ಕೆಎಸ್ಡಿಎಲ್ 108 ವರ್ಷಗಳ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ; ಒಂದೇ ತಿಂಗಳಲ್ಲಿ ₹186 ಕೋಟಿ ವಹಿವಾಟು!
ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಅವರು 1916ರಲ್ಲಿ ಸ್ಥಾಪಿಸಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು 2025ರ ಮೇ ತಿಂಗಳಲ್ಲಿ ₹186 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

ಬೆಂಗಳೂರು (ಜೂ. 03): ರಾಜ್ಯ ಸರ್ಕಾರದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆಎಸ್ಡಿಎಲ್) ಮೇ ತಿಂಗಳಲ್ಲಿ ₹186 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದೆ. ಉದ್ಯಮದ 108 ವರ್ಷಗಳ ಇತಿಹಾಸದಲ್ಲೇ ಕೇವಲ ಒಂದು ತಿಂಗಳಲ್ಲಿ ಹೀಗೆ ಭಾರೀ ವಹಿವಾಟು ನಡೆಸಿರುವುದು ಇದೇ ಪ್ರಪ್ರಥಮ ದಾಖಲೆಯಾಗಿದೆ.
ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಅವರು 1916ರಲ್ಲಿ ಸ್ಥಾಪಿಸಿದ ಮೈಸೂರು ಗಂಧದ ಎಣ್ಣೆ ಕಾರ್ಖಾನೆಯು ಇದೀಗ ಕರ್ನಾಟಕ ಸರ್ಕಾರದ ಸ್ವಾಮ್ಯದ ಸಾಬೂನು ಕಾರ್ಖಾನೆಯಾಗಿ ಮುಂದುವರೆಯುತ್ತಿದೆ. ಈಗಲೂ ಲಾಭದ ಹಾದಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಏಕೈಕ ಕಾರ್ಖಾನೆಯಾಗಿದೆ.
ಇನ್ನು 1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು, ಸಾಬೂನು ತಯಾರಿಕೆ ತಾಂತ್ರಿಕ ಪರಿಣತಿಯನ್ನು ಪಡೆಯಲು ಎಸ್.ಜಿ. ಶಾಸ್ತ್ರಿಯವರನ್ನು ವಿದೇಶಕ್ಕೆ ಕಳುಹಿಸಿದ್ದರು. ಇದಾದ ನಂತರ 1918ರಲ್ಲಿ ಮೈಸೂರು ಸ್ಯಾಂಡಲ್ ಸೋಪು ತಯಾರಿಕೆ ಸೇರಿದಂತೆ ಹಲವು ಉತ್ಪನ್ನಗಳು ಮಾರುಕಟ್ಟೆಗೆ ಬಂದವು.
ಕೆಎಸ್ಡಿಎಲ್ ಮಾರುಕಟ್ಟೆ ಲಾಭದ ಬಗ್ಗೆ ಮಾಹಿತಿ ಮಂಗಳವಾರ ಮಾಹಿತಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು, ನಮ್ಮ ಸಾಬೂನು ಮತ್ತು ಮಾರ್ಜಕ ಸಂಸ್ಥೆಗೆ ಮೇ ತಿಂಗಳಲ್ಲಿ 151.50 ಕೋಟಿ ರೂ. ವಹಿವಾಟಿನ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಈಗ ಇದಕ್ಕಿಂತ ₹35 ಕೋಟಿ ಹೆಚ್ಚಿನ ವಹಿವಾಟು ನಡೆಸುವ ಮೂಲಕ ಶೇಕಡ 125ರಷ್ಟು ಸಾಧನೆ ಮತ್ತು ಶೇಕಡ 15ರಷ್ಟು ಬೆಳವಣಿಗೆ ಸಾಧಿಸಲಾಗಿದೆ.
ಈ ವಹಿವಾಟಿನ ಪೈಕಿ ರಫ್ತಿನ ಮೂಲಕ 1.81 ಕೋಟಿ ರೂ. ಗಳಿಸಲಾಗಿದೆ. ರಫ್ತು ವಹಿವಾಟನ್ನು ವಾರ್ಷಿಕವಾಗಿ 150 ಕೋಟಿ ರೂ.ಗೆ ಕೊಂಡೊಯ್ಯುವ ಗುರಿ ಇದೆ ಎಂದಿದ್ದಾರೆ.
ಕೆಎಸ್‌ಡಿಎಲ್ ಸಂಸ್ಥೆಯು ತಯಾರಿಸುವ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಎಲ್ಲಾ 45 ಬಗೆಯ ಉತ್ಪನ್ನಗಳು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬಯಿ, ಕೋಲ್ಕತ್ತ, ನವದೆಹಲಿ ಶಾಖೆಗಳಲ್ಲಿ ಮತ್ತು ಬೆಂಗಳೂರಿನ ನೇರ ಮಾರುಕಟ್ಟೆ ವಿಭಾಗದ ಮೂಲಕ ನಿರೀಕ್ಷೆಗೂ ಮೀರಿ ಮಾರಾಟವಾಗಿವೆ. ಕೆಎಸ್ಡಿಎಲ್ ಉತ್ಪನ್ನಗಳಾದ ಸಾಬೂನು, ಶವರ್ ಜೆಲ್, ಅಗರಬತ್ತಿ ಮುಂತಾದವುಗಳಿಗೆ ವ್ಯಾಪಕ ಬೇಡಿಕೆ ಬರುತ್ತಿದೆ.
ಇನ್ನು ಕೆಎಸ್‌ಡಿಎಲ್ ಸಂಸ್ಥೆಯಲ್ಲಿ ಗುಣಮಟ್ಟದ ಉತ್ಪಾದನೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಕೈಗೊಂಡಿರುವ ಪ್ರಯತ್ನಗಳು ಫಲ ಕೊಡುತ್ತಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೇ ಅತಿ ಹೆಚ್ಚು ಅಂದದೆ ₹85 ಕೋಟಿ ವಹಿವಾಟು ನಡೆದಿದೆ. ಉಳಿದ ₹100 ಕೋಟಿ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಆಗಿದೆ.
ಈ ಹಿಂದೆ 2024ರ ಸೆಪ್ಟೆಂಬರ್ ತಿಂಗಳೊಂದರಲ್ಲೇ 178 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ ಇದನ್ನು ದಾಟಲಾಗಿದೆ. ಸಾಮಾನ್ಯವಾಗಿ ಕೆಎಸ್ಡಿಎಲ್ ಪ್ರತೀ ತಿಂಗಳೂ ಸರಾಸರಿ ₹135 ಕೋಟಿಗಳಿಂದ ₹140 ಕೋಟಿವರೆಗೂ ವಹಿವಾಟು ನಡೆಸುತ್ತದೆ. ಆದರೆ, ಮೇ ತಿಂಗಳಲ್ಲಿ ಇದಕ್ಕಿಂತ ₹41 ಕೋಟಿ ಹೆಚ್ಚು ವಹಿವಾಟು ದಾಖಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆಯ ಕಾರ್ಯವಿಧಾನವನ್ನು ಹೆಚ್ಚು ದಕ್ಷಗೊಳಿಸಲಾಗಿದೆಯೇ ವಿನಾ ಯಾವ ಹೊಸ ಉಪಕರಣಗಳನ್ನೂ ಖರೀದಿಸಿಲ್ಲ. ಸದ್ಯದಲ್ಲೇ ಸಂಸ್ಥೆಯ ವತಿಯಿಂದ ಸುಗಂಧದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕೆಎಸ್ ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ ವಿವರಿಸಿದ್ದಾರೆ.
ಸುಗಂಧದ ಪರಂಪರೆ, ಪ್ರಗತಿಯ ಹಾದಿ: ಮೈಸೂರು ಸ್ಯಾಂಡಲ್ ಸೋಪ್
2024-25ನೇ ಆರ್ಥಿಕ ವರ್ಷದಲ್ಲಿ #KSDL ಮೈಲಿ ಗಲ್ಲಿನ ಸಾಧನೆ
₹1,788Cr ವ್ಯವಹಾರ
₹416Cr ಶುದ್ಧ ಲಾಭ
ರಾಜ್ಯ ಸರ್ಕಾರಕ್ಕೆ 3ನೇ ಅತಿ ಹೆಚ್ಚು ಲಾಭಾಂಶ ಪಾವತಿ
ವಿಜಯಪುರದಲ್ಲಿ ₹250Cr ಮೌಲ್ಯದ ಹೊಸ ಘಟಕ
₹3,000 ಬೆಲೆಯ ಪ್ರೀಮಿಯಂ ಸ್ಯಾಂಡಲ್ ಸೋಪ್ ಶೀಘ್ರದಲ್ಲಿ
ಮೈಸೂರು ಸ್ಯಾಂಡಲ್ ಸೋಪಿನ ಪರಿಮಳ ಜಗದಗಲ ದಿನನಿತ್ಯ ಪಸರಿಸುತ್ತಲೇ ಇದೆ...