- Home
- Entertainment
- Cine World
- 'ಕೆಡಿ' ತಂದಿಟ್ಟ ಸಂಕಷ್ಟ, ನೋರಾ ಫತೇಹಿಗೆ 'ಫತ್ವಾ' ಜಾರಿ; ಪ್ರಪಂಚದಲ್ಲಿ ಪಾಪದ ಕೊಡ ತುಂಬಿಹೋಯ್ತಾ?
'ಕೆಡಿ' ತಂದಿಟ್ಟ ಸಂಕಷ್ಟ, ನೋರಾ ಫತೇಹಿಗೆ 'ಫತ್ವಾ' ಜಾರಿ; ಪ್ರಪಂಚದಲ್ಲಿ ಪಾಪದ ಕೊಡ ತುಂಬಿಹೋಯ್ತಾ?
ಅಲಿಗಢದ 'ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾ' ಎಂಬ ಧಾರ್ಮಿಕ ಸಂಸ್ಥೆಯು ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದೆ. ಹಾಡಿನ ಸಾಹಿತ್ಯ ಮತ್ತು ಅದರಲ್ಲಿರುವ ದೃಶ್ಯಗಳು ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವಾಗಿವೆ ಮತ್ತು ಅತ್ಯಂತ ಆಕ್ಷೇಪಾರ್ಹವಾಗಿವೆ ಎಂದು ಸಂಸ್ಥೆ ಕಿಡಿಕಾರಿದೆ.

ಧ್ರುವ ಸರ್ಜಾ ಅಭಿನಯದ, 'ಜೋಗಿ' ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ: ದಿ ಡೆವಿಲ್' (KD: The Devil) ಈಗ ದೊಡ್ಡ ವಿವಾದದ ಸುಳಿಗೆ ಸಿಲುಕಿದೆ. ಚಿತ್ರದ 'ಸರ್ಕೆ ಚುನರ್ ತೇರಿ ಸರ್ಕೆ' (Sarke Chunar Teri Sarke) ಎಂಬ ಹಾಡು ಬಿಡುಗಡೆಯಾದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಬಾಲಿವುಡ್ ಬೆಡಗಿ ನೋರಾ ಫತೇಹಿ (Nora Fatehi) ವಿರುದ್ಧ ಧಾರ್ಮಿಕ 'ಫತ್ವಾ' (Fatwa) ಜಾರಿಯಾಗಿದೆ.
ಸಂಕಷ್ಟದಲ್ಲಿ ನೋರಾ ಫತೇಹಿ! 'ಫತ್ವಾ' ಜಾರಿಯಾಗಿದ್ದೇಕೆ?
ಬಾಲಿವುಡ್‌ನ ಐಟಂ ಸಾಂಗ್ ಕ್ವೀನ್ ನೋರಾ ಫತೇಹಿ ಮತ್ತು ಹಿರಿಯ ನಟ ಸಂಜಯ್ ದತ್ ಅಭಿನಯಿಸಿರುವ ಈ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಆದರೆ, ಅಲಿಗಢದ 'ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾ' ಎಂಬ ಧಾರ್ಮಿಕ ಸಂಸ್ಥೆಯು ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದೆ.
ಹಾಡಿನ ಸಾಹಿತ್ಯ ಮತ್ತು ಅದರಲ್ಲಿರುವ ದೃಶ್ಯಗಳು ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವಾಗಿವೆ ಮತ್ತು ಅತ್ಯಂತ ಆಕ್ಷೇಪಾರ್ಹವಾಗಿವೆ ಎಂದು ಸಂಸ್ಥೆ ಕಿಡಿಕಾರಿದೆ. ಈ ಹಾಡು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಧಾರ್ಮಿಕ ಮುಖಂಡರು ದೂರಿದ್ದಾರೆ.
ಸಂಸತ್ತಿನಲ್ಲಿ ಹಾಡಿಗೆ ನಿಷೇಧ!
ವಿವಾದ ಕೇವಲ ಧಾರ್ಮಿಕ ಮಟ್ಟಕ್ಕೆ ಸೀಮಿತವಾಗದೆ ದೇಶದ ಸಂಸತ್ ಭವನದವರೆಗೂ ತಲುಪಿದೆ. ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ಆನಂದ್ ಭದೌರಿಯಾ ಅವರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಈ ಹಾಡನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ ಎಂದು ಘೋಷಿಸಿದ್ದಾರೆ.
ಹಾಡಿನಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಮತ್ತು ಸಾಹಿತ್ಯವು ಅಸಭ್ಯತೆಯಿಂದ ಕೂಡಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.
ನೋರಾ ಫತೇಹಿ ನೀಡಿದ ಸ್ಪಷ್ಟನೆ ಏನು?
ಈ ವಿವಾದದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ವಿಡಿಯೋ ಹಂಚಿಕೊಂಡಿರುವ ನೋರಾ ಫತೇಹಿ, ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. "ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆಯೇ ಚಿತ್ರೀಕರಿಸಿದ್ದೆ. ಸಂಜಯ್ ದತ್ ಅವರಂತಹ ದಿಗ್ಗಜ ನಟರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಾಗ ಯಾರೂ ಬೇಡ ಎನ್ನುವುದಿಲ್ಲ.
ಇದು 'ನಾಯಕ್ ನಹಿ ಖಲ್ನಾಯಕ್ ಹೂ ಮೇ' ಹಾಡಿನ ರಿಮೇಕ್ ಎಂದು ನನಗೆ ಹೇಳಲಾಗಿತ್ತು. ನನಗೆ ಕನ್ನಡ ಭಾಷೆ ಅರ್ಥವಾಗುವುದಿಲ್ಲ, ಚಿತ್ರತಂಡ ಹೇಳಿದ ವಿವರಣೆಯನ್ನು ನಂಬಿ ನಾನು ನಟಿಸಿದ್ದೆ. ಇದರಲ್ಲಿ ಅಸಭ್ಯತೆ ಇದೆ ಎಂದು ನನಗೆ ಅಂದು ಅನಿಸಿರಲಿಲ್ಲ" ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
'ಕೆಡಿ: ದಿ ಡೆವಿಲ್' ಚಿತ್ರದ ಬಗ್ಗೆ:
ನಿರ್ದೇಶಕ ಪ್ರೇಮ್ ಅವರ ಕನಸಿನ ಪ್ರಾಜೆಕ್ಟ್ ಆಗಿರುವ 'ಕೆಡಿ' ಸಿನಿಮಾ 1970ರ ದಶಕದ ಬೆಂಗಳೂರಿನ ಭೂಗತ ಲೋಕದ ನೈಜ ಘಟನೆಗಳನ್ನು ಆಧರಿಸಿದ ಚಿತ್ರವಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯ ಭೂಮಿಕೆಯಲ್ಲಿದ್ದು, ಸಂಜಯ್ ದತ್, ಶಿಲ್ಪಾ ಶೆಟ್ಟಿ ಕುಂದ್ರಾ, ರಮೇಶ್ ಅರವಿಂದ್, ರವಿಚಂದ್ರನ್ ಮತ್ತು ರೇಷ್ಮಾ ನಾಣಯ್ಯ ಅಂತಹ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿದ್ದಾರೆ.
ಏಪ್ರಿಲ್ 30 ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಆದರೆ ಚಿತ್ರ ಬಿಡುಗಡೆಗೆ ಮುನ್ನವೇ ಈ ಹಾಡಿನ ವಿವಾದ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯಕ್ಕೆ ಈ ಹಾಡನ್ನು ಎಲ್ಲ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕುವಂತೆ ಒತ್ತಾಯ ಕೇಳಿಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

