ಫಿಫಾದ ವಾಣಿಜ್ಯ ಚಟುವಟಿಕೆಗಳಲ್ಲಿ ಖಾಸಗಿ ಹೂಡಿಕೆದಾರರಿಗೆ ಪಾಲು ನೀಡುವ ಯೋಜನೆಗೆ ಯುಇಎಫ್‌ಎ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಪ್ರಸ್ತಾವನೆ ಮುಂದುವರಿದರೆ ವಿಶ್ವಕಪ್ ಸೇರಿದಂತೆ ಪ್ರಮುಖ ಟೂರ್ನಿಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದೆ. ಇದೇ ವೇಳೆ, ಅಕ್ಟೋಬರ್ 3ರಂದು ಕೋಲ್ಕತಾದಲ್ಲಿ ಭಾರತ ಮತ್ತು ಬ್ರೆಜಿಲ್ ನಡುವೆ ಸ್ನೇಹಾರ್ಥ ಫುಟ್ಬಾಲ್ ಪಂದ್ಯ ನಡೆಯಲಿದೆ.
ಜಿನೇವಾ(ಸ್ವಿಜರ್‌ಲೆಂಡ್): ಫುಟ್ಬಾಲ್‌ನ ಜಾಗತಿಕ ಆಡಳಿತ ಮಂಡಳಿ ಫಿಫಾದ ವಾಣಿಜ್ಯ ಚಟುವಟಿಕೆಗಳಲ್ಲಿ ಖಾಸಗಿ ಹೂಡಿಕೆದಾರರಿಗೆ ಪಾಲು ನೀಡುವ ಯೋಜನೆಗೆ ಯುಇಎಫ್‌ಎ(ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಸಂಸ್ಥೆ) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿಶ್ವಕಪ್ ಸೇರಿದಂತೆ ಪ್ರಮುಖ ಟೂರ್ನಿಗಳನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದೆ.
ಫಿಫಾ ತನ್ನ ಪ್ರಮುಖ ಟೂರ್ನಿಗಳಾದ ಪುರುಷರ ವಿಶ್ವಕಪ್, ಮಹಿಳಾ ವಿಶ್ವಕಪ್ ಮತ್ತು ಕ್ಲಬ್ ವಿಶ್ವಕಪ್‌ಗಳಿಗೆ ಸಂಬಂಧಿಸಿದ ವಾಣಿಜ್ಯ ಮತ್ತು ಈವೆಂಟ್ ಕಾರ್ಯಾಚರಣೆಗಳನ್ನು ಏಕೀಕರಿಸುವ ಫಿಫಾ ಫಾರ್ವರ್ಡ್ ಎಂಟರ್‌ಪ್ರೈಸ್ (ಎಫ್‌ಎಫ್‌ಇ) ಎಂಬ ಹೊಸ ಸಹಾಯಕ ಸಂಸ್ಥೆಯನ್ನು ಸ್ಥಾಪಿಸುವ ಯೋಜನೆ ಹಾಕಿದೆ. ಇದು 20 ಬಿಲಿಯನ್ ಡಾಲರ್(ಅಂದಾಜು 1.91 ಲಕ್ಷ ಕೋಟಿ ರು.) ಮೌಲ್ಯ ಹೊಂದಿದೆ. ಈ ಸಂಸ್ಥೆಯ ಶೇ.20ರಷ್ಟು ಪಾಲನ್ನು ಖಾಸಗಿ ಹೂಡಿಕೆದಾರರಿಗೆ ನೀಡಲಾಗುತ್ತದೆ.
ಆದರೆ ಇದನ್ನು ಸ್ಪೇನ್, ಪೋರ್ಚುಗಲ್, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಯರೋಪಿಯನ್ ದೇಶಗಳು ವಿರೋಧಿಸಿವೆ. ಈ ಬಗ್ಗೆ ಗುರುವಾರ ಯುಇಎಫ್‌ಎ ಪ್ರಕಟಣೆ ಹೊರಡಿಸಿದೆ. ‘ಯುಇಎಫ್‌ಎ ಹಾಗೂ 55 ಸದಸ್ಯ ರಾಷ್ಟ್ರಗಳು ಒಟ್ಟಾಗಿ ನಿಲ್ಲಲಿವೆ. ವಿಶ್ವಕಪ್ ಹಾಗೂ ಇತರ ಟೂರ್ನಿಗಳ ಪಾಲನ್ನು ಖಾಸಗಿ ಹೂಡಿಕೆದಾರರಿಗೆ ನೀಡುವ ಫಿಫಾ ಪ್ರಸ್ತಾವನೆಯನ್ನು ನಾವು ವಿರೋಧಿಸುತ್ತೇವೆ. ಫಿಫಾ ವಿಶ್ವಕಪ್ ಎಂಬುದು ಫುಟ್ಬಾಲ್‌ಗೆ ಸೇರಿದೆ. ಅದು ಹಾಗೆಯೇ ಇರಲಿದೆ. ಯುರೋಪಿಯನ್ ದೇಶಗಳಿಗೆ ಧ್ವನಿ ಇರುವವರೆಗೂ ಫಿಫಾ ಮಾರಾಟ ಸಾಧ್ಯವಿಲ್ಲ. ಈ ಪ್ರಸ್ತಾವನೆ ಚಾಲ್ತಿಯಲ್ಲಿ ಇರುವವರೆಗೂ ಫಿಫಾ ಟೂರ್ನಿಗಳಲ್ಲಿ ಯುಇಎಫ್‌ಎ ದೇಶಗಳು ಪಾಲ್ಗೊಳ್ಳುವುದಿಲ್ಲ’ ಎಂದು ಎಚ್ಚರಿಸಿದೆ.
ಖಾಸಗಿ ಹೂಡಿಕೆ ಸಂಸ್ಥೆ ಟ್ರಂಪ್ ಕುಟುಂಬದ್ದು!
ಫಿಫಾ ಯೋಜನೆಯಲ್ಲಿ ಪ್ರಮುಖ ಖಾಸಗಿ ಹೂಡಿಕೆದಾರರಾಗಿ ನ್ಯೂಯಾರ್ಕ್‌ನ ಒಂದು ಹೂಡಿಕೆ ಸಂಸ್ಥೆ ಇರಲಿದೆ. ಈ ಸಂಸ್ಥೆಯನ್ನು ಜೋಶುವಾ ಕುಷ್ನರ್ ಸ್ಥಾಪಿಸಿದ್ದಾರೆ. ಜೋಶುವಾ ಕುಷ್ನರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜರೆಡ್ ಕುಷ್ನರ್ ಅವರ ಸಹೋದರ ಎಂಬುದು ಗಮನಾರ್ಹ.
ಅ.3ರಂದು ಕೋಲ್ಕತಾದಲ್ಲಿ ಭಾರತ-ಬ್ರೆಜಿಲ್ ಫುಟ್ಬಾಲ್
ಕೋಲ್ಕತಾ: ಬ್ರೆಜಿಲ್ ತಂಡ ಭಾರತದಲ್ಲಿ ಫುಟ್ಬಾಲ್ ಪಂದ್ಯ ಆಡುವುದು ಖಚಿತವಾಗಿದೆ. ಅ.3ರಂದು ಭಾರತ ಹಾಗೂ ಬ್ರೆಜಿಲ್ ತಂಡಗಳ ನಡುವೆ ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಸ್ನೇಹಾರ್ಥ ಪಂದ್ಯ ನಡೆಯಲಿದೆ ಎಂದು ಉಭಯ ದೇಶಗಳ ಫುಟ್ಬಾಲ್ ಒಕ್ಕೂಟಗಳು ಗುರುವಾರ ಘೋಷಿಸಿವೆ. ಇದು ಬ್ರೆಜಿಲ್ ತಂಡ ಭಾರತದಲ್ಲಿ ಆಡಲಿರುವ ಮೊದಲ ಪಂದ್ಯ ಎನಿಸಿಕೊಳ್ಳಲಿದೆ. ಅಲ್ಲದೆ, ಫಿಫಾ ವಿಶ್ವ ರ್‍ಯಾಂಕಿಂಗ್ ಜಾರಿಯಾದ 1992ರ ಬಳಿಕ ಭಾರತ ತಂಡ ಎದುರಿಸಲಿರುವ ಶ್ರೇಷ್ಠ ರ್‍ಯಾಂಕಿಂಗ್ ತಂಡವಾಗಿದೆ. ಬ್ರೆಜಿಲ್ ಈಗ ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದೆ. ಭಾರತ 138ನೇ ಸ್ಥಾನದಲ್ಲಿದೆ.


