- Home
- Business
- ಜಾಗತಿಕ ಹೂಡಿಕೆದಾರರ ಹಾಟ್‌ಸ್ಪಾಟ್ ಕರ್ನಾಟಕಕ್ಕೆ 2ನೇ ಸ್ಥಾನ, ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ.18 ಏರಿಕೆ!
ಜಾಗತಿಕ ಹೂಡಿಕೆದಾರರ ಹಾಟ್‌ಸ್ಪಾಟ್ ಕರ್ನಾಟಕಕ್ಕೆ 2ನೇ ಸ್ಥಾನ, ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ.18 ಏರಿಕೆ!
ಕೇಂದ್ರ ಸರ್ಕಾರದ ವರದಿ ಪ್ರಕಾರ, ಭಾರತದ ವಿದೇಶಿ ನೇರ ಬಂಡವಾಳ ಹೂಡಿಕೆಯು (FDI) ಶೇ.18ರಷ್ಟು ಏರಿಕೆ ಕಂಡಿದೆ. ಈ ಪೈಕಿ, ಕರ್ನಾಟಕವು ₹1.22 ಲಕ್ಷ ಕೋಟಿ ಎಫ್‌ಡಿಐ ಸ್ವೀಕರಿಸಿ ದೇಶದಲ್ಲೇ ಎರಡನೇ ಅತಿದೊಡ್ಡ ಹೂಡಿಕೆದಾರ ರಾಜ್ಯವಾಗಿ ಹೊರಹೊಮ್ಮಿದೆ.

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ 2ನೇ ಸ್ಥಾನ
ನವದೆಹಲಿ: ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ (FDI) ಭಾರತವು ಅತ್ಯಾಕರ್ಷಕ ಪ್ರಗತಿಯನ್ನು ಸಾಧಿಸಿವೆ. ಕೇಂದ್ರ ಸರ್ಕಾರದ ಕೈಗಾರಿಕಾ ಉತ್ತೇಜನಾ ಮತ್ತು ಆಂತರಿಕ ವ್ಯಾಪಾರ ಇಲಾಖೆಯು (DPIIT) ಬಿಡುಗಡೆ ಮಾಡಿರುವ ವಾರ್ಷಿಕ ವರದಿಯ ಪ್ರಕಾರ, ಭಾರತಕ್ಕೆ 5.58 ಲಕ್ಷ ಕೋಟಿ ರು. ಬಂಡವಾಳ ಹರಿದು ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.18ರಷ್ಟು ಏರಿಕೆಯಾಗಿದೆ. ವಿದೇಶಿ ನೇರ ಹೂಡಿಕೆಯ ಇಕ್ವಿಟಿ ಒಳಹರಿವಿನಲ್ಲಿ ಕರ್ನಾಟಕ ರಾಜ್ಯವು ಬರೋಬ್ಬರಿ ₹1.22 ಲಕ್ಷ ಕೋಟಿ ಅಂದರೆ 12.93 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು, ಎಫ್‌ಡಿಐ ಸ್ವೀಕರಿಸಿದ್ದು ಈ ಮೂಲಕ ದೇಶದಲ್ಲೇ ಮತ್ತೊಮ್ಮೆ ಎರಡನೇ ಸ್ಥಾನ ಪಡೆದು ಅತ್ಯಧಿಕ ಹೂಡಿಕೆದಾರ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಿಂಹಪಾಲು ಪಡೆದಿರುವ ಮಹಾರಾಷ್ಟ್ರ
ದೇಶದ ಒಟ್ಟು ವಿದೇಶಿ ಹೂಡಿಕೆಯಲ್ಲಿ ಸಿಂಹಪಾಲು ಪಡೆದಿರುವ ಮಹಾರಾಷ್ಟ್ರ ವು ₹1.76 ಲಕ್ಷ ಕೋಟಿ ಅಂದರೆ 18.41 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯೊಂದಿಗೆ ಈ ಬಾರಿಯೂ ಮೊದಲ ಸ್ಥಾನದಲ್ಲಿದೆ. ಕೈಗಾರಿಕಾ ವಲಯದಲ್ಲಿ ಮುಂಚೂಣಿಯಲ್ಲಿರುವ ಗುಜರಾತ್ ರಾಜ್ಯವು ₹54,000 ಕೋಟಿ ಅಂದರೆ 5.71 ಬಿಲಿಯನ್ ಅಮೆರಿಕನ್ ಡಾಲರ್ ಎಫ್‌ಡಿಐನೊಂದಿಗೆ 3ನೇ ಸ್ಥಾನದಲ್ಲಿದೆ. ತಾಂತ್ರಿಕ ರಾಜಧಾನಿ ಬೆಂಗಳೂರಿನ ಭದ್ರವಾದ ತಳಹದಿ ಹಾಗೂ ರಾಜ್ಯ ಸರ್ಕಾರದ ಉದ್ಯಮಸ್ನೇಹಿ ನೀತಿಗಳ ಕಾರಣದಿಂದಾಗಿ ಕರ್ನಾಟಕವು 3ನೇ ಸ್ಥಾನದಲ್ಲಿರುವ ಗುಜರಾತ್‌ಗಿಂತ ದುಪ್ಪಟ್ಟಿಗಿಂತಲೂ ಹೆಚ್ಚಿನ ಹೂಡಿಕೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಭಾರತದ ಒಟ್ಟು ಎಫ್‌ಡಿಐ 18% ರಷ್ಟು ಭಾರಿ ಏರಿಕೆ
ಕೇಂದ್ರದ ಕೈಗಾರಿಕಾ ಉತ್ತೇಜನಾ ಮತ್ತು ಆಂತರಿಕ ವ್ಯಾಪಾರ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ 2025-26ನೇ ಹಣಕಾಸು ವರ್ಷದಲ್ಲಿ ಇಡೀ ದೇಶದ ಒಟ್ಟು ವಿದೇಶಿ ನೇರ ಹೂಡಿಕೆ ಇಕ್ವಿಟಿ ಒಳಹರಿವು 18% ರಷ್ಟು ಭಾರಿ ಪ್ರಗತಿ ಕಾಣುವ ಮೂಲಕ 58.84 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಅಂದರೆ ಸುಮಾರು ₹5.58 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ಇದು ಹಿಂದಿನ ವರ್ಷದ (2024-25) ಒಟ್ಟು ವಿದೇಶಿ ಇಕ್ವಿಟಿ ಒಳಹರಿವಿನ ಪ್ರಮಾಣವಾದ 50 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಹೋಲಿಸಿದರೆ ಅತ್ಯಂತ ಗಣನೀಯ ಏರಿಕೆಯಾಗಿದೆ.
ಕೇವಲ ಇಕ್ವಿಟಿ ಒಳಹರಿವು ಮಾತ್ರವಲ್ಲದೆ ಕಂಪನಿಗಳು ಮರುಹೂಡಿಕೆ ಮಾಡಿದ ಗಳಿಕೆಗಳು ಮತ್ತು ಇತರ ಬಂಡವಾಳವನ್ನೂ ಒಳಗೊಂಡ ಭಾರತದ ಒಟ್ಟು ಎಫ್‌ಡಿಐ ಪ್ರಮಾಣವು 17% ರಷ್ಟು ಹೆಚ್ಚಳ ಕಂಡು 94.5 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಬೃಹತ್ ಮೊತ್ತವನ್ನು ಮುಟ್ಟಿದೆ. ಇನ್ನು ಪ್ರಸಕ್ತ ಹಣಕಾಸು ವರ್ಷದ ಜನವರಿಯಿಂದ ಮಾರ್ಚ್ ವರೆಗಿನ ಕೊನೆಯ ತ್ರೈಮಾಸಿಕ ಅವಧಿಯೊಂದರಲ್ಲೇ ಭಾರತವು 17.5% ರಷ್ಟು ಬೆಳವಣಿಗೆಯೊಂದಿಗೆ 10.9 ಬಿಲಿಯನ್ ಡಾಲರ್ ಮೌಲ್ಯದ ಇಕ್ವಿಟಿ ಹೂಡಿಕೆಯನ್ನು ಪಡೆದಿದ್ದರೆ, ಇತರ ಎಲ್ಲಾ ಗಳಿಕೆಗಳನ್ನು ಒಳಗೊಂಡ ಒಟ್ಟು ಒಳಹರಿವು ಇದೇ ತ್ರೈಮಾಸಿಕದಲ್ಲಿ 20.8 ಬಿಲಿಯನ್ ಡಾಲರ್‌ಗಳಷ್ಟಾಗಿತ್ತು.
ಹೂಡಿಕೆಯಲ್ಲಿ ಸಿಂಗಾಪುರ ನಂ.1, ಅಮೆರಿಕಾದ ಹೂಡಿಕೆ ದ್ವಿಗುಣ!
ಭಾರತಕ್ಕೆ ಜಾಗತಿಕ ಮಟ್ಟದಿಂದ ಹರಿದುಬಂದಿರುವ ಈ ಹೂಡಿಕೆಯಲ್ಲಿ ಸಿಂಗಾಪುರ ದೇಶವು ಭಾರತದ ಅತ್ಯಂತ ಪ್ರಮುಖ ಮತ್ತು ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮಿದ್ದು, ಒಟ್ಟು 19.8 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ ಸುಮಾರು ₹1.88 ಲಕ್ಷ ಕೋಟಿ ರೂಪಾಯಿಗಳ ಬಂಡವಾಳವನ್ನು ಕೊಡುಗೆಯಾಗಿ ನೀಡುವ ಮೂಲಕ ಮೊದಲ ಸ್ಥಾನದಲ್ಲಿದೆ.
ಇನ್ನು ಸಕಾರಾತ್ಮಕ ಬೆಳವಣಿಗೆಯಾಗಿ ಅಮೆರಿಕಾದಿಂದ (US) ಭಾರತಕ್ಕೆ ಬಂದಿರುವ ವಿದೇಶಿ ನೇರ ಹೂಡಿಕೆಯು ಬಹುತೇಕ ದ್ವಿಗುಣಗೊಂಡಿದ್ದು, ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ. 2024-25ರ ಹಣಕಾಸು ವರ್ಷದಲ್ಲಿ ಕೇವಲ 5.45 ಬಿಲಿಯನ್ ಡಾಲರ್ ಇದ್ದ ಯುಎಸ್ ಇಕ್ವಿಟಿ ಒಳಹರಿವು ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 11.17 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಅಂದರೆ ಅಂದಾಜು ₹1 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿ ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಅಮೆರಿಕಾದ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಮಾರಿಷಸ್ ದೇಶವು 6.57 ಬಿಲಿಯನ್ ಅಮೆರಿಕನ್ ಡಾಲರ್, ಜಪಾನ್ ದೇಶವು 3.74 ಬಿಲಿಯನ್ ಅಮೆರಿಕನ್ ಡಾಲರ್ ಮತ್ತು ನೆದರ್‌ಲ್ಯಾಂಡ್ಸ್ ದೇಶವು 3.37 ಬಿಲಿಯನ್ ಅಮೆರಿಕನ್ ಡಾಲರ್ ಕೊಡುಗೆಯನ್ನು ನೀಡಿವೆ.
ವಲಯವಾರು ಹೂಡಿಕೆ: ತಂತ್ರಜ್ಞಾನಕ್ಕೆ ಗರಿಷ್ಠ ಪಾಲು
ದೇಶದ ವಿವಿಧ ವಲಯವಾರು ಹೂಡಿಕೆಗಳ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿ ಎದ್ದು ಕಾಣುತ್ತದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲೇ ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಕ್ಷೇತ್ರವು ಜಾಗತಿಕ ಹೂಡಿಕೆದಾರರನ್ನು ಬಹುವಾಗಿ ಆಕರ್ಷಿಸಿದ್ದು, ಗರಿಷ್ಠ ಮಟ್ಟದ ಅಂದರೆ 13.94 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯನ್ನು ಪಡೆದು ಮುಂಚೂಣಿಯಲ್ಲಿದೆ.
ಇದರ ಬೆನ್ನಲ್ಲೇ ಬ್ಯಾಂಕಿಂಗ್, ವಿಮೆ, ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನೇತರ ಸೇವೆಗಳನ್ನು ಒಳಗೊಂಡ ಭಾರತದ ಸೇವಾ ವಲಯವು (Services Sector) 10 ಬಿಲಿಯನ್ ಅಮೆರಿಕನ್ ಡಾಲರ್ ಒಳಹರಿವನ್ನು ಕಂಡಿದೆ. ಇನ್ನು ದೇಶದ ವಾಣಿಜ್ಯ ವ್ಯಾಪಾರ (Trading) ವಲಯದಲ್ಲಿ 4 ಬಿಲಿಯನ್ ಅಮೆರಿಕನ್ ಡಾಲರ್ ವಹಿವಾಟು ನಡೆದಿದ್ದರೆ, ಪರಿಸರಸ್ನೇಹಿ ತಂತ್ರಜ್ಞಾನಕ್ಕೆ ಪೂರಕವಾಗಿರುವ ಸಾಂಪ್ರದಾಯಿಕವಲ್ಲದ ಇಂಧನ ಅಂದರೆ ನವೀಕರಿಸಬಹುದಾದ ಸೌರ ಮತ್ತು ಪವನ ಶಕ್ತಿ ವಲಯದಲ್ಲಿ 3 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ವಿದೇಶಿ ಬಂಡವಾಳ ಹೂಡಿಕೆಯಾಗಿದೆ.
ಕರ್ನಾಟಕದ ಭವಿಷ್ಯ
ಕರ್ನಾಟಕ ರಾಜ್ಯವು ಪ್ರಸಕ್ತ ಸಾಲಿನಲ್ಲಿ ₹1.22 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಮೊತ್ತದ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಮೂಲಕ ದೇಶದ ಒಟ್ಟಾರೆ ಆರ್ಥಿಕತೆಯ ಪ್ರಗತಿಯ ಇಂಜಿನ್ ತಾನೇ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿಶೇಷವಾಗಿ ಅಮೆರಿಕ ದೇಶದಿಂದ ಭಾರತಕ್ಕೆ ಹರಿದುಬಂದು ದ್ವಿಗುಣಗೊಂಡಿರುವ ಬೃಹತ್ ಹೂಡಿಕೆಯ ಸಿಂಹಪಾಲು ಬೆಂಗಳೂರಿನ ಐಟಿ, ಕೃತಕ ಬುದ್ಧಿಮತ್ತೆ (AI) ಮತ್ತು ನವೋದ್ಯಮಗಳ ಇಕೋಸಿಸ್ಟಮ್‌ಗೇ ತಲುಪಿರುವುದರಿಂದ, ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ತಾಂತ್ರಿಕ ಮತ್ತು ಕೈಗಾರಿಕಾ ವಲಯದಲ್ಲಿ ಲಕ್ಷಾಂತರ ಹೊಸ ಉನ್ನತ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

