Millets Business: ಚಿಟಕಿ ಹೊಡೆಯೋದ್ರಲ್ಲಿ ಅಡುಗೆ ಆಗ್ಬೇಕು, ಆರೋಗ್ಯ ಹಾಳಾಗ್ಬಾರದು ಎನ್ನುವ ಈ ಕಾಲದ ಜನರಿಗೆ ಸೂಕ್ತ ಉತ್ಪನ್ನ ನೀಡ್ತಿದ್ದಾರೆ ಈ ಯುವತಿ. ಸಣ್ಣ ವಯಸ್ಸಿನಲ್ಲಿ ತಮ್ಮದೇ ಬ್ಯುಸಿನೆಸ್ ಶುರು ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.
ಜನರು ಆರೋಗ್ಯ (Health)ದ ಜೊತೆ ರುಚಿಯಾದ ಆಹಾರ ಬಯಸ್ತಾರೆ. ಗಂಟೆಗಟ್ಟಲೆ ಅಡುಗೆ ಮಾಡ್ತಾ ಅಡುಗೆ ಮನೆಯಲ್ಲಿ ನಿಲ್ಲೋಕೆ ಜನರಿಗೆ ಟೈಂ ಇಲ್ಲ. ಫಟಾಫಟ್ ಅಡುಗೆ ಆಗಿರ್ಬೇಕು. ಅದು ಆರೋಗ್ಯವನ್ನು ವೃದ್ಧಿಸ್ಬೇಕು. ಅಂತ ರೆಡಿ ಟು ಕುಕ್ ಫುಡ್ ಗೆ ಈಗ ಬೇಡಿಕೆ ಹೆಚ್ಚಾಗಿದೆ. ತಮ್ಮ ಓದಿನ ಸಮಯದಲ್ಲಿಯೇ ಜನರ ಮನಸ್ಥಿತಿ ಅರ್ಥ ಮಾಡ್ಕೊಂಡು ಫೀಲ್ಡ್ ಗೆ ಇಳಿದೋರು ಪಾಲಕ್ ಅರೋರಾ (Palak Arora). ಬಿ.ಟೆಕ್ ಮಾಡುವಾಗ್ಲೇ ಆಹಾರ ಉದ್ಯಮಕ್ಕೆ ಧುಮುಕಿದ ಅವರು ಈಗ ಯಶಸ್ವಿ ಉದ್ಯಮಿ. ಪಾಲಕ್ ಅರೋರಾ ಫುಡ್ ಇಂಜಿನಿಯರಿಂಗ್ ಮುಗಿಸಿದ್ರೂ ಟೆರೆಸ್ ಅಡುಗೆಯನ್ನು ನೆಚ್ಚಿಕೊಂಡಿದ್ದು, ಈಗ ಅದೇ ಅವರ ಕೋಟ್ಯಾಂತರ ವ್ಯವಹಾರಕ್ಕೆ ದಾರಿಯಾಗಿದೆ. ರಾಗಿ ಆಧಾರಿತ ಆಹಾರ ವ್ಯವಹಾರವು ಪ್ರತಿ ತಿಂಗಳು 3 ಲಕ್ಷ ರೂಪಾಗಳನ್ನು ಗಳಿಸ್ತಿದೆ.
ಯಾರು ಈ ಪಾಲಕ್ ಅರೋರಾ? : ಪಾಲಕ್ ಅರೋರಾಗೆ ಈಗ 26 ವರ್ಷ ವಯಸ್ಸು. ತಮ್ಮ 23ನೇ ವಯಸ್ಸಿನಲ್ಲಿಯೇ ಉದ್ಯಮ ಶುರು ಮಾಡಿದ ಈ ಪಾಲಕ್ ಅರೋರಾ, ಫರಿದಾಬಾದ್ನವರು. ಅವರು ಸತ್ಗುರು ಸೂಪರ್ ಫುಡ್ (Satguru Super Food) ಸ್ಟಾರ್ಟ್ ಅಪ್ ಅಡಿ 4 ಉತ್ಪನ್ನಗಳನ್ನು ತಯಾರಿಸಲು ಶುರು ಮಾಡಿದ್ರು. ಈಗ ಮಿಲಿಯಮ್ ಬ್ರಾಂಡ್ ಅಡಿಯಲ್ಲಿ ಭಾರತದಾದ್ಯಂತ 15 ರಾಗಿ ಆಧಾರಿತ ರೆಡಿ-ಟು-ಕುಕ್ ಉತ್ಪನ್ನಗಳನ್ನು ನೀಡುತ್ತಾರೆ. ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸಿ, ರಾಗಿ ಕೃಷಿಗೆ ಉತ್ತೇಜ ನೀಡಿದ ಮಹಿಳೆ ಇವರು.
ಪಾಲಕ್ ಅರೋರಾ ಜನರಿಗೆ ಉದ್ಯೋಗ ನೀಡಿದ್ದಲ್ಲದೆ, ರಾಗಿ ಬೆಳೆಯುವ ರೈತರಿಗೆ ಬೆಂಬಲವಾಗಿ ನಿಂತಿದ್ದಾರೆ. 2020 ರಲ್ಲಿ, ಕೋವಿಡ್ನಿಂದ ಜನರು ಉದ್ಯೋಗ ಕಳೆದುಕೊಂಡಿದ್ದಾಗ, ಆರೋಗ್ಯ ಕಾಪಾಡಿಕೊಳ್ಳೋದು ಕೂಡ ಒಂದು ಸವಾಲಾಗಿತ್ತು. ಆಹಾರ ತಂತ್ರಜ್ಞೆ ಪಾಲಕ್ ಏಕಕಾಲದಲ್ಲಿ ಎರಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ್ರು. ತಮ್ಮ ಸ್ಟಾರ್ಟ್ಅಪ್ ಸತ್ಗುರು ಸೂಪರ್ಫುಡ್ ಪ್ರಾರಂಭಿಸಿದರು.
ಸತ್ಗುರು ಸೂಪರ್ ಫುಡ್ ನಲ್ಲಿ ಏನು ತಯಾರಾಗುತ್ತೆ? : ಸತ್ಗುರು ಸೂಪರ್ಫುಡ್ನಲ್ಲಿ, ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಮೊಳಕೆಯೊಡೆದು ಸಂಪೂರ್ಣವಾಗಿ ನೈಸರ್ಗಿಕ ರೀತಿಯಲ್ಲಿ ಅಡುಗೆ ಮಾಡಲು ಸಿದ್ಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಈ ಉತ್ಪನ್ನ ಸಂರಕ್ಷಕ,ಮುಕ್ತ ಮತ್ತು ಯಾವುದೇ ಸೇರ್ಪಡೆಗಳಿಲ್ಲದೆ ಮಾಡಿದ್ದು, 3 ತಿಂಗಳ ಸ್ವಯಂ ಜೀವಿತಾವಧಿ ಹೊಂದಿದೆ ಎಂದು ಪಾಲಕ್ ಅರೋರಾ ಹೇಳಿದ್ದಾರೆ. ಟೆರೆಸ್ ನಲ್ಲಿ ಶುರುವಾದ ಅವರ ಚಿಕ್ಕ ಕೆಲ್ಸ 2025 ರ ಹೊತ್ತಿಗೆ ಮಾಸಿಕ ಎಂಟು ರೆಡಿ ಟು ಕುಕ್ ಹಾಗೂ 21 ಟನ್ ರೆಡಿ ಟು ಈಟ್ ರಾಗಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಇದ್ರಲ್ಲಿ ರಾಗಿ ಸೂಪ್, ರಾಗಿ ನೂಡಲ್ಸ್ ಮತ್ತು ಪಾಸ್ತಾ, ರಾಗಿ ಪೋಹಾ ಮತ್ತು ಪ್ಯಾನ್ಕೇಕ್ ಮಿಶ್ರಣಗಳು ಸೇರಿವೆ. ಸಣ್ಣ ಪ್ಯಾಕ್ಗಳಿಗೆ 55 ರೂಪಾಯಿ ಬೆಲೆ ಇದ್ದು, 640 ರೂಪಾಯಿ ಪ್ಯಾಕ್ ಕೂಡ ಲಭ್ಯವಿದೆ. ರೆಡಿ-ಟು-ಈಟ್ ಆಹಾರಗಳನ್ನು ಬಹಳ ಸುಲಭವಾಗಿ ತಯಾರಿಸಲಾಗುತ್ತದೆ. ಇವುಗಳನ್ನು10 ನಿಮಿಷಗಳಲ್ಲಿ ಬೇಯಿಸಿ ತಿನ್ಬಹುದು.
ಸ್ಥಳೀಯ ರಾಗಿ ಬೆಳೆಗಾರರಿಂದ ಪಾಲಕ್ ರಾಗಿ ಖರೀದಿ ಮಾಡ್ತಾರೆ. ಇದ್ರಿಂದ ಅಲ್ಲಿನ ರಾಗಿ ಬೆಳೆಗಾರರಿಗೆ ಆದಾಯ ಸಿಗ್ತಿದೆ. ಹಾಗೆಯೇ ಪಾಲಕ್ ಕೈ ಕೆಳಗೆ 7 ಮಂದಿ ಕೆಲ್ಸ ಮಾಡ್ತಿದ್ದಾರೆ. ರೈತರಿಂದ ರಾಗಿ ಬಂದ ತಕ್ಷಣ, ಅವುಗಳನ್ನು ತೊಳೆಯಲಾಗುತ್ತದೆ. ಅವುಗಳನ್ನು ಸ್ವಚ್ಛಗೊಳಿಸಿದ ನಂತ್ರ ಅವುಗಳನ್ನು ನೆನೆಸಿ ಅವುಗಳನ್ನು ನಿಯಂತ್ರಿತ ತಾಪಮಾನದಲ್ಲಿ ಮೊಳಕೆಯೊಡೆಸಲಾಗುತ್ತದೆ. ಅವುಗಳನ್ನು ಸೋಲಾರ್ ಡ್ರೈಯರ್ಗಳಲ್ಲಿ ಒಣಗಿಸಲಾಗುತ್ತದೆ. ಅಡುಗೆ ಮಾಡಲು ಸಿದ್ಧ ಉತ್ಪನ್ನಗಳನ್ನು ತಯಾರಿಸಲು ಅವುಗಳ ಪಾಕವಿಧಾನ ಸೂತ್ರೀಕರಣವನ್ನು ಬಳಸಲಾಗುತ್ತದೆ. ಈ ಎಲ್ಲ ಕೆಲ್ಸ ಪೂರ್ಣಗೊಳ್ಳಲು 7 -10 ದಿನ ಬೇಕು ಎಂದು ಪಾಲಕ್ ಹೇಳಿದ್ದಾರೆ. ರಾಗಿ ಒಳ್ಳೆಯದು ಎನ್ನುವ ಕಾರಣಕ್ಕೆ ಜನ ಸೇವನೆ ಮಾಡ್ತಾರೆ. ಆದ್ರೆ ಅದನ್ನು ತಯಾರಿಸುವ ಪ್ರೊಸೆಸ್ ಮರೆಯುತ್ತಾರೆ. ರಾಗಿ ಸರಿಯಾಗಿ ಮೊಳಕೆ ಬರುವುದು ಮುಖ್ಯ ಎಂದು ಪಾಲಕ್ ಹೇಳಿದ್ದಾರೆ.
