ಇಳಿ ವಯಸ್ಸಿನಲ್ಲೂ ಬತ್ತದ ಛಲ, 98ನೇ ವಯಸ್ಸಿನಲ್ಲಿ ಫುಡ್ ಬ್ಯುಸಿನೆಸ್ ನಡೆಸ್ತಿರುವ ಅಜ್ಜಿ
Nani food business : ಕೆಲ್ಸ ಮಾಡೋ ಛಲವಿದ್ರೆ ವಯಸ್ಸು ಬರೀ ಲೆಕ್ಕ. ಇದಕ್ಕೆ 70, 80 ವರ್ಷವಲ್ಲ, ಬರೋಬ್ಬರಿ 98 ವರ್ಷವಾಗಿರುವ ಅಜ್ಜಿ ಉತ್ತಮ ನಿದರ್ಶನ. ನಿವೃತ್ತಿ ಪಡೆಯುವ ಬದಲು ಸೂರ್ಯೋದಯಕ್ಕಿಂತ ಮೊದಲೇ ಏಳುವ ಈ ಅಜ್ಜಿ ತಮ್ಮ ಬ್ಯುಸಿನೆಸ್ ನಲ್ಲಿ ಈಗ್ಲೂ ಬ್ಯುಸಿ.

98ರಲ್ಲೂ ಬ್ಯುಸಿನೆಸ್
ಅಹಮದಾಬಾದ್ (Ahmedabad)ನ 98 ವರ್ಷದ ಪ್ರಭಾವತಿ ಎಲ್ಲರಿಗೂ ಮಾದರಿ. ನನಗೆ ಇನ್ನೂ 98 ವರ್ಷ. ನಾನಿನ್ನೂ ಚಿಕ್ಕವನಾಗಿದ್ದೇನೆ ಅಂತ ಭಾವಿಸಿರುವ ಪ್ರಭಾವತಿ ಬದುಕಿರುವವರೆಗೂ, ನನ್ನ ಮಕ್ಕಳಿಗಾಗಿ ಅಡುಗೆ ಮಾಡುತ್ತೇನೆ ಅಂತ ಪ್ರಮಾಣ ಮಾಡ್ಕೊಂಡಿದ್ದಾರೆ.
ಆಸಕ್ತಿಕರವಾಗಿದೆ ಪ್ರಭಾವತಿ ಅಜ್ಜಿ ಬದುಕು
22 ನೇ ವಯಸ್ಸಿನಲ್ಲಿ ಮದುವೆಯಾದ ಪ್ರಭಾವತಿಗೆ ಮೂವರು ಹೆಣ್ಣು ಮಕ್ಕಳು. ಅವರನ್ನು ಬೆಳೆಸಿ, ಮನೆ ಸಂಸಾರ ನೋಡಿಕೊಳ್ಳೋದ್ರಲ್ಲಿ ಆರು ದಶಕ ಕಳೆದಿತ್ತು. ಆದ್ರೆ ಅಲ್ಲಿಗೆ ಪ್ರಭಾವತಿ ನಿಲ್ಲಲಿಲ್ಲ. ಹೊಸ ಹೊಸ ಅಡುಗೆಯನ್ನು ರುಚಿಯಾಗಿ ತಯಾರಿಸ್ತಿದ್ದ ಪ್ರಭಾವತಿ, ರುಚಿ ನೋಡಲು ನೆರೆಹೊರೆಯವರಿಗೆ ನೀಡ್ತಿದ್ದರು. ಈಗ ಅದೇ ವ್ಯವಹಾರವಾಗಿದೆ. ಅಜ್ಜಿಯ ಆಹಾರ ಬರೀ ರುಚಿಯಾಗಿಲ್ಲ. ಪ್ರತಿ ತುತ್ತಿನಲ್ಲೂ ಪ್ರೀತಿ ಅಡಗಿದೆ.
ಪತಿ ನಿಧನ
2017 ರಲ್ಲಿ ಪ್ರಭಾವತಿ ಪತಿ ನಿಧನರಾದರು. ಮನೆ ಇದ್ದಕ್ಕಿದ್ದಂತೆ ತುಂಬಾ ಶಾಂತವಾಯ್ತು. ಹೆಣ್ಮಕ್ಕಳಿಗೆ ಮದುವೆಯಾಗಿತ್ತು, ಮೊಮ್ಮಕ್ಕಳು ಕೈಗೆ ಬಂದಿದ್ರು. ಎಲ್ಲರೂ ಅವರವರ ಜೀವನದಲ್ಲಿ ಬ್ಯುಸಿಯಾಗಿದ್ರು. 60 ವರ್ಷಗಳಲ್ಲಿ ಮೊದಲ ಬಾರಿಗೆ, ಅಡುಗೆ ಮಾಡಿ ತಿನ್ನಿಸಲು ಯಾರೂ ಇರ್ಲಿಲ್ಲ.
ನಾನಿ ನಾಶ್ತಾ
ಒಂದು ದಿನ, ಮಗಳ ಸ್ನೇಹಿತೆ, ಪಾರ್ಟಿಗೆ ಖಾಂಡ್ವಿ ಮಾಡ್ತೀರಾ ಅಂತ ಕೇಳಿದ್ದರು. ಹಣ ಕೊಡೋದಾಗಿ ಒತ್ತಾಯಿಸಿದ್ರು. ಸಣ್ಣ ಆರ್ಡರ್ ನಿಂದ ಪ್ರಾರಂಭವಾದ ಅಡುಗೆ ಶೀಘ್ರದಲ್ಲೇ ದೊಡ್ಡ ಆರ್ಡರ್ ಆಗಿ ಬದಲಾಯಿತು. 91ನೇ ವಯಸ್ಸಿನಲ್ಲಿ ಪ್ರಭಾವತಿ ನಾನಿ ನಾಶ್ತಾ ಶುರು ಮಾಡಿದ್ರು. ಇಂದು, 200 ಕ್ಕೂ ಹೆಚ್ಚು ಕುಟುಂಬಗಳು ಪ್ರಭಾವತಿ ತಯಾರಿಸುವ ಗುಜರಾತಿ ಭಕ್ಷ್ಯಗಳಿಗಾಗಿ ಕಾಯುತ್ತಿವೆ. 98 ನೇ ವಯಸ್ಸಿನಲ್ಲಿಯೂ ಸಹ, ಪ್ರಭಾವತಿ ಈ ಕೆಲ್ಸವನ್ನು ಮುಂದುವರೆಸಿದ್ದಾರೆ. ಅವರು ಪ್ರತಿ ಕೆಲ್ಸದ ಮೇಲೆ ಕಣ್ಣಿಟ್ಟಿದ್ದಾರೆ. ಆಹಾರದ ರುಚಿ ನೋಡುತ್ತಾರೆ. ಪ್ರತಿ ಆರ್ಡರ್ ಗೆ ಸ್ವತಃ ಒಪ್ಪಿಗೆ ನೀಡ್ತಾರೆ.
ವಯಸ್ಸು ಕೇವಲ ಸಂಖ್ಯೆ
ಮೊದಲು, ನಾನು ನನ್ನ ಕುಟುಂಬಕ್ಕಾಗಿ ಅಡುಗೆ ಮಾಡುತ್ತಿದ್ದೆ. ಇಂದು, ನಾನು ಅನೇಕ ಕುಟುಂಬಗಳಿಗೆ ಅಡುಗೆ ಮಾಡುತ್ತೇನೆ. ನಾನು ಯಾರೊಬ್ಬರ ಹೆಂಡತಿ ಅಥವಾ ತಾಯಿ ಮಾತ್ರವಲ್ಲ. ನಾನು ಸ್ಥಾಪಕಿ ಎಂದು ಹೆಮ್ಮೆಯಿಂದ ಹೇಳ್ತಾರೆ ಪ್ರಭಾವತಿ. ಇದು ಕೇವಲ ಆಹಾರ, ವ್ಯವಹಾರವಲ್ಲ. ಇದು ಜೀವನದ ಉದ್ದೇಶವನ್ನು ಮರು ಸ್ಥಾಪಿಸುವ ಕೆಲ್ಸವಾಗಿದೆ. ಪ್ರಭಾವತಿ ಅಜ್ಜಿ ತಮ್ಮನ್ನು ತಾವು ಮರು ಶೋಧಿಸಿಕೊಂಡಿದ್ದಾರೆ. ಜೀವನವನ್ನು ಖುಷಿಯಿಂದ ಸಾರ್ಥಕತೆಯಿಂದ ಕಳೆಯುತ್ತಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ. ನೀವು ಯಾವುದೇ ದಿನವನ್ನು ಹೊಸದಾಗಿ ಪ್ರಾರಂಭಿಸಬಹುದು. ನಿಮ್ಮ ಜೀವನದ ಕಥೆಯನ್ನು ಬದಲಾಯಿಸಬಹುದು ಅಂತ ಪ್ರಭಾವತಿ ಹೇಳ್ತಾರೆ.
ಮಾದರಿ ಅಜ್ಜಿ
ಸಣ್ಣಪುಟ್ಟ ವಿಷ್ಯಕ್ಕೆ ನೊಂದು ಆತ್ಮ*ಹತ್ಯೆ ಮಾಡ್ಕೊಳ್ಳುವ, ಖಿನ್ನತೆಗೆ ಒಳಗಾಗುವ ಜನರ ಮಧ್ಯೆ ಪ್ರಭಾವತಿ ಅಜ್ಜಿ ಮಾದರಿಯಾಗಿ ನಿಲ್ತಾರೆ. ಜೀವನದಲ್ಲಿ ಏನೇ ಕಷ್ಟಬಂದ್ರೂ ಅದನ್ನು ಎದುರಿಸಬೇಕು, ಜೀವನವನ್ನು ಪ್ರೀತಿಸಬೇಕು ಎಂಬುದನ್ನು ಪ್ರಭಾವತಿ ಅಜ್ಜಿ ತೋರಿಸಿಕೊಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

