Pro Kabaddi: ಜೈಪುರ ಗೆದ್ದ ಖುಷಿಗೆ ಪತ್ನಿ ಐಶ್ವರ್ಯಾರನ್ನು ಬಿಗಿದಪ್ಪಿ ಸಂಭ್ರಮಿಸಿದ ಅಭಿಷೇಕ್ ಬಚ್ಚನ್
ಪ್ರೋ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪ್ರೋ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರ ಜೈಪುರ ಪಿಂಕ್ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ 33-29 ಅಂಕಗಳ ಅಂತರದಿಂದ ಗೆಲುವಿನ ನಗೆ ಬೀರಿತು. ಈ ಮೂಲಕ ಜೈಪುರ ಪಿಂಕ್ ಪ್ರೋ ಕಬಡ್ಡಿ ಲೀಗ್ ನಲ್ಲಿ ಎರಡನೇ ಬಾರಿಗೆ ಟ್ರೋಫಿ ಗೆದ್ದಿದೆ. ಇದಕ್ಕೂ ಮುನ್ನ 2014ರ ಉದ್ಘಾಟನಾ ಆವೃತ್ತಿಯಲ್ಲಿ ಪ್ಯಾಂಥರ್ಸ್ ತಂಡ ಚಾಂಪಿಯನ್ ಆಗಿತ್ತು.
ತಮ್ಮ ತಂಡ ಗೆಲುವಿನ ನಗೆ ಬೀರುತ್ತಿದ್ದಂತೆ ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ಮತ್ತು ಮಗಳು ಆರಾಧ್ಯ ಬಚ್ಚನ್ ಅವರನ್ನು ತಬ್ಬಿಕೊಂಡು ಸಂತಸ ಪಟ್ಟರು. ಫೈನಲ್ ಪಂದ್ಯ ವೀಕ್ಷಿಸಲು ಅಭಿಷೇಕ್ ಬಚ್ಚನ, ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಾ ಆಗಮಿಸಿದ್ದರು.
ಜೈಪುರ ಪಿಂಕ್ ಪ್ಯಾಂಥರ್ಸ್ ಗೆಲುವು ದಾಖಲಿಸುತ್ತಿದ್ದಂತೆ ಅಭಿಷೇಕ್ ಬಚ್ಚನ್ ಪಕ್ಕದಲ್ಲೇ ನಿಂತಿದ್ದ ಐಶ್ವರ್ಯಾ ಅವರನ್ನು ಎಳೆದು ತಬ್ಬಿಕೊಂಡು ಸಂಭ್ರಮಿಸಿದರು. ಬಳಿಕ ತಂಡದ ಜೊತೆ ಸೇರಿ ಕೂಗುತ್ತಾ ಗೆಲುವನ್ನು ಆಚರಿಸಿದರು. ಟ್ರೋಫಿ ಹಿಡಿದು ಖುಷಿ ಪಟ್ಟರು.
ಆರಾಧ್ಯಾ ಬಚ್ಚನ್ ಪ್ರೋ ಕಬಡ್ಡಿ ಟ್ರೋಫಿ ಹಿಡಿದು ಕ್ಯಾಮರಾಗೆ ಪೋಸ್ ನೀಡಿದರು. ತಮ್ಮ ತಂಡ ಗೆಲುವು ದಾಖಲಿಸಿದ ಖುಷಿಯನ್ನು ಐಶ್ವರ್ಯಾ ರೈ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
'ಜೈಪುರ ಪಿಂಕ್ ಪ್ಯಾಂಥರ್ಸ್ ಪ್ರೊ ಕಬಡ್ಡಿ ಸೀಸನ್ 9 ಚಾಂಪಿಯನ್ಸ್. ಎಂಥ ಅದ್ಬುತವಾದ ಸೀಸನ್. ನಮ್ಮ ಪ್ರತಿಭಾವಂತ ಆಟಗಾರರು, ಕಠಿಣ ಪರಿಶ್ರಮ ನಮ್ಮ ತಂಡದ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಬಾಯ್ಸ್.. ದೇವರ ಆಶೀರ್ವಾದ ಯಾವಾಗಲೂ ಇರುತ್ತೆ' ಎಂದು ಐಶ್ವರ್ಯಾ ರೈ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇನ್ನೂ ನಟ ಅಭಿಷೇಕ್ ಬಚ್ಚನ್ ಕೂಡ ಸಂತಸ ಹಂಚಿಕೊಂಡಿದ್ದಾರೆ. ಟ್ರೋಫಿ ಗೆದ್ದು ಬೀಗಿದ ಸಂತಸದ ಫೋಟೋಗಳನ್ನು ಶೇರ್ ಮಾಡಿ ಆಟಗಾರರಿಗೆ ವಿಶ್ ಮಾಡಿದ್ದಾರೆ. ತನ್ನ ತಂಡದ ಮೇಲೆ ಹೆಮ್ಮೆ ಆಗುತ್ತೆ ಎಂದು ಹೇಳಿದ್ದಾರೆ.
'ಈ ತಂಡದ ಬಗ್ಗೆ ತುಂಬಾ ಹೆಮ್ಮೆ ಇದೆ. ಅವರು ಸದ್ದಿಲ್ಲದೆ ಕಪ್ ಗೆಲ್ಲುವ ಕಡೆಗೆ ಕೆಲಸ ಮಾಡಿದ್ದಾರೆ. ಟೀಕೆಗಳ ಹೊರತಾಗಿಯೂ ಅವರು ಕೆಲಸ ಮಾಡುತ್ತಿದ್ದರು. ಅವರಿಗೆ ತಮ್ಮ ಮೇಲೆ ವಿಶ್ವಾಸವಿತ್ತು. ಅದು ಕೆಲಸ ಮಾಡಿದೆ. ಈ ಕಪ್ ಅನ್ನು ಮತ್ತೊಮ್ಮೆ ಗೆಲ್ಲಲು ನಮಗೆ 9 ವರ್ಷಗಳು ಬೇಕಾಯಿತು. ಮತ್ತು ಈ ತಂಡದೊಂದಿಗೆ ನಾನು ತುಂಬಾ ಸಂತೋಷವಾಗಿದ್ದೇನೆ. ಟೀಮ್ ವರ್ಕ್, ಹಾರ್ಡ್ ವರ್ಕ್ ಪಿಂಕ್ ಪ್ಯಾಂಥರ್ಸ್ ಮಾರ್ಗ' ಎಂದು ಹೇಳಿದ್ದಾರೆ.