ಅತ್ಯಧಿಕ ಬಡ್ಡಿ ನೀಡುವ ಸರ್ಕಾರದ 9 ಸ್ಕೀಮ್ಗಳು: 100% ಸೇಫ್, ಕಳೆದುಕೊಳ್ಳೋ ಭೀತಿಯೇ ಇಲ್ಲ
ಭವಿಷ್ಯಕ್ಕಾಗಿ ಹಣ ಉಳಿಸಲು ಬಯಸುವವರಿಗೆ, ಖಾಸಗಿ ಸಂಸ್ಥೆಗಳ ಮೇಲಿನ ಅಪನಂಬಿಕೆ ಸಾಮಾನ್ಯ. ಅದಕ್ಕಾಗಿಯೇ, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಯೋಜನೆ, ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ 9 ಸುರಕ್ಷಿತ ಯೋಜನೆಗಳ ಬಗ್ಗೆ ವಿವರಿಸಲಾಗಿದೆ.

ಕೇಂದ್ರದ 9 ಸ್ಕೀಮ್ಸ್
ಪ್ರತಿಯೊಬ್ಬರಿಗೂ ಭವಿಷ್ಯಕ್ಕಾಗಿ ಒಂದಿಷ್ಟು ಕೂಡಿ ಇಡುವ ಹಂಬಲ ಇರುತ್ತದೆ. ಆದರೆ ಹೆಚ್ಚು ಬಡ್ಡಿ ಕೊಡುವ ಖಾಸಗಿ ಸಂಸ್ಥೆಗಳನ್ನು, ಸಹಕಾರ ಸಂಘಗಳನ್ನು ನಂಬಲು ಸಾಧ್ಯವಿಲ್ಲ, ಕಡಿಮೆ ಅವಧಿಯಲ್ಲಿ ಹೆಚ್ಚು ಬಡ್ಡಿ ಎನ್ನುವ ಹೆಸರಿನಲ್ಲಿ ಮೋಸ ಮಾಡುವ ಹಲವಾರು ಸಂಸ್ಥೆಗಳು ಹುಟ್ಟಿಕೊಂಡಿರುವ ಕಾರಣ, ಅದು ಸೇಫ್ ಅಲ್ಲ. ಅಂಥವರಿಗಾಗಿ ಸುರಕ್ಷಿತ ಆಗಿರುವಂಥ, ಕೇಂದ್ರ ಸರ್ಕಾರದ 9 ಯೋಜನೆಗಳ ಮಾಹಿತಿ ಇಲ್ಲಿದೆ.
ಸಾರ್ವಜನಿಕ ಭವಿಷ್ಯ ನಿಧಿ (PPF):
ಕೇಂದ್ರ ಸರ್ಕಾರದ ದೀರ್ಘಾವಧಿಯ, ತೆರಿಗೆ-ಮುಕ್ತ ಉಳಿತಾಯ ಯೋಜನೆಯಾಗಿದೆ. ಇದು 15 ವರ್ಷಗಳ ಅವಧಿಯನ್ನು ಹೊಂದಿದ್ದು, ವಾರ್ಷಿಕ ಗರಿಷ್ಠ 1.5 ಲಕ್ಷ ಹೂಡಿಕೆ ಮಾಡಬಹುದು. 7.1% ಬಡ್ಡಿ ದರವಿದ್ದು, ಇದು ಸುರಕ್ಷಿತ, ಸ್ಥಿರ ಆದಾಯ ಮತ್ತು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗಾಗಿ ಇದು ಜನಪ್ರಿಯವಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ (SSY):
ಸುಕನ್ಯಾ ಸಮೃದ್ಧಿ ಯೋಜನೆ (SSY) ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮತ್ತು ವಿವಾಹಕ್ಕಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಉಳಿತಾಯ ಯೋಜನೆಯಾಗಿದೆ. 10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಪೋಷಕರು ಅಂಚೆ ಕಚೇರಿ ಅಥವಾ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಬಹುದು. ವಾರ್ಷಿಕ ಕನಿಷ್ಠ 250 ರೂಯಿಂದ ರಿಂದ 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು, ಇದಕ್ಕೆ 8.2% ಬಡ್ಡಿ ಮತ್ತು ತೆರಿಗೆ ವಿನಾಯಿತಿ (80C) ಸಿಗುತ್ತದೆ.
ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS):
60 ವರ್ಷ ಮೇಲ್ಪಟ್ಟ ನಿವೃತ್ತರಿಗೆ ಸರ್ಕಾರಿ ಬೆಂಬಲಿತ ಸುರಕ್ಷಿತ ಹೂಡಿಕೆ ಯೋಜನೆಯಾಗಿದೆ. ಪ್ರಸ್ತುತ 8.2% ವಾರ್ಷಿಕ ಬಡ್ಡಿದರ (ತ್ರೈಮಾಸಿಕ ಪಾವತಿ) ನೀಡುವ ಈ ಯೋಜನೆ, 5 ವರ್ಷಗಳ ಅವಧಿಯನ್ನು ಹೊಂದಿದ್ದು, ಗರಿಷ್ಠ 30 ಲಕ್ಷ ರೂ,ವರೆಗೆ ಹೂಡಿಕೆ ಮಾಡಬಹುದು. ಇದು ತೆರಿಗೆ ಉಳಿತಾಯ ಮತ್ತು ಖಚಿತ ಆದಾಯವನ್ನು ಒದಗಿಸುತ್ತದೆ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಕೇಂದ್ರ ಸರ್ಕಾರದ ಅಂಚೆ ಕಚೇರಿಗಳ ಮೂಲಕ ಒದಗಿಸಲಾಗುವ ಸುರಕ್ಷಿತ, ಸ್ಥಿರ-ಆದಾಯದ ಸಣ್ಣ ಉಳಿತಾಯ ಯೋಜನೆಯಾಗಿದೆ. ಇದು 5 ವರ್ಷಗಳ ಮೆಚುರಿಟಿ ಅವಧಿಯನ್ನು ಹೊಂದಿದ್ದು, ಪ್ರಸ್ತುತ ವಾರ್ಷಿಕ 7.7% ಬಡ್ಡಿ ದರವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಭಾರತ ಸರ್ಕಾರವು ಜಾರಿಗೆ ತಂದಿರುವ, ನಿವೃತ್ತಿಯ ನಂತರ ನಿಯಮಿತ ಆದಾಯವನ್ನು ಖಾತರಿಪಡಿಸುವ ಸ್ವಯಂಪ್ರೇರಿತ, ಮಾರುಕಟ್ಟೆ-ಸಂಯೋಜಿತ ಪಿಂಚಣಿ ಯೋಜನೆಯಾಗಿದೆ. 18-70 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಇದರಲ್ಲಿ ಹೂಡಿಕೆ ಮಾಡಬಹುದು. ಇದು ತೆರಿಗೆ ಉಳಿತಾಯ, ವೃತ್ತಿಪರ ನಿಧಿ ನಿರ್ವಹಣೆ ಮತ್ತು ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಸಹಕಾರಿಯಾಗಿದೆ.
ಕಿಸಾನ್ ವಿಕಾಸ್ ಪತ್ರ (KVP)
ಸ್ಥಿರ ಅವಧಿಯಲ್ಲಿ ನಿಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸಲು ಖಾತರಿಪಡಿಸುವ ಯೋಜನೆ ಇದಾಗಿದೆ. ಕೇಮದ್ರ ಸರ್ಕಾರದ ಅಂಚೆ ಕಚೇರಿ ಉಳಿತಾಯ ಯೋಜನೆಯಾಗಿದ್ದು, ಹೂಡಿಕೆ ಮಾಡಿದ ಹಣವನ್ನು ನಿಗದಿತ ಅವಧಿಯಲ್ಲಿ (ಪ್ರಸ್ತುತ 115 ತಿಂಗಳುಗಳು ಅಥವಾ 9 ವರ್ಷ 7 ತಿಂಗಳು) ದ್ವಿಗುಣಗೊಳಿಸುತ್ತದೆ. ಇದು 18 ವರ್ಷ ಮೇಲ್ಪಟ್ಟವರಿಗೆ, ಜಂಟಿ ಖಾತೆ ಅಥವಾ ಅಪ್ರಾಪ್ತ ವಯಸ್ಕರ ಪರವಾಗಿ ಲಭ್ಯವಿದೆ. ಸುರಕ್ಷಿತ ಹೂಡಿಕೆಗೆ ಇದು ಉತ್ತಮವಾಗಿದೆ, ಆದರೆ ಆದಾಯ ತೆರಿಗೆ ವಿನಾಯಿತಿ (80C) ಅನ್ವಯಿಸುವುದಿಲ್ಲ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS)
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಒಂದು ಸುರಕ್ಷಿತ ಸರ್ಕಾರಿ ಉಳಿತಾಯ ಯೋಜನೆಯಾಗಿದ್ದು, 5 ವರ್ಷಗಳ ಅವಧಿಗೆ ವಾರ್ಷಿಕ 7.4% ಬಡ್ಡಿದರದಲ್ಲಿ ಖಾತರಿಯ ಮಾಸಿಕ ಆದಾಯವನ್ನು ನೀಡುತ್ತದೆ. ಒಬ್ಬ ವ್ಯಕ್ತಿ ಗರಿಷ್ಠ 9 ಲಕ್ಷ (ಜಂಟಿ ಖಾತೆಗೆ) ರೂಪಾಯಿವರೆಗೆ ಹೂಡಿಕೆ ಮಾಡಬಹುದು. 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ಸೇರಿದಂತೆ ಯಾರು ಬೇಕಾದರೂ ಖಾತೆ ತೆರೆಯಬಹುದು.
ಸಾರ್ವಭೌಮ ಚಿನ್ನದ ಬಾಂಡ್‌ಗಳು (SGB)
ಕೇಂದ್ರ ಸರ್ಕಾರದ ಪರವಾಗಿ RBI ವಿತರಿಸುವ ಭೌತಿಕ ಚಿನ್ನಕ್ಕೆ ಸುರಕ್ಷಿತ ಪರ್ಯಾಯವಾಗಿದೆ. ಇದು 8 ವರ್ಷಗಳ ಅವಧಿಗೆ (5 ವರ್ಷಗಳ ನಂತರ ನಿರ್ಗಮನ ಆಯ್ಕೆ) ವಾರ್ಷಿಕ 2.5% ಬಡ್ಡಿಯೊಂದಿಗೆ ಚಿನ್ನದ ಮೇಲಿನ ಹೂಡಿಕೆಯ ಮೇಲೆ ಆಸ್ತಿ ಮೌಲ್ಯದ ಹೆಚ್ಚಳದ ಲಾಭವನ್ನು ನೀಡುತ್ತದೆ. ಕನಿಷ್ಠ 1 ಗ್ರಾಂನಿಂದ ಗರಿಷ್ಠ 4 ಕೆಜಿ (ವ್ಯಕ್ತಿಗಳಿಗೆ) ವರೆಗೆ ಹೂಡಿಕೆ ಮಾಡಬಹುದು.
ಅಟಲ್ ಪಿಂಚಣಿ ಯೋಜನೆ (APY)
ಅಟಲ್ ಪಿಂಚಣಿ ಯೋಜನೆ (APY) ಭಾರತ ಸರ್ಕಾರದ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಜಾರಿಗೊಳಿಸಿದ ಪ್ರಮುಖ ಪಿಂಚಣಿ ಯೋಜನೆಯಾಗಿದೆ. 18 ರಿಂದ 40 ವರ್ಷ ವಯಸ್ಸಿನ ಬ್ಯಾಂಕ್ ಖಾತೆದಾರರು ಇದರಡಿ ಸೇರಬಹುದು. 60 ವರ್ಷ ತುಂಬಿದ ನಂತರ ಮಾಸಿಕ ₹1,000 ರಿಂದ ₹5,000 ವರೆಗೆ ಖಾತರಿ ಪಿಂಚಣಿ ಲಭ್ಯವಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

