ಈ ಯುವತಿಯಂತೆ ನೀವೂ ತಿಂಗಳಿಗೆ 3 ಲಕ್ಷ ಗಳಿಸಬೇಕೇ? ಇಲ್ಲಿದೆ ಸೂಪರ್ ಬ್ಯುಸಿನೆಸ್ ಐಡಿಯಾ
ಬ್ಯುಸಿನೆಸ್ ಮಾಡಬೇಕು ಅಂತಾ ಹಲವರಿಗೆ ಆಸೆ ಇರುತ್ತೆ. ಆದರೆ, ನಷ್ಟವಾದರೆ ಏನು ಮಾಡೋದು ಅಂತಾ ಹೆದರಿ ಹಿಂದೆ ಸರಿಯುತ್ತಾರೆ. ಆದರೆ ಈ ಯುವತಿಯ ಕಥೆ ಕೇಳಿದರೆ, ನಿಮಗೂ ವ್ಯಾಪಾರದಲ್ಲಿ ಲಕ್ಷ ಲಕ್ಷ ಗಳಿಸಬಹುದು ಅನ್ನೋ ಧೈರ್ಯ ಬರುತ್ತದೆ. ಹಾಗಾದ್ರೆ ಯಾವುದು ಈ ಬ್ಯುಸಿನೆಸ್ ಅಂತ ನೋಡೋಣ ಬನ್ನಿ

ಯುವತಿಯ ಯಶೋಗಾಥೆ
ಕೆಲಸ ಮಾಡ್ತಾನೇ ಬ್ಯುಸಿನೆಸ್ ಶುರು ಮಾಡಬೇಕು ಅಂದುಕೊಂಡವರಿಗೆ ಇದೊಂದು ಒಳ್ಳೆ ಉದಾಹರಣೆ. ಹರಿಯಾಣದ ಫರಿದಾಬಾದ್‌ನ ಪಲಕ್ ಅರೋರಾ ಅನ್ನೋ ಯುವತಿ, ಸಿರಿಧಾನ್ಯ ಆಧಾರಿತ ಇನ್‌ಸ್ಟಂಟ್ ಫುಡ್ ಉತ್ಪನ್ನಗಳಿಂದ ತಿಂಗಳಿಗೆ ಸುಮಾರು 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಆರೋಗ್ಯಕರ ಯೋಚನೆಯೊಂದಿಗೆ ಶುರುವಾದ ಈ ಪ್ರಯತ್ನ, ಈಗ ಯಶಸ್ವಿ ಬ್ರ್ಯಾಂಡ್ ಆಗಿದೆ. ಈ ಕಥೆ ಕೇವಲ ಅವರ ಯಶಸ್ಸಿನ ಬಗ್ಗೆ ಮಾತ್ರವಲ್ಲ, ನೀವೂ ಇಂಥದ್ದೇ ಬ್ಯುಸಿನೆಸ್ ಹೇಗೆ ಶುರು ಮಾಡಬಹುದು, ಏನೆಲ್ಲಾ ಎಚ್ಚರಿಕೆ ವಹಿಸಬೇಕು ಅನ್ನೋದಕ್ಕೆ ದಾರಿ ತೋರಿಸುತ್ತದೆ.
ಸಮಸ್ಯೆಯನ್ನು ಗುರುತಿಸಿ.. ಅದರಲ್ಲಿಯೇ ಅವಕಾಶವಿರುತ್ತದೆ
ಇವತ್ತಿನ ಕಾಲದ ಮಹಿಳೆಯರು ಉದ್ಯೋಗ, ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಬ್ಯುಸಿಯಾಗಿರುತ್ತಾರೆ. ಅಡುಗೆಗೆ ಹೆಚ್ಚು ಸಮಯ ಕೊಡೋದು ಕಷ್ಟ. ಹೀಗಾಗಿಯೇ ಇನ್‌ಸ್ಟಂಟ್ ಮಿಕ್ಸ್, ರೆಡಿ-ಟು-ಈಟ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಉತ್ಪನ್ನಗಳಲ್ಲಿ ಪ್ರಿಸರ್ವೇಟಿವ್, ಕೃತಕ ಬಣ್ಣಗಳು ಇರುವುದರಿಂದ ಆರೋಗ್ಯದ ಬಗ್ಗೆ ಅನುಮಾನ ಮೂಡುತ್ತದೆ.
ಪಲಕ್ ಅವರ ಕುಟುಂಬದಲ್ಲಿ ಆರೋಗ್ಯ ಸಮಸ್ಯೆಗಳು ಬಂದಾಗ, ಅವರಿಗೆ ಸಿರಿಧಾನ್ಯಗಳ ಮಹತ್ವ ತಿಳಿಯಿತು. ಮಾರುಕಟ್ಟೆಯಲ್ಲಿ ಗುಣಮಟ್ಟದ, ಪ್ರಿಸರ್ವೇಟಿವ್ ಇಲ್ಲದ ಸಿರಿಧಾನ್ಯ ಉತ್ಪನ್ನಗಳು ಕಡಿಮೆ ಇವೆ ಅನ್ನೋದನ್ನು ಅವರು ಗುರುತಿಸಿದರು. ಇದೇ ಅವರ ಬಿಸಿನೆಸ್‌ಗೆ ಬಲವಾದ ಐಡಿಯಾ ಆಯಿತು.
ನೀವು ಕೂಡ ಹೀಗೆ ಮಾಡಿ
ಮಾರುಕಟ್ಟೆಯಲ್ಲಿರೋ ಕೊರತೆ ಏನು ಅಂತಾ ಮೊದಲು ಗುರುತಿಸಿ. ಗ್ರಾಹಕರ ಸಮಸ್ಯೆಗಳೇನು ಅಂತಾ ತಿಳಿದುಕೊಳ್ಳಿ. ಆರೋಗ್ಯ ಟ್ರೆಂಡ್‌ಗಳು, ಆಹಾರ ಪದ್ಧತಿಗಳನ್ನು ಗಮನಿಸಿ. ಸಮಸ್ಯೆ ಎಲ್ಲಿದೆಯೋ, ಅಲ್ಲೇ ವ್ಯಾಪಾರದ ಅವಕಾಶ ಇರುತ್ತೆ ಅನ್ನೋದನ್ನು ಮರೆಯಬೇಡಿ.
ಪಲಕ್ ಫುಡ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಓದಿದ್ದರೂ, ಅವರು ಶುರು ಮಾಡಿದ್ದು ತಮ್ಮ ಮನೆಯ ಅಡುಗೆಮನೆಯಲ್ಲೇ. ರಾಗಿ, ಜೋಳ, ಮೊಳಕೆ ಬರಿಸಿದ ಬೇಳೆಕಾಳುಗಳನ್ನು ಬಳಸಿ ಹೊಸ ರೆಸಿಪಿಗಳನ್ನು ತಯಾರಿಸಿದರು.
ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಅಭಿಪ್ರಾಯ ಪಡೆದುಕೊಂಡರು. ಅವರ ಫೀಡ್‌ಬ್ಯಾಕ್ ಆಧಾರದ ಮೇಲೆ ರೆಸಿಪಿಗಳಲ್ಲಿ ಬದಲಾವಣೆ ಮಾಡಿದರು.
ನೀವು ಕೂಡ ಪ್ರಾರಂಭಿಸಬೇಕಾದರೆ:
ಸಣ್ಣ ಮಟ್ಟದಲ್ಲಿ ಪ್ರಯೋಗ ಮಾಡಿ. 3–4 ಉತ್ಪನ್ನಗಳೊಂದಿಗೆ ಆರಂಭಿಸಿ. ಸ್ನೇಹಿತರು, ಕಾಲೋನಿಯಲ್ಲಿ ಟ್ರಯಲ್ ಸೇಲ್ಸ್ ಮಾಡಿ. ಗ್ರಾಹಕರ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳಿ. ಆರಂಭದಲ್ಲಿ ದೊಡ್ಡ ಹೂಡಿಕೆ ಬೇಕಿಲ್ಲ. ಗುಣಮಟ್ಟ ಮತ್ತು ರುಚಿ ಬಹಳ ಮುಖ್ಯ.
ಬ್ರ್ಯಾಂಡ್ ನಿರ್ಮಾಣ ಹೇಗೆ?
ಪಲಕ್ 2021ರಲ್ಲಿ ತಮ್ಮ ಸಂಸ್ಥೆಯನ್ನು ಆರಂಭಿಸಿದರು. ನಂತರ ಸಿರಿಧಾನ್ಯ ಆಧಾರಿತ ನೂಡಲ್ಸ್, ಪಾಸ್ತಾ, ಪುಲಾವ್ ಮಿಕ್ಸ್, ಪ್ಯಾನ್‌ಕೇಕ್ ಮಿಕ್ಸ್, ರಾಗಿ ಸೂಪ್, ಫ್ಲೇಕ್ಸ್‌ನಂತಹ 15ಕ್ಕೂ ಹೆಚ್ಚು ಉತ್ಪನ್ನಗಳನ್ನು ತಂದರು. ಮುಖ್ಯವಾಗಿ, 10 ನಿಮಿಷಗಳಲ್ಲಿ ಸಿದ್ಧವಾಗುವಂತೆ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದರು.
ಸಿರಿಧಾನ್ಯಗಳನ್ನು ನೆನೆಸುವ ಅಗತ್ಯವಿಲ್ಲದಂತೆ ತಯಾರಿಕಾ ವಿಧಾನ ರೂಪಿಸಿದರು. ಮೊಳಕೆ ಬರಿಸುವುದು, ಹುರಿಯುವಂತಹ ವಿಧಾನಗಳಿಂದ ಪೋಷಕಾಂಶಗಳನ್ನು ಉಳಿಸಿದರು. ಚಿಕ್ಕ ಪ್ಯಾಕ್‌ನಿಂದ ಹಿಡಿದು ಜಂಬೋ ಪ್ಯಾಕ್‌ವರೆಗೆ ಲಭ್ಯವಾಗುವಂತೆ ಮಾಡಿದರು.
ಬ್ರ್ಯಾಂಡ್‌ಗಾಗಿ ಮಾಡಬೇಕಾದದ್ದು:
ಸರಿಯಾದ ಹೆಸರು ಆಯ್ಕೆ ಮಾಡಿ. ಆಕರ್ಷಕ ಪ್ಯಾಕೇಜಿಂಗ್, FSSAI ನೋಂದಣಿ, ಸ್ಪಷ್ಟವಾದ ಲೇಬಲಿಂಗ್ ಇರಲಿ. 'ಆರೋಗ್ಯಕರ + ತ್ವರಿತ' ಅನ್ನೋ ಸ್ಪಷ್ಟ ಸಂದೇಶ ಗ್ರಾಹಕರಿಗೆ ತಲುಪುವಂತೆ ನೋಡಿಕೊಳ್ಳಿ. ಬ್ರ್ಯಾಂಡ್ ಮೇಲೆ ನಂಬಿಕೆ ಹೆಚ್ಚಾದರೆ, ಮಾರಾಟ ತಾನಾಗಿಯೇ ಹೆಚ್ಚುತ್ತದೆ.
ಮಾರಾಟ ಹೆಚ್ಚಿಸಲು ಈ ತಂತ್ರಗಳನ್ನು ಬಳಸಿ
ಪಲಕ್ ತಮ್ಮ ಉತ್ಪನ್ನಗಳನ್ನು ವೆಬ್‌ಸೈಟ್, ಸೂಪರ್‌ಮಾರ್ಕೆಟ್‌ಗಳು, ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ. ಫುಡ್ ಎಕ್ಸಿಬಿಷನ್, ಫುಡ್ ಫೆಸ್ಟಿವಲ್‌ಗಳಲ್ಲಿ ಭಾಗವಹಿಸಿ ಗ್ರಾಹಕರನ್ನು ನೇರವಾಗಿ ಭೇಟಿಯಾಗುತ್ತಿದ್ದಾರೆ. ಇದಕ್ಕಾಗಿ ನೀವು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಶುರು ಮಾಡಿ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮೂಲಕ ಡೆಮೋ ವಿಡಿಯೋಗಳನ್ನು ಹಾಕಿ. ಆನ್‌ಲೈನ್ ಮಾರುಕಟ್ಟೆಗಳಲ್ಲಿ ಲಿಸ್ಟ್ ಮಾಡಿ. ಸ್ಥಳೀಯ ಕಿರಾಣಿ ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಿ.
ಹೆಲ್ತ್ ಕ್ಲಬ್, ಜಿಮ್‌ಗಳಲ್ಲಿ ಪ್ರಚಾರ ಮಾಡಿ. ಆರಂಭದಲ್ಲಿ ಲಾಭ ಕಡಿಮೆ ಇದ್ದರೂ, ದೀರ್ಘಾವಧಿಯಲ್ಲಿ ಆದಾಯ ವೇಗವಾಗಿ ಹೆಚ್ಚುತ್ತದೆ. ಬಿಸಿನೆಸ್‌ನಲ್ಲಿ ಯಶಸ್ಸು ಗಳಿಸಲು ಉತ್ಪನ್ನದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ, ಮಾರುಕಟ್ಟೆ ಟ್ರೆಂಡ್‌ಗಳನ್ನು ಗಮನಿಸಿ, ನಿರಂತರವಾಗಿ ಹೊಸ ಉತ್ಪನ್ನಗಳನ್ನು ತನ್ನಿ, ಗ್ರಾಹಕರ ನಂಬಿಕೆ ಗಳಿಸಿ, ಮತ್ತು ಸಣ್ಣ ತಂಡದೊಂದಿಗೆ ಪ್ರಾರಂಭಿಸಿ ಕ್ರಮೇಣ ವಿಸ್ತರಿಸಿ.
ಇದನ್ನೂ ಓದಿ: ಕರ್ನಾಟಕದಲ್ಲಿ ಸದ್ಯ ಇದೇ ಹೊಸ ಬ್ಯುಸಿನೆಸ್ ಟ್ರೆಂಡ್; ಈ ಮಾರ್ಕೆಟಿಂಗ್ ಬಗ್ಗೆನೇ ಊರೆಲ್ಲಾ ಮಾತುಕತೆ
ಎಷ್ಟು ಹೂಡಿಕೆ ಬೇಕು.?
ಸಣ್ಣ ಮಟ್ಟದಲ್ಲಿ ಬಿಸಿನೆಸ್ ಶುರು ಮಾಡಲು ಸುಮಾರು 1 ರಿಂದ 3 ಲಕ್ಷ ರೂಪಾಯಿ ಹೂಡಿಕೆ ಸಾಕಾಗುತ್ತದೆ. ಇದರಲ್ಲಿ ಕಚ್ಚಾ ವಸ್ತುಗಳ ಖರೀದಿ, ಸಣ್ಣ ಮಿಕ್ಸಿಂಗ್ ಯೂನಿಟ್, ಪ್ಯಾಕೇಜಿಂಗ್ ಸಾಮಗ್ರಿ, ಲೈಸೆನ್ಸ್‌ಗಳು ಮತ್ತು ಮಾರ್ಕೆಟಿಂಗ್ ಖರ್ಚುಗಳು ಸೇರಿವೆ. ಬೇಡಿಕೆ ಹೆಚ್ಚಾದಂತೆ, ನಿಮ್ಮ ಯೂನಿಟ್ ಅನ್ನು ವಿಸ್ತರಿಸಬಹುದು.
ಇದನ್ನೂ ಓದಿ: Business Idea: 1 ಲಕ್ಷ ಹೂಡಿಕೆ, ದಿನಕ್ಕೆ 2 ಸಾವಿರ ಗಳಿಕೆ! 6 ತಿಂಗ್ಳಲ್ಲಿ ಲಕ್ಷಾಧಿಪತಿಯಾಗೋದು ಪಕ್ಕಾ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

