ಅಮೆರಿಕವು ವೆನುಜುವೇಲದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ದಾಳಿಯ ಹಿಂದಿನ ನಿಜವಾದ ಕಾರಣ ಕೇವಲ ತೈಲವಲ್ಲ, ಬದಲಾಗಿ ತನ್ನ 'ಪೆಟ್ರೋಡಾಲರ್' ವ್ಯವಸ್ಥೆಯನ್ನು ರಕ್ಷಿಸಿಕೊಳ್ಳುವ ಅಮೆರಿಕದ ತಂತ್ರವಾಗಿದೆ.
ಬೆಂಗಳೂರು (ಜ.5): ಹೊಸ ವರ್ಷದ ಸಂಭ್ರಮದಲ್ಲಿದ್ದ ವಿಶ್ವದ ಜನರಿಗೆ ಶಾಕ್ ನೀಡಿದ್ದು ಅಮೆರಿಕದ ನಿರ್ಧಾರ. ರಾತ್ರೋರಾತ್ರಿ ವೆನುಜುವೇಲದ ಮೇಲೆ ದಾಳಿ ಮಾಡಿದ ಅಮೆರಿಕ, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಆತನ ಪತ್ನಿ ಸಿಲಿಯಾ ಫ್ಲೋರ್ಸ್‌ರನ್ನು ಬಂಧಿಸಿ ತನ್ನ ದೇಶಕ್ಕೆ ಕರೆದುಕೊಂಡು ಹೋಗಿದೆ. ಸದ್ಯಕ್ಕೆ ಅಮೆರಿಕದಲ್ಲಿ ಮಡುರೊ ವಿಚಾರಣೆ ಎದುರಿಸಲಿದ್ದಾರೆ ಎನ್ನಲಾಗಿದ್ದು, ನ್ಯೂಯಾರ್ಕ್ ಜೈಲಿನಲ್ಲಿ ಬಂಧಿಯಾಗಿ ಇಡಲಾಗಿದೆ. ಕೈಗೆ ಕೋಳ ಹಾಕಿ, ಜೈಲಿನ ಸಮವಸ್ತ್ರ ತೊಟ್ಟು ನಿಕೋಲಸ್ ಮಡುರೊ ಕುಂಟುತ್ತಾ ಹೆಲಿಕಾಪ್ಟರ್ ಏರುತ್ತಿರುವ ವಿಡಿಯೋ ವೈರಲ್ ಆಗಿದೆ. ಇನ್ನೊಂದೆಡೆ, ವೆನುಜುವೇಲದಿಂದ ಶೇ.80ರಷ್ಟು ತೈಲ ಖರೀದಿ ಮಾಡುವ ಚೀನಾ, ಅಮೆರಿಕದ ನಡೆದ ನಖಶಿಖಾಂತ ಉರಿದುಹೋಗಿದ್ದು ತಕ್ಷಣವೇ ಮಡುರೊ ಹಾಗೂ ಆತನ ಪತ್ನಿಯನ್ನು ಬಿಡುಗಡೆ ಮಾಡುವಂತೆ ಹೇಳಿದೆ. ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದೂ ಹೇಳಿದೆ.
ಇದೆಲ್ಲದರ ನಡುವೆ, ವೆನುಜುವೇಲದ ಅಧ್ಯಕ್ಷ ನಿಕೋಲಸ್ ಮಡುರೊ ಜೀವಂತವಾಗಿ ಬರುವುದೇ ಅನುಮಾನ ಎನ್ನುವ ವರದಿಗಳೂ ಇವೆ. ಅದಕ್ಕೆ ಕಾರಣ ಅಮೆರಿಕದ ಇತಿಹಾಸ. ವೆನುಜುವೇಲ ಅಮೆರಿಕದ ಶತ್ರುರಾಷ್ಟ್ರವಾಗಿ ಹಲವು ದಶಕಗಳೇ ಕಳೆದಿದ್ದರೂ ಈಗ ಅಮೆರಿಕ ದಾಳಿ ಮಾಡಿ ಆ ದೇಶದ ಅಧ್ಯಕ್ಷನನ್ನೇ ಬಂಧಿಸುವ ಸಾಹಸಕ್ಕೆ ಇಳಿಯಲು ಕಾರಣವೇನು ಅನ್ನೋದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಆದರೆ, ಅದಕ್ಕೆ ಕಾರಣ ಅಮೆರಿಕದ ಡಾಲರ್.
ಹೌದು, ಅಂತಾರಾಷ್ಟ್ರೀಯ ಕಾನೂನನ್ನು ಧಿಕ್ಕರಿಸಿ ಅಮೆರಿಕ ಈ ಸಾಹಸಕ್ಕೆ ಇಳಿದಿರೋದಕ್ಕೆ ಕಾರಣ ಅದರ ಡಾಲರ್. ಎಲ್ಲರಿಗೂ ತಿಳಿದಿರುವಂತೆ ಅಮೆರಿಕ, ವೆನುಜುವೇಲ ದೇಶದ ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ. ಇಡೀ ವಿಶ್ವದ ತೈಲ ಸಂಪತ್ತಿನ ಪೈಕಿ ಶೇ. 18ರಷ್ಟು ವೆನುಜುವೇಲ ದೇಶದ ಬಳಿಯೇ ಇದೆ. ಅಮೆರಿಕದ ಬಳಿಯೂ ದೊಡ್ಡ ಪ್ರಮಾಣದ ತೈಲ ಸಂಪತ್ತಿದ್ದರೂ, ಈ ದೇಶ ವೆನುಜುವೇಲದ ತೈಲದ ಮೇಲೆ ಕಣ್ಣಿಟ್ಟಿರುವ ಹಿಂದೆ ಬೇರೆಯದೇ ಕಾರಣವಿದೆ.
ಪೆಟ್ರೋಡಾಲರ್ ಅನ್ನು ಕಂಟ್ರೋಲ್ ಮಾಡೋದು ಅಮೆರಿಕದ ಮೂಲ ಉದ್ದೇಶ. ಪೆಟ್ರೋಡಾಲರ್ ಅನ್ನೋದೇನು ನೋಡೋದಾದರೆ, 1974ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ರಿಚರ್ಡ್ ನಿಕ್ಸನ್‌ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿದ್ದ ಮೆಯ್ ಹೆನ್ರಿ ಕಿಸ್ಸಿಂಜರ್ ವಿಶ್ವದ ಆರ್ಥಿಕತೆ ಮೇಲೆ ಪ್ರಭಾವ ಬೀರುವ ಒಂದು ಸಲಹೆ ನೀಡಿದ್ದರು.
ಆತನ ಸಲಹೆಯ ಮೇಲೆ ಅಂದು ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ್ದ ನಿಕ್ಸನ್, ಪ್ರಮುಖ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಸೌದಿ ಅರೇಬಿಯಾ ಉತ್ಪಾದಿಸುವ ಕಚ್ಚಾ ತೈಲ ಹಾಗೂ ಅದನ್ನು ಮಾರಾಟ ಮಾಡುವ ಎಲ್ಲಾ ವ್ಯವಹಾರಗಳು ಡಾಲರ್‌ನಲ್ಲೇ ಆಗಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಸೌದಿ ಅರೇಬಿಯಾಗೆ ಬೇಷರತ್ ಮಿಲಿಟರಿ ಸಹಾಯ ನೀಡುವುದಾಗಿ ತಿಳಿಸಿತ್ತು. ಅಮೆರಿಕ ಇಂದಿಗೂ ಅದನ್ನು ಪಾಲಿಸುತ್ತಾ ಬಂದಿದೆ. ಇಡೀ ವಿಶ್ವದ ಕಚ್ಚಾತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಪ್ರಮುಖವಾಗಿರುವ ಸೌದಿ ಅರೇಬಿಯಾ, ತೈಲವನ್ನು ಡಾಲರ್‌ನಲ್ಲಿ ಮಾರಲು ಆರಂಭಿಸಿದಾಗ ನಿರೀಕ್ಷೆಯಂತೆಯೇ ಡಾಲರ್‌ನ ಬೇಡಿಕೆ ಹೆಚ್ಚಾಯಿತು. ಇದರ ಬೆನ್ನಲ್ಲಿಯೇ ಅಮೆರಿಕ ಡಾಲರ್‌ಅನ್ನು ಭಾರೀ ಪ್ರಮಾಣದಲ್ಲಿ ಪ್ರಿಂಟ್ ಮಾಡಲು ಆರಂಭಿಸಿತು. ಹೀಗಾಗಿ ಡಾಲರ್ ಇಡೀ ವಿಶ್ವದ ರಿಸರ್ವ್ ಕರೆನ್ಸಿಯಾಗಿ ಮಾರ್ಪಟ್ಟಿತು. ಇಡೀ ಕಚ್ಚಾ ತೈಲದ ವ್ಯವಹಾರ ಡಾಲರ್‌ನಿಂದಲೇ ಆಗುತ್ತಿದ್ದದ್ದು ಅದಕ್ಕೆ ಕಾರಣ.
ಇರಾಕ್, ಲಿಬಿಯಾ ಈಗ ವೆನುಜುವೇಲ
ದಿನಗಳು ಕಳೆದ ಹಾಗೆ ಕೆಲವು ದೇಶಗಳು ಈ ನಿರ್ಧಾರವನ್ನು ಪ್ರಶ್ನೆ ಮಾಡಲು ಆರಂಭಿಸಿದವು. ಮೊದಲ ಬಾರಿಗೆ ಇದಕ್ಕೆ ಸವಾಲಾಗಿ ನಿಂತಿದ್ದು ಇರಾಕ್. 2000 ಇಸವಿಯಲ್ಲಿ ಸದ್ದಾಂ ಹುಸೇನ್, ಕಚ್ಚಾ ತೈಲವನ್ನು ಯುರೋ ಕರೆನ್ಸಿಯಲ್ಲಿ ಮಾರಾಟ ಮಾಡುವುದಾಗಿ ತಿಳಿಸಿದರು. 2003ರಲ್ಲಿ ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್ ಅನ್ನೂ ತೋರಿಕೆಯ ಕಾರಣ ನೀಡಿ ಅಮೆರಿಕ, ಇರಾಕ್ ಮೇಲೆ ದಾಳಿ ಮಾಡಿತು. ಸದ್ದಾಂ ಹುಸೇನ್‌ನನ್ನೂ ಇದೇ ರೀತಿ ಬಂಧಿ ಮಾಡಿ ಅಮೆರಿಕದಲ್ಲಿ ಗಲ್ಲಿಗೇರಿಸಿತು.
ಅದಾದ ಬಳಿಕ 2009ರಲ್ಲಿ ಲಿಬಿಯಾ ದೇಶದ ಸರ್ವಾಧಿಕಾರಿಯಾಗಿದ್ದ ಗಡ್ಡಾಫಿ ಕೂಡ ಇದೇ ಪ್ರಯತ್ನ ಮಾಡಿದ್ದ. ಲಿಬಿಯಾ ದೇಶ ಕಚ್ಚಾ ತೈಲವನ್ನು ಚಿನ್ನದೊಂದಿಗೆ ವ್ಯವಹಾರ ಮಾಡುವುದಾಗಿ ಘೋಷಿಸಿತು. ಡಾಲರ್‌ನ ಅಗತ್ಯವೇ ತಮಗಿಲ್ಲ ಎಂದಿತು. ಈತನನ್ನೂ ಕೂಡ ಇದೇ ರೀತಿಯ ಕಾರಣ ನೀಡಿ ಅಮೆರಿಕ ಕೊಂದುಹಾಕಿತು.
ಇನ್ನು ವೆನುಜುವೇಲ ದೇಶ ಕೂಡ ಇದೇ ರೀತಿಯ ಸವಾಲೊಡ್ಡಿತ್ತು. ತನ್ನ ದೇಶದ ತೈಲ ಸಂಪತ್ತನ್ನು ಚೀನಾಕ್ಕೆ ಅವರ ಯುವಾನ್ ಕರೆನ್ಸಿಯಲ್ಲಿ ರಷ್ಯಾಕ್ಕೆ ಅವರ ರುಬೆಲ್ ಕರೆನ್ಸಿಯಲ್ಲಿ ಮಾರಾಟ ಮಾಡುವುದಾಗಿ ತಿಳಿಸಿತ್ತು. ಆಯಾ ದೇಶದ ಕರೆನ್ಸಿಯಲ್ಲಿ ತೈಲ ಸಂಪತ್ತನ್ನು ಮಾರಾಟ ಮಾಡಲು ಮುಂದಾಗಿದ್ದು ಅಮೆರಿಕದ ಸಿಟ್ಟಿಗೆ ಕಾರಣವಾಗಿತ್ತು.
ಡಾಲರ್ ರಕ್ಷಣೆಗೆ ಅಮೆರಿಕದ ಸಾಹಸ
ಅದಲ್ಲದೆ ವೆನುಜುವೇಲ ಬ್ರಿಕ್ಸ್‌ಗೆ ಸೇರುವ ಯೋಚನೆಯಲ್ಲಿತ್ತು. ಬ್ರಿಕ್ಸ್ ಎಂದರೆ ಭಾರತ, ರಷ್ಯಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ಚೀನಾ ಇರುವ ಸಂಘ. ಬ್ರಿಕ್ಸ್ ದೇಶಗಳು ವಿಶ್ವದ ಶೇ.40ರಷ್ಟು ಜಿಡಿಪಿಯನ್ನು ಕಂಟ್ರೋಲ್ ಮಾಡುತ್ತದೆ. ಭಾರೀ ಪ್ರಮಾಣದ ತೈಲ ಸಂಪತ್ತಿರುವ ವೆನುಜುವೇಲ ಬ್ರಿಕ್ಸ್‌ಗೆ ಸೇರಿದರೆ ಡಾಲರ್‌ಗೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಅಮೆರಿಕಕ್ಕೆ ಗೊತ್ತಾಗಿತ್ತು. ಬ್ರಿಕ್ಸ್‌ನ ಬಲ ಹೆಚ್ಚಾಗುವುದು ಮಾತ್ರವಲ್ಲದೆ, ಡಾಲರ್‌ನ ಮೌಲ್ಯ ಕೂಡ ಕಡಿಮೆ ಆಗಲಿದೆ ಎನ್ನುವ ಅಂದಾಜು ಸಿಕ್ಕಿತ್ತು. ಡಾಲರ್‌ಅನ್ನು ರಕ್ಷಿಸುವ ಸಲುವಾಗಿಯೇ ಅಮೆರಿಕ ಇಡೀ ಅಂತಾರಾಷ್ಟ್ರೀಯ ಸಮುದಾಯವನ್ನು ಧಿಕ್ಕರಿಸಿ ಈ ಸಾಹಸಕ್ಕೆ ಇಳಿದಿದೆ. ಡಾಲರ್ ರಕ್ಷಿಸದಿದ್ದರೆ ತನಗೆ ಉಳಿಗಾಲವಿಲ್ಲ ಅನ್ನೋದು ಅಮೆರಿಕಕ್ಕೂ ಗೊತ್ತು.


