ಸುಮಾರು 25 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಮಗಳು, ತನ್ನ 80 ವರ್ಷದ ತಂದೆಯ 46 ಲಕ್ಷ ರೂಪಾಯಿ ಸಾಲ ತೀರಿಸಲು ನಿರಾಕರಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಹಣಕಾಸು ಸಲಹೆಗಾರರ ಕಾರ್ಯಕ್ರಮಕ್ಕೆ ಕರೆ ಮಾಡಿ, ತಂದೆಗೆ ಸಹಾಯ ಮಾಡದಿರಲು ಕಾರಣಗಳನ್ನು ಕೇಳಿದ್ದಾಳೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನಷ್ಟು ವಿವರ ಇಲ್ಲಿದೆ.

'ಹಣಕ್ಕಿಂತ ಸಂಬಂಧ ದೊಡ್ಡದು' ಎಂಬುದು ಭಾರತೀಯ ಸಂಸ್ಕೃತಿಯ ಮೂಲಮಂತ್ರ. ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಣ ಮತ್ತು ವೈಯಕ್ತಿಕ ಆರ್ಥಿಕ ಸ್ವಾತಂತ್ರ್ಯಕ್ಕೆ ನೀಡುವ ಆದ್ಯತೆ ಎಷ್ಟು ಮಿತಿ ಮೀರಿರಬಹುದು ಎಂಬುದಕ್ಕೆ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದು ಸಾಕ್ಷಿಯಾಗಿದೆ. ಸುಮಾರು 25 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿರುವ ಮಹಿಳೆಯೊಬ್ಬಳು, ತನ್ನ 80 ವರ್ಷದ ವಯಸ್ಸಾದ ತಂದೆಯ ಸಾಲ ತೀರಿಸಲು ಹಣ ಕೊಡಬೇಕಾ ಅಥವಾ ಬೇಡವಾ ಎಂಬ ಗೊಂದಲದಲ್ಲಿ ಹಣಕಾಸು ಸಲಹೆಗಾರರಿಗೆ ಕಾಲ್ ಮಾಡಿರುವುದು ಈಗ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.

ಏನಿದು ಘಟನೆ?

ಅಮೆರಿಕದ ಖ್ಯಾತ ಹಣಕಾಸು ಸಲಹೆಗಾರ ಡೇವ್ ರಾಮ್‌ಸೇ ನಡೆಸಿಕೊಡುವ 'ದಿ ರಾಮ್‌ಸೇ ಶೋ' ಎಂಬ ಪ್ರಸಿದ್ಧ ಕಾರ್ಯಕ್ರಮಕ್ಕೆ 56 ವರ್ಷದ ಮಹಿಳೆಯೊಬ್ಬರು ಫೋನ್ ಮಾಡಿದ್ದರು. ಆಕೆ ತನ್ನ ಮತ್ತು ತನ್ನ ಪತಿಯ ಆರ್ಥಿಕ ಸ್ಥಿತಿಯನ್ನು ವಿವರಿಸುತ್ತಾ, ತಮಗೆ ಸುಮಾರು 3 ಮಿಲಿಯನ್ ಡಾಲರ್ (ಅಂದರೆ ಅಂದಾಜು 25 ಕೋಟಿ ರೂಪಾಯಿ) ಆಸ್ತಿ ಇರುವುದಾಗಿ ತಿಳಿಸಿದರು. ಆದರೆ, ಸಮಸ್ಯೆ ಇರುವುದು ಇಲ್ಲಿ ಅಲ್ಲ. ಆಕೆಯ 80 ವರ್ಷದ ತಂದೆ ಸುಮಾರು 55,000 ಡಾಲರ್ (ಅಂದಾಜು 46 ಲಕ್ಷ ರೂಪಾಯಿ) ಸಾಲದಲ್ಲಿದ್ದು, ಅದನ್ನು ತೀರಿಸಲು ಮಗಳ ಸಹಾಯ ಕೇಳಿದ್ದಾರೆ.

ಮಗಳ ವಿಚಿತ್ರ ವಾದ!

ಅಷ್ಟು ದೊಡ್ಡ ಮೊತ್ತದ ಆಸ್ತಿ ಇದ್ದರೂ ಆ ಮಹಿಳೆ ತನ್ನ ತಂದೆಗೆ ಸಹಾಯ ಮಾಡಲು ಸಿದ್ಧವಿರಲಿಲ್ಲ. 'ನಾವು ಈಗ ನಿವೃತ್ತರಾಗಿದ್ದೇವೆ. ನಮ್ಮ ಹಣವೆಲ್ಲಾ ರಿಟೈರ್‌ಮೆಂಟ್ ಖಾತೆಯಲ್ಲಿದೆ. ಆ ಹಣವನ್ನು ಹೊರಗೆ ತೆಗೆದರೆ ನಮಗೆ ತೊಂದರೆಯಾಗಬಹುದು. ಹಾಗಾಗಿ, ಅಪ್ಪನಿಗೆ ಸಹಾಯ ಮಾಡದಿರಲು ಯಾವೆಲ್ಲಾ ಕಾರಣಗಳನ್ನು ನೀಡಬಹುದು? ಅಪ್ಪನ ಮನವೊಲಿಸುವುದು ಹೇಗೆ?' ಎಂದು ಆಕೆ ನಿರೂಪಕನಿಗೆ ಪ್ರಶ್ನೆ ಮಾಡಿದ್ದಾಳೆ. ಕೇವಲ 3 ಕ್ರೆಡಿಟ್ ಕಾರ್ಡ್ ಬಾಕಿ ಮತ್ತು ಒಂದು ಕಾರ್ ಲೋನ್ ತೀರಿಸಲು ಆಕೆ ಅಪ್ಪನಿಗೆ ಹಣ ನೀಡಲು ನಿರಾಕರಿಸುತ್ತಿರುವುದು ಕೇಳಿ ಇಡೀ ಜಗತ್ತೇ ಬೆಚ್ಚಿಬಿದ್ದಿದೆ.

ಭಾರತೀಯರ ಆಕ್ರೋಶ:

ಈ ವಿಡಿಯೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ವೈರಲ್ ಆಗುತ್ತಿದ್ದಂತೆ 68 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಭಾರತದ ಯುವ ಉದ್ಯಮಿ ಇಶಾನ್ ಗೋಸ್ವಾಮಿ ಈ ಬಗ್ಗೆ ಪ್ರತಿಕ್ರಿಯಿಸಿ, 'ನಿಮ್ಮ ಬಳಿ 25 ಕೋಟಿ ರೂಪಾಯಿ ಇದ್ದೂ, ನಿಮ್ಮನ್ನು ಬೆಳೆಸಿದ ತಂದೆಗೆ 46 ಲಕ್ಷ ಕೊಡಲು ನಿಮ್ಮ ಕೈ ಬರುವುದಿಲ್ಲವೆಂದರೆ, ನೀವು ಜೀವನದಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದೀರಿ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾಂಸ್ಕೃತಿಕ ಭಿನ್ನತೆ:

ಭಾರತದಲ್ಲಿ ತಂದೆ-ತಾಯಿಯ ಸೇವೆ ಮಾಡುವುದು ಧರ್ಮ ಮತ್ತು ಕರ್ತವ್ಯ ಎಂದು ಭಾವಿಸಲಾಗುತ್ತದೆ. ಆದರೆ ಅಮೆರಿಕದಂತಹ ದೇಶಗಳಲ್ಲಿ ವ್ಯಕ್ತಿಗತ ಉಳಿತಾಯಕ್ಕೆ ಅತಿ ಹೆಚ್ಚು ಒತ್ತು ನೀಡುವುದರಿಂದ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿವೆ ಎಂಬುದು ನೆಟ್ಟಿಗರ ವಾದ. 'ಹಣ ಬರುತ್ತದೆ, ಹೋಗುತ್ತದೆ. ಆದರೆ ಹೆತ್ತವರು ಹೋದರೆ ಮತ್ತೆ ಸಿಗುವುದಿಲ್ಲ' ಎಂದು ಲಕ್ಷಾಂತರ ಜನರು ಈ ಮಹಿಳೆಯ ನಡೆಯನ್ನು ಖಂಡಿಸಿದ್ದಾರೆ.

ಒಟ್ಟಾರೆಯಾಗಿ, ಈ ವಿಡಿಯೋ ಹಣ ಮತ್ತು ಮಾನವೀಯತೆಯ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ತೆರೆದಿಟ್ಟಿದೆ. ಶ್ರೀಮಂತಿಕೆಯೆಂದರೆ ಕೇವಲ ಬ್ಯಾಂಕ್ ಬ್ಯಾಲೆನ್ಸ್ ಅಲ್ಲ, ಕಷ್ಟದಲ್ಲಿದ್ದ ಹೆತ್ತವರನ್ನು ಸಾಕುವುದು ಎಂಬುದನ್ನು ಈ ಘಟನೆ ಮರು ನೆನಪಿಸಿದೆ.

Scroll to load tweet…