ಚಿನ್ನ ಖರೀದಿ ಬೇಡ ಅಂತ ಮೋದಿ ಕರೆ ಬೆನ್ನಲ್ಲೇ ಭಾರತಕ್ಕೆ ಬಂದ ಬಂಗಾರ ಎಷ್ಟು? ಖರೀದಿ ಮಾಹಿತಿ
ಪ್ರಧಾನಿ ನರೇಂದ್ರ ಮೋದಿಯವರ ಮನವಿ ಮತ್ತು ಆಮದು ಶುಲ್ಕ ಹೆಚ್ಚಳದ ಹೊರತಾಗಿಯೂ, ಭಾರತದಲ್ಲಿ ಚಿನ್ನದ ಆಮದು ಗಣನೀಯವಾಗಿ ಏರಿಕೆಯಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಎಷ್ಟು ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಭಾರತೀಯರ ಚಿನ್ನದ ಮೇಲಿನ ಪ್ರೀತಿ
ಪ್ರತಿ ಭಾರತೀಯರಿಗಿರುವ ಚಿನ್ನದ ಮೇಲಿನ ಪ್ರೀತಿ ಏನೇ ಆದರೂ ತಗ್ಗದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿದೇಶಿ ವಿನಿಮಯ ಉಳಿಸುವ ಉದ್ದೇಶದಿಂದ ಇನ್ನೊಂದು ವರ್ಷ ಅನಗತ್ಯ ಚಿನ್ನದ ಖರೀದಿ ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು. ಈ ಕರೆಯ ಹೊರತಾಗಿಯೂ ಮೇ ತಿಂಗಳಲ್ಲಿ ದೇಶದ ಹೊನ್ನಿನ ಆಮದು ಶೇ.34ರಷ್ಟು ಹೆಚ್ಚಳವಾಗಿದೆ.
77 ಸಾವಿರ ಕೋಟಿ ರು. ಮೌಲ್ಯದ ಚಿನ್ನ ಆಮದು
ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಏಪ್ರಿಲ್ ಮತ್ತು ಮೇನಲ್ಲಿ 77 ಸಾವಿರ ಕೋಟಿ ರು. ಮೌಲ್ಯದ ಚಿನ್ನವನ್ನು ವಿದೇಶದಿಂದ ತರಿಸಿಕೊಳ್ಳಲಾಗಿದ್ದು, ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಇದು ಶೇ.60ರಷ್ಟು ಹೆಚ್ಚಾಗಿದೆ. ಈ ಬೆಳವಣಿಗೆಯು ದೇಶದ ವ್ಯಾಪಾರ ಕೊರತೆ ಮತ್ತು ವಿದೇಶಿ ವಿನಿಮಯದ ಹೊರಹರಿವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.
ಚಿನ್ನದ ಮೇಲಿನ ತೆರಿಗೆ ಹೆಚ್ಚಳ
ಮಧ್ಯಪ್ರಾಚ್ಯ ಯುದ್ಧದಿಂದಾಗಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಲೇ ಸಾಗಿದ್ದ ಹೊತ್ತಿನಲ್ಲಿ, ದೇಶದ ವಿದೇಶಿ ವಿನಿಮಯ ಕರಗುವುದನ್ನು ತಪ್ಪಿಸಲು ಚಿನ್ನದ ಖರೀದಿಯನ್ನು ನಿಲ್ಲಿಸುವಂತೆ ಪ್ರಧಾನಿ ಕರೆ ನೀಡಿ ತೆರಿಗೆಯನ್ನು ಏರಿಕೆ ಮಾಡಿದ್ದರು. ಆದ್ರೆ ಭಾರತೀಯರು ಮಾತ್ರ ಈ ಕರೆಗೆ ಸ್ಪಂದಿಸಿದಂತೆ ಕಾಣಿಸುತ್ತಿಲ್ಲ.
ಇದನ್ನೂ ಓದಿ: ವರ್ಷದಲ್ಲೇ ಕೋಟ್ಯಾಧಿಪತಿ ಮಾಡಿದ ₹4ರ ಷೇರು ! ₹1 ಲಕ್ಷ ಹೂಡಿದವರಿಗೆ ಹೊಡೀತು ಲಾಟರಿ
ಚಿನ್ನದ ಖರೀದಿ ಮೇಲೆ ಯಾವುದೇ ಪರಿಣಾಮ ಬೀರದ ಮೋದಿ ಕರೆ
ವಿದೇಶಗಳಿಂದ ಚಿನ್ನದ ಖರೀದಿಯನ್ನು ತಗ್ಗಿಸುವ ಉದ್ದೇಶದಿಂದ ಅದರ ಆಮದು ಶುಲ್ಕವನ್ನು ಶೇ.6ರಿಂದ ಶೇ.15ಕ್ಕೆ ಏರಿಸಲಾಗಿತ್ತು. ಇದಕ್ಕೆ ಶೇ.3ರಷ್ಟು ಜಿಎಸ್‌ಟಿ ಸೇರಿ, ಒಟ್ಟು ಶುಲ್ಕ ಶೇ.18.45ರಷ್ಟು ಆಗಿತ್ತು. ಆದರೆ ಈ ಕ್ರಮಗಳು ಚಿನ್ನದ ಒಳಹರಿವಿನ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ. ಚಿನ್ನವನ್ನು ಸುರಕ್ಷಿತ ಆಸ್ತಿಯೆಂದು ಪರಿಗಣಿಸಿಯೂ ಜನ ಮುಗಿಬಿದ್ದು ಅದನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 304 ಕೋಟಿ ರೂಗೆ ಖರೀದಿಸಿದ ಮನೆ ಈಗ 1260 ಕೋಟಿಗೆ ಮಾರಾಟ, ಎಸೆಲ್ ಗ್ರೂಪ್ ಚೇರ್ಮನ್ ದಾಖಲೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

