ಅಪ್ಪನ ಸಾಲ, ಅಮ್ಮನ ಅನಾರೋಗ್ಯ, ಜಯಾ ಬಚ್ಚನ್ ರಿಂದ ಹಸನಾಯ್ತು ನಟನ ಬದುಕು
ಸಿನಿಮಾಗಳಲ್ಲಿ ಎಲ್ಲರನ್ನು ನಗಸ್ತಾ, ವೀಕ್ಷಕರಿಗೆ ಮನರಂಜನೆ ನೀಡುವ ಕಲಾವಿದರು ಆರ್ಥಿಕ ಸಂಕಷ್ಟ, ಅನಾರೋಗ್ಯ ಸೇರಿದಂತೆ ಅನೇಕ ಸವಾಲು, ಸಮಸ್ಯೆಗಳನ್ನು ಎದುರಿಸ್ತಿರ್ತಾರೆ. ಹಿಂದಿ ಸಿನಿಮಾ ಕಲಾವಿದನ ಕಥೆ ಕೂಡ ಇದಕ್ಕೆ ಭಿನ್ನವಾಗಿಲ್ಲ. ಬಾಲ್ಯದಲ್ಲಿಯೇ ನೋವು ಕಂಡ ನಟನಿಗೆ ಆಸರೆಯಾಗಿದ್ದು ಜಯಾ ಬಚ್ಚನ್.

ಜಯಾ ಬಚ್ಚನ್
ಜಯಾ ಬಚ್ಚನ್ ಅಂದ ತಕ್ಷಣ ನೆನಪಾಗೋದು ಅವರ ಮುಂಗೋಪಿ. ಪಾಪರಾಜಿಗಳ ಮೇಲೆ ಸದಾ ಸಿಡಿಮಿಡಿಗೊಳ್ಳುವ ಜಯಾ ಬಚ್ಚನ್ ಅವರನ್ನು ಎಲ್ಲರೂ ವಿಲನ್ ರೀತಿ ನೋಡ್ತಾರೆ. ಆದ್ರೆ ಜಯಾ ಬಚ್ಚನ್ ಅನೇಕ ಕಲಾವಿದರಿಗೆ ನೆರವಾಗಿದ್ದಾರೆ. ಸ್ಪೂರ್ತಿದಾಯಕ ಕೆಲ್ಸ ಮಾಡಿದ್ದಾರೆ. ಅದ್ರಲ್ಲಿ ಮುನ್ನಾ ಭಾಯಿ ಎಂಬಿಬಿಎಸ್ ನಟ ಕೂಡ ಸೇರಿದ್ದಾರೆ.
ಬಾಲ್ಯದಿಂದಲೇ ನೋವು
ಮುನ್ನಾಭಾಯಿ ಎಂಬಿಬಿಎಸ್ ನಲ್ಲಿ ಸರ್ಕ್ಯೂಟ್ ಆಗಿ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದ, ಗೋಲ್ಮಾಲ್ ಸರಣಿಯಲ್ಲಿ ಮಾಧವ್ ಆಗಿ ಕಾಣಿಸಿಕೊಂಡಿರುವ ಅರ್ಷದ್ ವಾರ್ಸಿಯವರ ಹಾಸ್ಯ ಪ್ರತಿಭೆಗೆ ಸಾಟಿಯಿಲ್ಲ. ಆದ್ರೆ ಅರ್ಷದ್ ವಾರ್ಸಿ ಜೀವನ ಇಷ್ಟು ಆನಂದವಾಗಿರಲಿಲ್ಲ. ಏಪ್ರಿಲ್ 19 ರಂದು ಮುಂಬೈನಲ್ಲಿ ಜನಿಸಿದ ಅರ್ಷದ್ ವಾರ್ಸಿಗೆ ಹಿಂದಿ ಚಿತ್ರರಂಗದಲ್ಲಿ ಯಶಸ್ಸು ಸಾಧಿಸುವುದು ಸುಲಭವಿರಲಿಲ್ಲ. ನಟನಾ ಜಗತ್ತಿಗೆ ಪ್ರವೇಶಿಸ್ತೇನೆ ಅಂತ ಅವರು ಕಲ್ಪಿಸಿಕೊಂಡಿರಲಿಲ್ಲ. ಆದ್ರೆ ಅವರ ಹಣೆಬಹರ ಬದಲಾಯ್ತು. ಎಲ್ಲ ಕಷ್ಟಗಳು ದೂರವಾಯ್ತು.
ಅನಾರೋಗ್ಯದ ತಾಯಿ
ಅರ್ಷದ್ ವಾರ್ಸಿ ತಂದೆ ಸಾಕಷ್ಟು ಸಾಲ ಮಾಡಿದ್ದರು. ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಸಣ್ಣವರಿರುವಾಗ್ಲೇ ಮನೆ ಜವಾಬ್ದಾರಿ ಅರ್ಷದ್ ವಾರ್ಸಿ ತಲೆ ಮೇಲೆ ಬಂತು. ಆಗ ಅರ್ಷದ್ ವಾರ್ಸಿ ನೃತ್ಯ ಸಂಯೋಜಕರಾಗಿ ಕೆಲ್ಸ ಮಾಡ್ತಿದ್ದರು. ಬರ್ತಿದ್ದ ಹಣ ಅಮ್ಮನ ಚಿಕಿತ್ಸೆಗೆ ಸಾಲ್ತಿರಲಿಲ್ಲ. ಈ ದಿನ ಬಂದ ಹಣ ಮರುದಿನ ಅಮ್ಮನ ಡಯಾಲಿಸಿಸ್ ಗೆ ಖರ್ಚಾಗ್ತಿತ್ತು. ಇದೊಂದು ಜೀವನವಾ ಎನ್ನುವಷ್ಟು ಅರ್ಷದ್ ವಾರ್ಸಿ ನೊಂದಿದ್ದರು.
ಪಾಲಕರ ನಿಧನ
ಎಲ್ಲರ ಮಧ್ಯೆ ಅರ್ಷದ್ ವಾರ್ಸಿ, ಪಾಲಕರನ್ನು ಕಳೆದುಕೊಂಡು ಸಂಪೂರ್ಣ ಒಂಟಿಯಾದ್ರು. ಅರ್ಷದ್ ವಾರ್ಸಿ ಬಾಲ್ಯದಲ್ಲಿ ರೆಸಿಡೆನ್ಸಿ ಸ್ಕೂಲಿನಲ್ಲಿ ಓದಿದ್ದರಿಂದ ಅವರಿಗೆ ಅಪ್ಪ- ಅಮ್ಮನ ಮೇಲೆ ಅಷ್ಟೊಂದು ಒಡನಾಟ ಇರ್ಲಿಲ್ಲ. ಆದ್ರೆ ಅಪ್ಪ ಅಮ್ಮ ಹೋದ್ಮೇಲೆ ಅರ್ಷದ್ ವಾರ್ಸಿ ಕೇಳೋರೇ ಇರ್ಲಿಲ್ಲ. ಒಂಟಿಯಾಗಿದ್ದ ಅರ್ಷದ್, ತಮಗೆ ತಾವೇ ಪತ್ರಗಳನ್ನು ಬರೆದುಕೊಳ್ತಿದ್ದರು. ಸ್ನೇಹಿತರ ಹೆಸರಿನಲ್ಲಿ ಪೋಸ್ಟ್ ಮಾಡಿಕೊಳ್ತಿದ್ದರು.
ನೆರವಿಗೆ ಬಂದ ಜಯಾ ಬಚ್ಚನ್
ಅರ್ಷದ್ ವಾರ್ಸಿ ಇಷ್ಟಾದ್ರೂ ಸೋಲಲಿಲ್ಲ. ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದ್ದರು. ಅವರಿಗೆ ಜಯಾ ಬಚ್ಚನ್ ನೆರವಾದ್ರು. ನಟಿ ಜಯಾ ಬಚ್ಚನ್ ಸಹಾಯದಿಂದ ಅರ್ಷದ್ ವಾರ್ಸಿ ಸಿನಿಮಾಕ್ಕೆ ಎಂಟ್ರಿ ಪಡೆದುಕೊಂಡ್ರು. ಅವರ ಮೊದಲ ಸಿನಿಮಾ ತೇರೆ ಮೇರೆ ಸಪ್ನೆ. ಅಮಿತಾಬ್ ಬಚ್ಚನ್ ಅವರ ಎಬಿಸಿಎಲ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತೆರೆಗೆ ಬಂತು. ನಂತರ ಅರ್ಷದ್ ಬೇತಾಬಿ, ಮೇರೆ ದೋ ಅನ್ಮೋಲ್ ರತ್ನ, ಹೀರೋ ಹಿಂದೂಸ್ತಾನಿ ಸಿನಿಮಾಗಳಲ್ಲಿ ನಟಿಸಿದ್ರು. ಆದ್ರೆ ಅವರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟ ಸಿನಿಮಾ ಮುನ್ನಾ ಭಾಯಿ ಎಂಬಿಬಿಎಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

