ತನ್ನ ಪತಿಯನ್ನು ಜನ ವಿಲನ್ ಎಂದು ಭಾವಿಸಿದ್ದರು: ಮೈನೆ ಪ್ಯಾರ್ ಕಿಯಾ ನಟಿ ಭಾಗ್ಯಶ್ರೀ
ಸಲ್ಮಾನ್ ಖಾನ್ (Salaman Khan) ಜೊತೆ ಮೈನೆ ಪ್ಯಾರ್ ಕಿಯಾ ನಂತರ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡ ಭಾಗ್ಯಶ್ರೀ (Bhagyashree) ಅವರ ಹೊಸ ಸಂದರ್ಶನವೊಂದು ಈ ದಿನಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಭಾಗ್ಯಶ್ರೀ ಮದುವೆಯಾದ ನಂತರ ಸಿನಿಮಾದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಜನರು ತಮ್ಮ ಪತಿ ಹಿಮಾಲಯ ದಸ್ಸಾನಿ ಅವರನ್ನು 'ವಿಲನ್' ಆಗಿ ಬಣ್ಣಿಸಿದ್ದಾರೆ ಎಂದು ನಟಿ ಭಾಗ್ಯಶ್ರೀ ಹೇಳಿದ್ದಾರೆ. ಜನರು ಹಿಮಾಲಯ್ ಅವರ ಬಗ್ಗೆ ತಿಳಿದಿಲ್ಲದಿದ್ದರೂ, ಅವರ ಬಗ್ಗೆ ಕೆಟ್ಟದ್ದಾಗಿ ತಿಳಿದಿದ್ದರು ಎಂದು ಭಾಗ್ಯಶ್ರೀ ಹೇಳಿದರು.
ಸ್ಟಾರ್ ಪ್ಲಸ್ನಲ್ಲಿ ಪ್ರಸಾರವಾದ ಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ ಭಾಗ್ಯಶ್ರೀ ಮತ್ತು ಹಿಮಾಲಯ ದಸ್ಸಾನಿ ಸ್ಪರ್ಧಿಗಳಾಗಿ ಕಾಣಿಸಿಕೊಂಡರು. ಮೇನೆ ಪ್ಯಾರ್ ಕೀಯಾ ಎಂಬ ಚಿತ್ರದ ಮೂಲಕ ಭಾರತೀಯ ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದ ಭಾಗ್ಯಶ್ರೀ, ಚಿತ್ರ ಬಿಡುಗಡೆಯಾದ ಸ್ವಲ್ಪ ದಿನಗಳಲ್ಲಿಯೇ ದಾಂಪತ್ಯಕ್ಕೆ ಕಾಲಿಟ್ಟರು.
'ಮೈನೆ ಪ್ಯಾರ್ ಕಿಯಾಯ ನಂತರ ಹಿಮಾಲಯ ಅವರನ್ನು ಮದುವೆಯಾದಾಗ ಜನರಿಗೆ ಅವನ ಬಗ್ಗೆ ಏನೂ ತಿಳಿದಿರಲಿಲ್ಲ, ವಾಸ್ತವವಾಗಿ, ನಾನು ಅವನನ್ನು ಮದುವೆಯಾದ ನಂತರ ಚಿತ್ರಗಳಲ್ಲಿ ನಟಿಸಲು ನಿಲ್ಲಿಸಿದ ಕಾರಣ ಜನರು ಅವನನ್ನು ವಿಲನ್ ಎಂದು ಬಣ್ಣಿಸಿದ್ದಾರೆ. ಆದರೆ ಜನ ನಮ್ಮನ್ನು ಇತ್ತೀಚಿನ ಶೋವೊಂದರಲ್ಲಿ ಒಟ್ಟಿಗೆ ನೋಡಿದಾಗ ಮತ್ತು ನಮ್ಮ ಸಂಬಂಧದ ಬಗ್ಗೆ ವಿಷಯಗಳನ್ನು ಕೇಳಿದಾಗ ಜನರಿಗೆ ನಮ್ಮ ದಾಂಪತ್ಯದ ಬಗ್ಗೆ ಗೌರವ ಹೆಚ್ಚಾಗಿದೆ. ಪ್ರೇಕ್ಷಕರು ನಮ್ಮ ಜೀವನ ಪ್ರಯಾಣವನ್ನು ಅರ್ಥಮಾಡಿಕೊಂಡಿದ್ದಾರೆ. ಹಿಮಾಲಯ್ ಜೀ ಬಗ್ಗೆ ಜನರಿಗೂ ಹೆಚ್ಚಿಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಅವರ ಸ್ವಭಾವ ಹಾಗೂ ವ್ಯಕ್ತಿತ್ವ ಹೇಗಿದೆಯಂತೆ ಜನರಿಗೂ ಅರ್ಥವಾಯಿತು. ಒಬ್ಬ ವ್ಯಕ್ತಿ ಮತ್ತು ಅವರು 33 ವರ್ಷಗಳ ಹಿಂದೆ ಪ್ರೀತಿಗಾಗಿ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ಇದೀಗ ಜನರಿಗೂ ಅರ್ಥವಾಗಿದೆ,' ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಭಾಗ್ಯಶ್ರೀ ಹೇಳಿದ್ದಾರೆ.
'ನನ್ನ ಕುಟುಂಬ, ಮಕ್ಕಳನ್ನು ಬೆಳೆಸಲು ಮತ್ತು ಅವರನ್ನು ನೋಡಿಕೊಳ್ಳಲು ನಾನು ಸಮಯ ಕೊಟ್ಟೆ. ನಾನು ಕಮ್ಬ್ಯಾಕ್ ಮಾಡುವಾಗ ಅವರೆಲ್ಲರೂ ನನ್ನನ್ನು ಬೆಂಬಲಿಸಿದರು. ಅದಕ್ಕೆ ನಾನು ತುಂಬಾ ಅದೃಷ್ಟಶಾಲಿ. ನಿನ್ನ ಜವಾಬ್ದಾರಿಗಳನ್ನು ಪೂರೈಸಿ, ಕುಟುಂಬವನ್ನು ಚೆನ್ನಾಗಿ ನೋಡಿಕೊಂಡಿರುವೆ. ಈಗ ಇನ್ನು ಕನಸಿನ ಹಿಂದೆ ಓಡುವ ಸರದಿ ನಿಮ್ಮದು ಎಂದು ಅವರು ಹೇಳಿದ್ದರು. ನನ್ನ ಅದೃಷ್ಟಕ್ಕೆ ನನಗೆ ನನ್ನ ಕುಟುಂಬದ ಬೆಂಬಲವಿದೆ, ವಿಶೇಷವಾಗಿ ನನ್ನ ಮಕ್ಕಳು ಬೆನ್ನಿಗೆ ನಿಲ್ಲುತ್ತಾರೆ. ವಾಸ್ತವವಾಗಿ, ಮಕ್ಕಳೇ ಅಮ್ಮ ಇನ್ನು ಅವಳ ಕನಸಿನ ಬೆನ್ನತ್ತಿ ಹೋಗುತ್ತಾಳೆಂದು ಹೇಳಿದ್ದರು,' ಎಂಬ ವಿಷಯವನ್ನು ಭಾಗ್ಯಶ್ರೀ ಹಂಚಿಕೊಂಡಿದ್ದಾರೆ,
ಸ್ಮಾರ್ಟ್ ಜೋಡಿಯ ನಂತರ, ಭಾಗ್ಯಶ್ರೀ ರಿಯಾಲಿಟಿ ಶೋ ಡಿಐಡಿ ಸೂಪರ್ ಮಾಮ್ಸ್ ಸೀಸನ್ 3 ನಲ್ಲಿ ನಟಿ ಊರ್ಮಿಳಾ ಮಾತೋಂಡ್ಕರ್ ಮತ್ತು ನೃತ್ಯ ಸಂಯೋಜಕ ರೆಮೋ ಡಿಸೋಜಾ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ.
ಭಾಗ್ಯಶ್ರೀ ಅವರು ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೊತೆಗೆ ರಾಧೆ ಶ್ಯಾಮ್ನಲ್ಲಿ ಕಾಣಿಸಿಕೊಂಡರು. ಇದಲ್ಲದೆ ಕಳೆದ ವರ್ಷ, ಅಭಿಮಾನಿಗಳು ಕಂಗನಾ ರಣಾವತ್ ಮತ್ತು ಅರವಿಂದ್ ಸ್ವಾಮಿ ಅವರೊಂದಿಗೆ ತಲೈವಿಯಲ್ಲಿ ಕೆಲಸಮಾಡಿದ್ದರು.
ನಟಿ ಭಾಗ್ಯಶ್ರೀ ಅವರು ಮೈನೆ ಪ್ಯಾರ್ ಕಿಯಾ (1989) ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಚಿತ್ರದಲ್ಲಿ, ಭಾಗ್ಯಶ್ರೀ ಸಲ್ಮಾನ್ ಖಾನ್ ಎದುರು ಕಾಣಿಸಿಕೊಂಡಿದ್ದಾರೆ. ಕೈದ್ ಮೇ ಹೈ ಬುಲ್ಬುಲ್ (1989), ತ್ಯಾಗಿ ಮತ್ತು ಪಾಯಲ್ (1992) ಚಿತ್ರಗಳಲ್ಲಿ ಭಾಗ್ಯಶ್ರೀ ಹಿಮಾಲಯ ಅವರದೊಂದಿಗೆ ಕೆಲಸ ಮಾಡಿದರು.
ಘರ್ ಆಯಾ ಮೇರಾ ಪರದೇಸಿ (1993), ಸೌತಾನ್ ಕಿ ಸೌತಾನ್ (1997), ಹಮ್ಕೋ ದೀವಾನಾ ಕರ್ ಗಯೇ (2006), ರೆಡ್ ಅಲರ್ಟ್: ದಿ ವಾರ್ ವಿಥಿನ್ (2010) ಮತ್ತು ಸೀತಾರಾಮ ಕಲ್ಯಾಣ (2019) ಸೇರಿ ಹಲವಾರು ಚಲನಚಿತ್ರಗಳಲ್ಲಿ ಭಾಗ್ಯಶ್ರೀ ನಟಿಸಿದ್ದಾರೆ. ಅವರು ದೂರದರ್ಶನ ಸರಣಿ ಸ್ಟುಡಿಯೋ ಒನ್ (2005) ಅನ್ನು ಸಹ ನಿರ್ದೇಶಿಸಿದ್ದಾರೆ.
1990 ರಲ್ಲಿ ಹಿಮಾಲಯ ಅವರ ಜೊತೆ ಮದುವೆಯಾದ ಭಾಗ್ಯಶ್ರೀ ಅವರು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ - ಮಗ ಅಭಿಮನ್ಯು ದಸ್ಸಾನಿ ಮತ್ತು ಮಗಳು ಅವಂತಿಕಾ ದಸ್ಸಾನಿ.