‘ದಿ ಸಿಎಂಒ ಅಸೆಂಬ್ಲಿ’ ಸಂಸ್ಥಾಪಕ ವಿವೇಕ್ ಸೇಠ್‌, ಮಾರ್ಕೆಟಿಂಗ್ ಲೀಡರ್‌ಗಳಿಗಾಗಿ ಒಂದು ಪ್ರಾಮಾಣಿಕ ವೇದಿಕೆಯನ್ನು ಸೃಷ್ಟಿಸಿದ್ದಾರೆ. ಈ ಸಂದರ್ಶನದಲ್ಲಿ, ಅವರು ಸಿಎಂಒಗಳ ಖಾಸಗಿ ಆತಂಕಗಳು, ಕೃತಕ ಬುದ್ಧಿಮತ್ತೆಯ ಪ್ರಭಾವ ಹಾಗೂ ದೀರ್ಘಕಾಲದ ಬ್ರ್ಯಾಂಡ್ ನಿರ್ಮಾಣದ ನಡುವಿನ ಸಂಘರ್ಷವನ್ನು ಚರ್ಚಿಸಿದ್ದಾರೆ.

‘ದಿ ಸಿಎಂಒ ಅಸೆಂಬ್ಲಿ’ ಸಂಸ್ಥೆ ಭಾರತೀಯ ಮಾರ್ಕೆಟಿಂಗ್ ಲೀಡರ್‌ಗಳು ಯಾವುದೇ ಮುಖವಾಡವಿಲ್ಲದೆ, ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಚರ್ಚಿಸಲು ಅತ್ಯುನ್ನತ ನಂಬಿಕೆಯ ವೇದಿಕೆಯೊಂದನ್ನು ಕಲ್ಪಿಸಿಕೊಟ್ಟಿದೆ. ಇದರ ಸಂಸ್ಥಾಪಕರಾದ ವಿವೇಕ್ ಸೇಠ್‌ ಅವರು ಸಿಎಂಒಗಳ ವೈಯಕ್ತಿಕ ಆತಂಕಗಳು, ಮಾರ್ಕೆಟಿಂಗ್ ಕ್ಷೇತ್ರದ ಮೇಲೆ ಕೃತಕ ಬುದ್ಧಿಮತ್ತೆಯ (AI) ಪ್ರಭಾವ ಮತ್ತು ಅಲ್ಪಾವಧಿಯ ಲಾಭ ಹಾಗೂ ದೀರ್ಘಕಾಲದ ಬ್ರ್ಯಾಂಡ್ ನಿರ್ಮಾಣದ ನಡುವೆ ನಡೆಯುತ್ತಿರುವ ನಿರಂತರ ಹೋರಾಟವನ್ನು ಏಷ್ಯಾನೆಟ್‌ ನ್ಯೂಸ್‌ ಜೊತೆಗಿನ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿ ವರ್ಷ ಮಾರ್ಕೆಟಿಂಗ್ ಉದ್ಯಮವು ಸಾರ್ವಜನಿಕವಾಗಿ ಸಾಕಷ್ಟು ಆಶಾವಾದವನ್ನು ಪ್ರದರ್ಶಿಸುತ್ತದೆ. ಆದರೆ ಯಾವುದೇ ಸ್ಟೇಜ್, ಪ್ಯಾನಲ್ ಮತ್ತು ಜನರ ಜಡ್ಜ್‌ಮೆಂಟ್ ಇಲ್ಲದಿದ್ದಾಗ ಈ ಸಿಎಂಒಗಳು ನಿಜವಾಗಿ ಏನನ್ನು ಮಾತನಾಡಿಕೊಳ್ಳುತ್ತಾರೆ? ‘ದಿ ಸಿಎಂಒ ಅಸೆಂಬ್ಲಿ’ ಎಂಬುದು ಗ್ರಾಹಕಸ್ನೇಹಿ ಬ್ರ್ಯಾಂಡ್‌ಗಳ ಚೀಫ್ ಮಾರ್ಕೆಟಿಂಗ್ ಆಫೀಸರ್ಸ್ (CMOs) ಮತ್ತು ಹಿರಿಯ ಮಾರ್ಕೆಟಿಂಗ್ ತಜ್ಞರಿಗಾಗಿಯೇ ರೂಪಿಸಲಾದ ಒಂದು ಪ್ರತ್ಯೇಕ ಕಮ್ಯುನಿಟಿ. ಸಾಂಪ್ರದಾಯಿಕ ಸಾರ್ವಜನಿಕ ವೇದಿಕೆಗಳ ಭಾಷಣಗಳನ್ನು ಬದಿಗಿಟ್ಟು, ಆಧುನಿಕ ಮಾರ್ಕೆಟಿಂಗ್‌ನ ಕಾರ್ಯಾಚರಣೆಯ ವಾಸ್ತವಗಳು, ಕಷ್ಟಪಟ್ಟು ಕಲಿತ ಪಾಠಗಳು ಮತ್ತು ಹೊಸ ಆವಿಷ್ಕಾರಗಳ ಬಗ್ಗೆ ಪ್ರಾಮಾಣಿಕವಾಗಿ ಚರ್ಚಿಸಲು ಈ ವೇದಿಕೆ ಅವಕಾಶ ಮಾಡಿಕೊಡುತ್ತದೆ.

ಇತ್ತೀಚೆಗಷ್ಟೇ ಈ ಸಂಸ್ಥೆಯು 11 ವಿವಿಧ ಉದ್ಯಮಗಳ 121 ಮಾರ್ಕೆಟಿಂಗ್ ಲೀಡರ್‌ಗಳಿಂದ ಅನಾಮಧೇಯ (Anonymous) ಮತ್ತು ಮುಕ್ತ ಅಭಿಪ್ರಾಯಗಳನ್ನು ಸಂಗ್ರಹಿಸಿ ‘ದಿ ಇಂಡಿಯಾ ಸಿಎಂಒ ಇಂಡೆಕ್ಸ್ 2026’ (The India CMO Index 2026) ಅನ್ನು ಬಿಡುಗಡೆ ಮಾಡಿದೆ. ಈ ವರದಿಯು ಭಾರತೀಯ ಮಾರ್ಕೆಟಿಂಗ್ ನಾಯಕತ್ವ ಎದುರಿಸುತ್ತಿರುವ ವಿರೋಧಾಭಾಸಗಳನ್ನು, ಪ್ರಮುಖವಾಗಿ ಅಲ್ಪಾವಧಿಯ ಕಾರ್ಯಕ್ಷಮತೆಯ ಮೆಟ್ರಿಕ್ಸ್ ಮತ್ತು ದೀರ್ಘಕಾಲದ ಬ್ರ್ಯಾಂಡ್ ಮೌಲ್ಯದ ನಡುವಿನ ಜಗ್ಗಾಟವನ್ನು ಎತ್ತಿ ತೋರಿಸುತ್ತದೆ.

‘ದಿ ಸಿಎಂಒ ಅಸೆಂಬ್ಲಿ’ ಸಂಸ್ಥಾಪಕ ವಿವೇಕ್ ಸೇಠ್‌ ಅವರೊಂದಿಗಿನ ವಿಶೇಷ ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ:

ಪ್ರಶ್ನೆ 1: ಭಾರತದ ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿ ನೀವು ಕಂಡುಕೊಂಡ ಅಂತಹ ಕೊರತೆ ಏನು? ‘ದಿ ಸಿಎಂಒ ಅಸೆಂಬ್ಲಿ’ ಕಟ್ಟಲು ನಿಮಗೆ ಪ್ರೇರಣೆ ನೀಡಿದ ಅಂಶ ಯಾವುದು?

ಉತ್ತರ: ಭಾರತದಲ್ಲಿ ಸಿಎಂಒಗಳು ತಮ್ಮ ಮನದಾಳದ ನಿಜವಾದ ಮಾತುಗಳನ್ನು ಆಡಲು ಒಂದು ಪ್ರಾಮಾಣಿಕವಾದ ಜಾಗದ ತೀವ್ರ ಅಭಾವವಿದೆ ಎಂದು ನನಗೆ ಅನಿಸಿತು. ದೇಶದಲ್ಲಿ ಸಾಕಷ್ಟು ಕಾನ್ಫರೆನ್ಸ್‌ಗಳು, ಪ್ಯಾನಲ್‌ಗಳು, ಅವಾರ್ಡ್ಸ್ ಶೋಗಳು ಮತ್ತು ನೆಟ್‌ವರ್ಕಿಂಗ್ ಗ್ರೂಪ್‌ಗಳಿವೆ - ಆದರೆ ಸಿಎಂಒಗಳು ಯಾವುದೇ ನಾಟಕೀಯತೆ ಇಲ್ಲದೆ ಮುಕ್ತವಾಗಿ ಮಾತನಾಡುವ ಜಾಗಗಳು ತೀರಾ ವಿರಳ. ಸಾರ್ವಜನಿಕವಾಗಿ ನಡೆಯುವ ಹೆಚ್ಚಿನ ಸಂಭಾಷಣೆಗಳು ಪಿಆರ್-ಚಾಲಿತ (PR-driven) ಅಥವಾ ವ್ಯವಹಾರದ ದೃಷ್ಟಿಯದ್ದಾಗಿರುತ್ತವೆ. ಆದರೆ ವಾಸ್ತವ ಏನೆಂದರೆ, ಇಂದಿನ ಸಿಎಂಒಗಳು ಬೋರ್ಡ್ ಮೀಟಿಂಗ್‌ಗಳ ಒತ್ತಡ, ಎಐ ತಂತ್ರಜ್ಞಾನದ ಅಬ್ಬರ, ಗ್ರಾಹಕರಲ್ಲಿ ಕುಸಿಯುತ್ತಿರುವ ಗಮನದ ಅವಧಿ, ಮಾರುಕಟ್ಟೆಯ ನಿರೀಕ್ಷೆಗಳು ಮತ್ತು ಆಂತರಿಕ ರಾಜಕೀಯದಂತಹ ಅಗಾಧವಾದ ಸಂಕೀರ್ಣತೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಇವುಗಳನ್ನು ತಮ್ಮದೇ ಸಮಾನ ಮನಸ್ಕರೊಂದಿಗೆ ಪ್ರಾಮಾಣಿಕವಾಗಿ ಚರ್ಚಿಸುವ ವಾತಾವರಣ ಯಾರು ನಿರ್ಮಿಸಿರಲಿಲ್ಲ. ಅದನ್ನು ಪರಿಹರಿಸಲು ‘ದಿ ಸಿಎಂಒ ಅಸೆಂಬ್ಲಿ’ ಜನ್ಮತಾಳಿತು. ಇದು ಮತ್ತೊಂದು ಉದ್ಯಮ ವೇದಿಕೆಯಲ್ಲ, ಬದಲಿಗೆ ಒಂದೇ ರೀತಿಯ ಒತ್ತಡವನ್ನು ಹೊತ್ತಿರುವ ನಾಯಕರ ನಡುವಿನ ನಿಜವಾದ ಸಂಭಾಷಣೆಗಳ ನಂಬಿಕಸ್ಥ ಕಮ್ಯುನಿಟಿ.

ಪ್ರಶ್ನೆ 2: ಪ್ರಸ್ತುತ ಇರುವ ಮಾರ್ಕೆಟಿಂಗ್ ಕಮ್ಯುನಿಟಿ ಸಿಎಂಒಗಳ "ಜೊತೆ ಮಾತನಾಡುವ" ಬದಲು, ಸಿಎಂಒಗಳಿಗೆ "ಉಪದೇಶ ನೀಡುತ್ತವೆ" ಎಂದು ನೀವು ಪದೇ ಪದೇ ಹೇಳಿದ್ದೀರಿ. ಈಗಿನ ಮಾದರಿಯಲ್ಲಿ ದೋಷ ಎಲ್ಲಿದೆ?

ಉತ್ತರ: ಇಂದಿನ ಬಹುತೇಕ ವ್ಯವಸ್ಥೆಗಳು ನಾಯಕರ ‘ದೃಶ್ಯ ಪ್ರದರ್ಶನ’ಕ್ಕೆ (Visibility) ಪ್ರಾಮುಖ್ಯತೆ ನೀಡುತ್ತವೆಯೇ ಹೊರತು ಅವರ ‘ಅಸಹಾಯಕತೆ ಅಥವಾ ವಾಸ್ತವ’ಕ್ಕೆ (Vulnerability) ಅಲ್ಲ. ಇಂದಿನ ಫಾರ್ಮ್ಯಾಟ್‌ಗಳು ಒಂದೇ ಮಾದರಿಯಲ್ಲಿವೆ: ಒಂದು ಸ್ಟೇಜ್, ಒಬ್ಬ ಮಾಡರೇಟರ್, ಮೊದಲೇ ಊಹಿಸಬಹುದಾದ ಪ್ರಶ್ನೆಗಳು, ಸಿದ್ಧಪಡಿಸಿದ ಉತ್ತರಗಳು, ಪ್ರಾಯೋಜಕರ ಪ್ರಚಾರದ ಕಥೆಗಳು ಮತ್ತು ತಮಗೆ ಎಲ್ಲವೂ ಗೊತ್ತು ಎನ್ನುವಂತೆ ನಟಿಸುವ ಜನರ ಸೋಗು. ಆದರೆ ನೈಜ ನಾಯಕತ್ವದ ಸಂಭಾಷಣೆಗಳು ಹೀಗೆ ನಡೆಯುವುದಿಲ್ಲ. ಸಿಎಂಒಗಳಿಗೆ ಯಾವುದೇ ಸಾಮಾನ್ಯ ಪ್ರೇರಣೆಯ ಅಗತ್ಯವಿಲ್ಲ. ಅವರಿಗೆ ಬೇಕಾಗಿರುವುದು ಸಮಾನ ಮನಸ್ಕರ ಪ್ರಾಮಾಣಿಕತೆ. ತಾವೊಂದು ಮುಚ್ಚಿದ ಕೋಣೆಯಲ್ಲಿ ಕುಳಿತು— "ನಮ್ಮ ಈ ಕ್ಯಾಂಪೇನ್ ಫೇಲ್ ಆಯ್ತು, ದೀರ್ಘಕಾಲದ ಬ್ರ್ಯಾಂಡ್ ಆರ್‌ಒಐ (ROI) ಅನ್ನು ಸಾಬೀತುಪಡಿಸಲು ನಾನು ಹೆಣಗಾಡುತ್ತಿದ್ದೇನೆ, ನಾನು ಅಡಾಪ್ಟ್ ಮಾಡಿಕೊಳ್ಳುವುದಕ್ಕಿಂತ ವೇಗವಾಗಿ ಎಐ ನನ್ನ ಸಂಸ್ಥೆಯನ್ನು ಬದಲಾಯಿಸುತ್ತಿದೆ, ಇನ್ನು ಮೂರು ವರ್ಷಗಳಲ್ಲಿ ಮಾರ್ಕೆಟಿಂಗ್ ಕ್ಷೇತ್ರ ಹೇಗಿರುತ್ತದೆ ಎಂದು ನನಗೆ ತಿಳಿಯುತ್ತಿಲ್ಲ"— ಎಂದು ಮುಕ್ತವಾಗಿ ಒಪ್ಪಿಕೊಳ್ಳುವ ವೇದಿಕೆ ಅವರಿಗೆ ಬೇಕು. ಇಂದಿನ ಮಾಡೆಲ್‌ಗಳು ಕೇವಲ ಸಿದ್ಧಾಂತಗಳಿಗೆ ಬೆಲೆ ಕೊಡುತ್ತವೆ, ಆದರೆ ಅತ್ಯುತ್ತಮ ಸಂಭಾಷಣೆಗಳು ಯಾವಾಗಲೂ ಗೊಂದಲ ಮತ್ತು ಅನಿಶ್ಚಿತತೆಯಿಂದಲೇ ಆರಂಭವಾಗುತ್ತವೆ.

ಪ್ರಶ್ನೆ 3: ಈ ವಿಶಿಷ್ಟ ವೇದಿಕೆಯ ಆಲೋಚನೆ ನಿಮ್ಮ ತಲೆಯಲ್ಲಿ ಮೂಡಲು ಯಾವುದಾದರೂ ನಿರ್ದಿಷ್ಟ ಸನ್ನಿವೇಶ ಅಥವಾ ಮಾತುಕತೆ ಕಾರಣವಾಯಿತೇ?

ಉತ್ತರ: ಹೌದು, ಖಂಡಿತ. ಉದ್ಯಮದ ದೊಡ್ಡ ಇವೆಂಟ್‌ಗಳು ಮುಗಿದ ನಂತರ ನಾನು ಸಿಎಂಒಗಳ ಜೊತೆ ವೇದಿಕೆಯ ಮೇಲಲ್ಲದೆ, ಹೊರಗಡೆ ಕಾಫಿ ಅಥವಾ ಡಿನ್ನರ್ ಸಮಯದಲ್ಲಿ ನಡೆಸುತ್ತಿದ್ದ ಮಾತುಕತೆಗಳು ನೆನಪಿವೆ. ಅವರ ಖಾಸಗಿ ಮಾತುಗಳು ಸಾರ್ವಜನಿಕ ವೇದಿಕೆಯಲ್ಲಿ ಆಡಿದ ಮಾತುಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತಿದ್ದವು! ವೇದಿಕೆಯ ಮೇಲೆ ಅತ್ಯಂತ ಆತ್ಮವಿಶ್ವಾಸದಿಂದ ಕಾಣುತ್ತಿದ್ದ ವ್ಯಕ್ತಿಗಳು, ಖಾಸಗಿಯಾಗಿ ಸಿಕ್ಕಾಗ ತಾವೆಷ್ಟು ಒತ್ತಡದಲ್ಲಿದ್ದೇವೆ, ಸಾಂಪ್ರದಾಯಿಕ ಮಾರ್ಕೆಟಿಂಗ್ ಸೂತ್ರಗಳ ಬಗ್ಗೆ ತಮಗಿರುವ ಅಪನಂಬಿಕೆಗಳು, ಬೋರ್ಡ್ ನಿರೀಕ್ಷೆಗಳನ್ನು ತಲುಪಲು ಆಗುತ್ತಿರುವ ಕಷ್ಟಗಳು ಮತ್ತು ಎಐ ಈ ಉದ್ಯಮವನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬ ಗೊಂದಲಗಳನ್ನು ಒಪ್ಪಿಕೊಳ್ಳುತ್ತಿದ್ದರು. ಈ ವ್ಯತ್ಯಾಸ ನನ್ನ ಮನಸ್ಸಿನಲ್ಲಿ ಬಲವಾಗಿ ಉಳಿಯಿತು. ಭಾರತದಲ್ಲಿ ಮಾರ್ಕೆಟಿಂಗ್ ಕ್ಷೇತ್ರದ ಅತ್ಯಂತ ಮೌಲ್ಯಯುತವಾದ ಮಾತುಕತೆಗಳು ಅಧಿಕೃತವಾಗಿ ಅಲ್ಲ, ಬದಲಿಗೆ ಮುಚ್ಚಿದ ಬಾಗಿಲುಗಳ ಹಿಂದೆ ನಡೆಯುತ್ತಿವೆ ಎಂದು ನನಗೆ ಅರ್ಥವಾಯಿತು. ಆ ಸಂಭಾಷಣೆಗಳಿಗೆ ಒಂದು ನೈಜ ವೇದಿಕೆ ಸಿಗಬೇಕು ಎಂಬ ಆಲೋಚನೆಯಿಂದಲೇ ‘ದಿ ಸಿಎಂಒ ಅಸೆಂಬ್ಲಿ’ ಹುಟ್ಟಿಕೊಂಡಿತು.

ಪ್ರಶ್ನೆ 4: ಸಾರ್ವಜನಿಕರಿಗೆ ಕಾಣಿಸದಂತೆ ಸಿಎಂಒಗಳು ಇಂದು ಖಾಸಗಿಯಾಗಿ ಚರ್ಚಿಸುತ್ತಿರುವ ಮೂರು ದೊಡ್ಡ ಆತಂಕಗಳು ಯಾವುವು?

ಉತ್ತರ: ಮೂರು ವಿಷಯಗಳು ಪದೇ ಪದೇ ಚರ್ಚೆಗೆ ಬರುತ್ತವೆ. ಮೊದಲನೆಯದು, ಪ್ರಸ್ತುತತೆ (Relevance). ಈ ಎಐ-ಮಯ ಹಾಗೂ ಗ್ರಾಹಕರ ಗಮನ ಹರಿದುಹೋಗಿರುವ ಜಗತ್ತಿನಲ್ಲಿ ಸಾಂಪ್ರದಾಯಿಕ ಬ್ರ್ಯಾಂಡ್-ಬಿಲ್ಡಿಂಗ್ ಸೂತ್ರಗಳು ಇಂದಿಗೂ ಕೆಲಸ ಮಾಡುತ್ತವೆಯೇ ಎಂದು ಹಲವರು ಯೋಚಿಸುತ್ತಿದ್ದಾರೆ. ಎರಡನೆಯದು, ಮಾಪನ (Measurement). ಖರ್ಚು ಮಾಡುವ ಪ್ರತಿಯೊಂದು ರೂಪಾಯಿಗೂ ತಕ್ಷಣದ ಲೆಕ್ಕ ನೀಡಬೇಕಾದ ಭಾರಿ ಒತ್ತಡವಿದೆ, ಆದರೆ ಮಾರ್ಕೆಟಿಂಗ್‌ನಲ್ಲಿ ಮೌಲ್ಯಯುತವಾದ ಪ್ರತಿಯೊಂದನ್ನೂ ತಕ್ಷಣವೇ ಅಳೆಯಲು ಸಾಧ್ಯವಿಲ್ಲ. ಹೀಗಾಗಿ ಸಿಎಂಒಗಳು ಅಲ್ಪಾವಧಿಯ ಆದಾಯದ ನಿರೀಕ್ಷೆ ಮತ್ತು ದೀರ್ಘಕಾಲದ ಬ್ರ್ಯಾಂಡ್ ನಿರ್ಮಾಣದ ನಡುವೆ ಸಿಲುಕಿಕೊಂಡಿದ್ದಾರೆ. ಮೂರನೆಯದು, ಅಸ್ತಿತ್ವದ ಗುರುತು (Identity). ಭವಿಷ್ಯದಲ್ಲಿ ಮಾರ್ಕೆಟಿಂಗ್ ತಂಡಗಳು ಹೇಗಿರಬೇಕು ಎಂಬುದನ್ನು ಮರುಚಿಂತನೆ ಮಾಡಲು ಎಐ ಲೀಡರ್‌ಅನ್ನು ಒತ್ತಾಯಿಸುತ್ತಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೇವಲ ಮನುಷ್ಯರಿಂದ ಮಾತ್ರ ಸಾಧ್ಯವಾಗುವ ವಿಶಿಷ್ಟ ಅಂಶ ಯಾವುದು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಪ್ರಶ್ನೆ 5: ಇಂದಿನ ಸಿಎಂಒಗಳ ಮೇಲೆ ಮಾರ್ಕೆಟಿಂಗ್ ವೆಚ್ಚಗಳು ಮತ್ತು ಆರ್‌ಒಐ (ROI) ಅನ್ನು ಸಾಬೀತುಪಡಿಸಲು ಹಿಂದೆಂದಿಗಿಂತಲೂ ಹೆಚ್ಚಿನ ಒತ್ತಡವಿದೆಯೇ?

ಉತ್ತರ: ಖಂಡಿತವಾಗಿಯೂ ಹೌದು. ಹಳೆಯ ದಿನಗಳಲ್ಲಿ ಮಾರ್ಕೆಟಿಂಗ್ ಫಲಿತಾಂಶಗಳ ಗುಣಲಕ್ಷಣಗಳನ್ನು ನಿಧಾನವಾಗಿ ಮೌಲ್ಯಮಾಪನ ಮಾಡುವ ಸೌಕರ್ಯವಿತ್ತು. ಆದರೆ ಇಂದು ಕಂಪನಿಗಳ ಲೀಡರ್‌ಶಿಪ್ ತಂಡಗಳು ತಕ್ಷಣದ ಫಲಿತಾಂಶ, ದಕ್ಷತೆ ಮತ್ತು ವ್ಯವಹಾರದ ಮೇಲಿನ ಪ್ರಭಾವದ ಸ್ಪಷ್ಟತೆಯನ್ನು ಬಯಸುತ್ತವೆ. ಇಲ್ಲಿನ ಸವಾಲೆಂದರೆ ಮಾರ್ಕೆಟಿಂಗ್ ಎರಡು ವಿಭಿನ್ನ ಕಾಲಾವಧಿಗಳಲ್ಲಿ ಕೆಲಸ ಮಾಡುತ್ತದೆ: ಒಂದು ಅಲ್ಪಾವಧಿಯ ಆದಾಯದ ಪ್ರಭಾವ, ಇನ್ನೊಂದು ದೀರ್ಘಕಾಲದ ಬ್ರ್ಯಾಂಡ್ ನೆನಪು. ಸಂಸ್ಥೆಗಳು ಕೇವಲ ಅಲ್ಪಾವಧಿಯಲ್ಲಿ ಅಳೆಯಬಹುದಾದ ಫಲಿತಾಂಶಗಳಿಗಾಗಿ ಮಾತ್ರ ಅತಿಯಾಗಿ ಒಲವು ತೋರಿದಾಗ ಅಪಾಯ ಕಾದಿರುತ್ತದೆ. ನೀವು ಆಯಾ ತ್ರೈಮಾಸಿಕದ ದಕ್ಷತೆಯನ್ನು ಉತ್ತಮಗೊಳಿಸಬಹುದು, ಆದರೆ ಭವಿಷ್ಯದಲ್ಲಿ ಬ್ರ್ಯಾಂಡ್‌ನ ವಿಶಿಷ್ಟತೆಯನ್ನು ಕಳೆದುಕೊಳ್ಳಬಹುದು. ಇಂದಿನ ಸಿಎಂಒಗಳು ಕೇವಲ ಬೆಳವಣಿಗೆಯನ್ನು ತಂದರೆ ಸಾಲದು, ತಮ್ಮ ಪ್ರತಿಯೊಂದು ನಿರ್ಧಾರವನ್ನೂ ರಿಯಲ್ ಟೈಮ್‌ನಲ್ಲಿ ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಪ್ರಶ್ನೆ 6: ಮಾರ್ಕೆಟಿಂಗ್ ಲೀಡರ್‌ ನಡುವೆ ನಡೆಯುವ ಸಂಭಾಷಣೆಗಳ ಸ್ವರೂಪವನ್ನು ಎಐ (AI) ಮೂಲಭೂತವಾಗಿ ಬದಲಾಯಿಸಿದೆಯೇ?

ಉತ್ತರ: ಸಂಪೂರ್ಣವಾಗಿ ಬದಲಾಯಿಸಿದೆ. ಕೇವಲ ಒಂದು ವರ್ಷದ ಹಿಂದೆ, ಎಐ ಕುರಿತಾದ ಸಂಭಾಷಣೆಗಳು ಕೇವಲ ಕುತೂಹಲದ ಆಧಾರದ ಮೇಲಿದ್ದವು. ಆದರೆ ಇಂದು ಅವು ಅಸ್ತಿತ್ವದ (Existential) ಪ್ರಶ್ನೆಯಾಗಿ ಮಾರ್ಪಟ್ಟಿವೆ. ಇದರ ಸ್ವರೂಪವು "ಎಐ ನಮಗೆ ಏನು ಮಾಡಲು ಸಹಾಯ ಮಾಡುತ್ತದೆ?" ಎಂಬುದರಿಂದ "ಎಐ ಎಲ್ಲವನ್ನೂ ಬದಲಾಯಿಸಿದರೆ ನಮ್ಮ ಮಾರ್ಕೆಟಿಂಗ್ ಸಂಸ್ಥೆಗಳ ಗತಿ ಏನು?" ಎಂಬ ಮಟ್ಟಿಗೆ ಬದಲಾಗಿದೆ. ಸಿಎಂಒಗಳು ಈಗ ಸಣ್ಣ ಮಾರ್ಕೆಟಿಂಗ್ ತಂಡಗಳು, ಎಐ-ರಚಿತ ಕ್ರಿಯೇಟಿವಿಟಿ, ಸಿಂಥೆಟಿಕ್ ಕಸ್ಟಮರ್ಸ್‌, ಬೃಹತ್ ಮಟ್ಟದ ವೈಯಕ್ತೀಕರಣ (Personalization) ಮತ್ತು ಗ್ರಾಹಕರ ನಡವಳಿಕೆ ಎಷ್ಟು ವೇಗವಾಗಿ ವಿಕಸನಗೊಳ್ಳಬಹುದು ಎಂಬುದರ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಇಲ್ಲಿ ಕುತೂಹಲಕಾರಿ ವಿಷಯವೆಂದರೆ, ಬುದ್ಧಿವಂತ ನಾಯಕರು ಎಐ ಅನ್ನು ಕೇವಲ ಉತ್ಪಾದಕತೆಯನ್ನು ಹೆಚ್ಚಿಸುವ ಒಂದು ಸಾಧನವಾಗಿ ನೋಡುತ್ತಿಲ್ಲ. ಬದಲಿಗೆ ಬ್ರ್ಯಾಂಡ್‌ಗಳನ್ನು ನಿರ್ಮಿಸುವ ವಿಧಾನದಲ್ಲಿ ಆಗುತ್ತಿರುವ ಒಂದು ದೊಡ್ಡ ರಚನಾತ್ಮಕ ಬದಲಾವಣೆ ಎಂದು ಪರಿಗಣಿಸುತ್ತಿದ್ದಾರೆ.

ಪ್ರಶ್ನೆ 7: ಈ ಮುಚ್ಚಿದ ಕೋಣೆಗಳಲ್ಲಿ ಮಾರ್ಕೆಟಿಂಗ್ ಲೀಡರ್‌ಗಳು ಕೊನೆಗೂ ಒಪ್ಪಿಕೊಳ್ಳುತ್ತಿರುವ ಆ ಒಂದು ಮುಜುಗರದ ಸತ್ಯ ಯಾವುದು?

ಉತ್ತರ: ಮಾರ್ಕೆಟಿಂಗ್‌ನ ಭವಿಷ್ಯದ ದಿನಗಳು ಹೇಗಿರಲಿವೆ ಎಂಬುದು ಯಾರಿಗೂ ಪೂರ್ಣವಾಗಿ ತಿಳಿದಿಲ್ಲ! ವರ್ಷಗಳ ಕಾಲ ಈ ಉದ್ಯಮವು ಅತಿಯಾದ ಆತ್ಮವಿಶ್ವಾಸ ಮತ್ತು ಖಚಿತತೆಯನ್ನು ಗೌರವಿಸುತ್ತಿತ್ತು. ಆದರೆ ಖಾಸಗಿಯಾಗಿ, ಹಳೆಯ ಮಾರ್ಕೆಟಿಂಗ್ ಸೂತ್ರಗಳು ಈಗ ನಂಬಿಕಸ್ಥವಾಗಿ ಉಳಿದಿಲ್ಲ ಎಂಬುದನ್ನು ಅನೇಕ ನಾಯಕರು ಒಪ್ಪಿಕೊಳ್ಳುತ್ತಿದ್ದಾರೆ. ಗ್ರಾಹಕರ ಗಮನ ವಿಭಜನೆಯಾಗಿದೆ, ಬ್ರ್ಯಾಂಡ್ ನಿಷ್ಠೆ ದುರ್ಬಲವಾಗಿದೆ, ಅಲ್ಗಾರಿದಮ್‌ಗಳು ಬ್ರ್ಯಾಂಡ್‌ನ ವಿಸಿಬಿಲಿಟಿಯನ್ನು ನಿರ್ಧರಿಸುತ್ತಿವೆ, ಎಐ ಕ್ರಿಯೇಟಿವಿಟಿಯನ್ನು ಮರುರೂಪಿಸುತ್ತಿದೆ ಮತ್ತು ಕೇವಲ ಪರ್ಫಾರ್ಮೆನ್ಸ್ ಮಾರ್ಕೆಟಿಂಗ್‌ನಿಂದ ಮಾತ್ರ ದೀರ್ಘಕಾಲ ಬಾಳುವ ಬ್ರ್ಯಾಂಡ್‌ಗಳನ್ನು ಕಟ್ಟಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಹಿರಿಯ ಮತ್ತು ಅತ್ಯಂತ ಅನುಭವವಿರುವ ಮಾರ್ಕೆಟಿಂಗ್ ತಜ್ಞರು ಕೂಡ ಇಂದು ಮಾರುಕಟ್ಟೆಯಲ್ಲಿ ಹೊಸದಾಗಿ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಅತ್ಯಂತ ಕಹಿ ಸತ್ಯ.

ಪ್ರಶ್ನೆ 8: ಸ್ಪರ್ಧಿಗಳಾಗಿರುವ ಸಿಎಂಒಗಳ ನಡುವೆ ನಂಬಿಕೆಯನ್ನು ಮೂಡಿಸುವುದು ಕಷ್ಟದ ಕೆಲಸ. ಜನರು ಮುಕ್ತವಾಗಿ ಮಾತನಾಡಲು ನೀವು ಆ ನಂಬಿಕೆಯ ವಾತಾವರಣವನ್ನು ಹೇಗೆ ಸೃಷ್ಟಿಸುತ್ತೀರಿ?

ಉತ್ತರ: ನಂಬಿಕೆ ಎಂಬುದು ನಮ್ಮ ಉದ್ದೇಶದಿಂದ ಬರುತ್ತದೆ. ಒಂದು ವೇದಿಕೆಯು ಕೇವಲ ಪ್ರಚಾರಕ್ಕಾಗಿ, ಬ್ಯುಸಿನೆಸ್ ಮಾರಾಟಕ್ಕಾಗಿ ಅಥವಾ ಸ್ವಾರ್ಥಕ್ಕಾಗಿ ಅಸ್ತಿತ್ವದಲ್ಲಿದೆ ಎಂದು ಜನರಿಗೆ ಅನಿಸಿದ ತಕ್ಷಣ ಅಲ್ಲಿ ಪ್ರಾಮಾಣಿಕತೆ ಮಾಯವಾಗುತ್ತದೆ. ‘ದಿ ಸಿಎಂಒ ಅಸೆಂಬ್ಲಿ’ಯಲ್ಲಿ ನಾವು ಯಾವುದೇ ರೀತಿಯ ಪ್ರದರ್ಶನದ ಒತ್ತಡವಿಲ್ಲದ ವಾತಾವರಣವನ್ನು ಸೃಷ್ಟಿಸಲು ಹೆಚ್ಚಿನ ಗಮನ ನೀಡುತ್ತೇವೆ. ಸಣ್ಣ ಗುಂಪುಗಳನ್ನು ರಚಿಸುವುದು, ಸೆಷನ್‌ಗಳನ್ನು ರೆಕಾರ್ಡ್ ಮಾಡದಿರುವುದು ಸೇರಿದಂತೆ ಹಲವು ನಿಯಮಗಳನ್ನು ಪಾಲಿಸುತ್ತೇವೆ. ವಿಪರ್ಯಾಸವೆಂದರೆ, ತಾವು ಯಾರನ್ನೂ ಮೆಚ್ಚಿಸುವ ಅಗತ್ಯವಿಲ್ಲ ಎಂದು ನಾಯಕರಿಗೆ ಅರಿವಾದ ತಕ್ಷಣ, ಅಲ್ಲಿನ ಸಂಭಾಷಣೆಗಳು ಅತ್ಯಂತ ಮೌಲ್ಯಯುತವಾಗುತ್ತವೆ. ಹಿರಿಯ ನಾಯಕರು ಹೆಚ್ಚಿನ ನೆಟ್‌ವರ್ಕಿಂಗ್ ಬಯಸುವುದಿಲ್ಲ, ಅವರು ಕಡಿಮೆ ಜನರಿದ್ದರೂ ಅರ್ಥಪೂರ್ಣವಾದ ಮಾತುಕತೆಯನ್ನು ಬಯಸುತ್ತಾರೆ.

ಪ್ರಶ್ನೆ 9: ‘ದಿ ಸಿಎಂಒ ಅಸೆಂಬ್ಲಿ’ ಪ್ರಾರಂಭಿಸಿದ ನಂತರ ನಿಮಗೆ ಅತ್ಯಂತ ಆಶ್ಚರ್ಯ ತಂದ ವಿಷಯ ಯಾವುದು?

ಉತ್ತರ: ಸಿಎಂಒಗಳು ಒಳಗೊಳಗೇ ಎಷ್ಟೊಂದು ಪ್ರಾಮಾಣಿಕ ಸಂಭಾಷಣೆಗಾಗಿ ಹಂಬಲಿಸುತ್ತಿದ್ದರು ಎಂಬುದು ನನಗೆ ಆಶ್ಚರ್ಯ ತಂದಿತು. ನನಗೆ ಈ ವೇದಿಕೆಯ ಮೇಲೆ ಆಸಕ್ತಿ ಇರುತ್ತದೆ ಎಂದು ತಿಳಿದಿತ್ತು, ಆದರೆ ಸಿಎಂಒಗಳು ಈ ಮಟ್ಟಿಗೆ ಭಾವನಾತ್ಮಕವಾಗಿ ಮುಕ್ತವಾಗಿ ಮಾತನಾಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಬಹಳಷ್ಟು ಸಿಎಂಒಗಳು ತಮ್ಮ ಮೇಲಿರುವ ಭಾರಿ ಒತ್ತಡವನ್ನು ಅತ್ಯಂತ ಖಾಸಗಿಯಾಗಿ ತಮ್ಮೊಳಗೆ ಇಟ್ಟುಕೊಂಡಿರುತ್ತಾರೆ. ಹೊರಗಿನಿಂದ ನೋಡುವಾಗ ಮಾರ್ಕೆಟಿಂಗ್ ನಾಯಕತ್ವದ ಹುದ್ದೆಗಳು ಅತ್ಯಂತ ಗ್ಲಾಮರಸ್ ಆಗಿ ಕಾಣುತ್ತವೆ, ಆದರೆ ಆಂತರಿಕವಾಗಿ ಅದು ಒಂಟಿತನದಿಂದ ಕೂಡಿರಬಹುದು. ಇದು ತಾವೆಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಂಡಿದ್ದೇವೆ ಎಂಬ ಕೃತಕ ಮುಖವಾಡವನ್ನು ಕಳಚಿಡುವ ಜಾಗ ಎಂದು ತಿಳಿದ ತಕ್ಷಣ ನಾಯಕರು ಸ್ಪಂದಿಸಿದ ರೀತಿ ನನಗೆ ಅತ್ಯಂತ ಆಶ್ಚರ್ಯ ಮೂಡಿಸಿತು.

ಪ್ರಶ್ನೆ 10: ಇಂತಹದೊಂದು ಸಾಂಪ್ರದಾಯಿಕವಲ್ಲದ ಹೊಸ ವೇದಿಕೆಯನ್ನು ನಂಬುವಂತೆ ಹಿರಿಯ ನಾಯಕರನ್ನು ಒಪ್ಪಿಸುವುದು ಕಷ್ಟವಾಯಿತೇ?

ಉತ್ತರ: ಆರಂಭದಲ್ಲಿ ಹೌದು. ಏಕೆಂದರೆ ಇಂತಹ ಕ್ಷೇತ್ರಗಳಲ್ಲಿ ನಂಬಿಕೆ ಎಂಬುದು ಅತ್ಯಂತ ನಿಧಾನವಾಗಿ ಗಳಿಸಬೇಕಾದ ಅಂಶ. ಹಿರಿಯ ನಾಯಕರು ಕೇವಲ ವಾಣಿಜ್ಯೀಕರಣಗೊಂಡ ಮತ್ತು ವ್ಯವಹಾರದ ಉದ್ದೇಶದ ಸಾಕಷ್ಟು ಸಮುದಾಯಗಳನ್ನು ನೋಡಿರುತ್ತಾರೆ. ನಾವು ಎಂದಿಗೂ ಅತಿಯಾಗಿ ಬೆಳೆಯಲು ಅಥವಾ ಕೃತಕ ಹೈಪ್ ಸೃಷ್ಟಿಸಲು ಪ್ರಯತ್ನಿಸಲಿಲ್ಲ. ನಾವು ಪ್ರಮಾಣಕ್ಕಿಂತ ಹೆಚ್ಚಾಗಿ ಆಳಕ್ಕೆ ಮತ್ತು ವಿಸಿಬಿಲಿಟಿಗಿಂತ ಹೆಚ್ಚಾಗಿ ಸಂಭಾಷಣೆಗೆ ಒತ್ತು ನೀಡಿದೆವು. ಕಾಲಾನಂತರದಲ್ಲಿ ನಂಬಿಕೆ ಗಟ್ಟಿಯಾಯಿತು. ಒಬ್ಬ ಗೌರವಾನ್ವಿತ ನಾಯಕನಿಗೆ ಇಲ್ಲಿ ಅರ್ಥಪೂರ್ಣ ಅನುಭವ ಸಿಕ್ಕಾಗ, ಅವರು ತಮ್ಮ ಸಹೋದ್ಯೋಗಿಗಳನ್ನು ತಾವಾಗಿಯೇ ಇಲ್ಲಿಗೆ ಕರೆತರುತ್ತಾರೆ. ಸಾಂಪ್ರದಾಯಿಕ ಬೆಳವಣಿಗೆಯ ತಂತ್ರಗಳಿಗಿಂತ ಈ ಸಾವಯವ (Organic) ನಂಬಿಕೆ ನಿರ್ಮಾಣದ ಪ್ರಕ್ರಿಯೆ ಅತ್ಯಂತ ಶಕ್ತಿಶಾಲಿಯಾದುದು.

ಪ್ರಶ್ನೆ 11: ಇಂದಿನಿಂದ ಐದು ವರ್ಷಗಳ ನಂತರ ‘ದಿ ಸಿಎಂಒ ಅಸೆಂಬ್ಲಿ’ ಏನಾಗಬೇಕು ಎಂದು ನೀವು ಬಯಸುತ್ತೀರಿ? ಒಂದು ನೆಟ್‌ವರ್ಕ್, ಒಂದು ಮೂವ್‌ಮೆಂಟ್ ಅಥವಾ ಒಂದು ಥಿಂಕ್ ಟ್ಯಾಂಕ್?

ಉತ್ತರ: ಇದು ಈ ಪ್ರದೇಶದಲ್ಲೇ ಅತ್ಯಂತ ನಂಬಿಕಸ್ಥ ಸಿಎಂಒಗಳ ಇಕೋಸಿಸ್ಟಮ್ ಆಗಬೇಕು ಎಂದು ನಾನು ಬಯಸುತ್ತೇನೆ - ಇದು ಅತಿ ದೊಡ್ಡದಾಗಿದೆ ಎಂದಲ್ಲ, ಬದಲಿಗೆ ಇದು ಅತ್ಯಂತ ಪ್ರಾಮಾಣಿಕವಾಗಿದೆ ಎಂಬ ಕಾರಣಕ್ಕಾಗಿ. ಉದ್ಯಮದ ನೈಜ ಚಿಂತನೆಗಳು ಹೊರಹೊಮ್ಮುವ, ಅರ್ಥಪೂರ್ಣ ಸಂಶೋಧನೆಗಳು ನಡೆಯುವ, ಭವಿಷ್ಯದ ಮಾರ್ಕೆಟಿಂಗ್ ನಾಯಕರು ರೂಪುಗೊಳ್ಳುವ ಮತ್ತು ಕಠಿಣ ಸಂಭಾಷಣೆಗಳು ಸಾರ್ವಜನಿಕವಾಗಿ ಚರ್ಚೆಗೆ ಬರುವ ಮುನ್ನವೇ ಇಲ್ಲಿ ಬಗೆಹರಿಯುವ ಜಾಗ ಇದಾಗಬೇಕು. ಭವಿಷ್ಯವು ಕೇವಲ ವಿಸಿಬಿಲಿಟಿ ತರುವ ವೇದಿಕೆಗಳದ್ದಲ್ಲ, ಬದಲಿಗೆ ಸ್ಪಷ್ಟತೆಯನ್ನು (Clarity) ನೀಡುವ ಸಮುದಾಯಗಳದ್ದಾಗಿದೆ ಎಂದು ನಾನು ನಂಬುತ್ತೇನೆ. ಇದರೊಂದಿಗೆ ನಾವು ಇಡೀ ಮಾರ್ಕೆಟಿಂಗ್ ವ್ಯವಸ್ಥೆಗೆ ಮುಕ್ತವಾಗಿರುವ ‘ದಿ ಮಾರ್ಕೆಟಿಂಗ್ ಅಸೆಂಬ್ಲಿ’ (The Marketing Assembly) ಎಂಬ ಮತ್ತೊಂದು ವಿಭಾಗವನ್ನೂ ನಡೆಸುತ್ತಿದ್ದೇವೆ - ಅದರ ಉದ್ದೇಶವೂ ಒಂದೇ, ಜನರು ಪರಸ್ಪರ ಒಟ್ಟಿಗೆ ಬೆಳೆಯಲು ಸಹಾಯ ಮಾಡುವುದು!

ಪ್ರಶ್ನೆ 12: ಭಾರತದ ಪ್ರತಿಯೊಬ್ಬ ಸಿಎಂಒ ಕೂಡ ಖಾಸಗಿಯಾಗಿ ಅತ್ಯಂತ ಪ್ರಾಮಾಣಿಕವಾಗಿ ಉತ್ತರಿಸಲೇಬೇಕಾದ ಒಂದು ಪ್ರಶ್ನೆಯನ್ನು ಕೇಳಲು ನಿಮಗೆ ಅವಕಾಶ ನೀಡಿದರೆ, ನೀವು ಯಾವ ಪ್ರಶ್ನೆ ಕೇಳುತ್ತೀರಿ?

ಉತ್ತರ: ನಾನು ಅವರನ್ನು ಹೀಗೆ ಕೇಳುತ್ತೇನೆ: "ಒಂದು ವೇಳೆ ನಿಮ್ಮನ್ನು ಯಾರೂ ಗಮನಿಸುತ್ತಿಲ್ಲ ಎಂದಾದರೆ, ನಾಳೆಯಿಂದ ಮಾರ್ಕೆಟಿಂಗ್‌ನಲ್ಲಿ ನೀವು ಮಾಡುತ್ತಿರುವ ಯಾವ ಕೆಲಸವನ್ನು ತಕ್ಷಣವೇ ನಿಲ್ಲಿಸಿಬಿಡುತ್ತಿದ್ದೀರಿ?" ಏಕೆಂದರೆ ಈ ಒಂದೇ ಒಂದು ಪ್ರಶ್ನೆಯು ಎಲ್ಲವನ್ನೂ ಬಿಚ್ಚಿಡುತ್ತದೆ: ನಾವ ಒಳಗೊಳಗೇ ನಂಬದ ಕೆಲವು ಮೆಟ್ರಿಕ್ಸ್, ಕೇವಲ ಸಾರ್ವಜನಿಕ ಪ್ರದರ್ಶನಕ್ಕಾಗಿ ನಾವು ಮಾಡುವ ಕ್ಯಾಂಪೇನ್‌ಗಳು, ಯಾವುದೇ ಮೌಲ್ಯವನ್ನು ಸೃಷ್ಟಿಸದ ಸಭೆಗಳು, ಯಾರೂ ಓದದ ವರದಿಗಳು ಮತ್ತು ಎಲ್ಲರೂ ಮಾಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ನಾವು ಮುಂದುವರಿಸಿಕೊಂಡು ಹೋಗುತ್ತಿರುವ ಉದ್ಯಮದ ಹಳೆಯ ಹವ್ಯಾಸಗಳು... ಮಾರ್ಕೆಟಿಂಗ್‌ನ ಪ್ರಾಮಾಣಿಕ ಸಂಭಾಷಣೆಗಳು ನಿಜವಾಗಿ ಆರಂಭವಾಗುವುದೇ ಇಲ್ಲಿಂದ!