- Home
- Entertainment
- Cine World
- ಜಾನ್ವಿ ಕಪೂರ್‌ಳನ್ನು ಕಿಸ್ ಮಾಡುವ ಗೊಂಬೆಯನ್ನಾಗಿ ಬಳಸಿಕೊಂಡಿದ್ದಾರೆ; 'ಪೆದ್ದಿ' ಚಿತ್ರತಂಡದ ವಿರುದ್ಧ ಗಾಯಕಿ ಆಕ್ರೋಶ!
ಜಾನ್ವಿ ಕಪೂರ್‌ಳನ್ನು ಕಿಸ್ ಮಾಡುವ ಗೊಂಬೆಯನ್ನಾಗಿ ಬಳಸಿಕೊಂಡಿದ್ದಾರೆ; 'ಪೆದ್ದಿ' ಚಿತ್ರತಂಡದ ವಿರುದ್ಧ ಗಾಯಕಿ ಆಕ್ರೋಶ!
ರಾಮ್ ಚರಣ್ (Ram Charan) ಅಭಿನಯದ 'ಪೆದ್ಧಿ'(Peddhi) ಚಿತ್ರದಲ್ಲಿ ಜಾನ್ವಿ ಕಪೂರ್ (Janhvi Kapoor) ಪಾತ್ರವನ್ನು ಅತಿಯಾಗಿ ಲೈಂಗಿಕೀಕರಣಗೊಳಿಸಿರುವುದಕ್ಕೆ ಗಾಯಕಿ ಸುವಂಗಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಿಸ್ ಮಾಡುವ ಗೊಂಬೆಯನ್ನಾಗಿ ಮಾಡಿಕೊಂಡಿದ್ದಾರೆ ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಜಾನ್ವಿ ಕಪೂರ್ ಚುಂಬನದ ಗೊಂಬೆ
ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಚಿತ್ರ 'ಪೆದ್ಧಿ' (Peddhi) ಬಿಡುಗಡೆಯಾದ ದಿನದಿಂದಲೂ ವಿವಾದಗಳ ಸುಳಿಯಲ್ಲಿದೆ. ಚಿತ್ರದಲ್ಲಿ ನಾಯಕಿ ಜಾನ್ವಿ ಕಪೂರ್ (Janhvi Kapoor) ಅವರ ಪಾತ್ರವನ್ನು ಅತಿಯಾಗಿ ಲೈಂಗಿಕೀಕರಣಗೊಳಿಸಲಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಈಗ ಖ್ಯಾತ ಗಾಯಕಿ ಸುವಂಗಲಿ ಅರಿಯನಾಯಗಂ (Sumangaly Ariyanayagam) ಅವರು ಚಿತ್ರತಂಡದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, 'ಜಾನ್ವಿ ಕಪೂರ್ ಅವರ ಪಾತ್ರವನ್ನು ಕೇವಲ ಒಂದು ದೇಹವಾಗಿ ಮತ್ತು ಕಿಸ್ ಮಾಡುವ ಒಂದು ವಸ್ತುವಿನ ರೀತಿ ಬಳಸಿಕೊಳ್ಳಲಾಗಿದೆ' ಎಂದು ಕಿಡಿಕಾರಿದ್ದಾರೆ.
ಮಹಿಳೆಯರ ಘನತೆಗೆ ಧಕ್ಕೆ ತಂದ ಚಿತ್ರತಂಡ:
ಗಾಯಕಿ ಸುವಂಗಲಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಚಿತ್ರದ ನಿರ್ದೇಶಕರು ಮತ್ತು ಅಣಿಯಮಂಡಳಿಯ ವಿರುದ್ಧ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. 'ಅಧಿಕಾರವಿಲ್ಲದವರ ಮೇಲೆ ನಡೆಯುವ ದಮನದ ಬಗ್ಗೆ ಕಥೆ ಬರೆಯಲು ಪ್ರಭಾವಶಾಲಿ ಪುರುಷರು ಒಂದೆಡೆ ಸೇರಿದರು. ಆದರೆ ಅದೇ ಸಮಯದಲ್ಲಿ, ಅವರು ಜಾನ್ವಿ ಕಪೂರ್ ಅವರ ಪಾತ್ರವನ್ನು ಕ್ಯಾಮೆರಾ ಮುಂದೆ ಕೇವಲ ಒಂದು ವಸ್ತುವನ್ನಾಗಿ ಮಾಡಿದರು.
ಬಲವಂತದ ಚುಂಬನದ ಗೊಂಬೆ
ಜಾನ್ವಿ ಕಪೂರ್ ಪಾತ್ರಕ್ಕೆ ಮಾನವೀಯ ಘನತೆ ಬೇಕಿಲ್ಲ ಎಂದು ಚಿತ್ರತಂಡ ನಿರ್ಧರಿಸಿದಂತಿದೆ. ಈ ಸಿನಿಮಾದಲ್ಲಿ ಮಹಿಳೆಯರನ್ನು ಹಾಡುಗಳು ಮುಗಿದ ನಂತರ ಎಸೆಯುವ ವಸ್ತುವಿನಂತೆ ಬಳಸಿಕೊಂಡಿದ್ದಾರೆ. ಜೊತೆಗೆ, ಇಡೀ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರನ್ನ 'ಬಲವಂತದ ಚುಂಬನಕ್ಕಾಗಿ ಇರುವ ಉಪಕರಣದಂತೆ (ಗೊಂಬೆಯಂತೆ) ಆಕೆಯನ್ನು ಬಿಂಬಿಸಲಾಗಿದೆ' ಎಂದು ಗಾಯಕಿ ಸುವಂಗಲಿ ಅಸಮಾಧಾನ ಹೊರಹಾಕಿದ್ದಾರೆ.
ನಟಿಗೆ ಮಾಡಿದ 'ಅತ್ಯಂತ ದುಬಾರಿ ಅವಮಾನ':
'ಪೆದ್ಧಿ' ಚಿತ್ರದಲ್ಲಿ ಜಾನ್ವಿ ಕಪೂರ್ ಅವರ 'ಅಚ್ಚಿಯಮ್ಮ' ಪಾತ್ರವನ್ನು ಚಿತ್ರಿಸಿದ ರೀತಿ ಭಾರತೀಯ ನಟಿಯೊಬ್ಬಳಿಗೆ ಮಾಡಿದ 'ಅತ್ಯಂತ ದುಬಾರಿ ಅವಮಾನ' ಎಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ವಿಶೇಷವೆಂದರೆ, ಚಿತ್ರದ ಟೀಕೆಗಳನ್ನು ಒಳಗೊಂಡ ಈ ವೈರಲ್ ಪೋಸ್ಟ್ ಅನ್ನು ಸ್ವತಃ ಜಾನ್ವಿ ಕಪೂರ್ ಅವರು ಲೈಕ್ ಮಾಡಿರುವುದು ಈಗ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಚಿತ್ರೀಕರಣದ ಸಂದರ್ಭದಲ್ಲೇ ಜಾನ್ವಿ ಅವರಿಗೆ ತಮ್ಮ ಪಾತ್ರದ ಬಗ್ಗೆ ಆಕ್ಷೇಪಗಳಿದ್ದವು, ಆದರೆ ವಾಣಿಜ್ಯ ಲಾಭಕ್ಕಾಗಿ ನಿರ್ದೇಶಕ ಬುಚ್ಚಿ ಬಾಬು ಸನ ಅವರು ಅವುಗಳನ್ನು ನಿರ್ಲಕ್ಷಿಸಿ ಅಂತಹ ದೃಶ್ಯಗಳನ್ನು ಸೇರಿಸಿದ್ದಾರೆ ಎಂದು ವರದಿಯಾಗಿದೆ.
ವೈರುಧ್ಯದ ಕಥಾಹಂದರ:
ಚಿತ್ರದಲ್ಲಿ ನಾಯಕ ರಾಮ್ ಚರಣ್ ಅವರ ಪಾತ್ರಕ್ಕೆ ಬಲಿಷ್ಠ ಸಾಮಾಜಿಕ ಮತ್ತು ರಾಜಕೀಯ ಗುರಿಗಳನ್ನು ನೀಡಲಾಗಿದೆ. ಸಮಾಜದಲ್ಲಿನ ವ್ಯವಸ್ಥಿತ ತಪ್ಪುಗಳನ್ನು ಪ್ರಶ್ನಿಸುವ ನಾಯಕ, ನಾಯಕಿಯ ವಿಷಯಕ್ಕೆ ಬಂದಾಗ ಆಕೆಯ ಸ್ವಂತಿಕೆಯನ್ನು ಗೌರವಿಸುವುದಿಲ್ಲ ಎಂಬ ಟೀಕೆ ಕೇಳಿಬಂದಿದೆ. ಜಾನ್ವಿ ಕಪೂರ್ ಅವರ ದೇಹದ ಪ್ರದರ್ಶನಕ್ಕೇ ನಿರ್ದೇಶಕರು ಹೆಚ್ಚು ಒತ್ತು ನೀಡಿದ್ದಾರೆ ಎಂಬುದು ಪ್ರೇಕ್ಷಕರ ಆರೋಪ.
ಪ್ರೇಮದ ಹೆಸರಿನಲ್ಲಿ ದೌರ್ಜನ್ಯ
ನಾಯಕಿಯ ಸಮ್ಮತಿ ಇಲ್ಲದೆ ಆಕೆಯನ್ನು ಸ್ಪರ್ಶಿಸುವುದು ಮತ್ತು ವಿದ್ಯುತ್ ಹೋದ ಸಮಯದಲ್ಲಿ ಆಕೆಯನ್ನು ಬಲವಂತವಾಗಿ ಚುಂಬಿಸುವುದನ್ನು ಚಿತ್ರದಲ್ಲಿ 'ಪ್ರೇಮ' ಎಂದು ಚಿತ್ರಿಸಲಾಗಿದೆ. ಇಂತಹ ಕಿರುಕುಳದ ನಂತರ ನಾಯಕಿ ಕಣ್ಣೀರು ಹಾಕಿದಾಗ, ಆಕೆಯ ತಂದೆಯ ರಾಜಕೀಯ ಭವಿಷ್ಯಕ್ಕಾಗಿ ಈ ಘಟನೆಯನ್ನು ಮರೆತುಬಿಡುವಂತೆ ಮತ್ತೊಬ್ಬ ಪುರುಷ ಪಾತ್ರದ ಮೂಲಕ ಹೇಳಿಸಿರುವುದು ಕಟು ಟೀಕೆಗೆ ಗುರಿಯಾಗಿದೆ.
ಒಟ್ಟಾರೆಯಾಗಿ, ಸ್ತ್ರೀ ಘನತೆಯನ್ನು ಮರೆತು ಕೇವಲ ಕಚಗುಳಿ ಇಡುವ ದೃಶ್ಯಗಳಿಗಾಗಿ ನಾಯಕಿಯನ್ನು ಬಳಸಿಕೊಂಡಿರುವುದು 'ಪೆದ್ಧಿ' ಚಿತ್ರಕ್ಕೆ ದೊಡ್ಡ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

