್ತೆ ಸಂಕಷ್ಟ..!
'ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ' ಅನ್ನೋ ಹಾಗೇ ಆಯ್ತು ಬಾಳು ಗೋಳು; ಬ್ಲೇಕ್ ಲೈವ್ಲಿಗೆ ಮತ್ತೆ ಸಂಕಷ್ಟ..!
ಕಳೆದ ವರ್ಷ ಟೆಕ್ಸಾಸ್ ಫೆಡರಲ್ ಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸಿತ್ತು. ಟೆಕ್ಸಾಸ್ ಕೋರ್ಟ್ ಈ ಕೇಸನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಜೆಡ್ ವಾಲೇಸ್ ಸುಮ್ಮನೆ ಕೂರುವಂತೆ ಕಾಣುತ್ತಿಲ್ಲ. ಮುಂದೇನು ಈ ನಟಿ ಕಥೆ?

ಖ್ಯಾತ ಹಾಲಿವುಡ್ ನಟಿ ಬ್ಲೇಕ್ ಲೈವ್ಲಿ (Blake Lively) ಅವರಿಗೆ ಸದ್ಯಕ್ಕೆ ಸಂಕಷ್ಟಗಳು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ನಟ ಜಸ್ಟಿನ್ ಬಾಲ್ಡೋನಿ ಅವರೊಂದಿಗಿನ ಬಹುಕೋಟಿ ಡಾಲರ್ ಕಾನೂನು ಸಮರವು ಇತ್ತೀಚೆಗಷ್ಟೇ ಸುಖಾಂತ್ಯ ಕಂಡಿತು ಎಂದು ಅಭಿಮಾನಿಗಳು ನಿಟ್ಟುಸಿರು ಬಿಡುವಷ್ಟರಲ್ಲೇ, ನಟಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಕ್ರೈಸಿಸ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಜೆಡ್ ವಾಲೇಸ್ (Jed Wallace), ಈ ಹಿಂದೆ ವಜಾಗೊಳಿಸಲಾಗಿದ್ದ ತಮ್ಮ ಮಾನನಷ್ಟ ಮೊಕದ್ದಮೆಯನ್ನು ಮರುಪರಿಶೀಲಿಸುವಂತೆ ಈಗ ಮೇಲ್ಮನವಿ ಸಲ್ಲಿಸಿದ್ದಾರೆ.

ಏನಿದು ಹಳೇ ಕೇಸ್? ಹೊಸ ತಿರುವು ಏನು?
'ಇಟ್ ಎಂಡ್ಸ್ ವಿತ್ ಅಸ್' (It Ends With Us) ಸಿನಿಮಾದ ಚಿತ್ರೀಕರಣದ ವೇಳೆ ಬ್ಲೇಕ್ ಲೈವ್ಲಿ ಮತ್ತು ಜಸ್ಟಿನ್ ಬಾಲ್ಡೋನಿ ನಡುವೆ ದೊಡ್ಡ ಮಟ್ಟದ ಮನಸ್ತಾಪ ಉಂಟಾಗಿತ್ತು. ಈ ವೇಳೆ ಲೈವ್ಲಿ ಅವರು ಬಾಲ್ಡೋನಿ ಅವರ ತಂಡವು ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ (Smear Campaign) ಮಾಡುತ್ತಿದೆ ಎಂದು ಆರೋಪಿಸಿದ್ದರು. ಈ ಆರೋಪದ ಸುಳಿಯಲ್ಲಿ ಸಿಲುಕಿದ್ದ ಜೆಡ್ ವಾಲೇಸ್ ಮತ್ತು ಅವರ ಸಂಸ್ಥೆ 'ಸ್ಟ್ರೀಟ್ ರಿಲೇಶನ್ಸ್ ಇಂಕ್', ನಟಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಆದರೆ, ಕಳೆದ ವರ್ಷ ಟೆಕ್ಸಾಸ್ ಫೆಡರಲ್ ಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸಿತ್ತು. ಇದಕ್ಕೆ ಕಾರಣ "ನ್ಯಾಯವ್ಯಾಪ್ತಿಯ ಕೊರತೆ" (Lack of jurisdiction). ಅಂದರೆ, ಟೆಕ್ಸಾಸ್ ಕೋರ್ಟ್ ಈ ಕೇಸನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಜೆಡ್ ವಾಲೇಸ್ ಸುಮ್ಮನೆ ಕೂರುವಂತೆ ಕಾಣುತ್ತಿಲ್ಲ. ಅವರು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.
ಬ್ಲೇಕ್ ಲೈವ್ಲಿ ವಿರುದ್ಧ ವಾಲೇಸ್ ಗಂಭೀರ ಆರೋಪ
TMZ ವರದಿಯ ಪ್ರಕಾರ, ಜೆಡ್ ವಾಲೇಸ್ ಸಲ್ಲಿಸಿರುವ ಹೊಸ ಮೇಲ್ಮನವಿ ದಾಖಲೆಗಳಲ್ಲಿ ಒಂದು ಪ್ರಮುಖ ಅಂಶವನ್ನು ಉಲ್ಲೇಖಿಸಲಾಗಿದೆ. ಬ್ಲೇಕ್ ಲೈವ್ಲಿ ಅವರು ಟೆಕ್ಸಾಸ್ ರಾಜ್ಯವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಅವರು ವಾದಿಸಿದ್ದಾರೆ. ಲೈವ್ಲಿ ಅವರು ಟೆಕ್ಸಾಸ್‌ನಲ್ಲಿ ವಕೀಲರನ್ನು ನೇಮಿಸಿಕೊಂಡಿದ್ದಾರೆ, ಕೋರ್ಟ್ ಫೀಸ್ ಪಾವತಿಸಿದ್ದಾರೆ ಮತ್ತು ತಮ್ಮ ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಅಲ್ಲಿನ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಹೀಗಿರುವಾಗ ಟೆಕ್ಸಾಸ್ ಕೋರ್ಟ್‌ಗೆ ಈ ಕೇಸನ್ನು ವಿಚಾರಣೆ ನಡೆಸುವ ಅಧಿಕಾರವಿಲ್ಲ ಎಂದು ಹೇಳುವುದು ತಪ್ಪು ಎಂಬುದು ವಾಲೇಸ್ ಅವರ ವಾದ.
7 ಮಿಲಿಯನ್ ಡಾಲರ್ ಪರಿಹಾರದ ಬೇಡಿಕೆ!
ಜೆಡ್ ವಾಲೇಸ್ ಅವರು ತಮ್ಮ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಬ್ಲೇಕ್ ಲೈವ್ಲಿ ಅವರಿಂದ ಸುಮಾರು 7 ಮಿಲಿಯನ್ ಡಾಲರ್ (ಅಂದಾಜು 58 ಕೋಟಿ ರೂಪಾಯಿಗಳಿಗೂ ಹೆಚ್ಚು) ಪರಿಹಾರವನ್ನು ಕೇಳಿದ್ದಾರೆ. ತಾವು ಯಾವುದೇ ರೀತಿಯ ಕಿರುಕುಳ ಅಥವಾ ಸೇಡಿನ ಕ್ರಮಗಳಲ್ಲಿ ಭಾಗಿಯಾಗಿಲ್ಲ ಎಂದು ನ್ಯಾಯಾಲಯವು ಅಧಿಕೃತವಾಗಿ ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ, 'ಇಟ್ ಎಂಡ್ಸ್ ವಿತ್ ಅಸ್' ಸಿನಿಮಾದ ತೆರೆಯ ಹಿಂದಿನ ವಿವಾದಗಳು ಇನ್ನೂ ಮುಗಿದಿಲ್ಲ. ಬ್ಲೇಕ್ ಲೈವ್ಲಿ ಅವರ ಈ ಕಾನೂನು ಹೋರಾಟ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಹಾಲಿವುಡ್ ಅಂಗಳದಲ್ಲಿ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕಂತೂ ಗಾಸಿಪ್ ಪ್ರಿಯರಿಗೆ ಈ ಪ್ರಕರಣ ಹೊಸ ಆಹಾರ ಒದಗಿಸಿರುವುದಂತೂ ಸುಳ್ಳಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

