ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದಾಗಿ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲ್ಯೂಕಾಸ್ ಟ್ರೆಜೊ ಅವರ ಕುಟುಂಬ ನಾಪತ್ತೆಯಾಗಿದೆ. ಕರಾಕಸ್‌ನಲ್ಲಿದ್ದ ಟ್ರೆಜೊ, ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳ ಬಗ್ಗೆ ಮಾಹಿತಿ ನೀಡುವಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಮನವಿ ಮಾಡಿದ್ದಾರೆ.

ಕರಾಕಸ್ (ಜೂ.27): ಇಡೀ ವಿಶ್ವವೇ ಫಿಫಾ ವಿಶ್ವಕಪ್ (FIFA World Cup 2026) ಸಂಭ್ರಮದಲ್ಲಿ ಮುಳುಗಿರುವ ಬೆನ್ನಲ್ಲೇ, ಜೂನ್ 24 ರಂದು ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪವು ಅರ್ಜೆಂಟೀನಾದ ಹಿರಿಯ ಫುಟ್‌ಬಾಲ್ ಆಟಗಾರ ಲ್ಯೂಕಾಸ್ ಟ್ರೆಜೊ (Lucas Trejo) ಅವರ ಬದುಕಿನಲ್ಲಿ ಕತ್ತಲೆ ಆವರಿಸುವಂತೆ ಮಾಡಿದೆ. ಈ ವಿನಾಶಕಾರಿ ಭೂಕಂಪದಲ್ಲಿ ಅವರ ಇಡೀ ಕುಟುಂಬವೇ ನಾಪತ್ತೆಯಾಗಿದ್ದು, ಆಟಗಾರನಲ್ಲಿ ಆತಂಕ ಹೆಚ್ಚಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೂನ್ 24 ರಂದು ವೆನೆಜುವೆಲಾದಲ್ಲಿ ಒಂದರ ಹಿಂದೆ ಒಂದರಂತೆ ಎರಡು ಅತ್ಯಂತ ಪ್ರಬಲ ಭೂಕಂಪದ ಧಕ್ಕೆಗಳು ಸಂಭವಿಸಿವೆ. ಮೊದಲ ಕಂಪನವು ರಿಕ್ಟರ್ ಮಾಪಕದಲ್ಲಿ 7.2 ರಷ್ಟು ತೀವ್ರತೆ ದಾಖಲಿಸಿತ್ತು. ಇದರಿಂದ ಜನರು ಚೇತರಿಸಿಕೊಳ್ಳುವ ಮುನ್ನವೇ 7.5 ರಷ್ಟು ತೀವ್ರತೆಯ ಮತ್ತೊಂದು ಅತ್ಯಂತ ವಿನಾಶಕಾರಿ ಭೂಕಂಪ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಈ ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ ದೊಡ್ಡ ದೊಡ್ಡ ಬಹುಮಹಡಿ ಕಟ್ಟಡಗಳು ಇಟ್ಟಿಗೆಗಳಂತೆ ಧರೆಗುರುಳಿವೆ.

ಆ ಸಮಯದಲ್ಲಿ ಅರ್ಜೆಂಟೀನಾದ ಸ್ಟಾರ್ ಫುಟ್‌ಬಾಲ್ ಆಟಗಾರ ಲ್ಯೂಕಾಸ್ ಟ್ರೆಜೊ ಅವರು 'ಕೋಪಾ ವೆನೆಜುವೆಲಾ' ಟೂರ್ನಿಯ ಸಿದ್ಧತೆಗಾಗಿ ಕರಾಕಸ್‌ನಲ್ಲಿದ್ದರು. ಆಗಲೇ ಭೂಮಿ ಕಂಪಿಸಿದ್ದು, ಲೂಕಾಸ್ ಅವರ ಕುಟುಂಬ ವಾಸಿಸುತ್ತಿದ್ದ ಬಹುಮಹಡಿ ಕಟ್ಟಡವೂ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಕಟ್ಟಡದಲ್ಲಿದ್ದ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಪರಿಸ್ಥಿತಿ ಏನಾಗಿದೆ ಎಂಬ ಭೀತಿ ಈಗ ಲೂಕಾಸ್ ಅವರನ್ನು ತೀವ್ರವಾಗಿ ಕಾಡುತ್ತಿದೆ.

ನೆಲಸಮವಾಯ್ತು ಹ್ಯಾಪಿ ಹೋಮ್; ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್

ಲೂಕಾಸ್ ಟ್ರೆಜೊ ಅವರ ಕುಟುಂಬ ವಾಸಿಸುತ್ತಿದ್ದ 'ಲಾ ಗ್ವಾಯ್ರಾ' (La Guaira) ಪ್ರಾಂತ್ಯದ ಮನೆ ಈ ಭೂಕಂಪಕ್ಕೆ ಸಂಪೂರ್ಣವಾಗಿ ಜಖಂಗೊಂಡು ನೆಲಸಮವಾಗಿದೆ. ಧ್ವಂಸಗೊಂಡಿರುವ ಆ ಮನೆಯ ಸ್ಥಿತಿಯನ್ನು ನೋಡಿದರೆ ಯಾರಾದರೂ ಬದುಕುಳಿದಿದ್ದಾರೆಯೇ ಎಂದು ಊಹಿಸುವುದೂ ಕೂಡ ಕಷ್ಟಕರವಾಗಿದೆ. ತನ್ನ ಪ್ರೀತಿಯ ಕುಟುಂಬದ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಹತಾಶರಾಗಿರುವ ಲೂಕಾಸ್, ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಜಗತ್ತಿನಾದ್ಯಂತ ಇರುವ ತಮ್ಮ ಅಭಿಮಾನಿಗಳಲ್ಲಿ ಸಹಾಯಕ್ಕಾಗಿ ಮನವಿ ಮಾಡಿರುವ ಅವರು, "ಯಾರಾದರೂ ಲಾ ಗ್ವಾಯ್ರಾ ಮನೆಯ ಆಸುಪಾಸಿನಲ್ಲಿದ್ದರೆ ಅಥವಾ ಪರಿಹಾರ ಕಾರ್ಯಾಚರಣೆಯಲ್ಲಿದ್ದರೆ, ದಯವಿಟ್ಟು ನನ್ನ ಪತ್ನಿ ಯಾನಿನಾ ಮಾರಾನಿಲಾ (Yanina Maranilla), ಮಗ ಆರನ್ (Aaron) ಮತ್ತು ಮಗಳು ಐನ್ಹೋವಾ (Ainhoa) ಅವರ ಸುರಕ್ಷತೆಯ ಬಗ್ಗೆ ಮಾಹಿತಿ ಇದ್ದರೆ ನೀಡಿ," ಎಂದು ಕಣ್ಣೀರು ಹಾಕಿದ್ದಾರೆ. ಅವರ ಈ ಪೋಸ್ಟ್ ಸದ್ಯ ಅರ್ಜೆಂಟೀನಾ ಮತ್ತು ವೆನೆಜುವೆಲಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.

ಯಾರು ಈ ಲೂಕಾಸ್ ಟ್ರೆಜೊ?

38 ವರ್ಷದ ಅನುಭವಿ ಆಟಗಾರ ಲ್ಯೂಕಾಸ್ ಟ್ರೆಜೊ ಅವರು ಪ್ರಸ್ತುತ ವೆನೆಜುವೆಲಾದ ಸೆಗುಂಡಾ ಡಿವಿಷನ್ ಕ್ಲಬ್ 'ಮಾರಿಟಿಮೊ' (Maritimo) ಪರ ಡಿಫೆಂಡರ್ ಆಗಿ ಆಡುತ್ತಿದ್ದಾರೆ. ಇದರೊಂದಿಗೆ ವೆನೆಜುವೆಲಾದ 'ಮೋನಾಗಾಸ್ ಸ್ಪೋರ್ಟ್ಸ್ ಕ್ಲಬ್' ಪರವಾಗಿಯೂ ಅವರು ಮೈದಾನಕ್ಕಿಳಿದಿದ್ದಾರೆ. ಈ ಹಿಂದೆ ಅವರು ಯುರೋಪ್, ಅಮೆರಿಕ, ಕೊಲಂಬಿಯಾ, ಪೆರು ಮತ್ತು ಮೆಕ್ಸಿಕೋದ ಹೆಸರಾಂತ ಫುಟ್‌ಬಾಲ್ ಕ್ಲಬ್‌ಗಳ ಪರವಾಗಿಯೂ ಆಡಿದ ದೀರ್ಘ ಅನುಭವ ಹೊಂದಿದ್ದಾರೆ. ಸದ್ಯ ಇಡೀ ಕ್ರೀಡಾ ಜಗತ್ತು ಅವರ ಕುಟುಂಬ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತಿದೆ.